Asianet Suvarna News Asianet Suvarna News

ಒಮ್ಮೆಯೂ ಒಡೆಯದೆ 100 ವರ್ಷ ನೆಲೆ ನಿಂತ ಏಕೈಕ ಭಾರತೀಯ ಸಂಘಟನೆ RSS, ಕಾರಣ..?

ದತ್ತಾತ್ರೇಯ ಹೊಸಬಾಳೆ ಹೆಚ್ಚೂ ಕಡಿಮೆ 1983ರಿಂದ ಅವ್ಯಾಹತವಾಗಿ ದೇಶದ ಎಲ್ಲ ಜಿಲ್ಲಾ ಕೇಂದ್ರಗಳನ್ನು ವರ್ಷಕ್ಕೊಮ್ಮೆಯಂತೆ ಸುತ್ತಿದ್ದಾರೆ. ಉತ್ತರ ಭಾರತೀಯರಿಗಿಂತ ಶುದ್ಧ ಹಿಂದಿ ಮಾತನಾಡುತ್ತಾರೆ. 

India Gate RSS general Secretary Dattatreya Hosabale has Friends in Every ideology hls
Author
Bengaluru, First Published Mar 26, 2021, 2:56 PM IST

ನವದೆಹಲಿ (ಮಾ. 26): ಇವತ್ತಿನ ಸ್ಥಿತಿಯಲ್ಲಿ ಒಂದು ಕ್ಲಬ್‌ನ ಕಾರ್ಯದರ್ಶಿ ಸ್ಥಾನಕ್ಕೆ ಕೋಟ್ಯಂತರ ರು. ಖರ್ಚು ಮಾಡಿ ಚುನಾವಣೆಗೆ ನಿಲ್ಲುವವರು ಇರುವಾಗ, ನನಗೆ ವಯಸ್ಸಾಗಿದೆ, ಯುವಕರು ನನ್ನ ಹುದ್ದೆ ತೆಗೆದುಕೊಳ್ಳಲಿ ಎಂದು ಭಯ್ಯಾಜಿ ಜೋಶಿ ಅವರು ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆ ಅವರನ್ನು ನೇಮಿಸಿರುವುದು ಅಪರೂಪದ ಬೆಳವಣಿಗೆ.

ಭಾರತದ ಇತಿಹಾಸದಲ್ಲಿ ಯಾವುದೇ ಸಂಘಟನೆಗಳು ಒಡೆಯದೇ 100 ವರ್ಷ ನಿಂತ ಉದಾಹರಣೆಗಳು ಕಮ್ಮಿ. ಕಾಂಗ್ರೆಸ್‌ನಿಂದ ಹಿಡಿದು ಕಮ್ಯುನಿಸ್ಟರವರೆಗೆ, ಸಮಾಜವಾದಿಗಳಿಂದ ಹಿಡಿದು ವೇದಾಂತ ಬೋಧಿಸುವ ಚಿನ್ಮಯ ಮಿಷನ್‌ವರೆಗೆ ಬಹುತೇಕರು ವೈಯಕ್ತಿಕ, ವೈಚಾರಿಕ, ವ್ಯಾವಹಾರಿಕ ಕಾರಣಗಳಿಂದ ಕಿತ್ತಾಡಿ, ದೂರವಾಗಿ, ವಿಘಟಿಸಿಕೊಂಡಿದ್ದಾರೆ. ಆದರೆ ಕಳೆದ 96 ವರ್ಷದಲ್ಲಿ ಆರ್‌ಎಸ್‌ಎಸ್‌ ಮಾತ್ರ ಒಡೆಯದೇ ಏಕಶಿಲೆಯಾಗಿ ನಿಂತುಕೊಂಡ ಸಂಘಟನೆ.

