Asianet Suvarna News Asianet Suvarna News

ಭಾರತ - ರಷ್ಯಾ ಸಹಯೋಗ: ರಕ್ಷಣಾ ತಂತ್ರಜ್ಞಾನ ರಫ್ತಿನಲ್ಲಿ ದಾಪುಗಾಲು

ಭಾರತ ಮತ್ತು ರಷ್ಯಾಗಳ ಜಂಟಿ ಸಹಯೋಗಗಳು ಯಶಸ್ಸು ಕಂಡಿದ್ದು, ನಾವು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಫಿಲಿಪೈನ್ಸ್ ಸೇರಿದಂತೆ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಈ ಕ್ಷಿಪಣಿಗಳಿಗೆ ಸೌದಿ ಅರೇಬಿಯಾ, ಈಜಿಪ್ಟ್, ಅರ್ಮೇನಿಯಾ ಮತ್ತು ಯುಎಇಯಂತಹ ಮಧ್ಯ ಪೂರ್ವದ ದೇಶಗಳಿಂದ ಅಪಾರ ಬೇಡಿಕೆ ವ್ಯಕ್ತವಾಗಿದೆ

India Russia makes strides in defense technology exports rav
Author
First Published May 2, 2024, 1:56 PM IST

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತ ಮತ್ತು ರಷ್ಯಾಗಳ ನಡುವೆ ರಕ್ಷಣಾ ಉತ್ಪನ್ನಗಳ ಉತ್ಪಾದನೆಯಲ್ಲಿ ಸಹಯೋಗದ ಸುದೀರ್ಘ ಇತಿಹಾಸವಿದೆ. ಭಾರತ ಮತ್ತು ರಷ್ಯಾಗಳು ಜಂಟಿಯಾಗಿ ಮಿಗ್-21 ಯುದ್ಧ ವಿಮಾನಗಳಂತಹ ರಕ್ಷಣಾ ಉತ್ಪನ್ನಗಳನ್ನು ನಿರ್ಮಿಸಿ, ರಕ್ಷಣಾ ತಂತ್ರಜ್ಞಾನಗಳ ರಫ್ತಿಗೂ ಕಾರಣವಾದವು. ರಷ್ಯಾದ ಜೊತೆಗಿನ ಇಂತಹ ಸಹಯೋಗ, ಭಾರತಕ್ಕೆ ಪ್ರಮಾಣ ಮತ್ತು ಮಾರುಕಟ್ಟೆ ಮೌಲ್ಯಗಳೆರಡರಲ್ಲೂ ಅಪಾರ ಪ್ರಮಾಣದಲ್ಲಿ ಅನುಕೂಲ ಕಲ್ಪಿಸಿದೆ.

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ, ಭಾರತದ ರಕ್ಷಣಾ ರಫ್ತಿನ ಪ್ರಮಾಣ 35 ಪಟ್ಟು ಹೆಚ್ಚಾಗಿದ್ದು, ಭಾರತ ಈ ಸಾಧನೆಯನ್ನು ಇನ್ನಷ್ಟು ವಿಸ್ತರಿಸಲು ಪ್ರಯತ್ನ ನಡೆಸುತ್ತಿದೆ.

ಇತ್ತೀಚೆಗೆ ಅಹಮದಾಬಾದ್‌ನಲ್ಲಿ ರಾಜಕೀಯ ರ‌್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಭಾರತದ ಸಾಧನೆಗಳನ್ನು ವಿವರಿಸಿದರು.

