ಆಗಸ್ಟ್ 15, 2025 ರಂದು ಭಾರತವು ತನ್ನ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಪ್ರತಿ ಬಾರಿಯಂತೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಥೀಮ್‌ ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಅದೇನು ಡಿಟೇಲ್ ಇಲ್ಲಿದೆ.

ಪ್ರತಿವರ್ಷದಂತೆ ಈ ವರ್ಷವೂ ಸ್ವಾತಂತ್ರ ದಿನಾಚರಣೆ ಆಚರಿಸಲು ದೇಶ ಸಜ್ಜುಗೊಳ್ಳುತ್ತಿದೆ. ಈ ವರ್ಷ ಆಗಸ್ಟ್ 15 ರಂದು ಭಾರತವು ತನ್ನ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದೆ. ಆಧುನಿಕ ಭಾರತದ ರಾಜಕೀಯಕ್ಕೆ ಬಂದಾಗ ಈ ದಿನವು ಬಹುಶಃ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ. ಬ್ರಿಟಿಷರ 190 ವರ್ಷಗಳ ಕ್ರೂರ ವಸಾಹತುಶಾಹಿಯ ನಂತರ, ಭಾರತವು 1975 ರ ಆಗಸ್ಟ್ 15 ರಂದು ಸ್ವಾತಂತ್ರ್ಯವನ್ನು ಗಳಿಸಿತು.

ದೇಶಾದ್ಯಂತ ಈ ದಿನವನ್ನು ಅತ್ಯಂತ ಸಡಗರ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಗೋಡೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಂದ ಈ ಸಂಪ್ರದಾಯ ಪ್ರಾರಂಭವಾಯ್ತು.

ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಕ್ರೂರ ದಾಳಿಯ ನಂತರದ ಮೊದಲ ಸ್ವಾತಂತ್ರೋತ್ಸವ ಇದಾಗಿದ್ದು, ಈ ಸ್ವಾತಂತ್ರ್ಯ ದಿನಾಚರಣೆಯಂದು ದೇಶವೂ ಭಯೋತ್ಪಾದನೆಯ ವಿರುದ್ಧ ಮಹತ್ವದ ಸಂದೇಶವನ್ನು ನೀಡುವ ನಿರೀಕ್ಷೆಯಿದೆ.

ಹಾಗಿದ್ದರೆ 2025 ರ ಸ್ವಾತಂತ್ರ್ಯ ದಿನದ ಥೀಮ್ ಏನು?

ಪ್ರತಿ ವರ್ಷವೂ ರಕ್ಷಣಾ ಸಚಿವಾಲಯವು myGov ಸಹಯೋಗದೊಂದಿಗೆ ಸ್ವಾತಂತ್ರ್ಯ ದಿನದ ಥೀಮ್ ಅನ್ನು ಪ್ರಕಟಿಸುತ್ತದೆ. ಹಾಗೆಯೇ ಈ ವರ್ಷವೂ ಸ್ವಾತಂತ್ರ್ಯದ ಥೀಮ್ ಅನ್ನು ಬಿಡುಗಡೆ ಮಾಡಿದೆ. ಈ ವರ್ಷದ ಥೀಮ್ 'ಸ್ವಾತಂತ್ರ್ಯವನ್ನು ಗೌರವಿಸುವುದು, ಭವಿಷ್ಯವನ್ನು ಪ್ರೇರೇಪಿಸುವುದು' ಆಗಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಕೇವಲ ಕೆಲ ದಿನಗಳು ಬಾಕಿ ಇರುವ ಈ ಸಂದರ್ಭದಲ್ಲಿ ಜಗತ್ತಿನ ಕೆಲ ಮಹಾನ್ ನಾಯಕರು ಸ್ವಾತಂತ್ರ್ಯದ ಬಗ್ಗೆ ನೀಡಿದ ಉಲ್ಲೇಖಗಳು(ಕೋಟ್‌ಗಳು) ಹೀಗಿವೆ.

  • ಸ್ವಾತಂತ್ರ್ಯವನ್ನು ದಬ್ಬಾಳಿಕೆ ಮಾಡುವವರು ಎಂದಿಗೂ ಸ್ವಯಂಪ್ರೇರಣೆಯಿಂದ ನೀಡುವುದಿಲ್ಲ ಅದನ್ನು ತುಳಿತಕ್ಕೊಳಗಾದವರು ಬೇಡಬೇಕು: ಮಾರ್ಟಿನ್ ಲೂಥರ್ ಕಿಂಗ್, ಜೂನಿಯರ್
  • ತಪ್ಪು ಮಾಡುವ ಮತ್ತು ಪಾಪ ಮಾಡುವ ಸ್ವಾತಂತ್ರ್ಯವಿಲ್ಲದಿದ್ದರೆ ಅದನ್ನು ಸ್ವಾತಂತ್ರ್ಯ ಎನ್ನಲಾಗದು : ಮಹಾತ್ಮ ಗಾಂಧಿ
  • ಜೀವನಪೂರ್ತಿ ಜೈಲಿನಲ್ಲಿ ಕಳೆಯುವುದಕ್ಕಿಂತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಾ ಸಾಯುವುದು ಉತ್ತಮ: ಬಾಬ್ ಮಾರ್ಲಿ
  • ಕ್ರೌರ್ಯದ ಬಲ, ಎಷ್ಟೇ ಸಧೃಡವಾಗಿದ್ದರು ಸ್ವಾತಂತ್ರ್ಯಕ್ಕಾಗಿ ಮಾನವನ ಮೂಲಭೂತ ಬಯಕೆಯನ್ನು ಎಂದಿಗೂ ನಿಗ್ರಹಿಸಲು ಸಾಧ್ಯವಿಲ್ಲ: ದಲೈ ಲಾಮಾ
  • ಸ್ವಾತಂತ್ರ್ಯದ ಇದೆ ಎಂದು ನೀವು ಭಾವಿಸಿದರೆ, ವಿಷಯಗಳನ್ನು ಬದಲಾಯಿಸಲು ಅವಕಾಶಗಳಿವೆ ಎಂದರ್ಥ ಉತ್ತಮ ಜಗತ್ತನ್ನು ನಿರ್ಮಿಸಲು ನೀವು ಕೊಡುಗೆ ನೀಡುವ ಅವಕಾಶವಿದೆ. ಇದರ ಆಯ್ಕೆ ನಿಮ್ಮದು: ನೋಮ್ ಚೋಮ್ಸ್ಕಿ