ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ

ಚಂದ್ರಯಾನ-3 ಯೋಜನೆಯ ಯಶಸ್ಸಿನ ಬಳಿಕ, ಭಾರತ ತನ್ನ ಮುಂದಿನ ಚಂದ್ರಯಾನ-4 ಯೋಜನೆಯನ್ನು ಘೋಷಿಸಿದೆ. ಇದರಲ್ಲಿ ಚಂದ್ರನ ದೂರದ ಬದಿಯಲ್ಲಿ ಲ್ಯಾಂಡರ್ ಇಳಿಸಿ, ಚಂದ್ರನ ಮೇಲ್ಮೈ ಮಾದರಿಗಳನ್ನು ಸಂಗ್ರಹಿಸಿ, ಭೂಮಿಗೆ ಮರಳಲಾಗುತ್ತದೆ. 

Beyond the Frontiers of Space Indias Outlook to 2047 Article Written By Girish Linganna gvd

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಆಗಸ್ಟ್ 23, 2023ರಂದು ಇಳಿದ ಬಳಿಕ, ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಹೆಚ್ಚಿನ ಮಹತ್ವ ಲಭಿಸಿತು. 75 ಮಿಲಿಯನ್ ಡಾಲರ್ ಮೌಲ್ಯದಲ್ಲಿ ಕೈಗೊಳ್ಳಲಾದ ಚಂದ್ರಯಾನ-3, ರಾಕೆಟ್ ಉಡಾವಣೆಯಿಂದ ಪ್ರೊಪಲ್ಷನ್ ವ್ಯವಸ್ಥೆ, ಚಂದ್ರನ ಮೇಲೆ ಲ್ಯಾಂಡರ್ ಇಳಿಯುವಿಕೆ ಮತ್ತು ರೋವರ್ ಚಲನೆಗಳನ್ನು ಒಳಗೊಂಡ ಸಂಪೂರ್ಣ ಯೋಜನೆಯಾಗಿತ್ತು. ಕಡಿಮೆ ವೆಚ್ಚದಲ್ಲಿ ಭಾರತ ಕೈಗೊಂಡ ಚಂದ್ರಯಾನ-3, ಇತರ ರಾಷ್ಟ್ರಗಳಿಗೂ ತಮ್ಮದೇ ಆದ ಸುಸ್ಥಿರ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುವ ಇಚ್ಛೆ ಮೂಡಿಸಿದೆ.

ಚಂದ್ರಯಾನ 4, 5, 6, 7: ಚಂದ್ರಯಾನ-3 ಯೋಜನೆಯ ಯಶಸ್ಸಿನ ಬಳಿಕ, ಭಾರತ ತನ್ನ ಮುಂದಿನ ಚಂದ್ರಯಾನ-4 ಯೋಜನೆಯನ್ನು ಘೋಷಿಸಿದೆ. ಇದರಲ್ಲಿ ಚಂದ್ರನ ದೂರದ ಬದಿಯಲ್ಲಿ ಲ್ಯಾಂಡರ್ ಇಳಿಸಿ, ಚಂದ್ರನ ಮೇಲ್ಮೈ ಮಾದರಿಗಳನ್ನು ಸಂಗ್ರಹಿಸಿ, ಭೂಮಿಗೆ ಮರಳಲಾಗುತ್ತದೆ. ಇದರ ಬಳಿಕ ನಡೆಯಲಿರುವ ಚಂದ್ರಯಾನ-5, 6 ಮತ್ತು 7 ಯೋಜನೆಗಳು ಚಂದ್ರ ಅನ್ವೇಷಣೆಯನ್ನು ಇನ್ನಷ್ಟು ವಿಸ್ತರಿಸಲಿವೆ. ಚಂದ್ರಯಾನ-6 ಯೋಜನೆಯ ಮೂಲಕ, ಭಾರತ ಚಂದ್ರನ ಮೇಲೆ ಮಾನವ ನೆಲೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಚಂದ್ರಯಾನ-7 ಯೋಜನೆಯಂತೂ ಚಂದ್ರನ ಮೇಲೆ ಮೂಲಭೂತ ವ್ಯವಸ್ಥೆಗಳ ನಿರ್ಮಾಣ ಕಾರ್ಯ ನಡೆಸಲು ಉದ್ದೇಶಿತ ಯೋಜನೆಯಾಗಿದೆ.

ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ!

ಭಾರತದ ಮೊದಲ ಸೌರ ಅನ್ವೇಷಣಾ ಯೋಜನೆಯಾದ ಆದಿತ್ಯ ಎಲ್-1, ಸೂರ್ಯನ ಕೊರೊನಾವನ್ನು ಗಮನಿಸಲು ಉದ್ದೇಶಿಸಿದ್ದು, ಸೆಪ್ಟೆಂಬರ್ 2, 2023ರಂದು ಉಡಾವಣೆಗೊಂಡಿತು. ಬಳಿಕ, 127 ದಿನಗಳ ಪ್ರಯಾಣ ನಡೆಸಿ, ಜನವರಿ 6ರಂದು ತನ್ನ ಗುರಿಯಾದ ಲ್ಯಾಗ್ರೇಂಜ್ ಬಿಂದುವನ್ನು ತಲುಪಿತು. ಭಾರತ ಪ್ರಸ್ತುತ ತನ್ನ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆಯಾದ ಗಗನಯಾನಕ್ಕೆ ಸೂಕ್ತವಾದ ಉಡಾವಣಾ ವಾಹನ ನಿರ್ಮಾಣದ ಕುರಿತು ಕಾರ್ಯಾಚರಿಸುತ್ತಿದೆ. ಈ ಉಡಾವಣಾ ವಾಹನದಲ್ಲಿ, ಜೀವ ಬೆಂಬಲ ವ್ಯವಸ್ಥೆಗಳು ಮತ್ತು ಸಿಬ್ಬಂದಿ ತರಬೇತಿ ವ್ಯವಸ್ಥೆಗಳು ಸೇರಿವೆ. ಡಿಸೆಂಬರ್ 13ರಂದು, ಇಸ್ರೋ ಮುಖ್ಯಸ್ಥರಾದ ಸೋಮನಾಥ್ ಅವರು ಭಾರತ ತನ್ನದೇ ಆದ ಎನ್ವಿರಾನ್ಮೆಂಟಲ್ ಕಂಟ್ರೋಲ್ ಆ್ಯಂಡ್ ಲೈಫ್ ಸಪೋರ್ಟ್ ಸಿಸ್ಟಮ್ (ಇಸಿಎಲ್ಎಸ್ಎಸ್) ಅನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದಿದ್ದರು.

ಅದರೊಡನೆ, ಮಂಗಳ ಗ್ರಹದ ವಾತಾವರಣವನ್ನು ಅಧ್ಯಯನ ನಡೆಸುವ ಉದ್ದೇಶದಿಂದ, ಭಾರತದ ಎರಡನೇ ಮಂಗಳ ಗ್ರಹ ಅನ್ವೇಷಣಾ ಯೋಜನೆ 2030ರಲ್ಲಿ ಕಾರ್ಯಗತಗೊಳ್ಳುವ ನಿರೀಕ್ಷೆಗಳಿವೆ. 2023ರ ಡಿಸೆಂಬರ್‌ನಲ್ಲಿ, ಭಾರತ ತನ್ನ ಅಧಿಕೃತ ಬಾಹ್ಯಾಕಾಶ ನೀತಿಯಾದ 'ಸ್ಪೇಸ್ ವಿಷನ್ - 2047' ಅನ್ನು ಅನಾವರಣಗೊಳಿಸಿತು. ಇದು ಭಾರತದ ವಾಣಿಜ್ಯಿಕ ಬಾಹ್ಯಾಕಾಶ ವಲಯವನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದು, ತನ್ನ ಖಾಸಗಿ ಬಾಹ್ಯಾಕಾಶ ಉದ್ಯಮವನ್ನು ನಿರ್ವಹಿಸಬಲ್ಲ ಮುಖ್ಯ ಸಂಸ್ಥೆಗಳನ್ನು ಗುರುತಿಸುತ್ತಿದೆ. ಅದರೊಡನೆ, ಬಾಹ್ಯಾಕಾಶ ಸಂಪನ್ಮೂಲಗಳನ್ನು ಬಳಸುವ ಮತ್ತು ಮಾಲಿಕತ್ವ ಹೊಂದುವ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡುತ್ತದೆ.

