ದೆಹಲಿಯಲ್ಲಿ `ಯಮಧರ್ಮ 350.. ಸಾವಿನ ಮನೆಯಲ್ಲಿ ಕಣ್ಣೀರಿಗೂ ಅವಕಾಶವಿಲ್ಲ!
ದೆಹಲಿಯಲ್ಲಿ `ಯಮಧರ್ಮ 350/ ಪ್ರತಿ ದಿನ ಏರುತ್ತಲೇ ಇದೆ ಸಾವಿನ ಲೆಕ್ಕ/ ಕೊರೋನಾ ವಿರುದ್ಧ ಹೋರಾಟ ನಿರಂತರ/ ಆಕ್ಸಿಜನ್ ಸಿಲಿಂಡರ್ ಗಳದ್ದೇ ದೊಡ್ಡ ಸಮಸ್ಯೆ
ಡೆಲ್ಲಿ ಮಂಜು
ನವದೆಹಲಿ(ಏ. 26) ಯಮಧರ್ಮ 350..! ಇದು ಹೊಸ ಸಿನಿಮಾ ಟೈಟಲ್ ಅಂದ್ಕೋಬ್ಯಾಡಿ. ಸಾವನ್ನು ಸೆರಗಿನಲ್ಲಿ ಕಟ್ಟಿಕೊಂಡಿರುವ ನವದೆಹಲಿಗೆ ಕೊರೊನಾ ಸೋಂಕು ಕೊಟ್ಟ ಹೆಸರಿದು. ಸೋಂಕಿನ ಪ್ರಕರಣಗಳು ವರದಿಯಾದರೂ ಪರವಾಗಿಲ್ಲ ಆದರೆ ಸಾವಿನ ಪ್ರಕರಣಗಳು ವರದಿಯಾಗಬಾರದು ಅಥವಾ ಆದರೂ ತೀರ ಕಡಿಮೆ ಪ್ರಮಾಣದಲ್ಲಿ ವರದಿಯಾಗಬೇಕು ಅನ್ನೋ ಸರ್ಕಾರದ ನಿಲುವಿಗೆ ತದ್ವಿರುದ್ಧವಾಗಿ ಯಮಧರ್ಮ ತನ್ನ ಪಾಶವನ್ನು ಹಿಡಿದು ಈ ಇಂದ್ರಪ್ರಸ್ಥದ ಗಲ್ಲಿಗಲ್ಲಿಯಲ್ಲೂ ಓಡಾಡುತ್ತಿದ್ದಾನೆ. ಸಿಕ್ಕಸಿಕ್ಕ ಕಡೆ ತನ್ನ ಪ್ರತಾಪ ತೋರುತ್ತಿದ್ದಾನೆ. ಬೆಡ್ ಮೇಲೆ ಮಲಗಿರುವವರಿಗೆ ಆಯಸ್ಸು ತುಂಬಬೇಕಿರುವ ವೈದ್ಯರು ಕೈಚಲ್ಲಿ ಕೂತಿದ್ದಾರೆ.
ಉಸಿರು ನಿಲ್ಲದಂತೆ ಮಾಡಲು ನಮ್ಮ ಕೈಯಲ್ಲಿ ಆಗುತ್ತಿಲ್ಲ. ಕೃತಕ ಉಸಿರು ತುಂಬೋ ಯಂತ್ರದಲ್ಲೇ (ಆಕ್ಸಿಜನ್) ಈಗ ಗಾಳಿಯ ಸದ್ದಿಲ್ಲ. ನಮ್ಮ ಆಸ್ಪತ್ರೆಗೆ ಆಕ್ಸಿಜನ್ ಕೊಡಿ ಇಲ್ಲವೆಂದರೆ ಅದೆಷ್ಟು ಮಂದಿಯ ಜೀವಗಳು ಯಮಧರ್ಮನ ಪಾಶಕ್ಕೆ ಸಿಲುಕ್ತಾವೋ ಗೊತ್ತಿಲ್ಲ ಅಂಥ ವೈದ್ಯರು ಕಣ್ಣೀರು ಹಾಕಿ, ಬೇಡಿಕೊಳ್ತಿರೋ ಚಿತ್ರಗಳು ಕಳೆದ 10 ದಿನಗಳಿಂದ ನಿತ್ಯವೂ ಕಾಣ ಸಿಗುತ್ತಿವೆ.
