ಅಮೆರಿಕ ಮತ್ತು ಚೀನಾದ ಬಳಿಕ, ಭಾರತವೂ ಮರುಬಳಕೆ ರಾಕೆಟ್ ತಂತ್ರಜ್ಞಾನಕ್ಕೆ ಮುಂದಾಗಿದೆ. ಚೆನ್ನೈ ಮೂಲದ ಸ್ಟಾರ್ಟ್‌ಅಪ್ 'ಅಗ್ನಿಕುಲ್ ಕಾಸ್ಮೋಸ್', ಬಾಹ್ಯಾಕಾಶ ಯೋಜನೆಗಳ ವೆಚ್ಚವನ್ನು ಕಡಿಮೆ ಮಾಡುವ ಗುರಿಯೊಂದಿಗೆ ರಾಕೆಟ್‌ಗಳನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ 'ಮಿಷನ್-2'ಗೆ ಸಜ್ಜಾಗಿದೆ.
ವಾಷಿಂಗ್ಟನ್ (ಜು.18): ಅಮೆರಿಕ, ಚೀನಾ ಮತ್ತು ಜಪಾನ್ ಬಳಿಕ ಇದೀಗ ಭಾರತ ಕೂಡ ಬಾಹ್ಯಾಕಾಶ ಯೋಜನೆಗಳಿಗೆ ನಭಕ್ಕೆ ಹಾರಿಬಿಡುವ ರಾಕೆಟ್‌ಗಳನ್ನು ಮರುಬಳಕೆ ಉದ್ದೇಶದಿಂದ ಮರಳಿ ನೀರಿನಲ್ಲಿ ಸುರಕ್ಷಿತವಾಗಿ ಇಳಿಸುವ ಪ್ರಯೋಗಕ್ಕೆ ಮುಂದಾಗಿದೆ. ಚೆನ್ನೈ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್ ಅಗ್ನಿಕುಲ್ ಕಾಸ್ಮೋಸ್ ಸಂಸ್ಥೆ ಇಂಥದ್ದೊಂದು ‘ಮಿಷನ್-2’ ಪ್ರಯೋಗಕ್ಕೆ ಸಜ್ಜಾಗಿದೆ.
ಉಪಗ್ರಹವನ್ನು ಆಗಸಕ್ಕೆ ಹೊತ್ತೊಯ್ದ ಬಳಿಕ ರಾಕೆಟ್‌ನ ಬೂಸ್ಟರ್ ಯಶಸ್ವಿಯಾಗಿ ಸುರಕ್ಷಿತವಾಗಿ ಭೂಮಿಗೆ ತಲುಪುವಂತೆ ಮಾಡುವ ಕಾರ್ಯದಲ್ಲಿ ಚೀನಾ ಯಶಸ್ವಿಯಾದ ಬೆನ್ನಲ್ಲೇ ಅಗ್ನಿಕುಲ ಕಾಸ್ಮೋಸ್ ಸಂಸ್ಥೆಯಿಂದ ಈ ಘೋಷಣೆ ಹೊರಬಿದ್ದಿದೆ.
ಭಾರೀ ಪ್ರಮಾಣದಲ್ಲಿ ಹೂಡಿಕೆ:
ಸ್ಪೇಸ್ ಎಕ್ಸ್, ಬ್ಲೂ ಒರಿಜಿನ್ ಮತ್ತು ರಾಕೆಟ್ ಲ್ಯಾಬ್‌ನಂಥ ಕಂಪನಿಗಳು ಮರುಬಳಕೆಯ ರಾಕೆಟ್ ತಂತ್ರಜ್ಞಾನ ಮೇಲೆ ಭಾರೀ ಮಟ್ಟದಲ್ಲಿ ಹೂಡಿಕೆ ಮಾಡುತ್ತಿವೆ. ಇದು ಯಾವುದೇ ಬಾಹ್ಯಾಕಾಶ ಯೋಜನೆಗಳ ವೆಚ್ಚವನ್ನು ಇಳಿಸುತ್ತವೆ. ಅಗ್ನಿಕುಲ್ ಸಂಸ್ಥೆ ಕೂಡ ಇದೇ ರೀತಿಯ ಸಾಮರ್ಥ್ಯವನ್ನು ಭಾರತಕ್ಕೆ ತರಲು ಮುಂದಾಗಿದೆ.