ಪ್ರಧಾನ ಮಂತ್ರಿಗಳ ಕಾರ್ಯಾಲಯ (ಪಿಎಂಒ) ಈಗಾಗಲೇ ಭಾರತದ ಬಾಹ್ಯಾಕಾಶ ಯೋಜನೆಗಳ ನೀಲಿ ನಕಾಶೆಯನ್ನು ಸಿದ್ಧಪಡಿಸಿದೆ. ಇದರ ಪ್ರಕಾರ, ಚಂದ್ರಯಾನ-4 ಯೋಜನೆಯ ಪರಿಕಲ್ಪನಾ ಹಂತ ಆರಂಭಗೊಂಡಿದ್ದು, ಉಡಾವಣೆ 2028ರ ವೇಳೆಗೆ ನಡೆಯುವ ಸಾಧ್ಯತೆಗಳಿವೆ. ಇನ್ನು ಭೂಮಿಯಿಂದ 120-140 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳ ಕಕ್ಷೆಯಲ್ಲಿ (ಎಲ್ಇಒ) ಸ್ಥಾಪಿಸಲಾಗುವ ಭಾರತೀಯ ಬಾಹ್ಯಾಕಾಶ ನಿಲ್ದಾಣ 2035ರ ವೇಳೆಗೆ ಸಿದ್ಧವಾಗಲಿದೆ. ಭಾರತ 2040ರಲ್ಲಿ ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೈಗೆ ಕಳುಹಿಸುವ ಗುರಿ ಹಾಕಿಕೊಂಡಿದೆ.

ಭಾರತೀಯ ವಾಯುಪಡೆ ತನ್ನ ಹೆಸರನ್ನು ಇಂಡಿಯನ್ ಏರ್ ಫೋರ್ಸ್‌ನಿಂದ (ಐಎಎಫ್) ಇಂಡಿಯನ್ ಏರ್ ಆ್ಯಂಡ್ ಸ್ಪೇಸ್ ಫೋರ್ಸಸ್ (ಐಎಎಸ್ಎಫ್) ಎಂದು ಬದಲಿಸುವ ಪ್ರಸ್ತಾವನೆ ಸಲ್ಲಿಸಿದೆ. ಈ ಬದಲಾವಣೆ, ಭಾರತದ ಕಾರ್ಯತಂತ್ರದಲ್ಲಿನ ಬದಲಾವಣೆಗಳನ್ನು ಪ್ರದರ್ಶಿಸಿ, ರಾಷ್ಟ್ರೀಯ ಭದ್ರತೆಯಲ್ಲಿ ಬಾಹ್ಯಾಕಾಶದ ಮಹತ್ವವನ್ನೂ ವಿವರಿಸುತ್ತದೆ. ಇದು ಬ್ರಿಟಿಷ್ ಆಡಳಿತದಿಂದ ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆದುದರ ನೂರನೇ ವರ್ಷಾಚರಣೆಯನ್ನು ಸಂಭ್ರಮಿಸುವ ನಿಟ್ಟಿನಲ್ಲಿ, ಭಾರತದ ಅಧಿಕೃತ ಬಾಹ್ಯಾಕಾಶ ನೀತಿಯ ಭಾಗವಾಗಿದೆ.

