- Home
- News
- India News
- Glorifying separatism: ಜಮ್ಮು&ಕಾಶ್ಮೀರ ಶಾಲಾಪಠ್ಯದಲ್ಲಿ ಉಗ್ರರ ವೈಭವೀಕರಣ ವಿವಾದ ಭುಗಿಲೆದ್ದ ಬೆನ್ನಲ್ಲೇ ಸಿಎಂ ಒಮರ್ ಅಬ್ದುಲ್ಲಾ ಮಹತ್ವದ ಆದೇಶ!
Glorifying separatism: ಜಮ್ಮು&ಕಾಶ್ಮೀರ ಶಾಲಾಪಠ್ಯದಲ್ಲಿ ಉಗ್ರರ ವೈಭವೀಕರಣ ವಿವಾದ ಭುಗಿಲೆದ್ದ ಬೆನ್ನಲ್ಲೇ ಸಿಎಂ ಒಮರ್ ಅಬ್ದುಲ್ಲಾ ಮಹತ್ವದ ಆದೇಶ!
ಜಮ್ಮು ಮತ್ತು ಕಾಶ್ಮೀರದಲ್ಲಿ, ಶಾಲಾ ಪಠ್ಯಪುಸ್ತಕಗಳಲ್ಲಿ ಪ್ರತ್ಯೇಕತಾವಾದಿಗಳನ್ನು ಮತ್ತು ಭಯೋತ್ಪಾದಕರನ್ನು ವೈಭವೀಕರಿಸಿದ ಸಂಬಂಧ ವಿವಾದ ಭುಗಿಲೆದ್ದಿರುವ ಬೆನ್ನಲ್ಲೆ ಒಮರ್ ಅಬ್ದುಲ್ಲಾ ಸರ್ಕಾರ ಮಹತ್ವ ನಿರ್ಧಾರ. ಎಲ್ಲ ಸರ್ಕಾರಿ ಶಾಲೆಗಳ ಪಠ್ಯ-ಪುಸ್ತಕಗಳನ್ನ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದೆ.

ಜಮ್ಮು&ಕಾಶ್ಮೀರ ಶಾಲಾಪಠ್ಯದಲ್ಲಿ ವಿಷ ಬೀಜ: ಒಮರ್ ಅಬ್ದುಲ್ಲಾ ಸರ್ಕಾರ ಮಹತ್ವದ ಆದೇಶ
ಸರ್ಕಾರಿ ಶಾಲಾ ಪಠ್ಯಪುಸ್ತಕಗಳಲ್ಲಿ ಉಗ್ರವಾದ, ಪ್ರತ್ಯೇಕತಾವಾದವನ್ನು ವೈಭವೀಕರಿಸುವ ಎರಡು ಪುಸ್ತಕಗಳನ್ನು ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮಹತ್ವ ನಿರ್ಧಾರ ಮಾಡಿದ್ದು ಅದರಂತೆ ಕಾಶ್ಮೀರದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ತರಬೇತಿ ಕೇಂದ್ರಗಳ ಮುಖ್ಯಸ್ಥರಿಗೆ "ಅನುಚಿತ ಅಥವಾ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಪುಸ್ತಕಗಳನ್ನು ಪ್ರದರ್ಶಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿದೆ.
ಸುತ್ತೋಲೆಯಲ್ಲಿ ಏನಿದೆ?
ಕಾಶ್ಮೀರ ಶಾಲಾ ಶಿಕ್ಷಣ ನಿರ್ದೇಶಕರು ಹೊರಡಿಸಿದ ಸುತ್ತೋಲೆಯ ಪ್ರಕಾರ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳ ಮುಖ್ಯಸ್ಥರು (HOI ಗಳು) ತಮ್ಮ ಕಾರ್ಯಾಲಯ, ತರಗತಿ ಕೊಠಡಿಗಳು, ಸಿಬ್ಬಂದಿ ಕೊಠಡಿಗಳು ಮತ್ತು ಶಾಲಾ ಗ್ರಂಥಾಲಯದಲ್ಲಿ ಲಭ್ಯವಿರುವ ಎಲ್ಲಾ ಪುಸ್ತಕಗಳನ್ನು - ಇತ್ತೀಚೆಗೆ ಸ್ವಾಧೀನಪಡಿಸಿಕೊಂಡ ಅಥವಾ ಹಳೆಯ ಪ್ರಕಟಣೆಗಳ - ಸಮಗ್ರ ತಪಾಸಣೆ ನಡೆಸುವಂತೆ ನಿರ್ದೇಶಿಸಿದೆ. ಯಾವುದೇ ಪುಸ್ತಕವು ಅನುಚಿತ ಅಥವಾ ಆಕ್ಷೇಪಾರ್ಹ ವಿಷಯವನ್ನು ಒಳಗೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇದರ ಹಿಂದಿನ ಉದ್ದೇಶವಾಗಿದೆ ಎಂದು ಹೇಳಿದೆ.
ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡುವ ಪುಸ್ತಕಗಳನ್ನು ಗುರುತಿಸಲು HOI ಗಳಿಗೆ ನಿರ್ದೇಶನ ನೀಡಲಾಗಿದೆ, ಅದು ವಿದ್ಯಾರ್ಥಿಗಳಿಗೆ ಸೂಕ್ತವಲ್ಲದ ವಿಷಯವಾಗಿರಬಹುದು, ಪ್ರಸ್ತುತ ಈಗಿರುವ ಕಾನೂನುಗಳಿಗೆ ವಿರುದ್ಧವಾದ ವಿಷಯಗಳು ರಾಷ್ಟ್ರೀಯ ಹಿತಾಸಕ್ತಿಗೆ ಹಾನಿ ಮಾಡುವಂಥ ವಿಷಯಗಳು, ಶೈಕ್ಷಣಿಕ ಮೌಲ್ಯಗಳ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಎಲ್ಲಾ ಸಾಮಗ್ರಿಗಳು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ವಯಸ್ಸಿಗೆ ಸೂಕ್ತವಾದ ಮಾರ್ಗಸೂಚಿಗಳಿಗೆ ಹೊಂದಿಕೆಯಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. HOIಗಳು ಸ್ಕ್ರೀನಿಂಗ್ ದಾಖಲೆಗಳನ್ನು ನಿರ್ವಹಿಸಬೇಕು, ಅಲ್ಲದೇ ನಿಗದಿತ ಸಮಯದೊಳಗೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
ಒಂದು ವೇಳೆ ಯಾವುದೇ ಆಕ್ಷೇಪಾರ್ಹ ವಿಷಯ ಕಂಡುಬಂದರೆ ಸಂಸ್ಥೆಗಳು ವಿಷಯದ ಸಾರಾಂಶವನ್ನು ಸಿದ್ಧಪಡಿಸಬೇಕು. ಏಳು ದಿನಗಳಲ್ಲಿ ಸಂಬಂಧಪಟ್ಟ ಸಿಇಒ ಅಥವಾ ZEO ಗೆ ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದು ಎಚ್ಚರಿಕೆ ನೀಡಿದೆ. ಈ ನಡುವೆ ಮುಖ್ಯ ಶಿಕ್ಷಣ ಅಧಿಕಾರಿಗಳಿಗೆ ಈ ಕಾರ್ಯದ ಅನುಷ್ಠಾನವನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು, ಎಂಟು ದಿನಗಳಲ್ಲಿ ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶಕರಿಗೆ ಸಮಗ್ರ ವರದಿಯನ್ನು ಸಲ್ಲಿಸಲು ನಿರ್ದೇಶಿಸಲಾಗಿದೆ. ಕಣಿವೆಯಲ್ಲಿ ಸುಮಾರು 10,787 ಸರ್ಕಾರಿ ಮತ್ತು 2,386 ಮಾನ್ಯತೆ ಪಡೆದ ಖಾಸಗಿ ಶಾಲೆಗಳಿವೆ.
ಏನಿದು ವಿವಾದ?
ಪರ್ಸನಾಲಿಟೀಸ್ ಅಂಡ್ ಲೆಜೆಂಡ್ಸ್ ಆಫ್ ಜಮ್ಮು ಕಾಶ್ಮೀರ (Personalities and Legends of Jammu & Kashmir), ಗ್ರೇಟ್ ಪರ್ಸನಾಲಿಟೀಸ್ ಆಫ್ ಜಮ್ಮು ಮತ್ತು ಕಾಶ್ಮೀರ(Great Personalities of Jammu and Kashmir Book) ಎಂಬ ಪುಸ್ತಕದಲ್ಲಿ ಮಕ್ಯೂಲ್ ಭಟ್, ಸೈಯದ್ ಅಲಿ ಶಾ ಗಿಲಾನಿ, ಮಸರತ್ ಆಲಂ ಮತ್ತು ಹುರಿಯತ್ ನಾಯಕ ಮಿರ್ವೈಜ್ ಉಮರ್ ಫಾರೂಕ್ ಅವರಂತಹ ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರನ್ನು ಯುವ ಪೀಳಿಗೆಗೆ ಮಾದರಿಗಳಾಗಿ ವೈಭವೀಕರಿಸಲಾಗಿದೆ. ಈ ಬಗ್ಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳು ಆಕ್ಷೇಪಿಸಿದ್ದವು. ಇದರ ಬೆನ್ನಲ್ಲೇ ಸರ್ಕಾರ ಆ ಪುಸ್ತಕಗಳನ್ನು ವಾಪಸ್ ಪಡೆದಿದೆ. ಮಾತ್ರವಲ್ಲದೇ ಪುಸ್ತಕ ರಚನೆಯಲ್ಲಿ ಭಾಗಿಯಾಗಿದ್ದವರನ್ನು ವಜಾಗೊಳಿಸಿದೆ.
ಪಠ್ಯಪುಸ್ತಕದಲ್ಲಿ ದೇಶಭಕ್ತಿಯ ಬದಲು ಪ್ರತ್ಯೇಕವಾದ!
ಶಾಲಾ ಪಠ್ಯಪುಸ್ತಕದಲ್ಲಿ ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಿಸುವ ಪಾಠದ ಬದಲು ಜಮ್ಮುಕಾಶ್ಮೀರ ಮಕ್ಕಳ ತಲೆಯಲ್ಲಿ ಇನ್ನಷ್ಟು ಪ್ರತ್ಯೇಕವಾದ ಕಸ ತುಂಬುವ ಭಾರತವನ್ನು ವಿಭಜಿಸಲು ಸಂಚು ರೂಪಿಸಲಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಇದರಲ್ಲಿ ಭಾಗಿಯಾದವರನ್ನ ಬಂಧಿಸಿ ವಿಚಾರಣೆಗೊಳಪಡಿಸಕು, ಇದರ ಹಿಂದೆ ವ್ಯವಸ್ಥಿತ ಸಂಚಿದೆ, ಯಾರಿದ್ದಾರೆ? ತನಿಖೆಗೊಳಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಈ ಹಿನ್ನೆಲೆ ಇದೀಗ ಒಮರ್ ಅಬ್ದುಲ್ಲಾ ಸರ್ಕಾರ, ಎಲ್ಲ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕಗಳ ಆಕ್ಷೇಪಾರ್ಹ ವಿಷಯಗಳು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

