ದೇಶದ ಮೊದಲ ಬುಲೆಟ್ ರೈಲು ಯೋಜನೆಯಾದ ಮುಂಬೈ–ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌ನ ಪ್ರಮುಖ ನಿಲ್ದಾಣಗಳಲ್ಲಿ ಒಂದಾದ ಸೂರತ್ ಬುಲೆಟ್ ರೈಲು ನಿಲ್ದಾಣದ ಒಳಾಂಗಣದ ಮೊದಲ ಫೋಟೋವನ್ನು ರೈಲ್ವೆ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಸೂರತ್‌: ಮುಂದಿನ ವರ್ಷದ ದೇಶದ ಮೊದಲ ಬುಲೆಟ್‌ ಟ್ರೈನ್ ಸಂಚಾರಕ್ಕೆ ಸಿದ್ಧವಾಗುತ್ತಿರುವ ಹೊತ್ತಲ್ಲಿ ಸೂರತ್‌ನ ಬುಲೆಟ್‌ ರೈಲು ನಿಲ್ದಾಣದ ಮೊದಲ ಫೋಟೋ ಬಿಡುಗಡೆಯಾಗಿದ್ದು ವಿಮಾನ ನಿಲ್ದಾಣವನ್ನೂ ಮೀರಿಸುವಂತಿದೆ.

ರೈಲ್ವೆ ಸಚಿವಾಲಯವು ಮುಂಬೈ- ಅಹಮದಾಬಾದ್‌ನ ಹೈ ಸ್ಪೀಡ್‌ ರೈಲಿನ ಪ್ರಮುಖ ರೈಲು ನಿಲ್ದಾಣವಾದ ಸೂರತ್‌ ಬುಲೈಟ್‌ ರೈಲು ನಿಲ್ದಾಣದ ಒಳಾಂಗಣ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದೆ. 628 ಚದರ ಅಡಿ ವಿಸ್ತೀರ್ಣದ ಈ ನಿಲ್ದಾಣವು ನೆಲಮಹಡಿ, ಟಿಕೆಟ್ ಕೌಂಟರ್ ವಿಶ್ರಾಂತಿ ಕೊಠಡಿ, ಮಳಿಗೆಗೆ ಮತ್ತು ಫ್ಲ್ಯಾಟ್‌ಫಾರ್ಮ್ ಹಂತ ಎಂಬ ಮೂರು ಹಂತಗಳನ್ನು ಹೊಂದಿದೆ.

ರೈಲು ನಿಲ್ದಾಣದಲ್ಲಿ ಜ್ಯಾಮಿತೀಯ ಆಕಾರದ ಛಾವಣಿಗಳು, ಗಾಜಿನ ಗೋಡೆಗಳು, ಎಸ್ಕಲೇಟರ್‌ಗಳನ್ನು, ಲಿಫ್ಟ್‌ಗಳು ಮತ್ತು ವಿಶಾಲವಾದ ವೇಟಿಂಗ್ ಲಾಂಜ್‌ಗಳನ್ನು ನಿರ್ಮಿಸಲಾಗಿದೆ. ಅಹಮದಾಬಾದ್‌ - ವಾಪಿ ನಡುವಿನ ಈ ರೈಲು ಸಂಚಾರ 2027 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸೂರತ್–ಬಿಲಿಮೊರಾ ಪ್ರಾಯೋಗಿಕ ಓಟ ಮತ್ತು ವಿದ್ಯುದ್ದೀಕರಣ

ಮುಂಬೈ–ಅಹಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್‌ನ ಸುಮಾರು 50 ಕಿಲೋಮೀಟರ್ ಉದ್ದದ ಸೂರತ್–ಬಿಲಿಮೊರಾ ವಿಭಾಗವು ಮೇ 2027ರಲ್ಲಿ ಆರಂಭಿಕ ಪ್ರಾಯೋಗಿಕ ಸಂಚಾರಕ್ಕೆ ಸಜ್ಜಾಗುತ್ತಿದೆ. ಈ ವಿಭಾಗದ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡಿದ್ದು, ಸಿಗ್ನಲಿಂಗ್ ಸಂಬಂಧಿತ ಕಾಮಗಾರಿಗಳು ಜನವರಿ 2027ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಹಿಂದೆ ತಿಳಿಸಿದ್ದರು.

ಎರಡೂ ಹಳಿಗಳನ್ನು ಒಳಗೊಂಡ ಎತ್ತರದ ಪ್ರದೇಶದ ಓವರ್‌ಹೆಡ್ ವಿದ್ಯುದ್ದೀಕರಣ ವ್ಯವಸ್ಥೆಯನ್ನು ನವೆಂಬರ್ 20ರಂದು ಶಕ್ತಗೊಳಿಸಲಾಗಿದೆ. ಈ ವಿಭಾಗವು 2x25 kV ಎಳೆತ ವ್ಯವಸ್ಥೆಯನ್ನು ಬಳಸುತ್ತಿದ್ದು, ಬಿಲಿಮೊರಾ ಎಳೆತ ಸಬ್‌ಸ್ಟೇಷನ್‌ನಲ್ಲಿ ಅಳವಡಿಕೆ ಕಾರ್ಯವೂ ಪೂರ್ಣಗೊಂಡಿದೆ.

