ಇಸ್ಲಮಾಬಾದ್(ಜೂ.15): ಪಾಕಿಸ್ತಾನದಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಅಧಿಕಾರಿಗಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಇfಬರು ಅಧಿಕಾರಿಗಳು ನಾಪತ್ತೆಯಾಗಿರುವ ವಿಚಾರವನ್ನು ಪಾಕ್ ಅಧಿಕಾರಿಗಳೆದುರು ಇಡಲಾಗಿದೆ. ಸುದ್ದಿ ಸಂಸ್ಥೆ ಎಎನ್‌ಐ ಈ ವರದಿ ಪ್ರಕಟಿಸಿದ್ದು, ಭಾರತೀಯ ಅಧಿಕಾರಿಗಳು ಇಂದು, ಸೋಮವಾರ ಬೆಳಗ್ಗೆ ಎಂಟು ಗಂಟೆಯಿಂದ ನಾಪತ್ತೆಯಾಗಿದ್ದಾರೆನ್ನಲಾಗಿದೆ.

ಇನ್ನು ಕೆಲ ದಿನಗಳ ಹಿಂದಷ್ಟೇ ನವದೆಹಲಿಯಲ್ಲಿ ಪಾಕ್ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳನ್ನು ಗೂಡಾಚಾರಿಕೆ ನಡೆಸುತ್ತಿದ್ದ ಆರೋಪದಡಿ ವಶಕ್ಕೆ ಪಡೆದು. ಅವರನ್ನು ಕೂಡಲೇ ಗಡೀಪಾರು ಮಾಡಲಾಗಿತ್ತು. ಈ ಘಟನೆ ಬೆನ್ನಲ್ಲೇ ಇಂತಹ ಘಟನೆ ನಡೆದಿದೆ ಎಂಬುವುದು ಉಲ್ಲೇಖನೀಯ. 

ಪಾಕ್‌ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿ ಗಡೀಪಾರು!

ದೆಹಲಿ ಪೊಲೀಸ್ ಇಲಾಖೆಯ ಸೆಷಲ್ ಸೆಲ್ ಇತ್ತೀಚೆಗಷ್ಟೇ ಪಾಕ್‌ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳನ್ನು ಗೂಢಾಚಾರಿಕೆ ಆರೋಪದಡಿ ಬಂಧಿಸಿತ್ತು. ಆಬಿದ್ ಹುಸೈನ್ ಹಾಗೂ ತಾಇರ್ ಖಾನ್ ಹೆಸರಿನ ಈ ಇಬ್ಬರು ಅಧಿಕಾರಿಗಳು ಪಾಕ್‌ ಹೈಕಮಿಷನ್‌ನ ವೀಸಾ ಸೆಕ್ಷನ್‌ನಲ್ಲಿ ಕಾರ್ಯ ನಿರ್ವಿಸುತ್ತಿದ್ದರು. ಈ ವಿಚಾರ ಬೆಳಕಿಗೆ ಬಂದ ಬೆನ್ನಲ್ಲೇ ಭಾರತ ಸರ್ಕಾರ ಇಬ್ಬರಿಗೂ 24 ಗಂಟೆಯೊಳಗೆ ಭಾರತ ಬಿಟ್ಟು ಹೋಗುವಂತೆ ಆದೇಶಿಸಿತ್ತು. ಈ ಇಬ್ಬರೂ ಪಾಕಿಸ್ತಾನಿ ಅಧಿಕಾರಿಗಳು ಗುಪ್ತಚರ ಸಂಸ್ಥೆ ISI ಪರ ಕಾರ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ನಕಲಿ ಆಧಾರ್ ಕಾರ್ಡ್‌ ಮೂಲಕ ದೆಹಲಿಯಲ್ಲಿ ಸಂಚರಿಸುತ್ತಿದ್ದರು.

ಇನ್ನು ಅತ್ತ ಪಾಕಿಸ್ತಾನದಲ್ಲಿ ಭಾರತೀಯ ಹೈಕಮಿಷನ್‌ ಅಧಿಕಾರಿ ಗೌರವ್ ಅಹ್ಲುವಾಲಿಯಾರವರ ವಾಹನವನ್ನು ISI ಅಧಿಕಾರಿಗಳು ಬೆನ್ನತ್ತಿದ ವಿಚಾರ ಬೆಳಕಿಗೆ ಬಂದಿತ್ತು.