2014ರಲ್ಲಿ ಭಾರತದ ರಕ್ಷಣಾ ಉತ್ಪನ್ನಗಳ ರಫ್ತು ಮೌಲ್ಯ 600 ಕೋಟಿ ರೂಪಾಯಿಗಳಾಗಿತ್ತು (72 ಮಿಲಿಯನ್ ಡಾಲರ್). ಆದರೆ, ಇಂದು ಈ ಮೌಲ್ಯ 21,000 ಕೋಟಿ ರೂಪಾಯಿಗಳನ್ನು (2.5 ಬಿಲಿಯನ್ ಡಾಲರ್) ಮೀರಿದ್ದು, ಮುಂದಿನ ದಿನಗಳಲ್ಲಿ ಈ ಮೌಲ್ಯ ಇನ್ನಷ್ಟು ಹೆಚ್ಚಾಗುತ್ತಾ ಸಾಗಲಿದೆ ಎಂದು ರಕ್ಷಣಾ ಸಚಿವರು ವಿವರಿಸಿದ್ದರು. ರಾಜನಾಥ್ ಸಿಂಗ್ ಅವರು ಭಾರತದ ರಕ್ಷಣಾ ಉತ್ಪಾದನೆ ಈಗ 1 ಟ್ರಿಲಿಯನ್ ರೂಪಾಯಿ (12 ಬಿಲಿಯನ್ ಡಾಲರ್) ಮೌಲ್ಯವನ್ನು ಮೀರಿದೆ ಎಂದಿದ್ದಾರೆ.

 

ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ

ಭಾರತದ ಜಾಗತಿಕ ಸ್ಥಾನಕ್ಕೆ ಉತ್ತೇಜನೆ: ರಕ್ಷಣಾ ರಫ್ತಿನ ವಿಸ್ತರಣೆ

ನಿವೃತ್ತ ಮೇಜರ್ ಜನರಲ್ ಜಗಿತ್‌ಬಿರ್ ಸಿಂಗ್ ಅವರು ಪ್ರಸ್ತುತ ಯುನೈಟೆಡ್ ಸರ್ವಿಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾದಲ್ಲಿ (ಯುಎಸ್ಐ) ಗೌರವ ಸದಸ್ಯರಾಗಿದ್ದು, ಭಾರತದ ರಫ್ತು ಹೆಚ್ಚಳದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಫ್ತು ಉತ್ತೇಜನ ನಡೆಸುವ ಭಾರತದ ಪ್ರಯತ್ನಗಳು ಅವಶ್ಯಕ ವಿದೇಶೀ ವಿನಿಮಯ ಲಾಭಗಳಂತಹ ಸಾಕಷ್ಟು ಅನುಕೂಲತೆಗಳನ್ನು ಹೊಂದಿದೆ ಎಂದು ಅವರು ವಿವರಿಸಿದ್ದಾರೆ.

ಭಾರತ ಹೆಚ್ಚು ಹೆಚ್ಚು ಆಯುಧಗಳನ್ನು ವಿದೇಶಗಳಿಗೆ ರಫ್ತು ಮಾಡುವುದರಿಂದ, ಆ ದೇಶಗಳು ಭಾರತದ ಆಯುಧ ವ್ಯವಸ್ಥೆಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತವೆ. ಆ ಮೂಲಕ, ಭಾರತದ ಆಯುಧಗಳು ಕೇವಲ ಪರೀಕ್ಷೆಗೆ ಸೀಮಿತವಾಗದೆ, ಕಾರ್ಯಾಚರಣೆಗಳಲ್ಲೂ ಬಳಕೆಯಾಗುವುದರಿಂದ, ಅವುಗಳ ವಾಸ್ತವ ಬಳಕೆಯ ಕುರಿತು ಮೌಲ್ಯಯುತವಾದ ನೈಜ ಅಭಿಪ್ರಾಯ ಲಭಿಸುತ್ತದೆ ಎಂದಿದ್ದಾರೆ.

ಇಂತಹ ಪ್ರತಿಕ್ರಿಯೆ - ಅಭಿಪ್ರಾಯಗಳು ಅತ್ಯಂತ ಮಹತ್ವದ್ದಾಗಿದ್ದು, ಪ್ರಾಯೋಗಿಕ ಬಳಕೆಯ ಅನುಭವ ಮತ್ತು ಬಳಕೆದಾರರ ಒಳನೋಟಗಳಿಗೆ ಅನುಗುಣವಾಗಿ, ಆಯುಧ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲು ನೆರವಾಗುತ್ತವೆ ಎಂದು ಸಿಂಗ್ ವಿವರಿಸಿದ್ದಾರೆ.

ಬೇರೆ ಬೇರೆ ದೇಶಗಳಿಗೆ ವಿವಿಧ ಆಯುಧಗಳನ್ನು ರಫ್ತು ಮಾಡಬೇಕಾದರೆ, ಅವುಗಳು ನಿರ್ದಿಷ್ಟ ಗುಣಮಟ್ಟ ಮತ್ತು ತಾಂತ್ರಿಕ ಮಾನದಂಡಗಳನ್ನು ಹೊಂದಿರಬೇಕು. ಆ ಮೂಲಕ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾದ ಉಪಕರಣಗಳನ್ನು ಉತ್ಪಾದಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದು ನಿರೂಪಿತವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಭಾರತ - ರಷ್ಯಾ ರಕ್ಷಣಾ ಸಹಯೋಗ

ರಕ್ಷಣಾ ಉತ್ಪಾದನೆಯಲ್ಲಿ ನಾವೀನ್ಯತೆ:

"ಭಾರತ ಮತ್ತು ರಷ್ಯಾಗಳು ವಿವಿಧ ಹಂತಗಳ ಉತ್ಪಾದನೆಯನ್ನು ಜಂಟಿಯಾಗಿ ನಡೆಸುವ ಮೂಲಕ ರಕ್ಷಣಾ ಉತ್ಪಾದನೆಯಲ್ಲಿ ತಮ್ಮ ಸಹಯೋಗವನ್ನು ಆರಂಭಿಸಿದ್ದವು. ಆರಂಭದಲ್ಲಿ, ರಷ್ಯಾ ನಿರ್ಮಾಣಕ್ಕೆ ಅವಶ್ಯಕವಾದ ತಂತ್ರಜ್ಞಾನ ಮತ್ತು ವಿನ್ಯಾಸಗಳನ್ನು ಭಾರತಕ್ಕೆ ಒದಗಿಸಿತ್ತು. ಮಿಗ್-21 ಯುದ್ಧ ವಿಮಾನದ ನಿರ್ಮಾಣ ಭಾರತ ರಷ್ಯಾಗಳ ರಕ್ಷಣಾ ಸಹಯೋಗದಲ್ಲಿ ಆರಂಭಿಕ ಯಶಸ್ಸಾಗಿದ್ದು, ಈ ತಂತ್ರಜ್ಞಾನವನ್ನು ರಷ್ಯಾ ಚೀನಾದ ಜೊತೆಗೂ ಹಂಚಿಕೊಂಡಿರಲಿಲ್ಲ" ಎಂದು ಸಿಂಗ್ ವಿವರಿಸುತ್ತಾರೆ.

"ತಂತ್ರಜ್ಞಾನ ವರ್ಗಾವಣೆಯ ಕಾರಣದಿಂದ, ಭಾರತ ಮಿಗ್-21 ಯುದ್ಧ ವಿಮಾನಗಳ ನಿರ್ಮಾಣವನ್ನು ಆರಂಭಿಸಿತು. ಇದು ಭಾರತ ಮತ್ತು ರಷ್ಯಾಗಳ‌ ಸಹಯೋಗಕ್ಕೆ ಸೂಕ್ತ ಅಡಿಪಾಯ ಹಾಕಿತು. ಇದರ ಬಳಿಕ ಭಾರತ ಮತ್ತು ರಷ್ಯಾಗಳ ಸಹಯೋಗದಲ್ಲಿ ಇನ್ನಷ್ಟು ಜಂಟಿ ಯೋಜನೆಗಳಾದ ವಿವಿಧ ಮಿಗ್ ಯುದ್ಧ ವಿಮಾನಗಳು ಜಾರಿಗೆ ಬಂದು, ಬೆಂಗಳೂರಿನ ಎಚ್ಎಎಲ್ ಘಟಕದಲ್ಲಿ ನಿರ್ಮಾಣಗೊಂಡವು" ಎಂದು ಸಿಂಗ್ ಹೇಳಿದ್ದಾರೆ.

ಇದೇ ರೀತಿಯಲ್ಲಿ, ಟ್ಯಾಂಕ್‌ಗಳು ಮತ್ತು ಬಿಎಂಪಿಗಳನ್ನು (ಪದಾತಿ ದಳದ ಹೋರಾಟದ ವಾಹನಗಳು) ಆರಂಭದಲ್ಲಿ ಕಂಪ್ಲೀಟ್ಲಿ ನಾಕ್ಡ್ ಡೌನ್ (ಸಿಕೆಡಿ) ಕಿಟ್‌ಗಳ ಮೂಲಕ ಜೋಡಿಸಲಾಗಿತ್ತು. ಬಳಿಕ, ಅವುಗಳನ್ನು ಸೆಮಿ ನಾಕ್ಡ್ ಡೌನ್ (ಎಸ್‌ಕೆಡಿ) ಕಿಟ್‌ಗಳಿಂದ ನಿರ್ಮಿಸಲಾಯಿತು. ಅಂತಿಮವಾಗಿ, ಅವುಗಳ ಸಂಪೂರ್ಣ ನಿರ್ಮಾಣ ಭಾರತದಲ್ಲೇ ನೆರವೇರತೊಡಗಿತು.

ಆರಂಭದಲ್ಲಿ ಕೇವಲ ಜೋಡಣೆಗೆ ಸೀಮಿತವಾಗಿದ್ದ ಭಾರತ ಮತ್ತು ರಷ್ಯಾಗಳ ಸಹಯೋಗ, ಬಳಿಕ ಜಂಟಿ ವಿನ್ಯಾಸ ಮತ್ತು ಸಂಶೋಧನೆಗೆ ವಿಸ್ತರಿಸಿ, ಅತ್ಯಾಧುನಿಕವಾದ ಆಯುಧ ವ್ಯವಸ್ಥೆಗಳ ನಿರ್ಮಾಣದಲ್ಲೂ ಮುಂದುವರಿಯಿತು ಎಂದು ಸಿಂಗ್ ಹೇಳಿದ್ದಾರೆ.

"ಭಾರತ ಮತ್ತು ರಷ್ಯಾಗಳ ಜಂಟಿ ಸಹಯೋಗಗಳು ಯಶಸ್ಸು ಕಂಡಿದ್ದು, ನಾವು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಗಳನ್ನು ಫಿಲಿಪೈನ್ಸ್ ಸೇರಿದಂತೆ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಈ ಕ್ಷಿಪಣಿಗಳಿಗೆ ಸೌದಿ ಅರೇಬಿಯಾ, ಈಜಿಪ್ಟ್, ಅರ್ಮೇನಿಯಾ ಮತ್ತು ಯುಎಇಯಂತಹ ಮಧ್ಯ ಪೂರ್ವದ ದೇಶಗಳಿಂದ ಅಪಾರ ಬೇಡಿಕೆ ವ್ಯಕ್ತವಾಗಿದೆ" ಎಂದು ಸಿಂಗ್ ಹೇಳಿದ್ದಾರೆ.

ಭಾರತೀಯ ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಿದೆ ರಷ್ಯನ್ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್?

ಈ ಬೆಳವಣಿಗೆಗಳು ಎರಡೂ ದೇಶಗಳಿಗೆ ಮಹತ್ವದ ಸಾಧನೆಯಾಗಿದ್ದು, ಜಂಟಿ ಉತ್ಪಾದನಾ ಪ್ರಯತ್ನಗಳು ಭಾರತ ಮತ್ತು ರಷ್ಯಾಗಳಿಗೆ ಪ್ರಯೋಜನಕಾರಿಯಾಗಿವೆ.

"ಸಂಶೋಧನೆ, ವಿನ್ಯಾಸ, ಮತ್ತು ಅಭಿವೃದ್ಧಿಗಳಲ್ಲಿ ನಾವು ನಡೆಸಿರುವ ಜಂಟಿ ಪ್ರಯತ್ನಗಳ ಮೂಲಕ, ನಾವು ಅತ್ಯುನ್ನತ ಹಂತದ ರಕ್ಷಣಾ ರಫ್ತು ವ್ಯವಸ್ಥೆ ಸ್ಥಾಪಿಸಿದ್ದೇವೆ. ಇದು ಪ್ರಮಾಣ ಮತ್ತು ಮೌಲ್ಯಗಳೆರಡರಲ್ಲೂ ಭಾರತದ ರಕ್ಷಣಾ ಉದ್ಯಮಕ್ಕೆ ಮಹತ್ವದ ಮೈಲಿಗಲ್ಲಾಗಿದೆ" ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.

Latest Videos
Follow Us:
Download App:
  • android
  • ios