ಭಾರತದಿಂದ ಮತ್ತೊಂದು ಯಶಸ್ವಿ ಕ್ಷಿಪಣಿ ಪರೀಕ್ಷೆ ಡಿಆರ್‌ಡಿಒ ಅಭಿವೃದ್ಧಿ ಪಡಿಸಿದ MRSAM ಮಿಸೈಲ್ ಗುರಿಯನ್ನು ಸರ್ವನಾಶ ಮಾಡಬಲ್ಲ ಮಿಸೈಲ್
ಒಡಿಶಾ(ಮಾ.27): ಭಾರತ ಕಳೆದೆರಡು ವರ್ಷದಲ್ಲಿ ಅತ್ಯಾಧುನಿಕ, ಶತ್ರುಗಳನ್ನು ಹುಡುಕಿ ಹೊಡೆಯಬಲ್ಲ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಈ ಸಾಲಿಗೆ ಮತ್ತೊಂದು ಸೇರಿಕೊಳ್ಳುತ್ತಿದೆ. ನೇರ ಹೊಡೆತದಲ್ಲಿ ಗುರಿ ನಾಶ ಮಾಡಲ್ಲ ಹೊಸ ಮಿಸೈಲ್ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ಮಾಡಿಮುಗಿಸಿದೆ. ಈಗಾಲೇ ಭಾರತದ ಕ್ಷಿಪಣಿ ಪರೀಕ್ಷೆಯಿಂದ ತಲೆ ಕೆಡಿಸಿಕೊಂಡಿರುವ ನೆರೆ ದೇಶಗಳಾದ ಪಾಕಿಸ್ತಾನ ಹಾಗೂ ಚೀನಾಗೆ ಇದೀಗ ಮತ್ತೆ ಆತಂಕ ಎದುರಾಗಿದೆ.
ಡಿಫೆನ್ಸ್ ರಿಚರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್(DRDO) ಅಭಿವೃದ್ಧಿ ಪಡಿಸಿದ ಈ ಮಿಸೈಲ್ ಹಲವು ವಿಶೇಷತೆಗಳನ್ನು ಹೊಂದಿದೆ. ಒಡಿಶಾದ ಬಾಲಸೋರ್ ಕರಾವಳಿ ತೀರದಲ್ಲಿರುವ ಡಿಆರ್‌ಡಿಒ ಕೇಂದ್ರದಲ್ಲಿ ಈ ಕ್ಷಿಪಣಿಯನ್ನು ಪರೀಕ್ಷೆ ಮಾಡಲಾಗಿದೆ.
Brahmos Missiles: ಮೊದಲ ಬಾರಿ ವಿದೇಶಕ್ಕೆ ಭಾರತದ ಕ್ಷಿಪಣಿ ರಫ್ತು..!
ಭಾರತೀಯ ಸೇನೆಯ ಭಾಗವಾಗಿರುವ ಈ ಮಿಸೈಲ್, ಅತೀ ದೂರದಲ್ಲಿರುವ ಗುರಿಯನ್ನು ನೇರವಾಗಿ ಹೊಡೆದುರಳಿಸಿದೆ. ಇಂದು ಬೆಳಗ್ಗೆ 10.30ಕ್ಕೆ ಕ್ಷಿಪಣಿ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಬಹಳ ದೂರದ ಗುರಿಯನ್ನು ಗುರುತಿಸಿ ನೇರವಾಗಿ ಹೊಡೆದುರಳಿಸಿದೆ. ಇನ್ನು ನೂತನ ಮಿಸೈಲ್ ಎಷ್ಟು ದೂರದ ಗುರಿಯನ್ನು ಹೊಡೆದುರಳಿಸಲಿದೆ ಅನ್ನೋ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ.
ನೌಕಾಪಡೆಯಿಂದ ಬ್ರಹ್ಮೋಸ್ ಕ್ಷಿಪಣಿ ಪ್ರಯೋಗ ಯಶಸ್ವಿ
ಶಬ್ದಕ್ಕಿಂತ ವೇಗವಾಗಿ ನುಗ್ಗಿ ಶತ್ರುಪಡೆಗಳನ್ನು ಸದೆ ಬಡಿಯುವ, ವಿಶ್ವದ ಅತ್ಯಂತ ಅಪಾಯಕಾರಿ ಕ್ಷಿಪಣಿಗಳಲ್ಲಿ ಒಂದಾಗಿರುವ ಬ್ರಹ್ಮೋಸ್ ಕ್ಷಿಪಣಿಯ ದೀರ್ಘ ದೂರ ಕ್ರಮಿಸುವ ಆವೃತ್ತಿಯನ್ನು ಭಾರತೀಯ ನೌಕಾಪಡೆ ಕಳೆದ ತಿಂಗಳು ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿತ್ತು.ಬಂಗಾಳ ಕೊಲ್ಲಿಯಲ್ಲಿ ಯುದ್ಧನೌಕೆಯೊಂದರಿಂದ ಚಿಮ್ಮಿದ ಬ್ರಹ್ಮೋಸ್ ಕ್ಷಿಪಣಿ, ಶರವೇಗದಲ್ಲಿ ಅತ್ಯಂತ ನಿಖರವಾಗಿ ತನ್ನ ಗುರಿಯನ್ನು ಧ್ವಂಸಗೊಳಿಸಿದೆ ಎಂದು ನೌಕಾಪಡೆ ಅಧಿಕಾರಿಗಳು ಹೇಳಿದ್ದಾರೆ. ಈ ಪರೀಕ್ಷೆಯೊಂದಿಗೆ ಯುದ್ಧಸನ್ನದ್ಧತೆಯನ್ನು ಸಾಬೀತುಪಡಿಸಲಾಗಿದೆ. ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ ಎಂದು ನೌಕಾಪಡೆ ಟ್ವೀಟ್ ಮಾಡಿದೆ.
