ಭಾರತದ ಮೊದಲ ಬುಲೆಟ್ ಟ್ರೈನ್ ಬೆಂಗಳೂರಿನ ಬಿಇಎಂಎಲ್‌ನಲ್ಲಿ ತಯಾರಾಗುತ್ತಿದ್ದು, ಇದರ ವಿಡಿಯೋವನ್ನು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಬಿಡುಗಡೆ ಮಾಡಿದ್ದಾರೆ. ಗಂಟೆಗೆ 249 ಕಿ.ಮೀ. ವೇಗದ ಈ ರೈಲು ಮುಂಬೈ-ಅಹಮದಾಬಾದ್ ನಡುವೆ ಸಂಚರಿಸಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು (ನ.28): ಭಾರತದ ಮೊದಲ ಬುಲೆಟ್ ಟ್ರೈನ್ ಬೆಂಗಳೂರಿನ ಬಿಇಎಂಎಲ್‌ನಲ್ಲಿ (ಬೆಮೆಲ್‌) ತಯಾರಾಗುತ್ತಿದ್ದು, ಇದರ ತಯಾರಿಕಾ ವಿಡಿಯೋವನ್ನು ಕೇಂದ್ರ ಸಚಿವ ಅಶ್ವಿನ್ ವೈಷ್ಣವ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಗಂಟೆಗೆ 249 ಕಿ.ಮೀ. ವೇಗದ ಸಾಮರ್ಥ್ಯ ಹೊಂದಿರುವ ಬುಲೆಟ್ ಟ್ರೈನ್ ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚರಿಸಲಿದೆ. ಒಂದು ಬಾರಿ 557 ಪ್ರಯಾಣಿಕರು ಸಂಚಾರ ಮಾಡಲಿದ್ದು, ಎಂಟು ಬೋಗಿಗಳೂ ಸೇರಿ 202 ಮೀ. ಉದ್ದ, ಆರಾಮದಾಯಕ ಪ್ರಯಾಣಕ್ಕೆ ಅತ್ಯಾಧುನಿಕ ಸೌಕರ್ಯವಿದೆ ಎಂದು ಹೇಳಲಾಗಿದೆ.

ಬೆಂಗಳೂರಿನ ಬಿಇಎಂಎಲ್‌ನ ಆದಿತ್ಯ ಪ್ಲಾಂಟ್‌ನಲ್ಲಿ ರೂಪ ಪಡೆಯುತ್ತಿದ್ದು, ಭಾರತದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಬುಲೆಟ್‌ ರೈಲಿನ ಮುಖಭಾಗ ಹಾಗೂ ಬೋಗಿಗಳ ಚೌಕಟ್ಟಿನ ನಿರ್ಮಾಣ, ರೋಲಿಂಗ್‌ ಸ್ಟಾಕ್‌ ಒಳವಿನ್ಯಾಸ, ಎಲೆಕ್ಟ್ರಿಕ್‌ ಹಾಗೂ ಸೀಟು ಜೋಡಣೆ, ಎಂಜಿನ್‌ ಜೋಡಣೆ, ರೈಲಿನ ಚಕ್ರದ ಅಳವಡಿಕೆ ಕಾರ್ಯ ಆರಂಭಿಸಲಾಗಿದೆ. ನಂತರ ಪ್ಲಾಂಟ್‌ನ ತಪಾಸಣಾ ಟ್ರ್ಯಾಕ್‌ನಲ್ಲಿ ರೈಲಿನ ಸಂಚಾರ ಪರೀಕ್ಷೆ ನಡೆಯಲಿದೆ.

ಬಿಇಎಂಎಲ್‌ನಲ್ಲಿ ತಯಾರಿ

ಅತ್ಯಾಧುನಿಕ ತಂತ್ರಜ್ಞಾನ, ಉತ್ಕೃಷ್ಟ ಉಕ್ಕು ಹಾಗೂ ಇತರೆ ಲೋಹಗಳನ್ನು ಬಳಸಿ ಪರಿಣಿತ ತಂತ್ರಜ್ಞರು ಸೇರಿ ನಿರ್ಮಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಬೋಗಿಯ ಒಳಾಂಗಣ ನಿರ್ಮಾಣ, ತಪಾಸಣಾ ಚಟುವಟಿಕೆಗಳು, ಬಣ್ಣ ಸೇರಿ ಬೋಗಿ ನಿರ್ಮಾಣ ಹಾಗೂ ಬೋಗಿ ವೆಲ್ಡಿಂಗ್, ಅಂತಿಮ ತಪಾಸಣೆ ನಡೆಸುವ ಚಟುವಟಿಕೆಗಳನ್ನು ತೋರಿಸಲಾಗಿದೆ. ಇದರೊಂದಿಗೆ ಭಾರತವು ತನ್ನ ಹೈ-ಸ್ಪೀಡ್ ರೈಲು ಭವಿಷ್ಯವನ್ನು ನಿರ್ಮಿಸುತ್ತಿದ್ದು, ಮುಂಬೈ-ಅಹಮದಾಬಾದ್ ನಡುವೆ ಹೈ-ಸ್ಪೀಡ್ ರೈಲು ಕಾರಿಡಾರ್‌ಗಾಗಿ ಬೆಂಗಳೂರಿನ ಬಿಇಎಂಎಲ್ ನಲ್ಲಿ ತಯಾರಿಸಲಾಗುತ್ತಿದೆ ಎಂದು ವಿವರಿಸಲಾಗಿದೆ.

ಸುಧಾರಿತ 25 ಕೆವಿ ಎಸಿ ಸಾಮರ್ಥ್ಯದಲ್ಲಿ ಉತ್ತಮ ತಂತ್ರಜ್ಞಾನ, ಪ್ರಯಾಣಿಕ ಸ್ನೇಹಿ ವೈಶಿಷ್ಟ್ಯಗಳೊಂದಿಗೆ, ಭಾರತ್-ನಿರ್ಮಿತ ಬುಲೆಟ್ ರೈಲು ಹೈ-ಸ್ಪೀಡ್ ರೈಲು ಎಂಜಿನಿಯರಿಂಗ್ ಮತ್ತು ಸ್ಥಳೀಯ ಉತ್ಪಾದನೆಯಲ್ಲಿ ಭಾರತದ ಅಭಿವೃದ್ಧಿ ಹೊಂದುತ್ತಿರುವ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಲಾಗಿದೆ.

The Making of India's High-Speed Future: Inside the 'Made-in-India' Bullet Train