ಸಿಪ್ರಿ ಇಯರ್‌ಬುಕ್ 2026 ರ ವರದಿಯ ಪ್ರಕಾರ, ಭಾರತವು ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಪರಮಾಣು ಸಿಡಿತಲೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಈ ವರದಿಯು ಭಾರತ, ಚೀನಾ ಮತ್ತು ಪಾಕಿಸ್ತಾನದ ಪರಮಾಣು ಸಾಮರ್ಥ್ಯಗಳನ್ನು ವಿಶ್ಲೇಷಣೆ ಮಾಡಿದೆ.

ನವದೆಹಲಿ (ಜೂ.9): ಜಾಗತಿಕ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿಶ್ಶಸ್ತ್ರೀಕರಣದ ಮೇಲೆ ಕಣ್ಣಿಟ್ಟಿರುವ ಸ್ವೀಡನ್ ಮೂಲದ ಪ್ರತಿಷ್ಠಿತ ಥಿಂಕ್ ಟ್ಯಾಂಕ್ 'ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್' (SIPRI - ಸಿಪ್ರಿ) ಬಿಡುಗಡೆ ಮಾಡಿರುವ ತನ್ನ ವಾರ್ಷಿಕ ವರದಿಯಲ್ಲಿ ಅತ್ಯಂತ ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತವು ತನ್ನ ಪರಮಾಣು ಸಿಡಿತಲೆಗಳನ್ನು (Nuclear Warheads) ಸನ್ನದ್ಧ ಸ್ಥಿತಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಿದೆ (Operationally Deployed) ಎಂದು ಸಿಪ್ರಿ ವರದಿ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಘರ್ಷಗಳು, ಶಸ್ತ್ರಾಸ್ತ್ರಗಳು ಮತ್ತು ಶಸ್ತ್ರಾಸ್ತ್ರ ನಿಯಂತ್ರಣದ ಕುರಿತು ಸೋಮವಾರ ಪ್ರಕಟವಾಗಿರುವ 'ಸಿಪ್ರಿ ಇಯರ್‌ಬುಕ್ 2026' (SIPRI Yearbook 2026) ವರದಿಯ ಪ್ರಕಾರ, ಜಗತ್ತಿನ ಪ್ರಮುಖ ರಾಷ್ಟ್ರಗಳು ಈಗ "ಪರಮಾಣು ಅಸ್ತ್ರಗಳನ್ನು ರಾಷ್ಟ್ರೀಯ ಶಕ್ತಿಯ ಸಾಧನಗಳಾಗಿ ಹೆಚ್ಚೆಚ್ಚು ಅವಲಂಬಿಸುತ್ತಿವೆ" ಎಂದು ಹೇಳಿದೆ.

ಭಾರತದಿಂದ 12, ಚೀನಾದಿಂದ 34 ಪರಮಾಣು ಸಿಡಿತಲೆಗಳ ನಿಯೋಜನೆ

ಸಿಪ್ರಿ ವರದಿಯ ದತ್ತಾಂಶಗಳ ಪ್ರಕಾರ, ಭಾರತವು 2025 ರ ಸಾಲಿನಲ್ಲಿ ಮೊದಲ ಬಾರಿಗೆ 12 ಪರಮಾಣು ಸಿಡಿತಲೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಇದೇ ಅವಧಿಯಲ್ಲಿ ಭಾರತದ ನೆರೆರಾಷ್ಟ್ರ ಚೀನಾ ತನ್ನ ನಿಯೋಜಿತ ಪರಮಾಣು ಸಿಡಿತಲೆಗಳ ಸಂಖ್ಯೆಯನ್ನು 24 ರಿಂದ 34 ಕ್ಕೆ ಹೆಚ್ಚಿಸಿಕೊಂಡಿದೆ. ಸಿಪ್ರಿ ಇಯರ್‌ಬುಕ್ 2026 ರಲ್ಲಿ ನೀಡಲಾಗಿರುವ ಈ ದತ್ತಾಂಶಗಳು ಹೋದ ವರ್ಷದ (2025) ಪರಮಾಣು ದಾಸ್ತಾನು ಮತ್ತು ಜಾಗತಿಕ ಸ್ಥಿತಿಗತಿಗಳನ್ನು ಮೌಲ್ಯಮಾಪನ ಮಾಡಿ ಸಿದ್ಧಪಡಿಸಿದ್ದಾಗಿದೆ. ಭಾರತದ ಪರಮಾಣು ಇತಿಹಾಸದಲ್ಲಿ ಈವರೆಗೆ ಬಹುಪಾಲು ಸಿಡಿತಲೆಗಳನ್ನು ಕೇವಲ ದಾಸ್ತಾನು (Stockpile) ರೂಪದಲ್ಲಿ ಇಡಲಾಗುತ್ತಿತ್ತು, ಆದರೆ ಇಷ್ಟೊಂದು ಪ್ರಮಾಣದ ಸಿಡಿತಲೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿರುವುದನ್ನು ಸಿಪ್ರಿ ವರದಿ ತೋರಿಸುತ್ತಿರುವುದು ಇದೇ ಮೊದಲು. ಆದರೆ, ಭಾರತವು ಯಾವ ಸಂದರ್ಭದಲ್ಲಿ ಅಥವಾ ಯಾವ ಲಾಂಚ್ ಸಿಸ್ಟಮ್‌ಗಳ ಜೊತೆಗೆ ಇವುಗಳನ್ನು ನಿಯೋಜಿಸಿದೆ ಎಂಬುದನ್ನು ವರದಿ ನಿಖರವಾಗಿ ಉಲ್ಲೇಖಿಸಿಲ್ಲ.

