ಯುದ್ಧಕ್ಕೆ ತಾಳ್ಮೆ ಮುಖ್ಯ. ೧೯೭೧ರ ಯುದ್ಧದಲ್ಲಿ ಮಾಣೆಕ್ ಶಾ ತಾಳ್ಮೆಯಿಂದ ಯೋಜಿಸಿ ಗೆದ್ದರು. ಈಗಲೂ ಪಾಕಿಸ್ತಾನ ವಿರುದ್ಧ ಯುದ್ಧ ಖಚಿತವಿಲ್ಲ. ಭಯೋತ್ಪಾದನೆಗೆ ಕಠಿಣ ಕ್ರಮದ ಭರವಸೆ ಇದೆ. ಪಾಕಿಸ್ತಾನವನ್ನು ಮಟ್ಟಹಾಕಲಾಗುತ್ತಿದೆ. ಯುದ್ಧವಾದರೆ ದೀರ್ಘಕಾಲ ಸಾಗಬಾರದು ಎಂಬುದು ಭಾರತದ ಗುರಿ. ಸೇನೆಗೆ ಸ್ವಾತಂತ್ರ್ಯ ನೀಡಲಾಗಿದೆ.
ಬೆಂಗಳೂರು (ಮೇ.6): ಸರ್ಜಿಕಲ್ ಸ್ಟ್ರೈಕ್, ಏರ್‌ಸ್ಟ್ರೈಕ್, ಸೇನಾ ಕಾರ್ಯಾಚರಣೆ, ಕೊನೆಗೆ ಯುದ್ಧ. ಮಿಲಿಟರಿ ಭಾಷೆಯಲ್ಲಿ ಇವೆಲ್ಲದಕ್ಕೂ ಬೇರೆಯದೇ ಅರ್ಥ. ಯುದ್ಧ ಅನ್ನೋದು ಸುಖಾಸುಮ್ಮನೆ ಹೋಗಿ ಎದುರಾಳಿಯ ಮೇಲೆ ಬಿದ್ದು ಹೊಡೆತ ತಿಂದು ಬರೋದಲ್ಲ. ಯುದ್ಧಕ್ಕೆ ಎಲ್ಲಾ ಸೇನಾಪಡೆಗಳು, ದೇಶ ಸಿದ್ಧವಾದರೂ ಯುದ್ಧವನ್ನು ಗೆಲ್ಲೋಕೆ ಬೇಕಾಗಿರೋದು ಮುಖ್ಯವಾಗಿ 'ತಾಳ್ಮೆ'.
ಕೇಂದ್ರ ಗೃಹ ಸಚಿವಾಲಯ ದೇಶಾದ್ಯಂತ ಮಾಕ್ ಡ್ರಿಲ್‌ಗೆ ಕರೆ ನೀಡಿದ ಬೆನ್ನಲ್ಲೇ ಯುದ್ಧದ ಕಾರ್ಮೋಡ ದೇಶದ ಮೇಲೆ ಬಿದ್ದಿದೆ ಅನ್ನೋ ಮಾತುಗಳು ಕೇಳಿಬಂದಿವೆ. ಆದರೆ, ಇದು ಅರ್ಧಸತ್ಯ. ಹಾಗಂತ ನಾಳೆಯೇ ಸೇನಾಪಡೆಗಳು ಪಾಕಿಸ್ತಾನದ ಮೇಲೆ ಯುದ್ಧ ಸಾರೋದಿಲ್ಲ. ಅದಕ್ಕೆ ಟೈಮ್, ಟಾರ್ಗೆಟ್ ಹಾಗೂ ಮುಂದಾಗುವ ಅನಾಹುತ ಇವೆಲ್ಲವನ್ನೂ ಭಾರತದಂಥ ದೊಡ್ಡ ರಾಷ್ಟ್ರ ಯೋಚನೇ ಮಾಡಲೇಬೇಕಾಗುತ್ತದೆ. ದೇಶಾದ್ಯಂತ ಮಾಕ್‌ಡ್ರಿಲ್ ನಡೆಸಲು ಕೇಂದ್ರ ಸೂಚನೆ ನೀಡಿದ್ದರೂ, ಸೇನಾಪಡೆಗಳು ಇನ್ನೂ ಗಡಿಯತ್ತ ಅಷ್ಟಾಗಿ ಸಾಗಿಲ್ಲ ಅನ್ನೋದೇ ಸರ್ಕಾರದ ಮುಂದಿನ ಯೋಚನೆ ಏನು ಅನ್ನೋದನ್ನು ತಿಳಿಸುತ್ತಿದೆ.
