ಚಾಣಕ್ಯನ ಯುದ್ಧತಂತ್ರ ಅನುಸರಿಸಿ, ಮೋದಿ ಸರ್ಕಾರ ಪಾಕಿಸ್ತಾನವನ್ನು ದುರ್ಬಲಗೊಳಿಸುತ್ತಿದೆ. ಆರ್ಥಿಕ ಸಂಕಷ್ಟ, ಇಂಧನ ಕೊರತೆ, ಚೀನಾದ ಬೆಂಬಲ ಕೊರತೆಗಳಿಂದ ಪಾಕಿಸ್ತಾನ ದುರ್ಬಲವಾಗಿದೆ. ಸಿಂಧೂ ಒಪ್ಪಂದ ರದ್ದತಿಯಿಂದ ನೀರಿನ ಸಮಸ್ಯೆಯೂ ಸೃಷ್ಟಿಯಾಗಿದೆ. ಭಾರತ ಯುದ್ಧಕ್ಕೆ ಹೊರಡದೆ, ಶತ್ರುವನ್ನು ಆರ್ಥಿಕವಾಗಿ, ರಾಜತಾಂತ್ರಿಕವಾಗಿ ಮತ್ತು ಮಿಲಿಟರಿಯಾಗಿ ಹೊಡೆಯಲು ಸಜ್ಜಾಗಿದೆ.
ಬೆಂಗಳೂರು (ಮೇ.3): ಶತ್ರುಗಳನ್ನು ಯುದ್ಧದಲ್ಲಿ ಸೋಲಿಸೋದು ಹೇಗೆ? ಇದಕ್ಕೆ ಇದಮಿತ್ತಂ ಅನ್ನೋ ಮಾರ್ಗಗಳಿಲ್ಲ. ಹೀಗೆ ಮಾಡಿದ್ರೆ ಹೀಗೇ ಆಗುತ್ತೆ ಅನ್ನೋ ಲೆಕ್ಕಚಾರಗಳಿಲ್ಲ. ಒಂದೊಂದು ದೇಶದ್ದು ಒಂದೊಂದು ತಂತ್ರ. ಇಸ್ರೇಲ್, ಅಮೆರಿಕ ಪಾಲಿಸೋ ತಂತ್ರಗಳನ್ನೇ ಭಾರತ ಪಾಲಿಸಬೇಕಂತಿಲ್ಲ. ಶತ್ರುವನ್ನು ಸಂಪೂರ್ಣವಾಗಿ ಮಟ್ಟ ಹಾಕಬೇಕು. ಆತ ಮತ್ತೆ ಉಸಿರೆತ್ತದಂತೆ ಮಾಡಬೇಕು ಅನ್ನೋದು ಎಲ್ಲದರ ಹಿಂದಿನ ಉದ್ದೇಶ.
ಪಹಲ್ಗಾಮ್ ದಾಳಿಯಾಗಿಸ 10 ದಿನಗಳಾಯಿತು. ಭಾರತ ತನ್ನ ಸೇನೆಯನ್ನು ಬಳಸಿ ಕಾರ್ಯಾಚರಣೆ ಮಾಡಲು ಅನುಮತಿ ನೀಡಿದೆ.ಹೀಗೊಂದು ಕಾರ್ಯಾಚರಣೆ ಮಾಡ್ತಿದ್ದೇವೆ ಅಂತಾ ಸೇನೆಯಿಂದಲೂ ಯಾವುದೇ ಸ್ಪಷ್ಟನೆಗಳಿಲ್ಲ. ಇನ್ನೊಂದೆಡೆ ಕೇಂದ್ರ ಸರ್ಕಾರ ಮಾತ್ರ ಯಾವೆಲ್ಲಾ ವೇದಿಕೆಯಲ್ಲಿ ಪಾಕಿಸ್ತಾನವನ್ನು ಮಟ್ಟಹಾಕಬೇಕೋ ಅದೆಲ್ಲವನ್ನೂ ಮಾಡುತ್ತಿದೆ. ಇದೆಲ್ಲವನ್ನು ನೋಡಿದರೆ, 2 ಸಾವಿರ ವರ್ಷಗಳ ಹಿಂದೆ ಚಾಣಕ್ಯ ಬೋಧಿಸಿದ್ದ ಯುದ್ಧತಂತ್ರಗಳನ್ನೇ ಮೋದಿ ಸರ್ಕಾರ ಪಾಲಿಸುತ್ತಿದ್ಯಾ ಅನ್ನೋ ಅನುಮಾನ ಮೂಡುತ್ತದೆ. ಅಷ್ಟಕ್ಕೂ ಚಾಣಕ್ಯ ಶತ್ರುವನ್ನು ಮಣಿಸಲು ಹೇಳಿದ್ದ ಮೂರು ಮಾತುಗಳೇನೆಂದರೆ ಡಿಲೇ, ಡ್ರೇನ್, ಡಾಮಿನೇಟ್. ಅಂದರೆ ವಿಳಂಬ ಮಾಡಿ, ಸಂಪತ್ತು ಬರಿದಾಗುವಂತೆ ಮಾಡಿ, ನಂತರ ಪ್ರಾಬಲ್ಯ ಸಾಧಿಸಿ ಅನ್ನೋದು.