ತಿಲಕರು, ಮಹಾತ್ಮಾ ಗಾಂಧಿ ಅವರ ತ್ಯಾಗ ಮತ್ತು ಪರಿಶ್ರಮದಿಂದ ಆಸ್ತಿತ್ವ ಪಡೆದುಕೊಂಡ ಕಾಂಗ್ರೆಸ್‌ನ ಎದುರಿಗೆ ಇವತ್ತು ಮೋದಿ ಕಾರಣದಿಂದ ಬಿಜೆಪಿ ಗಟ್ಟಿಯಾಗಿ ಪರ್ಯಾಯದ ರೂಪದಲ್ಲಿ ನಿಲ್ಲಲು ಮುಖ್ಯ ಕಾರಣ ನಿಸ್ಸಂದೇಹವಾಗಿ ಆರ್‌ಎಸ್‌ಎಸ್‌ ಎಂಬುದು ವೈಚಾರಿಕ ವಿರೋಧಿಗಳೂ ಒಪ್ಪುವ ಮಾತು. ದೇಶದಲ್ಲಿ ಒಂದೊಂದು ಕಾಲಘಟ್ಟದಲ್ಲಿ ಸಕ್ರಿಯರಾಗಿದ್ದ ಎಡ ಪಕ್ಷಗಳು, ನಕ್ಸಲೀಯ ಸಂಘಟನೆಗಳು, ಸಮಾಜವಾದಿಗಳು, ಜನತಾ ಪಕ್ಷ, ಜನತಾ ದಳಗಳು ಆಗಾಗ ಮತ್ತು ಅಲ್ಲಲ್ಲಿ ನಾಲ್ಕೈದು ವರ್ಷ ಕಾಂಗ್ರೆಸ್‌ಗೆ ಪರ್ಯಾಯವಾಗಿ ನಿಂತುಕೊಂಡರೂ ಪ್ರಭಾವಿ ವ್ಯಕ್ತಿಗಳು ಅಳಿದಂತೆ ತಾವೂ ಒಡೆದು ಹೋಳಾಗಿ ಅಸ್ತಿತ್ವ ಕಳೆದುಕೊಂಡಿವೆ. ಅನನ್ಯ ವಿಚಾರಧಾರೆಯ ಪ್ರಭಾವ ಕೂಡ ಸಾಕಷ್ಟುಸ್ಥಿತ್ಯಂತರಕ್ಕೆ ಒಳಗಾಗಿ ವೈಚಾರಿಕ ಪ್ರಖರತೆ ಕಳೆದುಕೊಂಡಿವೆ.

ಆರ್‌ಎಸ್‌ಎಸ್ ಸರಕಾರ್ಯವಾಹರಾಗಿ ದತ್ತಾಜೀ, ಸೊರಬದಿಂದ ಲಖನೌವರೆಗಿನ ಜರ್ನಿ ಇದು

ರಾಮ ಮನೋಹರ ಲೋಹಿಯಾ ನಂತರ ಸಮಾಜವಾದಿ ಚಳವಳಿ ಯಾದವ, ಒಕ್ಕಲಿಗರು, ಪಟೇಲರಂಥ ಜಮೀನು ಮಾಲಿಕ ಜಾತಿಗಳ ಪಾರ್ಟಿಯಾಗಿ ರೂಪಾಂತರವಾಗಿದ್ದು ನಾವೆಲ್ಲಾ ನೋಡುತ್ತಿದ್ದೇವೆ. ಆದರೆ ಅಧಿಕಾರ ರಾಜಕಾರಣಕ್ಕೆ ಹತ್ತಿರವಿದ್ದು, ವಿದ್ಯಾರ್ಥಿ, ಕಾರ್ಮಿಕ, ಮಹಿಳೆಯರಿಗೆ, ರೈತರಿಗೆ, ಶಿಕ್ಷಣಕ್ಕೆ, ಸಹಕಾರ ಕ್ಷೇತ್ರಕ್ಕೆ ಅಂತಲೇ ನೂರಾರು ಸಂಘಟನೆಗಳು ಹುಟ್ಟಿಕೊಂಡರೂ ಸಹ ಆರ್‌ಎಸ್‌ಎಸ್‌ ಮತ್ತು ಸಂಘ ಪರಿವಾರ 1925ರಿಂದ ಒಡೆಯದೆ, ವಿಘಟಿಸದೆ ನಿಂತುಕೊಂಡಿರುವುದೇ ಇವತ್ತಿನ ಬಲಪಂಥೀಯ ವಿಚಾರಧಾರೆಯ ಉಚ್ಛ್ರಾಯಕ್ಕೆ ಮುಖ್ಯ ಕಾರಣ.