ಈ ಹಿನ್ನಲೆಯಲ್ಲಿ 1971ರ ಯುದ್ಧದ ಹಿನ್ನೆಲೆಯನ್ನು ನೆನಪು ಮಾಡಿಕೊಳ್ಳುವುದು ಸೂಕ್ತ. ಬಾಂಗ್ಲಾ ವಿಮೋಚನೆ ಯುದ್ಧ ಎಂದು ಹೇಳಲಾಗುವ ಈ ಕದನದಲ್ಲಿ ಇಂದಿರಾ ಗಾಂಧಿ ತಕ್ಷಣದಿಂದಲೇ ಪಾಕಿಸ್ತಾನದ ಮೇಲೆ ಯುದ್ಧ ಮಾಡುವಂತೆ ಆದೇಶ ನೀಡಿದ್ದರು. ಆದರೆ, ಆಗ ಸೇನಾ ಮುಖ್ಯಸ್ಥರಾಗಿದ್ದವರು ಫೀಲ್ಡ್ ಮಾರ್ಷಲ್ ಮಾಣೆಕ್ ಶಾ. ಸಭೆಯಲ್ಲಿ ಇದ್ದವರೆ ಸಾಧ್ಯವೇ ಇಲ್ಲ ಎಂದು ಬಿಟ್ಟರು. ಬಳಿಕ ಯುದ್ಧಕ್ಕಾಗಿ 9 ತಿಂಗಳು ತೆಗೆದುಕೊಂಡು, ಎಲ್ಲವನ್ನೂ ಎಚ್ಚರಿಕೆಯಿಂದ ಯೋಜಿಸಿದರು. ಯುದ್ಧ ಆರಂಭವಾದಾಗ ಕೇವಲ 13ನೇ ದಿನದಲ್ಲಿ ಪಾಕಿಸ್ತಾವನ್ನು ಮಣ್ಣುಮುಕ್ಕಿಸಿದ್ದು ಮಾತ್ರವಲ್ಲ 93 ಸಾವಿರ ಯುದ್ಧಕೈದಿಗಳನ್ನು ಭಾರತದ ಕಾಲಡಿಗೆ ಇರಿಸಿದ್ದರು. ಇಲ್ಲಿ ಗೆದ್ದಿದ್ದು ಫೀಲ್ಡ್‌ಮಾರ್ಷಲ್ ಮಾಣೆಕ್ ಶಾ ಅವರ ತಾಳ್ಮೆ ಹಾಗೂ ತಂತ್ರ. ಹಾಗೇನಾದರೂ ಇಂದಿರಾ ಗಾಂಧಿ ಹೇಳಿದ್ದ ಕ್ಷಣವೇ ಯುದ್ಧಕ್ಕೆ ಹೊರಟಿದ್ದರೆ, ಅದು ಫಲಿತಾಂಶವನ್ನು ಖಂಡಿತ 13 ದಿನದಲ್ಲಿ ತಂದುಕೊಡುತ್ತಿರಲಿಲ್ಲ.
ಯುದ್ಧ ಅಂದ್ರೆ ಗೆಲ್ಲಲು ಹೋರಾಟ ಮಾಡೋದು ಎಂದು ಹೇಳಿದ್ದ ಮಾಣೆಕ್ ಶಾ, ಇಂದಿರಾ ಗಾಂಧಿಗೆ ಕೆಲ ತಿಂಗಳ ಸಮಯ ಕೇಳಿದ್ದರು. ಅವರ ಕೋರಿಕೆಯನ್ನು ಇಂದಿರಾ ಗಾಂಧಿ ಕೂಡ ಸ್ವೀಕರಿಸಿದ್ದರು. ಅವರ ಮಾತಿನಂತೆ, ಡಿಸೆಂಬರ್ 1971 ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ಕೊನೆಗೂ ಪ್ರಾರಂಭವಾದಾಗ, ಮಾಣೆಕ್ ಶಾ ಭಾರತಕ್ಕೆ ಅತ್ಯಂತ ವೇಗವಾದ ಮತ್ತು ಗಮನಾರ್ಹವಾದ ಮಿಲಿಟರಿ ವಿಜಯಗಳಲ್ಲಿ ಒಂದನ್ನು ನೀಡಿದರು.
ಈ ಬಾರಿಯೂ ಕೂಡ ಭಾರತ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡುತ್ತದೆ ಎಂದು ಎಲ್ಲೂ ಹೇಳಿಲ್ಲ. ಪ್ರಧಾನಿ ಮೋದಿಯಿಂದ ಹಿಡಿದು ಗೃಹ ಸಚಿವ, ರಕ್ಷಣಾ ಸಚಿವ ಹಾಗೂ ವಿದೇಶಾಂಗ ಸಚಿವರ ಪೈಕಿ ಎಲ್ಲರೂ, ಪಹಲ್ಗಾಮ್ ಯುದ್ಧದಲ್ಲಿ ಭಾಗಿಯಾದವರ ಎಲ್ಲರ ವಿರುದ್ಧವೂ ಕಠಿಣ ಕ್ರಮ ಆಗುತ್ತದೆ ಎಂದು ದೇಶಕ್ಕೆ ಭರವಸೆ ನೀಡಿದ್ದಾರೆ.
ಅದರ ಹಂತಹಂತವಾಗಿ ಪಾಕಿಸ್ತಾವನನ್ನು ಎಲ್ಲೆಲ್ಲಿ ಕಟ್ಟುಹಾಕಬೇಕೋ ಅಲ್ಲೆಲ್ಲಾ ಕಟ್ಟಿಹಾಕುವ ಕೆಲಸವಾಗುತ್ತಿದೆ. ಯುದ್ಧಕ್ಕೂ ಮುನ್ನವೇ ಯುದ್ಧವೆನ್ನುವ ಹೆದಿರಿಕೆಯನ್ನು ಪಾಕ್‌ಗೆ ಹುಟ್ಟಿಸಲಾಗುತ್ತಿದೆ. ಹಾಗಂತ ಪಾಕ್ ವಿರುದ್ಧ ಭಾರತ ಈ ಬಾರಿ ಯುದ್ಧವೇ ಮಾಡೋದಿಲ್ಲ ಎಂದರ್ಥವಲ್ಲ. ಯುದ್ಧ ಮಾಡಿದರೆ, ಅದು ದೀರ್ಘಕಾಲ ಸಾಗಬಾರದು ಎನ್ನುವ ಗುರಿಯಲ್ಲಿ ಭಾರತದ ಪ್ಲ್ಯಾನ್ ಇದ್ದಂತೆ ಕಾಣುತ್ತಿದೆ. ಅದಕ್ಕಾಗಿ ಸೇನೆಗೆ ಮೋದಿ ಸಂಪೂರ್ಣ ಸ್ವಾತಂತ್ರ್ಯವನ್ನೂ ನೀಡಿದ್ದಾರೆ.