ಭಾರತದ ಪ್ರಾಚೀನ ಯುದ್ಧ ತಂತ್ರವು ಈಗ ನಮ್ಮ ಶತ್ರುಗಳ ರಕ್ತಹಿಂಡುತ್ತಿರುವುದು ಗೊತ್ತಾಗಿದೆ. ಮೋದಿ 2,000 ವರ್ಷಗಳಷ್ಟು ಹಳೆಯದಾದ ಧಾರ್ಮಿಕ ರಾಷ್ಟ್ರಕೌಶಲ್ಯವನ್ನು ಬಳಸಿಕೊಂಡು ಶತ್ರುಗಳನ್ನು ಗುಂಡು ಹಾರಿಸದೆಯೇ ಬಡಿಯುವ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನ ಕುಸಿಯುತ್ತಿದೆ. ಚೀನಾ ಹತಾಶವಾಗಿದೆ. ಭಾರತ ತನ್ನ ತಂತ್ರಗಳಿಂದಲೇ ಪ್ರವರ್ಧಮಾನಕ್ಕೆ ಬರುತ್ತಿದೆ.
ಚಾಣಕ್ಯನ ಕಾಲಾತೀತ ಸಿದ್ಧಾಂತವೊಂದಿದೆ. "ನೀವು ಹಾವನ್ನು ಕೊಲ್ಲುವ ಮೊದಲು, ಅದು ತನ್ನ ವಿಷವನ್ನು ಖಾಲಿ ಮಾಡಿದೆ ಎಂದು ಖಚಿತಪಡಿಸಿಕೊಳ್ಳಿ." ಅನ್ನೋದು. ಈಗ ಮೋದಿ ಕೂಡ ಅದನ್ನೇ ಮಾಡುತ್ತಿದ್ದಾರೆ. ಪಾಕಿಸ್ತಾನದ ಇಂಧನ, ನಿಧಿ ಮತ್ತು ಭಯವನ್ನು ಸುಡುತ್ತಿದ್ದಾರೆ. ನಂತರ ತನ್ನದೇ ಆದ ರೀತಿಯಲ್ಲಿ ಪಾಕಿಸ್ತಾನವನ್ನು ಮುಗಿಸುವ ಹೊಂಚು ಹಾಕುತ್ತಿದ್ದಾರೆ.
ಪಾಕಿಸ್ತಾನ ಪ್ರತಿದಿನ ತನ್ನ ಸೇನಾ ವಾಹನಗಳನ್ನು ಸಾಗಿಸಲು ಸಾವಿರಾಟು ಲೀಟರ್ ಪೆಟ್ರೋಲ್, ಸೈನಿಕರು ಹಾಗೂ ಮದ್ದುಗುಂಡುಗಳನ್ನು ಸಿದ್ದಮಾಡಿಕೊಳ್ಳುತ್ತಿದೆ. ಆದರೆ, ಪಾಕಿಸ್ತಾನದ ಬಳಿ ಅಕ್ಷರಶಃ ಹಣ, ಇಂಧನ ಕೊನೆಗೆ ವಿದೇಶಿ ಮೀಸಲು ಕೂಡ ಇಲ್ಲ. ಐಎಂಎಫ್ ಬಳಿ 180 ಮಿಲಿಯನ್ ಯುಎಸ್ ಡಾಲರ್‌ಗಾಗಿ ಬೇಡಿಕೊಳ್ಳುತ್ತಿದೆ. ಆದರೆ, ಸ್ವಚ್ಛ ಭಾರತ ಮಿಷನ್‌ಗೆ ಭಾರತ ಇದಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡುತ್ತಿದೆ. ವಿದ್ಯುತ್ ಕೊರತೆ, ಇಂಧನ ಸರಪಳಿ ಕೂಡ ಸರಿಯಾಗಿಲ್ಲ. 5 ದಿನ ಯುದ್ಧವಾದರೆ, ವಿದೇಶ ಸಹಾಯಕ್ಕೆ ಬರದ ಹೊರತು ಪಾಕಿಸ್ತಾನ ಎದ್ದೇಳುವ ಲಕ್ಷಣಗಳೇ ಇಲ್ಲ.
ಇದೆಲ್ಲದರ ನಡುವೆ ಸಿಂಧೂ ಜಲ ಒಪ್ಪಂದವನ್ನು ಭಾರತ ರದ್ದು ಮಾಡಿದೆ. ಈಗ ಭಾರತ ಪಾಕಿಸ್ತಾನಕ್ಕೆ ಯಾವುದೇ ಸೂಚನೆಗಳನ್ನು ನೀಡದೇ ನೀರು ಬಿಡುತ್ತಿದೆ. ದಿನಗಳು ಹೀಗೆ ಮುಂದುವರಿದಲ್ಲಿ ಚಹಾ ಮಾಡಲು ಕೂಡ ಪಾಕಿಸ್ತಾನದ ಬಳಿ ನೀರು ಇರೋದಿಲ್ಲ.
