ಮಾಲಿನ್ಯ ನಿಯಂತ್ರಣದತ್ತ ಮಹತ್ವದ ಹೆಜ್ಜೆ ಇಟ್ಟಿರುವ ಭಾರತೀಯ ರೈಲ್ವೆಯು, ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲನ್ನು ಹರ್ಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ಆರಂಭಿಸಿದೆ. ಈ ಪರಿಸರಸ್ನೇಹಿ ರೈಲು ಫ್ಯುಯೆಲ್ ಸೆಲ್ ತಂತ್ರಜ್ಞಾನ ಬಳಸಿ, ಕೇವಲ ನೀರಿನ ಆವಿಯನ್ನು ಹೊರಸೂಸುವ ಮೂಲಕ ಶೂನ್ಯ ಮಾಲಿನ್ಯದೊಂದಿಗೆ ಸಂಚರಿಸಲಿದೆ.
ನವದೆಹಲಿ: ಜಾಗತಿಕವಾಗಿ ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣ ಮತ್ತು ಇಂಧನಕ್ಕಾಗಿ ಇತರೆ ದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ ಮಹತ್ವದ ಮೈಲಿಗಲ್ಲೊಂದನ್ನು ನೆಟ್ಟಿದೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪರಿಸರಸ್ನೇಹಿ ತಂತ್ರಜ್ಞಾನದ 'ಹೈಡ್ರೋಜನ್ ಚಾಲಿತ ರೈಲು' ಸಂಚಾರಕ್ಕೆ ರೈಲ್ವೆ ಸಚಿವಾಲಯವು ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಿದೆ. ಒಟ್ಟು 10 ಬೋಗಿಗಳನ್ನು ಹೊಂದಿರುವ ಈ ಮಹತ್ವಾಕಾಂಕ್ಷೆಯ ರೈಲು ಹರ್ಯಾಣದ ಜಿಂದ್ ಮತ್ತು ಸೋನಿಪತ್ ನಿಲ್ದಾಣಗಳ ನಡುವೆ ಓಡಾಡಲು ಸಜ್ಜಾಗಿದೆ.
ಈ ಐತಿಹಾಸಿಕ ಹೆಜ್ಜೆಯೊಂದಿಗೆ ಜರ್ಮನಿ, ಜಪಾನ್, ಚೀನಾ ಮತ್ತು ಅಮೆರಿಕದಂತಹ ಅತ್ಯಾಧುನಿಕ ಹೈಡ್ರೋಜನ್ ತಂತ್ರಜ್ಞಾನ ಹೊಂದಿರುವ ವಿಶ್ವದ ಮುಂಚೂಣಿ ದೇಶಗಳ ಗಣ್ಯ ಪಟ್ಟಿಗೆ ಈಗ ಭಾರತವೂ ಹೆಮ್ಮೆಯಿಂದ ಸೇರ್ಪಡೆಯಾಗುತ್ತಿದೆ.
ತಾಂತ್ರಿಕ ಸಾಮರ್ಥ್ಯ ಮತ್ತು ಸೌಲಭ್ಯಗಳು
ದೇಶೀಯವಾಗಿ ವಿನ್ಯಾಸಗೊಳಿಸಲಾದ ಈ ಹೈಡ್ರೋಜನ್ ರೈಲು ಅತ್ಯಾಧುನಿಕ ಎಂಜಿನಿಯರಿಂಗ್ ಸಾಮರ್ಥ್ಯವನ್ನು ಹೊಂದಿದೆ. ಈ ರೈಲು 1.2 ಮೆಗಾವ್ಯಾಟ್ (MW) ಸಾಮರ್ಥ್ಯದ ದೈತ್ಯ ಶಕ್ತಿಶಾಲಿ ಎಂಜಿನ್ ಹೊಂದಿರಲಿದೆ. ಹೈಡ್ರೋಜನ್ ಇಂಧನ ಬಳಸಿ ಈ ರೈಲು ಗಂಟೆಗೆ ಗರಿಷ್ಠ 75 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಒಟ್ಟು 10 ಸುಸಜ್ಜಿತ ಬೋಗಿಗಳನ್ನು ಒಳಗೊಂಡಿರುವ ಈ ರೈಲಿನಲ್ಲಿ ಏಕಕಾಲಕ್ಕೆ ಬರೋಬ್ಬರಿ 2,600 ಪ್ರಯಾಣಿಕರು ಅತ್ಯಂತ ಆರಾಮದಾಯಕವಾಗಿ ಪ್ರಯಾಣಿಸಬಹುದಾಗಿದೆ.
ಹೈಡ್ರೋಜನ್ ರೈಲು ಓಡುವುದು ಹೇಗೆ?
ಸಾಂಪ್ರದಾಯಿಕ ಡೀಸೆಲ್ ಅಥವಾ ವಿದ್ಯುತ್ ರೈಲುಗಳಿಗಿಂತ ಈ ಹೈಡ್ರೋಜನ್ ರೈಲಿನ ಕಾರ್ಯಾಚರಣಾ ಶೈಲಿ ತೀರಾ ಭಿನ್ನ ಹಾಗೂ ವಿಶಿಷ್ಟವಾಗಿದೆ. ಈ ರೈಲಿಗೆ ನಿರಂತರ ಹೈಡ್ರೋಜನ್ ಇಂಧನ ಪೂರೈಸಲು ಈಗಾಗಲೇ ಹರ್ಯಾಣದ ಜಿಂದ್‌ನಲ್ಲಿ ಅತ್ಯಾಧುನಿಕ 'ಹೈಡ್ರೋಜನ್ ಸಂಗ್ರಹಣೆ ಮತ್ತು ಇಂಧನ ತುಂಬುವ ಘಟಕ'ವನ್ನು (Hydrogen Storage and Refueling Station) ಯಶಸ್ವಿಯಾಗಿ ನಿರ್ಮಿಸಲಾಗಿದೆ.
