ನವದೆಹಲಿ(ಜೂ.17): ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಅಪಹರಿಸಿ 12 ತಾಸುಗಳ ಬಳಿಕ ಬಿಡುಗಡೆ ಮಾಡಿದ್ದ ಪಾಕಿಸ್ತಾನ, ತನ್ನ ವಶದಲ್ಲಿದ್ದಾಗ ಆ ಇಬ್ಬರ ಮೇಲೂ ದೌರ್ಜನ್ಯ ನಡೆಸಿತ್ತು. ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿ, ಕೊಳಕು ನೀರನ್ನು ಕುಡಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.

‘ವಾಸ್ತವವಾಗಿ ಇವರು ಯಾವುದೇ ಅಪಘಾತ ಎಸಗಿರಲಿಲ್ಲ. ದುಷ್ಕರ್ಮಿಗಳ ಗುಂಪೊಂದು ಇವರನ್ನು ಅಪಹರಿಸಿ ‘ಅಪಘಾತ ಎಸಗಿದ್ದೇವೆ ಎಂದು ಒಪ್ಪಿಕೊಳ್ಳಿ’ ಎಂದು ಬೆದರಿಕೆ ಹಾಕಿ ದೌರ್ಜನ್ಯ ಎಸಗಿತು’ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಬ್ಬರು ಭಾರತೀಯ ಹೈಕಮಿಷನ್‌ ಅಧಿಕಾರಿಗಳು ಪಾಕಿಸ್ತಾನದಲ್ಲಿ ನಿಗೂಢ ನಾಪತ್ತೆ!

ಸೋಮವಾರ ಬೆಳಗ್ಗೆ 8.30ಕ್ಕೆ ಇಸ್ಲಾಮಾಬಾದ್‌ನಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಈ ಇಬ್ಬರು ಸಿಬ್ಬಂದಿ ತೆರಳುತ್ತಿದ್ದರು. ಪೆಟ್ರೋಲ್‌ ಬಂಕ್‌ ಒಂದರಲ್ಲಿ 6 ವಾಹನಗಳಲ್ಲಿ ಬಂದ 15-16 ಬಂದೂಕುಧಾರಿ ವ್ಯಕ್ತಿಗಳು ಇಬ್ಬರೂ ಅಧಿಕಾರಿಗಳ ಕಣ್ಣು ಕಟ್ಟಿ, ಮುಖದ ಮೇಲೆ ಚೀಲ ಹಾಕಿದರು. ಕೈಕೋಳ ತೊಡಿಸಿ ಅಜ್ಞಾತ ಸ್ಥಳಕ್ಕೆ ಅಪಹರಿಸಿದರು. 6 ತಾಸುಗಳ ಕಾಲ ಆ ಅಜ್ಞಾತ ಸ್ಥಳದಲ್ಲಿ ‘ವಿಚಾರಣೆ’ ನಡೆಸಿದರು. ಈ ವೇಳೆ ಕಟ್ಟಿಗೆ, ಕಬ್ಬಿಣದ ಸರಳುಗಳಿಂದ ಹೊಡೆದು, ಕೊಳಕು ನೀರು ಕುಡಿಸಿದರು ಎಂದ ಮೂಲಗಳು ತಿಳಿಸಿವೆ.

‘ವಿಚಾರಣೆ’ ವೇಳೆ, ‘ನೀವು ಅಪಘಾತ ಎಸಗಿದ್ದೀರಿ ಎಂದು ಒಪ್ಪಿಕೊಳ್ಳಿ’ ಎಂದು ಎಂದು ಬಲವಂತಪಡಿಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡರು. ಅಲ್ಲದೆ, ರಾಯಭಾರ ಕಚೇರಿಯ ಕೆಲಸಗಳ ರಹಸ್ಯಗಳನ್ನು ತಿಳಿಯಲು ಯತ್ನಿಸಿದರು. ಮುಂದಿನ ದಿನಗಳಲ್ಲಿ ರಾಯಭಾರ ಕಚೇರಿಯ ಇತರರಿಗೂ ಇದೇ ಗತಿ ಬರಲಿದೆ ಎಂದು ಬೆದರಿಸಿದರು ಎಂದು ಅವು ತಿಳಿಸಿವೆ.

ಅಸಲಿ ಮುಖದ ಅನಾವರಣ: ಪಾಕ್ ರಾಯಭಾರ ಕಚೇರಿಯಿಂದ ಹೆಣವಾಗಲು ಉಗ್ರರಿಗೆ ಹಣ!

ಭಾರತವು ತೀವ್ರ ಪ್ರತಿಭಟನೆ ಸಲ್ಲಿಸಿದ ಬಳಿಕ ಸೋಮವಾರ ರಾತ್ರಿ ಇಬ್ಬರೂ ಅಧಿಕಾರಿಗಳು ಭಾರತೀಯ ರಾಯಭಾರ ಕಚೇರಿಗೆ ಮರಳಿದ್ದಾರೆ. ಆದರೆ ಅವರ ಮುಖ, ಕುತ್ತಿಗೆ ಹಾಗೂ ತೊಡೆಯ ಮೇಲೆ ಏಟು ತಿಂದ ಗುರುತುಗಳಿವೆ ಎಂದು ಮೂಲಗಳು ಮಾಹಿತಿ ನೀಡಿವೆ.