ಇನ್ನು ಪಾಕಿಸ್ತಾನಕ್ಕೆ ಚೀನಾ ನೀಡಿರುವ ಎಲ್ಲಾ ಯುದ್ಧವಿಮಾನಗಳು ಹಳೆಯ ಕಾಲದವು. ಜೆಎಫ್-17 ತನ್ನಲ್ಲಿದೆ ಎನ್ನುತ್ತಿದ್ದರು. ಅದು ಭಾರತದ ಮಿಗ್ ವಿಮಾನಕ್ಕಿಂತ ಕಡೆಯಾಗಿದೆ. ಇನ್ನು ಕ್ಷಿಪಣಿಗಳ ವಿಚಾರ ಕೇಳೋದೇ ಬೇಡ.
ಇನ್ನೊಂದೆಡೆ ಚೀನಾ ಕೂಡ ಪಾಕಿಸ್ತಾನಕ್ಕೆ ಸಹಾಯ ಮಾಡುವ ಯಾವ ಲಕ್ಷಣದಲ್ಲೂ ಇಲ್ಲ. ಅಮೆರಿಕದಿಂದ ಆರ್ಥಿಕ ಹೊಡೆತ ತಿನ್ನುತ್ತಿರುವ ಚೀನಾಕ್ಕೆ ಈಗ ದೊಡ್ಡ ಮಾರುಕಟ್ಟೆಯಾಗಿ ಕಾಣುತ್ತಿರುವುದು ಭಾರತ ಮಾತ್ರ. ಪಾಕಿಸ್ತಾನಕ್ಕೆ ಹಿಂಬಾಗಿಲ ಸಹಾಯ ಮಾಡಿದರೂ, ನೇರವಾಗಿ ಭಾರತದೊಂದಿಗೆ ಮಾಡುವ ಯುದ್ಧ ತನಗೆ ದೊಡ್ಡ ಸಮಸ್ಯೆ ನೀಡುತ್ತದೆ ಅನ್ನೋದು ಚೀನಾಕ್ಕೆ ಗೊತ್ತಿದೆ.
ಮೊದಲಿಗೆ ಪಾಕ್ ಜೊತೆ ಯುದ್ಧ, ಯುದ್ಧ ಅನ್ನೋ ಹೆದರಿಕೆಯಲ್ಲಿಯೇ ಇಡುವುದು..ಇದೇ ಭಯದಲ್ಲಿ ಪಾಕಿಸ್ತಾನವನ್ನು ಎಲ್ಲಾ ರೀತಿಯಲ್ಲಿ ಬರಿದಾಗಿಸುವುದು, ಬಳಿಕ ಪಾಕ್ ಮೇಲೆ ಪ್ರಾಬಲ್ಯ ಸಾಧಿಸುವ ಇರಾದೆಯಲ್ಲಿ ಭಾರತವಿದೆ. ಅದಕ್ಕಾಗಿಯೇ ಪಾಕ್‌ಅನ್ನು ಭಾರತ ಈಗ ಅಕ್ಷರಶಃ ಏಕಾಂಗಿಯಾಗಿಸಿದೆ.
ಇನ್ನು ಚಾಣಕ್ಯನ ಯುದ್ಧತಂತ್ರ ಮಾತ್ರವಲ್ಲ ಭಾರತದಲ್ಲಿ ಅಳಿದ ಅನೇಕ ಹಿಂದೂ ರಾಜಮನೆತನಗಳು ಇದೇ ತಂತ್ರವನ್ನು ಉಪಯೋಗಿಸಿದ್ದವು. ಈಗ ಅದನ್ನೇ ಮೋದಿ ಸರ್ಕಾರ ಪ್ರಯೋಗಿಸುತ್ತಿದ್ದಾರೆ. ಭಾರತ ಯುದ್ಧಕ್ಕೆ ಆತುರಪಡುತ್ತಿಲ್ಲ. ಶತ್ರು ಕುಸಿಯುವವರೆಗೆ ನಾವು ಕಾಯುತ್ತಿದ್ದೇವೆ. ಬಳಿಕ ಆರ್ಥಿಕವಾಗಿ, ರಾಜತಾಂತ್ರಿಕವಾಗಿ ಮತ್ತು ಮಿಲಿಟರಿಯಾಗಿ ಹೊಡೆಯುವ ಪ್ಲ್ಯಾನ್ ಸಿದ್ದವಾಗಿದೆ. ಶೂನ್ಯ ನಷ್ಟ, ಗರಿಷ್ಠ ಲಾಭ ಇದರಲ್ಲಿದೆ ಎನ್ನುವುದು ಸರ್ಕಾರಕ್ಕೂ ಅರಿವಾಗಿದೆ.