ಹಂತ ಹಂತದ ಸಂಚಾರ ವೇಳಾಪಟ್ಟಿ: 2027ರಿಂದ 2029ರವರೆಗೆ

ಸಮಗ್ರ ಮುಂಬೈ–ಅಹಮದಾಬಾದ್ ಕಾರಿಡಾರ್ ಸುಮಾರು 508 ಕಿಲೋಮೀಟರ್ ಉದ್ದವಿದ್ದು, ಪ್ರಸ್ತಾವಿತ ಯೋಜನೆಯಂತೆ ಅಹಮದಾಬಾದ್–ವಾಪಿ ವಿಭಾಗದಲ್ಲಿ 2027ರ ಅಂತ್ಯದ ವೇಳೆಗೆ (ಅಲ್ಲದೆ ಸೂರತ್–ವಾಪಿ ನಡುವಿನ ಸುಮಾರು 97 ಕಿಲೋಮೀಟರ್ ವಿಭಾಗದಲ್ಲಿ ಆರಂಭಿಕ ಸಂಚಾರದ ಯೋಜನೆಯೊಂದಿಗೆ) ರೈಲು ಸೇವೆ ಆರಂಭಿಸುವ ಗುರಿ ಇದೆ. ಮುಂದಿನ ಹಂತದಲ್ಲಿ 2029ರ ವೇಳೆಗೆ ಬುಲೆಟ್ ರೈಲು ಸೇವೆಯನ್ನು ಥಾಣೆವರೆಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ.

ಸ್ವದೇಶಿ ಬಿ-28 ಬುಲೆಟ್ ರೈಲು ಮತ್ತು ಒತ್ತಡ ಪರೀಕ್ಷೆ

ಭಾರತದ ಮೊದಲ ಸ್ವದೇಶಿ ಬುಲೆಟ್ ರೈಲು (ಬಿ-28) ಬೆಂಗಳೂರಿನ ಬಿಇಎಂಎಲ್ (BEML) ಘಟಕದಲ್ಲಿ ನಿರ್ಮಾಣವಾಗುತ್ತಿದೆ. ಗಂಟೆಗೆ ಗರಿಷ್ಠ 280 ಕಿಲೋಮೀಟರ್ ವೇಗದಲ್ಲಿ ಕಾರ್ಯನಿರ್ವಹಿಸುವ ವಿನ್ಯಾಸ ಮತ್ತು ಗಂಟೆಗೆ 249 ಕಿಲೋಮೀಟರ್ ನಿಗದಿತ ಕಾರ್ಯಾಚರಣೆಯ ವೇಗವನ್ನು ಇದು ಹೊಂದಿದೆ. ಸುಮಾರು 202 ಮೀಟರ್ ಉದ್ದದ ಈ ರೈಲು 8 ಬೋಗಿಗಳು ಹಾಗೂ ಒಟ್ಟು 557 ಪ್ರಯಾಣಿಕರ ಸಾಮರ್ಥ್ಯ ಹೊಂದಿದ್ದು, ಆಧುನಿಕ ಆಸನ ವ್ಯವಸ್ಥೆ, ಮನರಂಜನಾ ಸೌಲಭ್ಯ ಮತ್ತು ವಿಶೇಷ ಚೇತನರಿಗೆ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿದೆ.

ಗಂಟೆಗೆ 240 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ರೈಲುಗಳಿಗೆ ವಿಶೇಷ ಎಂಜಿನಿಯರಿಂಗ್ ವಿನ್ಯಾಸ ಮತ್ತು ಒತ್ತಡದ ಬಲಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಅಗತ್ಯ ಎಂದು ವೈಷ್ಣವ್ ವಿವರಿಸಿದ್ದಾರೆ. ಬಿ-28 ರೈಲು ನಿಜವಾದ ಕಾರ್ಯಾಚರಣೆಯ ವೇಳೆ ನಿರೀಕ್ಷಿಸುವ ಎರಡು ಪಟ್ಟು ವಾತಾವರಣದ ಒತ್ತಡಕ್ಕೆ ಒಡ್ಡಿಕೊಂಡು 'ಸ್ಕ್ವೀಝ್' ಒತ್ತಡ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣವಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾಗರದೊಳಗಿನ ಸುರಂಗ ಕಾಮಗಾರಿ ಸೇರಿದಂತೆ ಮಹಾರಾಷ್ಟ್ರದ ನಿರ್ಮಾಣ ಪ್ರಗತಿಯ ಬಗ್ಗೆಯೂ ಅವರು ತೃಪ್ತಿ ವ್ಯಕ್ತಪಡಿಸಿದ್ದಾರೆ.

ಮುಂದಿನ ಮೂರು ಬುಲೆಟ್ ರೈಲು ಯೋಜನೆಗಳು

ಮುಂಬೈ–ಅಹಮದಾಬಾದ್ ಮಾರ್ಗದ ಜೊತೆಗೆ ಹೈದರಾಬಾದ್–ಬೆಂಗಳೂರು, ಪುಣೆ–ಹೈದರಾಬಾದ್ ಮತ್ತು ಹೈದರಾಬಾದ್–ಚೆನ್ನೈ ಬುಲೆಟ್ ರೈಲು ಯೋಜನೆಗಳ ಕಾಮಗಾರಿಗಳೂ ಶೀಘ್ರದಲ್ಲೇ ಆರಂಭಗೊಳ್ಳಲಿವೆ ಎಂಬ ಮಾಹಿತಿಯನ್ನು ಇತ್ತೀಚೆಗೆ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಹಂಚಿಕೊಂಡಿದ್ದರು.