ಜಾಗತಿಕ ಪರಮಾಣು ಅಸ್ತ್ರಗಳ ಸ್ಥಿತಿಗತಿ: ರಷ್ಯಾ, ಅಮೆರಿಕ ಮುಂಚೂಣಿಯಲ್ಲಿ

ವಿಶ್ವದಾದ್ಯಂತ ಸದ್ಯ ಒಟ್ಟು 9 ದೇಶಗಳು ಪರಮಾಣು ಅಸ್ತ್ರಗಳನ್ನು ಹೊಂದಿವೆ ಎಂದು ಸಿಪ್ರಿ ಪಟ್ಟಿ ಮಾಡಿದೆ. ಅವುಗಳೆಂದರೆ: ಅಮೆರಿಕ (US), ರಷ್ಯಾ, ಬ್ರಿಟನ್ (UK), ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಉತ್ತರ ಕೊರಿಯಾ ಮತ್ತು ಇಸ್ರೇಲ್. ಜನವರಿ 2026 ರ ವೇಳೆಗೆ ಜಗತ್ತಿನಾದ್ಯಂತ ಅಂದಾಜು 12,187 ಪರಮಾಣು ಸಿಡಿತಲೆಗಳಿದ್ದು, ಇವುಗಳಲ್ಲಿ ಸುಮಾರು 9,745 ಸಿಡಿತಲೆಗಳು ಸಂಭಾವ್ಯ ಬಳಕೆಗಾಗಿ ಮಿಲಿಟರಿ ಶೇಖರಣೆಯಲ್ಲಿವೆ.

ವಿಶ್ವದಾದ್ಯಂತ ಸುಮಾರು 4,012 ಪರಮಾಣು ಸಿಡಿತಲೆಗಳನ್ನು ಈಗಾಗಲೇ ಕ್ಷಿಪಣಿಗಳು ಮತ್ತು ಯುದ್ಧ ವಿಮಾನಗಳೊಂದಿಗೆ ನಿಯೋಜಿಸಲಾಗಿದೆ. ಇವುಗಳಲ್ಲಿ 2,100 ರಿಂದ 2,200 ರಷ್ಟು ಸಿಡಿತಲೆಗಳನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೇಲೆ ಅತ್ಯಂತ ಹೆಚ್ಚಿನ ಕಾರ್ಯಾಚರಣೆಯ ಸನ್ನದ್ಧ ಸ್ಥಿತಿಯಲ್ಲಿ (High Operational Alert) ಇರಿಸಲಾಗಿದೆ.

ಯಾವ ದೇಶದ ಬಳಿ ಎಷ್ಟು ನಿಯೋಜಿತ ಸಿಡಿತಲೆಗಳಿವೆ?

ಈ ಸನ್ನದ್ಧ ಸ್ಥಿತಿಯಲ್ಲಿರುವ ಬಹುತೇಕ ಸಿಡಿತಲೆಗಳು ರಷ್ಯಾ (1,796 ಸಿಡಿತಲೆಗಳು) ಮತ್ತು ಅಮೆರಿಕ (1,770 ಸಿಡಿತಲೆಗಳು) ದೇಶಗಳಿಗೆ ಸೇರಿವೆ. ಮೂರನೇ ಸ್ಥಾನದಲ್ಲಿ ಫ್ರಾನ್ಸ್ (280 ಸಿಡಿತಲೆಗಳು) ಮತ್ತು ನಂತರದ ಸ್ಥಾನದಲ್ಲಿ ಬ್ರಿಟನ್ (120 ಸಿಡಿತಲೆಗಳು) ಇವೆ. ಆದರೆ, ಈಗ ಶಾಂತಿಕಾಲದಲ್ಲೂ ಚೀನಾ ಮತ್ತು ಭಾರತ ದೇಶಗಳು ಕ್ಷಿಪಣಿಗಳ ಮೇಲೆ ಅಲ್ಪ ಸಂಖ್ಯೆಯ ಸಿಡಿತಲೆಗಳನ್ನು ನಿಯೋಜಿಸಲು ಆರಂಭಿಸಿರಬಹುದು ಎಂದು ವರದಿ ಅಂದಾಜಿಸಿದೆ.

2025ರ ಭಾರತ-ಪಾಕಿಸ್ತಾನ ಯುದ್ಧ ಮತ್ತು ಭಾರತದ ಪರಮಾಣು ತಂತ್ರಗಾರಿಕೆ

ವರದಿಯ ಪ್ರಕಾರ, ಮೇ 2025 ರಲ್ಲಿ ಎರಡು ಪರಮಾಣು ಸಜ್ಜಿತ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಕಾಲ ಸಂಕ್ಷಿಪ್ತ ಸೈನಿಕ ಸಂಘರ್ಷ/ಯುದ್ಧ ನಡೆದಿತ್ತು. ಈ ವೇಳೆ ಪಾಕಿಸ್ತಾನವು ಬ್ಲ್ಯಾಕ್‌ಮೇಲ್ ತಂತ್ರವಾಗಿ ತನ್ನ ಪರಮಾಣು ಸಿಡಿತಲೆಗಳನ್ನು ಬಳಸಲು ಮುಂದಾದಾಗ, ಭಾರತವು ಅದರ ಪರಮಾಣು ಬೆದರಿಕೆಯನ್ನು ಸಮರ್ಥವಾಗಿ ಮೆಟ್ಟಿ ನಿಂತು ಪ್ರತ್ಯುತ್ತರ ನೀಡಿತ್ತು. "ಭಾರತ ಮತ್ತು ಪಾಕಿಸ್ತಾನದ ನಡುವಿನ ಈ ಸಂಕ್ಷಿಪ್ತ ಸಶಸ್ತ್ರ ಸಂಘರ್ಷದ ಸಮಯದಲ್ಲಿ, ಭಾರತವು ಪರಮಾಣು ಸಂಬಂಧಿತ ಪಾತ್ರವನ್ನು ಹೊಂದಿರಬಹುದಾದ ಪಾಕಿಸ್ತಾನದ ವಾಯುಪಡೆ ಮತ್ತು ಕ್ಷಿಪಣಿ ನೆಲೆಗಳ ಮೇಲೆ ದಾಳಿ ನಡೆಸಿತ್ತು. ಆದರೆ ಉಭಯ ದೇಶಗಳು ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ (Escalation) ಎಚ್ಚರಿಕೆ ವಹಿಸಿದ್ದವು" ಎಂದು ಸಿಪ್ರಿ ವಿಶ್ಲೇಷಿಸಿದೆ. ಆದರೆ, ಇಂತಹ ಘಟನೆಗಳು ಜಾಗತಿಕ ಪರಮಾಣು ವಿರೋಧಿ ಧೋರಣೆಗೆ (Nuclear Deterrence Logic) ದೊಡ್ಡ ಸವಾಲೊಡ್ಡುತ್ತಿವೆ ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಭಾರತ ಮತ್ತು ಪಾಕಿಸ್ತಾನದ ಮುಂದಿನ ನಡೆಗಳೇನು?

ಭಾರತವು 2025 ರ ಸಾಲಿನಲ್ಲಿ ತನ್ನ ಪರಮಾಣು ಶಸ್ತ್ರಾಗಾರವನ್ನು ಮತ್ತಷ್ಟು ವಿಸ್ತರಿಸಿರಬಹುದು ಮತ್ತು ಹೊಸ ಮಾದರಿಯ ಪರಮಾಣು ವಿತರಣಾ ವ್ಯವಸ್ಥೆಗಳನ್ನು (Nuclear-delivery systems) ಅಭಿವೃದ್ಧಿಪಡಿಸುವುದನ್ನು ಮುಂದುವರಿಸಿದೆ ಎಂದು ಸಿಪ್ರಿ ಅಭಿಪ್ರಾಯಪಟ್ಟಿದೆ. ಪ್ರಮುಖವಾಗಿ ಇಡೀ ಚೀನಾದಾದ್ಯಂತ ಇರುವ ಗುರಿಗಳನ್ನು ತಲುಪಬಲ್ಲ ದೀರ್ಘ ವ್ಯಾಪ್ತಿಯ (Long-range) ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವತ್ತ ಭಾರತ ಗಮನ ಹರಿಸುತ್ತಿದೆ.

ಮತ್ತೊಂದೆಡೆ, ನೆರೆರಾಷ್ಟ್ರ ಪಾಕಿಸ್ತಾನವು ಸದ್ಯಕ್ಕೆ ಯಾವುದೇ ಪರಮಾಣು ಸಿಡಿತಲೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿಲ್ಲ ಎಂದು ವರದಿ ಸೂಚಿಸಿದೆ. ಆದರೆ, ಪಾಕಿಸ್ತಾನವು 2025 ರಲ್ಲಿ ಭಾರಿ ಪ್ರಮಾಣದಲ್ಲಿ ವಿಕಿರಣಶೀಲ ವಸ್ತುಗಳನ್ನು (Fissile Material) ಸಂಗ್ರಹಿಸುತ್ತಿದ್ದು, ಇದು ಮುಂಬರುವ ದಶಕದಲ್ಲಿ ಅದು ತನ್ನ ಪರಮಾಣು ಶಸ್ತ್ರಾಗಾರವನ್ನು ಗಣನೀಯವಾಗಿ ವಿಸ್ತರಿಸುವ ಸೂಚನೆಯಾಗಿದೆ ಎಂದು ಸಿಪ್ರಿ ವರದಿಯಲ್ಲಿ ಎಚ್ಚರಿಸಲಾಗಿದೆ.