ಮಾತುಕತೆ ಸಾಕು, ಎಲ್ಲರಿಗೂ ಕೊರೋನಾ ಲಸಿಕೆ ಬೇಕು
ಒಂದು ಗಂಟೆ, ಎರಡು ಗಂಟೆ ಅಂಥ ರೋಗಿಯ ಟೈಮ್ ಕೌಂಟ್ ಮಾಡಿ, ಕೊನೆಗೆ ಮೂರ್ನಾಲ್ಕು ಗಂಟೆಗಳು ಕಳೆದ ಬಳಿಕ ಅವರ ಮುಖಕ್ಕೆ ಬಿಳಿಬಟ್ಟೆ ಮುಚ್ಚಿ ಸಂಕಟದೊಂದಿಗೆ ಹೊರಗೆ ಬರುತ್ತಿರುವ ದಾದಿಯರ ನೋವು ಹೇಳತೀರದಾಗಿದೆ. ಯಂತ್ರದಲ್ಲಿ ಗಾಳಿ (ಆಕ್ಸಿಜನ್) ಇಲ್ಲ ಅನ್ನೋ ಒಂದೇ ಒಂದು ಕಾರಣ ದೆಹಲಿಯ ಆಸ್ಪತ್ರೆಗಳಲ್ಲಿ ಸಾವಿನ ಪಟ್ಟಿಯನ್ನು ನಿತ್ಯವೂ ಹೆಚ್ಚಾಗುವಂತೆ ನೋಡಿಕೊಳ್ಳುತ್ತಿದೆ. ದೊಡ್ಡ ಆಸ್ಪತ್ರೆಗಳು ಅನ್ನಿಸಿಕೊಂಡಿರುವ ಕಡೆ ಕೂಡ ಆಕ್ಸಿಜನ್ ಕೊರತೆ ಕಂಡುಬಂದು ಅಲ್ಲಿಯೂ 20 ರಿಂದ 30 ಮಂದಿ ಸಾವಿನ ಕದತಟ್ಟುತ್ತಿದ್ದಾರೆ. ಇಂಥ ಹಲವು ಕಾರಣಗಳಿಂದಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ದೆಲ್ಲಿಯ ಸಾವಿನ ಲೆಕ್ಕ 350..! ಅಂಥ ಬರುತ್ತಿದೆ.
ಮೊದಲೆರಡು, ಮೂರು ಅಲೆಗಳ ವೇಳೆ ತುಂಬಾ ಚನ್ನಾಗಿ ನಿಭಾಯಿಸಿದ್ದ ಕೇಂದ್ರ ಮತ್ತು ದೆಹಲಿ ಸರ್ಕಾರಗಳು ಈ ಬಾರೀ ಪೂರ್ವ ಸಿದ್ದತೆಯೇ ಇಲ್ಲದಂತೆ ಕೂತುಬಿಟ್ಟವು. ಆಕ್ಸಿಜನ್ ಪ್ಲಾಂಟ್‍ಗಳು ಹಾಕುವಂತಿಲ್ಲ ಎಂಬ ಕಾರಣವೊಂದೇ ಮುಂದಿಟ್ಟುಕೊಂಡು ಉತ್ತರ ಪ್ರದೇಶ, ಹರಿಯಾಣ ಮುಂತಾದ ರಾಜ್ಯಗಳ ಮೇಲೆ ಆಕ್ಸಿಜನ್‍ಗಾಗಿ ದೆಹಲಿ ಸರ್ಕಾರ ಪೂರ್ತಿಯಾಗಿ ಅವಲಂಬಿಸಿಬಿಟ್ತು. ಈ ಅವಲಂಬನೆ ಕೊನೆಯ ಕ್ಷಣದಲ್ಲಿ ಕೈಕೊಡ್ತು.