ಈ ಅಂಕಣದಲ್ಲಿ ನಾವು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ವರ್ತಮಾನ ಮತ್ತು ಭವಿಷ್ಯದ ದಿಕ್ಕುಗಳನ್ನು ಸೂಚಿಸುವ ನಾಲ್ಕು ಪ್ರಮುಖ ಅಂಶಗಳನ್ನು ಗಮನಿಸೋಣ. ಈ ಅಂಶಗಳು ನಾಗರಿಕ ಮತ್ತು ಮಿಲಿಟರಿ ಎರಡೂ ಉದ್ದೇಶಗಳಿಗೆ ಮತ್ತು ಭವಿಷ್ಯದ ಬಾಹ್ಯಾಕಾಶ ನೀತಿಗಳಿಗೆ ಅವಶ್ಯಕವಾದ ನಿಯಮಾವಳಿಗಳು ಮತ್ತು ಸಾಂಸ್ಥಿಕ ಚೌಕಟ್ಟುಗಳಾಗಿವೆ.

ನೀತಿ ಮತ್ತು ಸಾಂಸ್ಥಿಕ ಅಂಶ (ನಾಗರಿಕ ಮತ್ತು ಮಿಲಿಟರಿ): 2019ರಲ್ಲಿ, ಭಾರತ ಡಿಫೆನ್ಸ್ ಸ್ಪೇಸ್ ಏಜೆನ್ಸಿಯನ್ನು ಸ್ಥಾಪಿಸಿತು. ಇದು ಡಿಫೆನ್ಸ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ಜೊತೆಗೆ ಒಂದು ರೀತಿ ಬಾಹ್ಯಾಕಾಶ ಸೇನೆಯಂತೆಯೂ ಕಾರ್ಯಾಚರಿಸುತ್ತದೆ. 2019ರಲ್ಲಿ ಸ್ಥಾಪಿಸಲಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ಸಾರ್ವಜನಿಕ ಹಣದಿಂದ ನಿರ್ಮಿಸಿರುವ ವ್ಯವಸ್ಥೆಗಳ ವಾಣಿಜ್ಯೀಕರಣ ನಡೆಸುವ ಜವಾಬ್ದಾರಿ ಹೊಂದಿದೆ. ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್ (IN-SPACe) ಸರ್ಕಾರಿ ಮತ್ತು ಖಾಸಗಿ ವಲಯಗಳ ಬಾಹ್ಯಾಕಾಶ ಚಟುವಟಿಕೆಗಳಿಗೆ ಜವಾಬ್ದಾರವಾಗಿದೆ.

ಭಾರತ ತನ್ನ ವಾಣಿಜ್ಯಿಕ ಬಾಹ್ಯಾಕಾಶ ವಲಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈಡೇರಿಸುವ ಸಲುವಾಗಿ, ಪ್ರತ್ಯೇಕವಾದ ಬಾಹ್ಯಾಕಾಶ ಇಲಾಖೆಯನ್ನು (DoS) ಸ್ಥಾಪಿಸಿದೆ. ಇದು ಪ್ರಧಾನ ಮಂತ್ರಿಗಳ ಕಾರ್ಯಾಲಯದಡಿ ಕಾರ್ಯ ನಿರ್ವಹಿಸುತ್ತಾ, ಬಾಹ್ಯಾಕಾಶ ನೀತಿಗಳನ್ನು ಜಾರಿಗೆ ತರುತ್ತದೆ. ಇದೇ ಸಂದರ್ಭದಲ್ಲಿ, ಇಸ್ರೋ ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತು ಗಮನ ಹರಿಸುತ್ತದೆ.