ಬ್ರಹ್ಮೋಸ್ ಸೂಪರ್‌ಸಾನಿಕ್ ಲೈವ್ ಕ್ಷಿಪಣಿಗಳ ಟೆಸ್ಟ್ ಆರಂಭಿಸಿದ ಭಾರತ!
ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆಯನ್ನು ನೌಕಾಪಡೆ ಕಾಲಕಾಲಕ್ಕೆ ನಡೆಸುತ್ತದೆ. ಇದು ಶಬ್ದಕ್ಕಿಂತ ವೇಗವಾಗಿ ದಾಳಿ ಮಾಡುವ ಸೂಪರ್‌ಸಾನಿಕ್ ಕ್ಷಿಪಣಿಯಾಗಿದೆ. ವೇಗವಾಗಿ ಸಾಗುವ ಕಾರಣ ಕ್ಷಿಪಣಿಗಳಿಂದ ಪ್ರತಿದಾಳಿ ನಡೆಸಿ ಇದನ್ನು ಹೊಡೆದುರುಳಿಸುವುದು ಬಹಳ ಕಷ್ಟ. 2006ರಲ್ಲೇ ಬ್ರಹ್ಮೋಸ್ ಕ್ಷಿಪಣಿಯನ್ನು ನೌಕಾಪಡೆ ಹಾಗೂ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಯುದ್ಧ ನೌಕೆಗಳಲ್ಲಿ ಬಳಸುವ ಕ್ಷಿಪಣಿಗಳಿಗಿಂತ ಯುದ್ಧ ವಿಮಾನಗಳಿಂದ ಪ್ರಯೋಗಿಸುವ ಕ್ಷಿಪಣಿ ತೀವ್ರ ವೇಗ ಹೊಂದಿರುತ್ತದೆ.
ಸುಧಾರಿತ ಕ್ಷಿಪಣಿ ಪರೀಕ್ಷೆ ಯಶಸ್ವಿ
ಸುಧಾರಿತ ಕ್ರೂಸ್ ಕ್ಷಿಪಣಿ ಬ್ರಹ್ಮೋಸ್ ಪರೀಕ್ಷೆ ಯಶಸ್ವಿಯನ್ನು ಈ ವರ್ಷದ ಆರಂಭದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮಾಡಿತ್ತು. ನಿಯಂತ್ರಣ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಈ ಕ್ಷಿಪಣಿಯನ್ನು ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್(ಐಟಿಆರ್)ಉಡಾವಣಾ ಪ್ಯಾಡ್-3 ನಿಂದ ಪರೀಕ್ಷಾರ್ಥ ಉಡಾವಣೆ ನಡೆಸಲಾಯಿತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ. ಇದೇ ಜ.11 ರಂದು ಭಾರತ ವಿಶಾಖಪಟ್ಟಣಂನ ಐಎನ್‌ಎಸ್ ಯುದ್ಧನೌಕೆಯಿಂದ ಸೂಪರಸಾನಿಕ್ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಿತ್ತು.
ಪ್ರಳಯ’ ಖಂಡಾಂತರ ಕ್ಷಿಪಣಿ
ಆಗಸದಿಂದ ಆಗಸಕ್ಕೆ ಚಿಮ್ಮಬಲ್ಲ ‘ಪ್ರಳಯ’ ಖಂಡಾಂತರ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿಯನ್ನು ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ಪರೀಕ್ಷೆ ಮಾಡಲಾಗಿತ್ತು.500-1000 ಕೆ.ಜಿ ತೂಕದ ಸಿಡಿತಲೆ ಹೊರುವ ಸಾಮರ್ಥ್ಯವಿರುವ ಪ್ರಳಯ ಖಂಡಾಂತರ ಕ್ಷಿಪಣಿಯು 350-500 ಕಿ.ಮೀ ವರೆಗೆ ಗುರಿ ತಲುಪುವ ಸಾಮರ್ಥ್ಯ ಹೊಂದಿದೆ.
