ನವದೆಹಲಿ(ಜೂ.23): ಯುದ್ಧ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರುವ ಚೀನಾ ಗಡಿಯಲ್ಲಿ ಇದೀಗ ಭಾರತ ಎದುರಾಳಿ ಕ್ಷಿಪಣಿಗಳನ್ನು ಹೊಡೆದುರುಳಿರುವ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿಯೋಜನೆ ಮಾಡಿದೆ.

ನೆಲದಿಂದ ಚಿಮ್ಮಿ ಆಗಸದ ಗುರಿಗಳ ಮೇಲೆ ದಾಳಿ ಮಾಡುವ ಕ್ಷಿಪಣಿಗಳನ್ನು ಹೊಡೆದುರುಳಿಸುವ ವ್ಯವಸ್ಥೆಯನ್ನು ಲಡಾಖ್‌ ಗಡಿಯಲ್ಲಿ ಸೇನೆ ನಿಯೋಜನೆ ಮಾಡಿದೆ. ‘ಕ್ವಿಕ್‌ ರಿಯಾಕ್ಷನ್‌ ಸರ್ಫೇಸ್‌ ಟು ಏರ್‌ ಮಿಸೈಲ್‌ ಸಿಸ್ಟಂ’ (ಕ್ಯುಆರ್‌ಎಸ್‌ಎಂ) ಇದಾಗಿದ್ದು, ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಇದನ್ನು ಅಭಿವೃದ್ಧಿಪಡಿಸಿದೆ ಎಂದು ವರದಿಗಳು ತಿಳಿಸಿವೆ.

ಸತ್ಯ ಒಪ್ಪಿಕೊಂಡ ಚೀನಾ: ಗಲ್ವಾನ್‌ ಘರ್ಷಣೆಯಲ್ಲಿ ಚೀನಾ ಕಮಾಂಡರ್‌ ಸಾವು

ಈ ಕ್ಷಿಪಣಿ ನಿರೋಧಕ ವ್ಯವಸ್ಥೆ ವಾಹನದ ಮೇಲೆ ಅಳವಡಿಕೆಯಾಗಿರುತ್ತದೆ. ದಾಳಿಗೆ ಬರುವ ಕ್ಷಿಪಣಿಯನ್ನು ತನ್ನಿಂತಾನೇ ಹೊಡೆದುರುಳಿಸುತ್ತಿದೆ. ವಾಹನ ಚಾಲನಾ ಸ್ಥಿತಿಯಲ್ಲಿರುವಾಗಲೂ ಇದು ದಾಳಿ ಮಾಡುತ್ತದೆ.

ಜೂ.15ರಂದು ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಸಂಭವಿಸಿದ ಬಳಿಕ ಗಡಿಯಲ್ಲಿ ತೀವ್ರ ರೀತಿಯ ಚಟುವಟಿಕೆ ಕಂಡುಬರುತ್ತಿದೆ. ಸಹಸ್ರಾರು ಸಂಖ್ಯೆಯ ಯೋಧರನ್ನು ಭಾರತ- ಚೀನಾ ನಿಯೋಜನೆ ಮಾಡಿವೆ. ಇದೇ ವೇಳೆ, ಸುಖೋಯ್‌ 30-ಎಂಕೆಐ, ಜಾಗ್ವಾರ್‌, ಮಿರಾಜ್‌ 2000ನಂತಹ ಯುದ್ಧ ವಿಮಾನಗಳು ಹಾಗೂ ಅಪಾಚೆ ಹೆಲಿಕಾಪ್ಟರ್‌ಗಳನ್ನು ಗಡಿಯ ಸೇನಾ ನೆಲೆಗಳಿಗೆ ಭಾರತ ರವಾನಿಸಿದೆ. ಪರಿಸ್ಥಿತಿ ಬಿಗಡಾಯಿಸಿದರೆ ಈ ವಿಮಾನಗಳನ್ನು ಗುರಿಯಾಗಿಸಿ ಚೀನಾ ದಾಳಿ ಮಾಡುವ ಸಾಧ್ಯತೆಯೂ ಇರುವುದರಿಂದ ಕ್ಷಿಪಣಿ ದಾಳಿ ವ್ಯವಸ್ಥೆ ನಿಯೋಜನೆ ಮಹತ್ವ ಪಡೆದುಕೊಂಡಿದೆ.