ರಾಕೆಟ್‌ನ ಬೂಸ್ಟರ್ ಅನ್ನು ಮರುಪಡೆಯುವುದಷ್ಟೇ ಅಲ್ಲದೆ, ರಾಕೆಟ್‌ನ ಮೇಲ್ಭಾಗವನ್ನು ವಾತಾವರಣದಲ್ಲೇ ನಾಶಪಡಿಸುವ ಬದಲು ಭೂಕಕ್ಷೆಯಲ್ಲಿ ಉಪಯುಕ್ತ ಪ್ರಯೋಗಗಳಿಗೆ ವೇದಿಕೆಯಾಗಿ ಪರಿವರ್ತಿಸಲೂ ಸಂಸ್ಥೆ ಯೋಜನೆ ಹಾಕಿಕೊಂಡಿದೆ. ಪ್ರಯೋಗಗಳಷ್ಟೇ ಅಲ್ಲದೆ, ತಂತ್ರಜ್ಞಾನಗಳ ಪರೀಕ್ಷೆ ಅಥವಾ ಭವಿಷ್ಯದ ಬಾಹ್ಯಾಕಾಶ ಮೂಲಸೌಲಭ್ಯಗಳಿಗೆ ಬೆಂಬಲ ನೀಡುವಂಥ ಕಾರ್ಯಗಳಿಗೆ ರಾಕೆಟ್‌ನ ಅನುಪಯುಕ್ತ ಮೇಲ್ಭಾಗ ಬಳಸಲು ಮುಂದಾಗಿದೆ.
ಪದೇ ಪದೆ ನಡೆಸುವ ಬಾಹ್ಯಾಕಾಶ ಯೋಜನೆಗಳಿಗೆ ವ್ಯಾಪಕ ಮರುಬಳಕೆ
ಬಾಹ್ಯಾಕಾಶ ತಲುಪುವುದೇ ಏಕೈಕ ಮೂಲ ಗುರಿಯಾಗಿದ್ದಾಗ ಒಂದು ಬಾರಿ ಬಳಸುವ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ ಇಂದು ಕಡಿಮ ವೆಚ್ಚದ, ಪದೇ ಪದೆ ನಡೆಸುವ ಬಾಹ್ಯಾಕಾಶ ಯೋಜನೆಗಳಿಗೆ ವ್ಯಾಪಕ ಮರುಬಳಕೆ, ಸಂಪೂರ್ಣ ಸ್ಥಿತಿಸ್ಥಾಪಕತ್ವ ಹಾಗೂ ಮಾಡ್ಯುಲಾರಿಟಿಯೇ ತತ್ವವಾಗಿರಲಿದೆ ಎಂದು ಅಗ್ನಿಕುಲ್ ಕಾಸ್ಮೋಸ್ ಕಂಪನಿಯ ಸಿಇಒ ಶ್ರೀನಾಥ್ ರವಿಚಂದ್ರನ್ ತಿಳಿಸಿದರು.
ಅಗ್ನಿಕುಲ್ ಕಂಪನಿಯು ಇತ್ತೀಚೆಗಷ್ಟೇ ಇಸ್ರೋದ ಮಾಜಿ ಮುಖ್ಯಸ್ಥ ಎಸ್.ಸೋಮನಾಥ್ ಅವರನ್ನು ಕಂಪನಿಯ ನಿರ್ದೇಶಕ ಮಂಡಳಿಗೆ ವೀಕ್ಷಕನಾಗಿ ನೇಮಿಸಿಕೊಂಡಿದೆ.


