ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಮೇ.10ಕ್ಕೆ ಚುನಾವಣೆ, ಮೇ.13ಕ್ಕೆ ಫಲಿತಾಂಶ. ಆದರೆ ಕರ್ನಾಟಕ ಹಾಗೂ ದೇಶದಲ್ಲಿ ಪ್ರತಿ ದಿನ ಕೋವಿಡ್ ಪ್ರಕರಣ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ.
ನವದೆಹಲಿ(ಮಾ.30): ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಖಾಡ ಸಜ್ಜಾಗಿದೆ. ಇದರ ಜೊತೆಗೆ ನಾಲ್ಕು ರಾಜ್ಯಗಳಲ್ಲಿ ಉಪ ಚುನಾವಣೆಯೂ ನಡೆಯಲಿದೆ. ಕರ್ನಾಟಕ ಚುನಾವಣೆ ಮೇಲೆ ಇಡೀ ದೇಶ ಚಿತ್ತ ಹರಿಸಿದೆ. ಪ್ರಚಾರ, ರೋಡ್ ಶೋ, ರ್ಯಾಲಿ ಸೇರಿದಂತೆ ಚುನಾವಣಾ ಚಟುವಟಿಕೆ ತೀವ್ರಗೊಂಡಿದೆ. ಇದರ ನಡುವೆ ದೇಶದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 3,016 ಪ್ರಕರಣ ದಾಖಲಾಗಿದೆ.ಕರ್ನಾಟಕದಲ್ಲೂ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಬುಧವಾರ 215 ಕೋವಿಡ್ ಪ್ರಕರಣ ದಾಖಲಾಗಿದೆ. ಚುನಾವಣೆ ಕಾರಣ ಪ್ರಚಾರ ಸೇರದಂತೆ ಎಲೆಕ್ಷನ್ ಕಾರಣ ಜನರ ಸಂಪರ್ಕ, ಜನಸಂದಣಿ ಹೆಚ್ಚಾಗಲಿದೆ. ಹೀಗಾಗಿ ಪ್ರಕರಣ ಸಂಖ್ಯೆಯೂ ಹೆಚ್ಚಾಗುವ ಆತಂಕ ಎದುರಾಗಿದೆ.
ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಶೇಕಡಾ 40 ರಷ್ಟು ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ. ಒಂದೇ ಸಮನೆ ಈ ಏರಿಕೆ ಮತ್ತೆ ಕೋವಿಡ್ ಕಾರ್ಮೋಡದ ಸೂಚನೆಗಳನ್ನು ನೀಡುತ್ತಿದೆ. ಭಾರತದ ಪ್ರತಿ ದಿನದ ಪಾಸಿಟಿವಿಟಿ ರೇಟ್ ಶೇಕಡಾ 2.7 ರಷ್ಟಿದ್ದರೆ, ವಾರದ ಪಾಸಿಟಿವಿಟಿ ರೇಟ್ ಶೇಕಡಾ 1.71. ಕಳೆದ 6 ತಿಂಗಳಲ್ಲಿ ದಾಖಲಾದ ಗರಿಷ್ಠ ಕೋವಿಡ್ ಪ್ರಕರಣ ಇದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ 3,375 ಕೋವಿಡ್ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರತಿ ದಿನ ಇಳಿಕೆಯತ್ತ ಸಾಗಿತ್ತು.
ಬೂಸ್ಟರ್ ಡೋಸ್ ಪಡೆದ 12 ತಿಂಗಳ ನಂತ್ರ ಮತ್ತೊಂದು ಡೋಸ್ ಅಗತ್ಯ ಎಂದ WHO
ಕೋವಿಡ್‌ಗೆ ಬಲಿಯಾದವರ ಸಂಖ್ಯೆ 14. ದೆಹಲಿಯಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಜನವರಿ ತಿಂಗಳಲ್ಲಿ ದೆಹಲಿಯಲ್ಲಿ ಶೂನ್ಯ ಕೋವಿಡ್ ಪ್ರಕರಣದಿಂದ ಇದೀಗ 300ಕ್ಕೆ ಏರಿಕೆಯಾಗಿದೆ. ದೆಹಲಿ, ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ತುರ್ತು ಸಭೆ ನಡೆಸಲಾಗಿದೆ. ಇತ್ತ ಕರ್ನಾಟಕದಲ್ಲೂ ಈ ವರ್ಷದಲ್ಲಿ ದಾಖಲಾದ ಗರಿಷ್ಟ ಪ್ರಕರಣ ದಾಖಲಾಗಿದೆ. 215 ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ 75 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.3.24 ದಾಖಲಾಗಿದೆ. ಸೋಂಕಿನಿಂದ 64 ಜನ ಗುಣಮುಖರಾಗಿದ್ದು, ಒಬ್ಬ ವೃದ್ಧ ಮೃತಪಟ್ಟವರದಿಯಾಗಿದೆ. 387 ಸಕ್ರಿಯ ಸೋಂಕು ಪ್ರಕರಣಗಳಿದ್ದು, 33 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 151 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 11 ಮಂದಿ ಮೊದಲ ಡೋಸ್, ಎಂಟು ಮಂದಿ ಎರಡನೇ ಡೋಸ್ ಮತ್ತು 132 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. 2993 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
ಕೋವಿಡ್ ಸನ್ನದ್ಧತೆ ಟೆಸ್ಟ್‌ಗೆ ಏ.10, 11ಕ್ಕೆ ದೇಶಾದ್ಯಂತ ಅಣಕು ಡ್ರಿಲ್
ಕರ್ನಾಟಕ ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೇ ಕೋವಿಡ್ ಪ್ರಕರಣಗಳ ಸಂಖ್ಯ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೀಗ ರಾಜಕೀಯ ಪಕ್ಷಗಳ ಪ್ರಚಾರ, ಸಮಾವೇಶಗಳಿಗೆ ಜನರನ್ನು ಸೇರಿಸಲಾಗುತ್ತದೆ. ರೋಡ್ ಶೋ, ರ್ಯಾಲಿಗಳಲ್ಲೂ ಲಕ್ಷ ಲಕ್ಷ ಜನ ಸೇರಲಿದ್ದಾರೆ. ಇದು ಕೋವಿಡ್ ಹರಡುವಿಕೆ ವೇಗವನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಸದ್ಯ ಭಾರತದಲ್ಲಿ ಕಾಣಿಸಿಕೊಳ್ಳುತ್ತಿರುವ ಕೋವಿಡ್ ಪ್ರಕರಣಗಳು ಮೈಲ್ಡ್ ಸಿಂಪ್ಟಸ್ ಹೊಂದಿದೆ. ಇಷ್ಟೇ ಅಲ್ಲ ಭಾರತ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿರುವುದರಿಂದ ಆತಂಕ ಪಡುವ ಅವಶ್ಯಕತೆ ಇಲ್ಲ. ಇದೇ ವೇಳೆ ಲಸಿಕೆ ಲಭ್ಯತೆ ಸಾಕಷ್ಟಿದೆ. ಬೂಸ್ಟರ್ ಡೋಸ್ ಪಡೆಯದವರು ಶೀಘ್ರವೇ ಲಸಿಕೆ ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ.
