Danger selfie: ಸೆಲ್ಫಿ ಹುಚ್ಚು ಈಗೀಗ ಹೆಚ್ಚಾಗ್ತಿದೆ. ಜನರು ಅಪಾಯ ಲೆಕ್ಕಿಸದೆ ಸಾಹಸಕ್ಕೆ ಕೈ ಹಾಕ್ತಿದ್ದಾರೆ. ಇದ್ರಿಂದ ದಿನ ದಿನಕ್ಕೂ ಸೆಲ್ಫಿ ಸಾವು ಭಾರತದಲ್ಲಿ ಏರಿಕೆಯಾಗ್ತಿದೆ.
ಸಾವಿನ ಮನೆಗೆ ಹೋದ್ರೂ ಜನ ಸೆಲ್ಫಿ (Selfie) ತೆಗೆಯೋದನ್ನು ಬಿಡೋದಿಲ್ಲಿ. ಈಗಿನ ಕಾಲ ಸೆಲ್ಫಿಮಯ. ಸೆಲ್ಫಿ ಹುಚ್ಚು ಎಲ್ಲೆ ಮೀರಿದೆ. ಸುಂದರ ಪರಿಸರವನ್ನು ಕಣ್ತುಂಬಿಕೊಳ್ಳುವ ಬದಲು ಜನರು ಫೋಟೋ ಕ್ಲಿಕ್ಕಿಸಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಆತುರದಲ್ಲಿರ್ತಾರೆ. ಸೆಲ್ಫಿಗಾಗಿ ಬೆಟ್ಟ ಹತ್ತೋರೇನು, ಸಮುದ್ರ ಇಳಿಯೋರೇನು, ಬಂಡೆ ಮೇಲೆ ನಿಲ್ಲೋರೇನು, ರೈಲು ಹಳಿ ಮೇಲೆ ಮಲಗೋರೇನು.. ಎಷ್ಟೇ ಅಪಾಯವಿದ್ರೂ ಅದನ್ನು ಲೆಕ್ಕಿಸದೆ ಸೆಲ್ಫಿ ಸಾಹಸಕ್ಕೆ ಜನರು ಮುಂದಾಗ್ತಿದ್ದಾರೆ. ಇದೇ ಪ್ರಾಣಕ್ಕೆ ಕುತ್ತು ತರ್ತಿದೆ. ಆಕ್ಸಿಡೆಂಟ್, ರೋಗದಿಂದ ಮಾತ್ರವಲ್ಲ ಜನರ ಸಾವಿನ ಸಂಖ್ಯೆ ಸೆಲ್ಫಿಯಿಂದ್ಲೂ ಹೆಚ್ಚಾಗ್ತಿದೆ. ಈಗ ಸೆಲ್ಫಿಗೆ ಸಂಬಂಧಿಸಿದಂತೆ ಬಿಡುಗಡೆಯಾದ ವರದಿಯೊಂದು ಎಲ್ಲರನ್ನು ಬೆಚ್ಚಿಬೀಳಿಸಿದೆ.
ಸೆಲ್ಫಿ ತೆಗೆದುಕೊಳ್ಳೋದ್ರಲ್ಲಿ ಭಾರತ (India) ವಿಶ್ವದಲ್ಲೇ ಅತ್ಯಂತ ಅಪಾಯಕಾರಿ ದೇಶ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. ದಿ ಬಾರ್ಬರ್ ಲಾ ಫರ್ಮ್ ಪ್ರಕಟಿಸಿದ ಮತ್ತು ನ್ಯೂಯಾರ್ಕ್ ಪೋಸ್ಟ್ ಹೈಲೈಟ್ ಮಾಡಿದ ಈ ವರದಿ ಪ್ರಕಾರ, ಪ್ರಪಂಚದಾದ್ಯಂತ ಸೆಲ್ಫಿ ಸಂಬಂಧಿತ ಸಾವುಗಳು ಹೆಚ್ಚುತ್ತಿವೆ. ಭಾರತ ವ್ಯಾಪಕ ಅಂತರದಿಂದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ವಿಶ್ವಾದ್ಯಂತ ಶೇಕಡಾ 40ಕ್ಕಿಂತ ಹೆಚ್ಚು ಸೆಲ್ಫಿ ಸಾವುಗಳಲ್ಲಿ ಭಾರತ ನಂಬರ್ ಒನ್ : ಮಾರ್ಚ್ 2014 ಮತ್ತು ಮೇ 2025 ರ ನಡುವೆ ದಾಖಲಾದ ಘಟನೆಗಳನ್ನು ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದೆ. ವಿಶ್ವಾದ್ಯಂತ ಶೇಕಡಾ 42.1 ರಷ್ಟು ಸೆಲ್ಫಿ ಸಂಬಂಧಿತ ಅಪಘಾತಗಳು ಭಾರತದಲ್ಲಿ ನಡೆದಿವೆ. ದಾಖಲಾದ 271 ಪ್ರಕರಣಗಳಲ್ಲಿ 214 ಸಾವುಗಳಾದ್ರೆ 57 ಮಂದಿ ಗಾಯಗೊಂಡಿದ್ದಾರೆ.