ನಾವು ಅನುಮತಿ, ದುಡ್ಡು ಎರಡೂ ಕೊಟ್ಟರೂ ಆಕ್ಸಿಜನ್ ಪ್ಲಾಂಟ್‍ಗಳನ್ನು ಹಾಕಲು ಕೇಜ್ರಿವಾಲ್ ಸರ್ಕಾರ ವಿಫಲವಾಗಿದೆ. ಪರಿಸ್ಥಿತಿ ಕೈ ಮೀರುತ್ತಿರುವಾಗ ರಾಜಕೀಯ ಮಾಡುತ್ತಿದೆ ಎಂಬ ಕೆಸರೆಚಾಟ ನಡೆಯುತ್ತಿದೆ. ಜೀವ ಮತ್ತು ಜೀವನದ ಬಗ್ಗೆ ಮಾತಾಡಿದ್ದ ಹಾಗು ಮಾತಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ತಾನು ಮುಂದೆ ನಿಂತು ನಾಯಕತ್ವ ವಹಿಸಿಕೊಳ್ಳದಿದ್ದರೇ ದೆಹಲಿಗರ ಸಾವು-ನೋವುಗಳು ನಿಲ್ಲಿಸಲು ಸಾಧ್ಯವಿಲ್ಲ ಅನ್ನೋ ಅರಿವಿದ್ದರೂ ಅದ್ಯಾಕೋ ತನಗೆ ಗೊತ್ತೇ ಇಲ್ಲ ಎಂಬಂತೆ ಕೇಂದ್ರ ಗೃಹ ಇಲಾಖೆ ಕೂತುಬಿಟ್ತು. ಕೇಂದ್ರದ ಈ ನಿಲುವು ಸಾವಿನ ಸಂಖ್ಯೆ ಮತ್ತಷ್ಟು ಏರಲು ಕಾಣವಾಯ್ತು.
ಪ್ರತಿ 30 ಮಂದಿಯಲ್ಲಿ ಸೋಂಕು : ಕೊರೊನಾ ಪಾಸಿಟಿ ರೇಟ್ ಶೇ.30 ರಿಂದ 32ರ ತನಕ ಇದೆ. ಅಂದರೆ ದೆಹಲಿಯಲ್ಲಿ 100 ಮಂದಿಯನ್ನು ಟೆಸ್ಟಿಗೆ ಒಳಪಡಿಸಿದರೆ 30 ರಿಂದ 32 ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಳುತ್ತಿದೆ. ಆಕ್ಟೀವ್ ಕೇಸ್‍ಗಳ ಸಂಖ್ಯೆ ಹತ್ತಿರಹತ್ತಿರ 95 ಸಾವಿರ ಪ್ರಕರಣಗಳು ಇವೆ. ಯಾವುದೇ ಆಸ್ಪತ್ರೆಗೆ ಹೋದರು ಬೆಡ್, ಆಕ್ಸಿಜನ್, ಐಸಿಯು ಈ ಪದಗಳ ಮುಂದೆ `ಖಾಲಿ' ಅನ್ನೋ ಬೋರ್ಡ್‍ಗಳು ಕಾಣಿಸುತ್ತಿವೆ. ಯಾವುದೇ ಆಸ್ಪತ್ರೆಯ ಆವರಣದ ಮುಂದೆ ನಿಂತರೇ ಅಲ್ಲಿ ರೋಗಿಗಳ ಸಂಬಂಧಿಕರ ರೋಧನ, ಫೋರ್ಟಬಲ್ ಆಕ್ಸಿಜನ್ ಸಿಲಿಂಡರ್ ಕಾಣುತ್ತಿವೆ. ಇತ್ತ ಈ ಯಮಧರ್ಮ 350 ಸಿನಿಮಾ ಯಾವಾಗ ಮುಗಿಯುತ್ತೋ, ಎಂದಿನಂತೆ ನಿರುಮಳವಾಗಿ ಓಡಾಡ್ತಿವೋ ಅನ್ನೋದೇ ದೆಹಲಿಗರ ಮನಸ್ಸಿನ ಮಾತು. ಜೊತೆಗೆ ಆಕ್ಸಿಜನ್, ಐಸಿಯು ಬೆಡ್ ವ್ಯವಸ್ಥೆಯ ವೈಫಲ್ಯದ ವಿಚಾರದಲ್ಲಿ ಕೇಜ್ರಿವಾಲ್ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿರುವುದು ಮಾತ್ರ ಗಟ್ಟಿಯಲ್ಲಿ ಧ್ವನಿಯಲ್ಲಿ ಕೇಳಿಬರುತ್ತಿದೆ.