ಸಮರ್ಥ ವಾಯು ಶಕ್ತಿಯಾಗಿರುವ ಭಾರತೀಯ ವಾಯುಪಡೆ, ಭವಿಷ್ಯದಲ್ಲಿ ಸಮರ್ಥ ಏರೋಸ್ಪೇಸ್ ಶಕ್ತಿಯಾಗುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ವಾಯುಪಡೆ ಇಸ್ರೋ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ), ಇನ್-ಸ್ಪೇಸ್ ಮತ್ತು ಇತರ ಭಾರತೀಯ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳ ಜೊತೆಗೆ ಸಹಯೋಗ ಸಾಧಿಸಲು ಬಯಸುತ್ತಿದೆ. ಐಎಎಫ್ 2023ರಲ್ಲಿ ತನ್ನ ಹೆಸರನ್ನು ಐಎಎಸ್ಎಫ್ ಎಂದು ಬದಲಾಯಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಬಾಹ್ಯಾಕಾಶ ದಟ್ಟಣೆ ನಿಯಂತ್ರಣ, ಬಾಹ್ಯಾಕಾಶ ಪರಿಸ್ಥಿತಿಯ ಅರಿವು ಮತ್ತು ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ನಿರ್ವಹಣಾ ಸಾಮರ್ಥ್ಯ ಗಳಿಸಲು ಪ್ರಯತ್ನಿಸುತ್ತಿದೆ.

ಈ ಕ್ರಮ ಅಕ್ಟೋಬರ್ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ 'ಮಿಷನ್ ಡಿಫ್‌ಸ್ಪೇಸ್'ಗೆ ಪೂರಕವಾಗಿದೆ. ಮಿಷನ್ ಡಿಫ್‌ಸ್ಪೇಸ್ ಅಡಿಯಲ್ಲಿ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಿಗೆ 75 ರಕ್ಷಣಾ ಸಂಬಂಧಿ ಬಾಹ್ಯಾಕಾಶ ಸವಾಲುಗಳನ್ನು ನಿರ್ವಹಿಸಿ, ಸ್ಥಳೀಯ ಅಭಿವೃದ್ಧಿ ಸಾಧಿಸಲು ನೆರವಾಗುವಂತೆ ಆಹ್ವಾನಿಸಲಾಗಿತ್ತು.

ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಭಾರತ ಭವಿಷ್ಯದ ನೋಟ: ಭಾರತ 2025ರಿಂದ 2047ರ ತನಕ ಆರ್ಥಿಕ ಮಾರ್ಗಸೂಚಿಯೊಂದನ್ನು ಹಾಕಿಕೊಂಡಿದೆ. ಪ್ರಸ್ತುತ ಮಾರ್ಗಸೂಚಿ ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಉತ್ತೇಜಿಸಿ, ಜಾಗತಿಕ ಬಾಹ್ಯಾಕಾಶ ಮಾಹಿತಿಗಳನ್ನು ಒದಗಿಸಿ, ಭಾರತವನ್ನು ಪ್ರಮುಖ ಬಾಹ್ಯಾಕಾಶ ಸಂಬಂಧಿ ಉತ್ಪಾದನಾ ತಾಣವಾಗಿ ರೂಪಿಸಲು ಪ್ರಯತ್ನಿಸುತ್ತದೆ. ಭಾರತದ ದೃಷ್ಟಿಕೋನ ಬಾಹ್ಯಾಕಾಶವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದಾಗಿದ್ದು, ಬಾಹ್ಯಾಕಾಶವನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಂಡು, ತನ್ನ ಉತ್ಪಾದನಾ ಸಾಮರ್ಥ್ಯವನ್ನು ಜಗತ್ತಿನಾದ್ಯಂತ ಬಾಹ್ಯಾಕಾಶ ಉದ್ಯಮದ ನೆರವಿಗೆ ಬಳಸುವಂತೆ ಮಾಡುತ್ತದೆ. ಈ ಬೆಳವಣಿಗೆಗಳಿಂದಾಗಿ ಮುಂದೆ ಮಹತ್ತರ ಬದಲಾವಣೆಗಳು ಉಂಟಾಗಿ, ಬಾಹ್ಯಾಕಾಶ ವಲಯದಲ್ಲಿ ಹೆಚ್ಚುತ್ತಿರುವ ಭಾರತದ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸಲಿವೆ.