ಸೆಲ್ಫಿ ವಿಷ್ಯದಲ್ಲಿ ಅತ್ಯಂತ ಅಪಾಯಕಾರಿ ದೇಶಗಳು :
ಭಾರತ : ಸೆಲ್ಫಿಗಳಿಗೆ ಭಾರತ ವಿಶ್ವದ ಅತ್ಯಂತ ಅಪಾಯಕಾರಿ ಸ್ಥಳವಾಗಿದೆ. ಜನದಟ್ಟಣೆಯ ಪ್ರವಾಸಿ ತಾಣಗಳು, ಬಂಡೆಗಳು ಮತ್ತು ರೈಲ್ವೆ ಹಳಿಗಳು ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳಾಗಿವೆ.
ಅಮೆರಿಕ : ಅಮೆರಿಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಒಂದು ವರ್ಷದಲ್ಲಿ 45 ಸೆಲ್ಫಿ ಸಂಬಂಧಿತ ಅಪಘಾತಗಳಲ್ಲಿ 37 ಜನರು ಸಾವನ್ನಪ್ಪಿದ್ದಾರೆ ಮತ್ತು 8 ಜನರು ಗಾಯಗೊಂಡಿದ್ದಾರೆ.
ರಷ್ಯಾ : ವಿಶ್ವದ ಅತಿದೊಡ್ಡ ದೇಶವಾದ ರಷ್ಯಾ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಒಂದು ವರ್ಷದಲ್ಲಿ 19 ಸೆಲ್ಫಿ ಸಂಬಂಧಿತ ಅಪಘಾತಗಳು ನಡೆದಿವೆ. ಇದರಿಂದಾಗಿ 18 ಜನರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ. ರಷ್ಯಾದಲ್ಲಿ ಹಿಮಭರಿತ ಭೂದೃಶ್ಯಗಳು, ಸೇತುವೆಗಳು ಮತ್ತು ಗಗನಚುಂಬಿ ಕಟ್ಟಡಗಳ ಬಳಿ ಮಾರಕ ಸಾಹಸಳನ್ನು ಮಾಡಲಾಗುತ್ತೆ.
ಪಾಕಿಸ್ತಾನ : ಪಾಕಿಸ್ತಾನದಲ್ಲಿ ಕಡಿಮೆ ಪ್ರವಾಸಿ ಕೇಂದ್ರಗಳಿವೆ. ಆದ್ರೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೆಲ್ಫಿ ತೆಗೆದುಕೊಳ್ಳುವ ಜನರ ಕೊರತೆಯಿಲ್ಲ. ಇದರಿಂದಾಗಿ ಒಂದು ವರ್ಷದಲ್ಲಿ 16 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ : ಆಸ್ಟ್ರೇಲಿಯಾ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಇಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವಾಗ 13 ಜನರು ಸಾವನ್ನಪ್ಪಿದ್ದಾರೆ ಮತ್ತು 2 ಜನರು ಗಾಯಗೊಂಡಿದ್ದಾರೆ.
ಇಂಡೋನೇಷ್ಯಾ : ಇಂಡೋನೇಷ್ಯಾದಲ್ಲಿ 14 ಸೆಲ್ಫಿ ಸಂಬಂಧಿತ ಸಾವುಗಳು ದಾಖಲಾಗಿವೆ. ಕೀನ್ಯಾ, ಯುನೈಟೆಡ್ ಕಿಂಗ್ಡಮ್, ಸ್ಪೇನ್ ಮತ್ತು ಬ್ರೆಜಿಲ್ ನಂತರದ ಸ್ಥಾನಗಳಲ್ಲಿವೆ. ಇಲ್ಲಿ 13-13 ಸಾವುಗಳು ದಾಖಲಾಗಿವೆ.
ಈ ಸಾವುಗಳನ್ನು ತಡೆಯಬಹುದು. ಜನರ ಹುಂಬತನ, ಸಾಹಸದಿಂದ ಈ ಸಾವಾಗ್ತಿದೆ. ಜನರು ಅಪಾಯಕಾರಿ ಸ್ಥಳಗಳಲ್ಲಿ ಸಾಹಸ ಮಾಡ್ಬಾರದು. ಪ್ರವಾಸಿ ಕೇಂದ್ರಗಳು ಇದ್ರ ಬಗ್ಗೆ ಎಚ್ಚೆತ್ತುಕೊಳ್ಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