ಶಾಲಾ ಸಹಪಾಠಿಯಾಗಿದ್ದ ಹೊ.ವೆ.ಶೇಷಾದ್ರಿಗಳ ಜೊತೆ ಮುದ್ದೆ ಊಟ ಮಾಡಲು ಕೇಶವಕೃಪಾಕ್ಕೆ ಬರುತ್ತಿದ್ದ ಎಚ್‌.ನರಸಿಂಹಯ್ಯ ಅವರು,‘ನನ್ನನ್ನು ವೈಚಾರಿಕ ಗಾಂಧಿ ಎಂದೆಲ್ಲ ಹೊಗಳುತ್ತಾರೆ. ಆದರೆ ನಾನು ಮಾಡುವ ಕೆಲಸ ಮಾಡಿ ಬನ್ನಿ ಎಂದರೆ ತುಂಬಾ ಜನ ಬರೋಲ್ಲ. ಆದರೆ ಸಂಘದ ಶಾಖೆಗೆ ನಿತ್ಯ ಸಾವಿರಾರು ಹೊಸ ಯುವಕರು ಸೇರ್ಪಡೆ ಆಗುತ್ತಾರೆ. ನಿಮ್ಮ ವಿಚಾರಕ್ಕೆ ಬದ್ಧರಾಗಿದ್ದಾರೆ. ಅವರೇನು ನಿಮ್ಮನ್ನು ಹೊಗಳುತ್ತಾ ಕೂರೋಲ್ಲ ನೋಡಿ’ ಎಂದು ಹೇಳಿದ್ದರು.

ಪ್ರಚಾರಕ ಎಂಬ ವ್ಯವಸ್ಥೆ

ಸಂಘದ ಯಶಸ್ಸು, ಸ್ಥಿರತೆ ಮತ್ತು ನಿರಂತರತೆಗೆ ಮುಖ್ಯ ಕಾರಣ ಸಂಘಕ್ಕಾಗಿ ಜೀವನ ಸವೆಸುವ ಪ್ರಚಾರಕರು. ಮದುವೆ ಆಗದೆ, ಬೇರೆ ವೃತ್ತಿ ಜೀವನ ನಡೆಸದೆ ಪೂರ್ಣಾವಧಿ ಸಂಘದ ಕೆಲಸವನ್ನೇ ನಿರ್ವಹಿಸುವ ಪ್ರಚಾರಕ ವ್ಯವಸ್ಥೆಯೇ ಸಂಘ ಇಷ್ಟುವ್ಯಾಪಕವಾಗಿ ಬೆಳೆಯಲು, ಉಳಿಯಲು ಮುಖ್ಯ ಕಾರಣ. ಪ್ರಚಾರಕರು ಎಂದರೆ ಬ್ರಹ್ಮಚರ್ಯ ಕಟ್ಟು ನಿಟ್ಟಾಗಿ ಪಾಲಿಸುವ, ಅಧಿಕಾರ ಬಯಸದ, 24 ಗಂಟೆ ಸಂಘಟನೆಯನ್ನೇ ಮಾಡುವ, ಕಾವಿ ಧರಿಸದೇ ಇರುವ ಸಮೂಹ. ಮಠಗಳಲ್ಲಿ ರಾಮಕೃಷ್ಣ ಆಶ್ರಮ, ಚಿನ್ಮಯ ಮಿಷನ್‌ನಲ್ಲಿ ಕೂಡ ಸನ್ಯಾಸಿಗಳಿದ್ದಾರೆ.

RSS ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ

ಆದರೆ ಈ ನಿಯಮವನ್ನು ಸಾಮಾಜಿಕ ಸಂಘಟನೆಗಳಿಗೂ ತಂದಿದ್ದು ಮಾತ್ರ ಸಂಘವೇ ಮೊದಲು. ಕಮ್ಯುನಿಸ್ಟ್‌ ಸಂಘಟನೆಗಳಲ್ಲಿ ಕೂಡ ಇಂಥ ಪೂರ್ಣ ಅವಧಿಗೆ ಕೆಲಸ ಮಾಡುವ ಜನ ಇದ್ದಾರೆ. ಆದರೆ ಮದುವೆ ಆಗಬಾರದು ಎಂಬ ನಿಯಮ ಅಲ್ಲಿ ಇಲ್ಲ. ಸೋವಿಯತ್‌ ರಷ್ಯಾ ವಿಘಟನೆ ನಂತರ ಕಮ್ಯುನಿಸಂ ತನ್ನ ಆಕರ್ಷಣೆ ಕಳೆದುಕೊಂಡರೆ, ಇಸ್ಲಾಮಿಕ್‌ ಭಯೋತ್ಪಾದನೆ ಬೆಳೆದಂತೆಲ್ಲಾ ಬಲಪಂಥೀಯತೆಯ ಜನಪ್ರಿಯತೆ ಏರುಮುಖದಲ್ಲಿದೆ. ಒಂದು ಕಾಲದಲ್ಲಿ ಸಮಾಜವಾದಿ ಕಮ್ಯುನಿಸ್ಟ್‌ ಅನ್ನಿಸಿ ಕೊಳ್ಳುವುದು ಫ್ಯಾಷನ್‌ ಆಗಿತ್ತು. ಈಗ ಸಂಘ ಹಿಂದುತ್ವವಾದಿ ಎಂದು ಹೇಳಿಕೊಳ್ಳುವುದು ಟ್ರೆಂಡ್‌ ಆಗಿದೆ.

ಹೆಡಗೇವಾರ್‌ರಿಂದ ಭಾಗವತ್‌ವರೆಗೆ

1920ರಲ್ಲಿ ತಿಲಕರ ಅವಸಾನದ ನಂತರ ಕಾಂಗ್ರೆಸ್‌ನಲ್ಲೇ ಇದ್ದ ನಾಗಪುರದ ಡಾ.ಹೆಡಗೇವಾರ್‌ ಆರ್‌ಎಸ್‌ಎಸ್‌ ಹುಟ್ಟುಹಾಕಿದರು. ಒಂದು ರೀತಿಯಲ್ಲಿ ಹಿಂದೂ ಮಹಾಸಭಾ ರಾಜಕೀಯ ಪಕ್ಷವಾದರೆ, ಸಂಘ ರಾಜಕೀಯೇತರ ಸಂಘಟನೆ. ಹೀಗಾಗಿ ಎಷ್ಟೇ ಕಾಂಗ್ರೆಸ್‌ನಲ್ಲಿದ್ದ ಹಿಂದೂವಾದಿಗಳು ಮನವೊಲಿಕೆ ಮಾಡಿದರೂ ಡಾ.ಹೆಡಗೇವಾರ್‌ ಮತ್ತು ಗುರೂಜಿ ಗೋಳವಲ್ಕರ್‌ ಸಂಘವನ್ನು ಸಕ್ರಿಯ ರಾಜಕಾರಣದಿಂದ ದೂರ ಇಟ್ಟಿದ್ದರು. ಆದರೆ ಗಾಂಧಿ ಹತ್ಯೆಯ ಪ್ರಕರಣದಲ್ಲಿ ಸಾರ್ವಕರ್‌ ಜೊತೆಗಿನ ಸಖ್ಯದ ಕಾರಣದಿಂದ ಪಂಡಿತ್‌ ನೆಹರು ಸಂಘದ ಮೇಲೂ ನಿಷೇಧ ಹೇರಿದರು.

ಆಗ ಅನುಭವಿಸಿದ ಕಷ್ಟಗಳ ನಂತರ ಸಂಘದಲ್ಲಿ ನಮ್ಮದೂ ಒಂದು ರಾಜಕೀಯ ಸಂಘಟನೆ ಇರಬೇಕು ಎಂಬ ವಿಚಾರ ರೂಪು ತಳೆಯಿತು. ಅದಕ್ಕೆ ಮುಖ್ಯ ಕಾರಣ ಶ್ಯಾಮ್‌ ಪ್ರಸಾದ ಮುಖರ್ಜಿ. ಅವರ ಮನವೊಲಿಕೆಯಿಂದಾಗಿಯೇ ಗುರೂಜಿ, ದೀನ ದಯಾಳ್‌ ಉಪಾಧ್ಯಾಯ, ನಾನಾಜಿ ದೇಶ್‌ಮುಖ್‌, ಬಲರಾಜ್‌ ಮುಧೋಕ್‌ರಂಥ ಪ್ರಚಾರಕರ ಜೊತೆಗೆ ಅಟಲ್ ಮತ್ತು ಅಡ್ವಾಣಿಯನ್ನು ಕಳುಹಿಸಿದರು. ಆಗ ಜನ್ಮ ತಳೆದದ್ದು ಜನಸಂಘ. ಆದರೆ ಸಂಘದ ಕೆಲಸಕ್ಕೆ ಮತ್ತು ಜನಸಂಘಕ್ಕೆ ಒಂದು ವೇಗ, ಉತ್ಕರ್ಷ ಸಿಕ್ಕಿದ್ದು ಬಾಳಾ ಸಾಹೇಬ್‌ ದೇವರಸ್‌ ಅವರ ಕಾಲದಲ್ಲಿ. ಸಂಘದಲ್ಲಿ ಪಾಲಿಟಿಕ್ಸ್‌ ಮತ್ತು ಜಾತಿ ಸಮೀಕರಣ ಅರ್ಥ ಆಗುತ್ತಿದ್ದ ಮೊದಲ ಪ್ರಚಾರಕರು ಎಂದರೆ ದೇವರಸ್‌ ಅವರು. ಅಟಲ್ ಅಡ್ವಾಣಿ ಸಮಕಾಲೀನರಾಗಿದ್ದ ರಜ್ಜು ಭಯ್ಯಾ ಕಾಲದವರೆಗೂ ಸಂಘ ಮತ್ತು ಬಿಜೆಪಿ ಸಂಬಂಧಗಳು ಚೆನ್ನಾಗಿಯೇ ಇದ್ದವು.

ಪಂಚರಾಜ್ಯಗಳ ಚುನಾವಣಾ ಫಲಿತಾಂಶ, ಮೇ ನಲ್ಲಿ ಒಡೆಯುತ್ತಾ ರಾಷ್ಟ್ರೀಯ ಕಾಂಗ್ರೆಸ್.?

ಆದರೆ ಯಾವಾಗ ಕು.ಸೀ.ಸುದರ್ಶನ್‌ ಸರಸಂಘ ಚಾಲಕರಾದರೋ ಸಂಘ ಮತ್ತು ಬಿಜೆಪಿ ನಡುವೆ ಬಿರುಕುಗಳು ಬೀದಿಗೆ ಬಂದವು. ಸುದರ್ಶನ್‌, ದತ್ತೋಪಂತ ಥೇಂಗಡಿ, ಅಶೋಕ ಸಿಂಘಾಲ್ ಬೇರೆ ಬೇರೆ ಕಾರಣಗಳಿಗಾಗಿ ಅಟಲ್‌ ಮೇಲೆ ಮುಗಿಬಿದ್ದರು. ಆದರೆ 2014ರಿಂದ ಸಂಘ ಮತ್ತು ಬಿಜೆಪಿ ಇಬ್ಬರೂ ಆ ತಪ್ಪು ಮಾಡುತ್ತಿಲ್ಲ. ಭಾಗವತ್‌ ಮತ್ತು ಮೋದಿ, ಹೊಸಬಾಳೆ ಮತ್ತು ಅಮಿತ್‌ ಶಾ, ಕೃಷ್ಣ ಗೋಪಾಲ್‌ ಮತ್ತು ಜೆ.ಪಿ.ನಡ್ಡಾರ ಸಂಬಂಧಗಳು ಚೆನ್ನಾಗಿವೆ. ವಿವಾದಗಳು ಹೊರಗಂತೂ ಕಾಣುತ್ತಿಲ್ಲ.

ದೇಶ ಸುತ್ತಿದ ಕನ್ನಡಿಗರು

ಕನ್ನಡಿಗರು ರಾಷ್ಟ್ರಮಟ್ಟದ ನಾಯಕರಾಗುವುದು ಅಪರೂಪ. ಒಂದು ಭಾಷೆಯ ಕಾರಣದಿಂದ, ಇನ್ನೊಂದು ಕೂಪಮಂಡೂಕತನದಿಂದ. ಕನ್ನಡಿಗರು ಅಷ್ಟುಸುಲಭಕ್ಕೆ ಕಾವೇರಿ, ಕೃಷ್ಣೆ, ನೇತ್ರಾವತಿ ಬಿಟ್ಟು ದೂರ ಹೋಗುವವರಲ್ಲ. ಜಾರ್ಜ್ ಫರ್ನಾಂಡಿಸ್‌ ಆ ರೀತಿ ದೇಶದಲ್ಲೆಡೆ ಓಡಾಡಿ ಹಿಂದಿ ಕಲಿತು ಮಂಗಳೂರಿನಿಂದ ಮುಜಫರ್‌ಪುರ ತಲುಪಿದವರು. ನಿಜಲಿಂಗಪ್ಪ ಮತ್ತು ಹೆಗಡೆ ಅವರಿಗೆ ದಿಲ್ಲಿಯಲ್ಲಿ ಗೌರವ ಇತ್ತು. ಆದರೆ ದೇಶದ ಎಲ್ಲ ಜಿಲ್ಲೆಗಳಿಗೂ ಹೋದವರಲ್ಲ. ದೇವೇಗೌಡರು ಪ್ರಧಾನಿ ಆದರೂ ದೇಶ ಸುತ್ತಿದವರೇನೂ ಅಲ್ಲ.

ಖರ್ಗೆ, ಮೊಯ್ಲಿ, ಜಾಫರ್‌ ಷರೀಫ್‌, ಬೊಮ್ಮಾಯಿ ಇವರೆಲ್ಲ ಕೇಂದ್ರದ ಪ್ರಭಾವಿ ಸಚಿವರಾಗಿದ್ದರು ಹೌದು. ಆದರೆ ರಾಜ್ಯದ ಹೊರಗೆ ಪ್ರಭಾವ, ಸಂಬಂಧ, ಸಂಪರ್ಕ ಅಷ್ಟಕಷ್ಟೆ. ಆದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಆಗಿದ್ದರಿಂದ ಅನಂತ ಕುಮಾರ್‌ ಅವರಿಗೆ ದೇಶದಲ್ಲೆಡೆ ಸಂಬಂಧ ಇತ್ತು. ಸಂಘದಲ್ಲೇ ಸರ ಕಾರ್ಯವಾಹರಾಗಿದ್ದ ಹೊ.ವೆ.ಶೇಷಾದ್ರಿ ಅವರು ದೇಶ ಸುತ್ತಿದ್ದಕ್ಕಿಂತ ಕೋಶ ಓದಿ ಬರೆದದ್ದು ಜಾಸ್ತಿ. ಈಗ ದತ್ತಾತ್ರೇಯ ಹೊಸಬಾಳೆ ಹೆಚ್ಚೂ ಕಡಿಮೆ 1983ರಿಂದ ಅವ್ಯಾಹತವಾಗಿ ದೇಶದ ಎಲ್ಲ ಜಿಲ್ಲಾ ಕೇಂದ್ರಗಳನ್ನು ವರ್ಷಕ್ಕೊಮ್ಮೆಯಂತೆ ಸುತ್ತಿದ್ದಾರೆ. ಉತ್ತರ ಭಾರತೀಯರಿಗಿಂತ ಶುದ್ಧ ಹಿಂದಿ ಮಾತನಾಡುತ್ತಾರೆ. ಎಲ್ಲಕ್ಕಿಂತ ಹೆಚ್ಚು ದೇಶದ ಭೂಗೋಳದ ಒಟ್ಟು ಪರಿಸ್ಥಿತಿಯ ಅರಿವಿದೆ.

ಸಮಚಿತ್ತದ ಹೊಸಬಾಳೆ

ಬಲಪಂಥ ಇರಲಿ, ಎಡಪಂಥ ಇರಲಿ ಇತ್ತೀಚಿನ ದಿನಗಳಲ್ಲಿ ಸಮಚಿತ್ತ ಇಟ್ಟುಕೊಂಡು ಮಾತನಾಡುವವರು, ವ್ಯವಹರಿಸುವವರು ಕಡಿಮೆ. ಆದರೆ ಸಂಘದ ಹೊಸ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಸಾಮರ್ಥ್ಯ ಎಂದರೆ ಸಮಚಿತ್ತದ ಮಾತು, ನಡುವಳಿಕೆ, ವಿರೋಧಿಗಳಿಗೂ ನೋವಾಗದಂತೆ ಸಂವಾದ ನಡೆಸುವ ಗುಣ. ಒಂದು ಕಡೆ ಪಿ.ಲಂಕೇಶ್‌, ಕಿ.ರಂ.ನಾಗರಾಜ್‌ ಅವರು ಹೊಸಬಾಳೆ ಅವರಿಗೆ ಬೆಂಗಳೂರು ವಿವಿಯಲ್ಲಿ ಮೇಷ್ಟು್ರ ಆಗಿದ್ದವರು. ಹಿಂದೊಮ್ಮೆ ಅ.ಭಾ.ವಿ.ಪ.ದಲ್ಲಿದ್ದು ಈಗ ಬಿಜೆಪಿಯನ್ನು ಕಟುವಾಗಿ ಟೀಕಿಸುವ ಪಿ.ಜಿ.ಆರ್‌.ಸಿಂಧ್ಯಾ, ಬಿ.ಎಲ್ ಶಂಕರ್‌, ಉಗ್ರಪ್ಪ, ಪ್ರೊಫೆಸರ್‌ ರಾಧಾಕೃಷ್ಣ ಈಗಲೂ ದತ್ತಾ ಅವರ ಆತ್ಮೀಯ ಮಿತ್ರರು. ಸಂಘದ ಚಡ್ಡಿಯನ್ನು ಬದಲಾಯಿಸಿ ಪ್ಯಾಂಟ್‌ ತಂದಿದ್ದು, ಸಮ ಲೈಂಗಿಕತೆ ಬಗ್ಗೆ ಸಂಘದ ಬದಲಾದ ನಿಲುವಿನ ಹಿಂದೆ ಹೊಸಬಾಳೆ ಅವರ ನಿರಂತರ ಮನವೊಲಿಕೆ ಕೆಲಸ ಮಾಡಿದೆ ಎಂದು ಸಂಘದ ವಲಯಗಳು ಹೇಳುತ್ತವೆ. ಇಷ್ಟುದೊಡ್ಡ ಹುದ್ದೆಯಲ್ಲಿದ್ದರೂ ಬೆಂಗಳೂರಿಗೆ ಬಂದರೆ ಸಾಮಾನ್ಯ ಕಾರ್ಯಕರ್ತರೊಂದಿಗೆ ದ್ವಿಚಕ್ರ ವಾಹನದಲ್ಲಿ ಓಡಾಡುವ ಹೊಸಬಾಳೆ, ಸಮಯ ಸಿಕ್ಕರೆ ಕನ್ನಡ ಮತ್ತು ಇಂಗ್ಲಿಷ್‌ ಚಿತ್ರಗಳನ್ನು ನೋಡೋದು ತಪ್ಪಿಸೋಲ್ಲ. ಒಟ್ಟಾರೆ ಸಂಘದ ಟಿಪಿಕಲ್ ಪ್ರಚಾರಕರ ಮಧ್ಯೆ ಹೊಸಬಾಳೆ ಸ್ವಲ್ಪ ಉದಾರವಾದಿ ಥರ ಅನಿಸುತ್ತಾರೆ.