ರೈಲಿನ ಎಂಜಿನ್‌ಗೆ ಹೈಡ್ರೋಜನ್ ತುಂಬಿದಾಗ, ಅದು ಎಂಜಿನ್ ಒಳಗಿನ 'ಫ್ಯುಯೆಲ್ ಸೆಲ್' (Fuel Cell) ತಂತ್ರಜ್ಞಾನದ ಮೂಲಕ ರಾಸಾಯನಿಕ ಪ್ರಕ್ರಿಯೆಗೆ ಒಳಗಾಗುತ್ತದೆ. ಈ ಪ್ರಕ್ರಿಯೆಯಿಂದ ಭಾರಿ ಪ್ರಮಾಣದ ವಿದ್ಯುತ್ ಉತ್ಪತ್ತಿಯಾಗಿ ರೈಲು ಚಲಿಸಲು ಆರಂಭಿಸುತ್ತದೆ.
ಈ ಇಡೀ ಪ್ರಕ್ರಿಯೆಯಲ್ಲಿ ಯಾವುದೇ ಹಾನಿಕಾರಕ ಅನಿಲ ಅಥವಾ ಹೊಗೆ ಹೊರಬರುವುದಿಲ್ಲ. ಬದಲಾಗಿ ಕೇವಲ ಶೇ.100 ರಷ್ಟು ಶುದ್ಧ ನೀರಿನ ಆವಿ (Water Vapor) ಮಾತ್ರ ಪರಿಸರಕ್ಕೆ ಬಿಡುಗಡೆಯಾಗುತ್ತದೆ. ಹೀಗಾಗಿ ಇದು ಸಂಪೂರ್ಣ ಮಾಲಿನ್ಯರಹಿತ ಮತ್ತು ಶೂನ್ಯ ಇಂಗಾಲದ ಹೊರಸೂಸುವಿಕೆಯ (Zero Emission) ತಂತ್ರಜ್ಞಾನವಾಗಿದೆ.
ರೈಲಿನ ಪ್ರಾಯೋಗಿಕ ಹಾಗೂ ಆರಂಭಿಕ ಕಾರ್ಯಾಚರಣೆಯ ಸಮಯದಲ್ಲಿ ಸುರಕ್ಷತೆಗೆ ರೈಲ್ವೆ ಇಲಾಖೆ ಅತ್ಯುನ್ನತ ಆದ್ಯತೆ ನೀಡಿದೆ. ರೈಲು ಹಳಿಗಳ ಮೇಲೆ ಓಡಲು ಆರಂಭಿಸಿದ ಹೊಸತರಲ್ಲಿ, ಅದರ ಪ್ರತಿಯೊಂದು ತಾಂತ್ರಿಕ ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ನುರಿತ ಇಂಜಿನಿಯರ್‌ಗಳು ಮತ್ತು ತಾಂತ್ರಿಕ ಸಿಬ್ಬಂದಿಯ ವಿಶೇಷ ತಂಡವು ರೈಲಿನಲ್ಲಿಯೇ ಪ್ರಯಾಣಿಸಲಿದೆ.
ಹೈಡ್ರೋಜನ್ ಅತ್ಯಂತ ಜ್ವಲನಶೀಲ ಅನಿಲವಾಗಿರುವುದರಿಂದ, ಜಿಂದ್‌ನಲ್ಲಿರುವ ಇಂಧನ ಉತ್ಪಾದನೆ ಮತ್ತು ವಿತರಣಾ ಘಟಕಗಳಲ್ಲಿ ಯಾವುದೇ ರೀತಿಯ ಅನಿಲ ಸೋರಿಕೆ (Gas Leakage) ಅಥವಾ ಸಣ್ಣ ಕಿಡಿಯನ್ನು ಕೂಡ ತಕ್ಷಣವೇ ಪತ್ತೆ ಹಚ್ಚುವ ಸುಧಾರಿತ ಆಟೋಮ್ಯಾಟಿಕ್ ಸೆನ್ಸಾರ್‌ಗಳು ಹಾಗೂ ಅಗ್ನಿ ನಿಯಂತ್ರಣ ಉಪಕರಣಗಳನ್ನು ಅಳವಡಿಸಲಾಗಿದೆ. ಭಾರತೀಯ ರೈಲ್ವೆಯನ್ನು ಸಂಪೂರ್ಣವಾಗಿ ಹಸಿರು ಇಂಧನದತ್ತ (Green Energy) ಕೊಂಡೊಯ್ಯುವ ನಿಟ್ಟಿನಲ್ಲಿ ಈ ಹೈಡ್ರೋಜನ್ ರೈಲು ಯೋಜನೆ ಒಂದು ಕ್ರಾಂತಿಕಾರಕ ಹೆಜ್ಜೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.


