ಡೆನ್ಮಾರ್ಕ್‌ನ ಔಷಧ ಕಂಪನಿ ನೊವೊ ನಾರ್ಡಿಸ್ಕ್ ಭಾರತದ ಮಧುಮೇಹಿಗಳಿಗೆ ಸಿಹಿ ಸುದ್ದಿ ನೀಡಿದ್ದು, ನಿತ್ಯದ ಬದಲು ವಾರಕ್ಕೊಮ್ಮೆ ಮಾತ್ರ ಪಡೆಯುವ ಇನ್ಸುಲಿನ್‌ ಇಂಜೆಕ್ಷನ್‌ ಬಿಡುಗಡೆ. ದಿನ ಇಂಜೆಕ್ಷನ್‌ನಿಂದ ಭಯಪಡುವ ಡಯಾಬಿಟಿಸ್‌ ರೋಗಿಗಳು ಇನ್ನು ವರ್ಷಕ್ಕೆ 365ರ ಬದಲು ಕೇವಲ 52 ಇಂಜೆಕ್ಷನ್‌ ಪಡೆದರೆ ಸಾಕು!

  • ವರ್ಷಕ್ಕೆ 365ರ ಬದ್ಲು 52 ಇಂಜೆಕ್ಷನ್‌, ದರ ₹263
  •  ಡೆನ್ಮಾರ್ಕ್‌ ಕಂಪನಿಯಿಂದ ‘ಅವಿಕ್ಲಿ’ ಬಿಡುಗಡೆ

ನವದೆಹಲಿ (ಜು.10): ಡೆನ್ಮಾರ್ಕ್‌ನ ಔಷಧ ಕಂಪನಿ ನೊವೊ ನಾರ್ಡಿಸ್ಕ್ ಭಾರತದ ಮಧುಮೇಹಿಗಳಿಗೆ ಸಿಹಿ ಸುದ್ದಿ ನೀಡಿದ್ದು, ನಿತ್ಯದ ಬದಲು ವಾರಕ್ಕೊಮ್ಮೆ ಮಾತ್ರ ಪಡೆಯುವ ಇನ್ಸುಲಿನ್‌ ಇಂಜೆಕ್ಷನ್‌ ಬಿಡುಗಡೆ ಮಾಡಿದೆ. ದೈನಂದಿನ ಇಂಜೆಕ್ಷನ್‌ನಿಂದ ಭಯಭೀತರಾಗುವ ಡಯಾಬಿಟಿಸ್‌ ರೋಗಿಗಳು ಇನ್ನು ವರ್ಷಕ್ಕೆ 365ರ ಬದಲು ಕೇವಲ 52 ಇಂಜೆಕ್ಷನ್‌ಗಳನ್ನು ಪಡೆದರೆ ಸಾಕಾಗಲಿದೆ.

ಜಗತ್ತಿನ ಮೊದಲ ವಾರಕ್ಕೊಮ್ಮೆ ಬಳಸುವ ಇನ್ಸುಲಿನ್ ಇಂಜೆಕ್ಷನ್!

ನೊವೊ ನಾರ್ಡಿಸ್ಕ್ ಭಾರತದಲ್ಲಿ ಇನ್ಸುಲಿನ್ ‘ಅವಿಕ್ಲಿ’ಯನ್ನು (ಇನ್ಸುಲಿನ್ ಐಕೋಡೆಕ್) ಬಿಡುಗಡೆ ಮಾಡಿದೆ. ಇದು ಜಗತ್ತಿನ ಮೊದಲ ವಾರಕ್ಕೊಮ್ಮೆ ಬಳಸುವ ಬೇಸಲ್ ಇನ್ಸುಲಿನ್ ಆಗಿದ್ದು, ಭಾರತವು ಇದನ್ನು ಪಡೆದ 6ನೇ ದೇಶವಾಗಿದೆ. ಈ ಇಂಜೆಕ್ಷನ್‌ಗಳು ಡೆನ್ಮಾರ್ಕ್‌ನಲ್ಲಿ ತಯಾರಾಗಲಿದ್ದು, ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

ಇನ್ಸುಲಿನ್ ‘ಅವಿಕ್ಲಿ ಪಡೆಯಲು ಎಷ್ಟು ಖರ್ಚು?

ವಯಸ್ಕರ ಟೈಪ್-1 ಮತ್ತು ಟೈಪ್-2 ಡಯಾಬಿಟಿಸ್ ಎರಡಕ್ಕೂ ಅವಿಕ್ಲಿಗೆ ಅನುಮೋದನೆ ದೊರಕಿದೆ. ಫ್ಲೆಕ್ಸ್‌ಟಚ್‌ ಎಂಬ ಪೆನ್‌ ಮೂಲಕ ಈ ಇಂಜೆಕ್ಷನ್‌ ಪಡೆಯಬಹುದಾಗಿದೆ. 1 ಮಿ.ಲೀ. ಫ್ಲೆಕ್ಸ್‌ಟಚ್ ಪೆನ್‌ನಲ್ಲಿ 700 ಯೂನಿಟ್ ಇನ್ಸುಲಿನ್ ಇರುತ್ತದೆ. ಅದರ ಬೆಲೆ 2,611 ರು. ಆಗಿದೆ. ಇದೇ ರೀತಿ 3 ಮಿ.ಲೀ. ಪೆನ್‌ನಲ್ಲಿ 2,100 ಯೂನಿಟ್ ಇದ್ದು, ಅದರ ಬೆಲೆ 7,833 ರು. ಆಗಿದೆ. ಸಾಮಾನ್ಯ ವಾರದ ಡೋಸ್ ಸುಮಾರು 70 ಯೂನಿಟ್ ಆಗಿರುವುದರಿಂದ, ಒಬ್ಬ ರೋಗಿಗೆ ವಾರಕ್ಕೆ ಸುಮಾರು 261-263 ರು. ವೆಚ್ಚವಾಗುತ್ತದೆ.