ಅಮೆರಿಕ ಗೂಗಲ್ ಆಫೀಸ್‌ನಲ್ಲಿ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ ಯುವಕ, ಅಮೆರಿಕ ಭಾರತ ಹೀಗೆ ಒದ್ದಾಡುತ್ತಿದ್ದ ಯುವಕ ಇದೀಗ 402ನೇ ರ್ಯಾಂಕ್ ಪಡೆದು ಕನಸು ನನಸು ಮಾಡಿದ್ದಾರೆ. 

ಲಖನೌ (ಮಾ.07) ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವುದು ಸುಲಭದ ಮಾತಲ್ಲ. ಕಠಿಣ ಪರಿಶ್ರಮ, ಸತತ ಓದು, ಮಾಹಿತಿ ಸಂಗ್ರಹ, ಅಧ್ಯಯನ ಅತ್ಯಗತ್ಯ. ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಬೇಕು ಅನ್ನೋ ಹಠಕ್ಕೆ ಬಿದ್ದ ಯುವಕ ಭಾರತ ಹಾಗೂ ಅಮೆರಿಕ ನಡುವೆ ಹಗ್ಗಜಗ್ಗಾಟ ನಡೆಸಿ ಕೊನೆಗೂ ಕನಸು ನನಸು ಮಾಡಿಕೊಂಡಿದ್ದಾರೆ.ಗೂಗಲ್ ಕಂಪನಿ ಅಮೆರಿಕದಲ್ಲಿ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 402ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾನೆ. ಲಖನೌ ಮೂಲದ 32 ವರ್ಷದ ಪಿಯೂಷ್ ಕಪೂರ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಗೂಗಲ್ ಕಂಪನಿಯಲ್ಲಿ ಪಿಯೂಷ್ ಕಪೂರ್ ಉನ್ನತ ಹುದ್ದೆಯಲ್ಲಿದ್ದಾನೆ. ಆದರೆ ಪಿಯೂಷ್‌ಗೆ ಭಾರತೀಯ ನಾಗರೀಕ ಸೇವೆಗೆ ಸೇರಬೇಕೆಂಬುದು ಕನಸಾಗಿತ್ತು. ಇದಕ್ಕಾಗಿ ಕಠಿಣ ಅಧ್ಯಯನ ಹಾಗೂ ಸತತ ಪರಿಶ್ರಮದ ಮೂಲಕ ತನ್ನ ಕನಸು ನನಸು ಮಾಡಿಕೊಂಡಿದ್ದಾನೆ. ಕಚೇರಿ ಕೆಲಸದ ಬಳಿಕ ಪ್ರತಿ ದಿನ 2 ರಿಂದ 3 ಗಂಟೆ ಅಧ್ಯಯನ ಮಾಡುವ ಮೂಲಕ ಸಾಧನೆ ಮಾಡಿದ್ದಾರೆ.

ಜಿಮೇಲ್ ಸೆಕ್ಯೂರಿಟಿ ವಿಭಾಗದಲ್ಲಿ ಎಂಜಿನೀಯರ್

ಪಿಯೂಷ್ ಕಪೂರ್ ಅಮೆರಿಕದ ಮೌಂಟೇನ್ ವ್ಯೂವ್‌ನಲ್ಲಿರುವ ಗೂಗಲ್ ಕಚೇರಿಯಲ್ಲಿ ಎಂಜಿನೀಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೆಮೇಲ್ ಸೆಕ್ಯೂರಿಟಿ ವಿಭಾಗದಲ್ಲಿ ಸಾಫ್ಟ್‌ವೇರ್ ಎಂಜಿನೀಯರ್ ಆಗಿರುವ ಪಿಯೂಷ್ ಕಪೂರ್ ಪ್ರತಿ ದಿನ ಅಧ್ಯಯನ ಮಾಡುವ ಮೂಲಕ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ.

ಐದನೇ ಪ್ರಯತ್ನದಲ್ಲಿ ಯಶಸ್ಸು

ಭಾರತದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆ, ಇತರ ಮಾಹಿತಿಗಳ ಪ್ರಕಟಣಗಳು ಅಮೆರಿಕ ಸಮಯದ ಪ್ರಕಾರ ಸಂಜೆ ವೇಳೆ ಲಭ್ಯವಾಗುತ್ತಿತ್ತು. ಇದರಿಂದ ಪ್ರತಿ ದಿನ ಗೂಗಲ್ ಕೆಲಸ ಮುಗಿಸಿ ಅಧ್ಯಯನದಲ್ಲಿ ತೊಡಗಿದ್ದರು. ಪಿಯೂಷ್ ಕಳೆದ ಕೆಲ ವರ್ಷಗಳಿಂದ ಸತತ ಪ್ರಯತ್ನ ಮಾಡಿದ್ದಾರೆ. ಇದೀಗ ಐದನೇ ಪ್ರಯತ್ನದಲ್ಲಿ ಪಿಯೂಷ್ ಸಾಧನೆ ಮಾಡಿದ್ದಾರೆ.

ಕಾರ್ಪೋರೇಟ್ ಕಂಪನಿಯಲ್ಲಿ ಉತ್ತಮ ವೇತನ ಪಡೆಯುತ್ತಿರುವ ಪಿಯೂಷ್ ಕಪೂರ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಗುರಿಯೊಂದಿಗೆ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಮಾಡಿದ್ದರು. ಭಾರತದ ದೇಶಕ್ಕೆ ಹಾಗೂ ನಾಗರೀಕರ ಸೇವೆಗೆ ಪಣತೊಟ್ಟಿರುವ ಪಿಯೂಷ್ ಪೋಸ್ಟಿಂಗ್ ಬೆನ್ನಲ್ಲೇ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ.