RSS ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ!
RSS ಪ್ರಧಾನ ಕಾರ್ಯದರ್ಶಿಯಾಗಿ ಕನ್ನಡಿಗ ಆಯ್ಕೆ| ಭಯ್ಯಾಜಿ ಜೋಶಿ ಸ್ಥಾನಕ್ಕೆ ಆಯ್ಕೆಯಾದ ದತ್ತಾತ್ರೇಯ ಹೊಸಬಾಳೆ| ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ದತ್ತಾತ್ರೇಯ ಹೊಸಬಾಳೆ ಆಯ್ಕೆ!
ಬೆಂಗಳೂಋಉ(ಮಾ.20): ಕರ್ನಾಟಕದ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆಯವರು RSSನ ಸರಕಾರ್ಯವಾಹರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಅತೀ ಉನ್ನತ ಜವಾಬ್ದಾರಿ ಅವರ ಹೆಗಲಿಗೆ ಬಿದ್ದಿದೆ. ಬೆಂಗಳೂರಿನ ಹೊರವಲಯದ ಚೆನ್ನೇನಹಳ್ಳಿ ಜನ ಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಡೆದ ಚುನಾವಣೆಯಲ್ಲಿ ದತ್ತಾತ್ರೇಯ ಹೊಸಬಾಳೆಯವರು ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.
"
ದತ್ತಾತ್ರೇಯ ಹೊಸಬಾಳೆಯವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆಯವರು. ಕಾಲೇಜು ಶಿಕ್ಷಣದ ನಂತರ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
RSSನಲ್ಲಿ ಸರಸಂಘಚಾಲಕ್ ಹಾಗೂ ಸರಕಾರ್ಯವಾಹ ಇವೆರಡೂ ಅತ್ಯುನ್ನತ ಹುದ್ದೆ ಹಾಗೂ ಜವಾಬ್ದಾರಿಯುತವಾಗಿವೆ. ಡಾ. ಮೋಹನ್ ಭಾಗವತ್ RSSನ ಸರ ಸಂಘ ಚಾಲಕರಾಗಿದ್ದು, ಭೈಯಾಜಿ ಜೋಶಿ 2009ರಿಂದ ಸರಕಾರ್ಯವಾಹರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಆದರೀಗ ಶನಿವಾರ ಎಬಿಪಿಎಸ್ ನಲ್ಲಿ ನಡೆದ RSS ಆಂತರಿಕ ಚುನಾವಣೆಯಲ್ಲಿ ಕರ್ನಾಟಕದ ದತ್ತಾತ್ರೇಯ ಹೊಸಬಾಳೆಯವರಿಗೆ ಭೈಯಾಜಿ ಜೋಶಿಯವರ ಸ್ಥಾನ, ಸರಕಾರ್ಯವಾಹ ಜವಾಬ್ದಾರಿ ಲಭಿಸಿದೆ.
ಈ ಹಿಂದೆ ಕರ್ನಾಟಕದಿಂದ ಹೋ.ವೇ.ಶೇಷಾದ್ರಿ ಅವರು ಸರಕಾರ್ಯವಾಹರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಈಗ ಮತ್ತೊಮ್ಮೆ ಕನ್ನಡಿಗ ದತ್ತಾತ್ರೇಯ ಹೊಸಬಾಳೆಯವರು ಇದೇ ಹುದ್ದೆಗೆ ನೇಮಕಗೊಂಡಿದ್ದಾರೆ. ದತ್ತಾತ್ರೇಯ ಹೊಸಬಾಳೆಯವರು ಸಹ ಸರಕಾರ್ಯವಾಹರಾಗಿ ಸೇವೆ ಸಲ್ಲಿಸುತ್ತಿದ್ದರು. ಅದಕ್ಕೂ ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಷ್ಟ್ರೀಯ ಜವಾಬ್ದಾರಿ ಹೊಂದಿದ್ದರು.