ಹೊಸಬಾಳೆ ಸವಾಲುಗಳೇನು?

1925ರಲ್ಲಿ ಹುಟ್ಟಿದ ಸಂಘಕ್ಕೆ 1990ರ ರಾಮ ಮಂದಿರ ಆಂದೋಲನ ಶುರು ಆಗುವವರೆಗೂ ಬಹಳಷ್ಟುವಿಷಯಗಳ ಕೊರತೆ ಇತ್ತು. ಆದರೆ ಈಗ ಅಧಿಕಾರ, ಸಂಪರ್ಕ, ಸ್ವೀಕರಾರ್ಹತೆ, ದುಡ್ಡು, ಸೌಕರ್ಯಗಳು ಯಾವುದರ ಕೊರತೆಯೂ ಇಲ್ಲ. ಆದರೆ ಸಂಘಟನೆ ಮತ್ತು ವಿಚಾರ ಉಚ್ಛ್ರಾಯಕ್ಕೆ ಏರಿದ ನಂತರ ಅದನ್ನು ಸ್ಥಿರಗೊಳಿಸುವ, ಪುನರಪಿ ಕೆಳಕ್ಕೆ ಬೀಳದಂತೆ ನೋಡಿಕೊಳ್ಳುವ ಸವಾಲುಗಳಿವೆ. ಜಾತಿ ಮತ್ತು ಭಾಷೆಯ ಅಸ್ಮಿತೆ ಜಾಸ್ತಿ ಆಗುತ್ತಿರುವ ವೇಳೆಯಲ್ಲಿ ಸಂಘ ಅದನ್ನು ಹೇಗೆ ಎದುರಿಸುತ್ತದೆ ಎಂಬ ಸವಾಲು ಇದೆ. ಯುವಕರಲ್ಲಿ ಸಂಘ ಮತ್ತು ಹಿಂದುತ್ವದ ಆಕರ್ಷಣೆ ಏನೋ ಇದೆ. ಆದರೆ ಅದು ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟರನ್ನು ಬೈಯುವುದಕ್ಕಷ್ಟೇ ಸೀಮಿತವಾಗದೆ, ರಚನಾತ್ಮಕ ಸೈದ್ಧಾಂತಿಕ ಬದ್ಧತೆಯಾಗಿ ಬದಲಾಯಿಸುವ ಸವಾಲು ಇದೆ. 2024ರ ಆಸುಪಾಸು ಸಂಘ ಮತ್ತು ಬಿಜೆಪಿಯ ಒಂದು ತಲೆಮಾರು ನಿವೃತ್ತಿಯ ಅಂಚಿಗೆ ಬರುತ್ತದೆ. ಅದನ್ನು ಒಡಕಿಲ್ಲದೆ ಹೊಸಬಾಳೆ ನಿಭಾಯಿಸುತ್ತಾರಾ ಎಂಬ ಆಂತರಿಕ ಸವಾಲು ಕೂಡ ಇದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್ , ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios