ನವದೆಹಲಿ(ಅ.06): ಪಾಕಿಸ್ತಾನ ತನ್ನ ನರಿಬುದ್ಧಿ ಎಂದಿಗೂ ಬಿಡಲ್ಲ ಎಂಬುದಕ್ಕೆ ಒಂದಲ್ಲ ನೂರು ಉದಾಹರಣೆ ಸಿಗುತ್ತವೆ. ಭಾರತದ ನೆಲದಲ್ಲಿದ್ದುಕೊಂಡೇ ಭಾರತದ ವಿರುದ್ಧ ಕತ್ತಿ ಮಸೆಯುವಷ್ಟು ಕೀಳು ಮಟ್ಟಕ್ಕೆ ಕೇವಲ ಪಾಕಿಸ್ತಾನ ಮಾತ್ರ ಹೋಗಬಲ್ಲದು.

ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಪಾಕಿಸ್ತಾನ ಹವಣಿಸುತ್ತಿದ್ದು, ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯೇ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿದೆ ಎಂಬ ಆಘಾತಕಾರಿ ಅಂಶವನ್ನು ಎನ್ಐಎ ಬಹಿರಂಗಪಡಿಸಿದೆ. 

ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯಿಂದಲೇ ಉಗ್ರರಿಗೆ ಹಾಗೂ ಪ್ರತ್ಯೇಕತವಾದಿಗಳಿಗೆ ಹಣ ರವಾನೆಯಾಗುತ್ತಿದೆ ಎಂಬ ಮಾಹಿತಿಯನ್ನು ಎನ್ಐಎ ಚಾರ್ಜ್‌ಶೀಟ್‌ನಲ್ಲಿ ಬಹಿರಂಗಗೊಂಡಿದೆ. 

ಈ ಕುರಿತು ನ್ಯಾಯಾಲಯಕ್ಕೆ 3 ಸಾವಿರ ಪುಟಗಳ ಪೂರಕ ಆರೋಪ ಪಟ್ಟಿ ಸಲ್ಲಿಸಿರುವ ಎನ್‌ಐಎ , ಪಾಕಿಸ್ತಾನ ರಾಯಭಾರ ಕಚೇರಿ ಹೆಣೆಯುವ ಷಡ್ಯಂತ್ರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. 

ಪ್ರತ್ಯೇಕತಾವಾದಿಗಳಾದ ಯಾಸಿನ್ ಮಲಿಕ್ ಹಾಗೂ ಶಬೀರ್ ಶಾ ಇ-ಮೇಲ್ ಖಾತೆಗಳಿಂದ ಹಲವು ಮಾಹಿತಿ ದೊರೆತಿದ್ದು, ಪಾಕಿಸ್ತಾನ ಹಾಗೂ ಇನ್ನಿತರೆ ದೇಶಗಳಿಂದ ಹಣ ಬಂದಿರುವುದನ್ನು ದೃಢೀಕರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ.  

ಈವರೆಗೂ ಗಡಿಯಾಚೆಯಿಂದ ಭಯೋತ್ಪಾದಕರನ್ನು ರವಾನಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದ ಪಾಕಿಸ್ತಾನ, ಇದೀಗ ರಾಜತಾಂತ್ರಿಕ ಉದ್ದೇಶಕ್ಕಾಗಿ ಸ್ಥಾಪನೆಯಾಗಿರುವ ತನ್ನ ಹೈಕಮಿಷನ್ ಕಚೇರಿಯನ್ನೇ ದುಷ್ಕೃತ್ಯಗಳಿಗೆ ಬಳಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.