2023ರಲ್ಲಿ ಪ್ರಧಾನಿಗಳ ಕಾರ್ಯಾಲಯ ಬಾಹ್ಯಾಕಾಶದಲ್ಲಿ ಭಾರತದ ಭವಿಷ್ಯದ ಯೋಜನೆಗಳನ್ನು ವಿಸ್ತೃತವಾಗಿ ವಿವರಿಸಿದೆ. ಸ್ಪೇಸ್ ವಿಷನ್ 2047 ಎಂಬ ಮಾರ್ಗಸೂಚಿ, ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಹತ್ವದ ಗುರಿಗಳು ಮತ್ತು ಮೈಲಿಗಲ್ಲುಗಳನ್ನು ಸೂಚಿಸಿದೆ. ಭಾರತದ ಗುರಿಗಳಲ್ಲಿ, 2025ರ ವೇಳೆಗೆ ಸಂವಹನ ಉಪಗ್ರಹಗಳ ಉಡಾವಣೆ, 2030ರ ವೇಳೆಗೆ ಕ್ವಾಂಟಮ್ ಮತ್ತು ಆಪ್ಟಿಕಲ್ ಸಂವಹನದ ಅಭಿವೃದ್ಧಿ, 2030ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ, ಮರುಬಳಕೆ ಮಾಡಬಲ್ಲ ಭಾರೀ ಉಡಾಯಕಗಳ ನಿರ್ಮಾಣ, 2035ರಿಂದ 2040ರೊಳಗೆ ಟು ಸ್ಟೇಜ್ ಟು ಆರ್ಬಿಟ್ (ಟಿಎಸ್‌ಟಿಒ) ಪೂರ್ಣ ಮರುಬಳಕೆ ಮಾಡಬಲ್ಲ ಬಾಹ್ಯಾಕಾಶ ವಾಹನ ಅಭಿವೃದ್ಧಿ, 2040ರ ವೇಳೆಗೆ ಬಾಹ್ಯಾಕಾಶ ಆಧಾರಿತ ಕಾರ್ಯತಂತ್ರದ ರಕ್ಷಣಾ ವ್ಯವಸ್ಥೆ, ಅದೇ ವರ್ಷದಲ್ಲಿ ಮಾನವ ಸಹಿತ ಚಂದ್ರಯಾನ, 2047ರ ವೇಳೆಗೆ ಅಂತರಗ್ರಹ ಸಂಪರ್ಕ ಜಾಲ ಸ್ಥಾಪನೆ ಮತ್ತು ಭವಿಷ್ಯದಲ್ಲಿ ಬಾಹ್ಯಾಕಾಶ ಗಣಿಗಾರಿಕೆಗಳು ಸೇರಿವೆ.

ಮೋದಿ ಬೆಂಬಲ: ದಕ್ಷಿಣ ಚೀನಾ ಸಮುದ್ರದ ಬಿಕ್ಕಟ್ಟಿನ ನಡುವೆಯೂ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಬಲ!

ಭಾರತದ 2047ರ ಬಾಹ್ಯಾಕಾಶ ಮಾರ್ಗಸೂಚಿ ಚೀನಾದ 2049ರ ಬಾಹ್ಯಾಕಾಶ ಕಾರ್ಯತಂತ್ರವನ್ನು ಹೋಲುತ್ತದೆ. ಆದರೆ, ಚೀನಾಗೆ ಹೋಲಿಸಿದರೆ ಭಾರತದ ಮುಂದೆ ಮಹತ್ತರವಾದ ಸವಾಲುಗಳಿವೆ. ಗಮನಾರ್ಹವಾಗಿ, ಭಾರತ ಇನ್ನೂ ಸ್ಪೇಸ್ ಎಕ್ಸ್‌ನ ಸ್ಟಾರ್ ಶಿಪ್ ಅಥವಾ ಚೀನಾದ ಲಾಂಗ್ ಮಾರ್ಚ್ 9 ರೀತಿಯ ಭಾರೀ ಪ್ರಮಾಣದ ತೂಕ ಎತ್ತಬಲ್ಲ ರಾಕೆಟ್ ಅನ್ನು ಅಭಿವೃದ್ಧಿ ಪಡಿಸಿಲ್ಲ. ಈಗಿನ್ನೂ ಭಾರತದ ಬಳಿ ಮಾನವ ಸಹಿತ ಗಗನಯಾತ್ರೆ ನಡೆಸುವ ಸಾಮರ್ಥ್ಯವಿಲ್ಲ ಅಥವಾ ಭಾರೀ ಬಾಹ್ಯಾಕಾಶ ರಚನೆಗಳನ್ನು ನಿರ್ಮಿಸಲು, ಹಾಗೂ ನಿರ್ವಹಿಸಲು ಸಾಧ್ಯವಿಲ್ಲ. ಅದರೊಡನೆ, ಚೀನಾ ಇತ್ತೀಚೆಗೆ ಪ್ರದರ್ಶಿಸಿರುವ ಮರುಬಳಕೆ ಮಾಡಬಲ್ಲ ಬಾಹ್ಯಾಕಾಶ ವಿಮಾನ ತಂತ್ರಜ್ಞಾನವನ್ನು ಭಾರತ ಅಭಿವೃದ್ಧಿ ಪಡಿಸಿಲ್ಲ. ಬಾಹ್ಯಾಕಾಶ ಆಧಾರಿತ ಸೌರ ಶಕ್ತಿಗಾಗಿ ರಾಷ್ಟ್ರಾದ್ಯಂತ ಕಾರ್ಯಕ್ರಮವನ್ನು ಭಾರತವಿನ್ನೂ ಸ್ಥಾಪಿಸಿಲ್ಲ.

ಇಂತಹ ಹಿನ್ನಡೆಗಳು, ಭಾರತ ಇನ್ನೂ ಸಾಕಷ್ಟು ಪ್ರಗತಿ ಸಾಧಿಸುವುದಿದೆ ಎಂಬುದನ್ನು ಸೂಚಿಸುತ್ತವೆ. ಕಳೆದ ಒಂದು ದಶಕದ ಅವಧಿಯಲ್ಲಿ, ಚೀನಾ ಬಾಹ್ಯಾಕಾಶ ಸಾಮರ್ಥ್ಯದಲ್ಲಿ ಅಮೆರಿಕಾದೊಡನೆ ತನಗಿದ್ದ ಅಂತರವನ್ನು ಸಾಕಷ್ಟು ತಗ್ಗಿಸಿದೆ. ಚೀನಾದ ಆರ್ಥಿಕ ಸವಾಲುಗಳನ್ನು ಪರಿಗಣಿಸಿದರೆ, 2040ರ ದಶಕದಲ್ಲಿ ಭಾರತ ತನಗಿರುವ ಜನಸಂಖ್ಯಾ ಅನುಕೂಲತೆಗಳು ಮತ್ತು ಪ್ರತಿಭೆಗಳನ್ನು ಬಳಸಿಕೊಂಡು, ಕ್ಷಿಪ್ರವಾಗಿ ಚೀನಾದ ಮಟ್ಟವನ್ನು ತಲುಪಬಹುದು. 2040ರ ವೇಳೆಗೆ ಯಾವ ರಾಷ್ಟ್ರ ಪ್ರಮುಖ ಬಾಹ್ಯಾಕಾಶ ಶಕ್ತಿಯಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ. ಯಾವ ರಾಷ್ಟ್ರ ನಿರಂತರವಾಗಿ ದೀರ್ಘಾವಧಿಯ ನೀತಿಗಳ ಮೇಲೆ ಗಮನ ಹರಿಸಿ, ಹೂಡಿಕೆಗಳನ್ನು ಹೊಂದಿ, ಶಿಕ್ಷಣ, ತರಬೇತಿಯ ಮೇಲೆ ವೆಚ್ಚ ಮಾಡಿ, ದೂರದೃಷ್ಟಿಯ ಯೋಜನೆಗಳನ್ನು ರೂಪಿಸುತ್ತದೋ, ಆ ರಾಷ್ಟ್ರ ಕಾರ್ಯತಂತ್ರದ ಮೇಲುಗೈ ಸಾಧಿಸಲು ಸಾಧ್ಯವಾಗಲಿದೆ.

Latest Videos
Follow Us:
Download App:
  • android
  • ios