ಭಾರತ ಮತ್ತು ಕೆನಡಾ ನಡುವಿನ ಯುರೇನಿಯಂ ಪೂರೈಕೆ ಮತ್ತು ಪರಮಾಣು ತಂತ್ರಜ್ಞಾನ ಸಹಕಾರ ಒಪ್ಪಂದಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಒಪ್ಪಂದವು ಭಾರತಕ್ಕೆ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಹೇಳಿದೆ.
ಇಸ್ಲಾಮಾಬಾದ್ (ಮಾ.5): ಭಾರತ ಮತ್ತು ಕೆನಡಾ ನಡುವೆ ಇತ್ತೀಚೆಗೆ ಏರ್ಪಟ್ಟಿರುವ ಯುರೇನಿಯಂ ಪೂರೈಕೆ ಒಪ್ಪಂದ ಹಾಗೂ ಪರಮಾಣು ತಂತ್ರಜ್ಞಾನ ಸಹಕಾರವನ್ನು ಪಾಕಿಸ್ತಾನ ಪ್ರಶ್ನಿಸಿದೆ. ಈ ಒಪ್ಪಂದವು ಅಂತರಾಷ್ಟ್ರೀಯ ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಇದು ಭಾರತಕ್ಕೆ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪಾಕಿಸ್ತಾನ ಗಂಭೀರ ಆರೋಪ ಮಾಡಿದೆ.
ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರ ನವದೆಹಲಿ ಭೇಟಿಯ ವೇಳೆ ಭಾರತದೊಂದಿಗೆ ನಾಗರಿಕ ಪರಮಾಣು ಸಹಕಾರಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಅನ್ವಯ ಕೆನಡಾ ಭಾರತಕ್ಕೆ ಯುರೇನಿಯಂ ಪೂರೈಸಲಿದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಾಹಿರ್ ಅಂದ್ರಾಬಿ, ಕೆನಡಾ ಭಾರತಕ್ಕೆ ಯುರೇನಿಯಂ ನೀಡೋದನ್ನ ಜಗತ್ತಿನ ಯಾವ ದೇಶಗಳು ತಡೆಯುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ವಿದೇಶಗಳಿಂದ ಯುರೇನಿಯಂ ಲಭ್ಯವಾಗುವುದರಿಂದ ಭಾರತವು ತನ್ನ ದೇಶೀಯ ಯುರೇನಿಯಂ ದಾಸ್ತಾನನ್ನು ನಾಗರಿಕ ಉದ್ದೇಶದ ಬದಲಾಗಿ ಮಿಲಿಟರಿ (ಶಸ್ತ್ರಾಸ್ತ್ರ ತಯಾರಿಕೆ) ಉದ್ದೇಶಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಇದು ದಕ್ಷಿಣ ಏಷ್ಯಾದಲ್ಲಿನ ಕಾರ್ಯತಂತ್ರದ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಭಾರತದ ಪರಮಾಣು ಶಸ್ತ್ರಾಗಾರ ವಿಸ್ತರಣೆಗೆ ವೇಗ ನೀಡಲಿದೆ ಎಂದು ಅವರು ಎಚ್ಚರಿಸಿದ್ದಾರೆ.
1974ರಲ್ಲಿ ಭಾರತ ನಡೆಸಿದ ಪರಮಾಣು ಪರೀಕ್ಷೆಗೆ ಕೆನಡಾ ಶಾಂತಿಯುತ ಉದ್ದೇಶಕ್ಕಾಗಿ ನೀಡಿದ್ದ ರಿಯಾಕ್ಟರ್‌ನ ಪ್ಲುಟೋನಿಯಂ ಬಳಸಲಾಗಿತ್ತು ಎಂಬ ಅಂಶವನ್ನು ಪಾಕಿಸ್ತಾನ ನೆನಪಿಸಿದೆ. ಈ ಘಟನೆಯೇ ವಿಶ್ವದಲ್ಲಿ 'ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್' (NSG) ರಚನೆಗೆ ಕಾರಣವಾಗಿತ್ತು ಎಂಬುದು ಪಾಕ್ ವಾದವಾಗಿದೆ.
ಭಾರತ-ಕೆನಡಾ ನಡುವಿನ ಒಪ್ಪಂದದ ಪ್ರಮುಖ ಅಂಶಗಳು
ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ನಡುವಿನ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು: ಭಾರತದ ನಾಗರಿಕ ಪರಮಾಣು ಇಂಧನ ಕಾರ್ಯಕ್ರಮಕ್ಕಾಗಿ ಕೆನಡಾ 2.6 ಬಿಲಿಯನ್ ಕೆನಡಿಯನ್ ಡಾಲರ್ (ಸುಮಾರು ₹15,000 ಕೋಟಿಗೂ ಅಧಿಕ) ಮೊತ್ತದ ದೀರ್ಘಕಾಲೀನ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ವರ್ಷದ ಅಂತ್ಯದೊಳಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ಪೂರ್ಣಗೊಳಿಸಲು ಮತ್ತು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು 50 ಬಿಲಿಯನ್ ಡಾಲರ್‌ಗೆ ಏರಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ. 'ಸ್ಮಾಲ್ ಮಾಡ್ಯುಲರ್ ರಿಯಾಕ್ಟರ್ಸ್' ಮತ್ತು ಸುಧಾರಿತ ಪರಮಾಣು ರಿಯಾಕ್ಟರ್ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಉಭಯ ದೇಶಗಳು ಸಹಕರಿಸಲಿವೆ.
ಭಾರತದ ಡೀಲ್‌ಗೆ ಪಾಕ್ ಕಳವಳ
ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಪ್ರಕಾರ, ಭಾರತವು ತನ್ನ ಎಲ್ಲಾ ಪರಮಾಣು ಘಟಕಗಳನ್ನು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಿಲ್ಲ. ಇಂತಹ ಸ್ಥಿತಿಯಲ್ಲಿ ಕೆನಡಾವು ಭಾರತಕ್ಕೆ ವಿಶೇಷ ರಿಯಾಯಿತಿ ನೀಡುವುದು ಜಾಗತಿಕ ಅಣ್ವಸ್ತ್ರ ಪ್ರಸರಣ ತಡೆ ಕಾಯ್ದೆಯ (NPT) ಆಶಯಕ್ಕೆ ಧಕ್ಕೆ ತರುತ್ತದೆ ಎಂದು ಪಾಕಿಸ್ತಾನ ಹೇಳಿದೆ. ಆದರೆ, ಈ ಸಹಕಾರವು ಭಾರತದ 'ಶುದ್ಧ ಮತ್ತು ವಿಶ್ವಾಸಾರ್ಹ ಇಂಧನ'ದ ಗುರಿಯನ್ನು ಬೆಂಬಲಿಸುತ್ತದೆ ಎಂದು ಕೆನಡಾ ಸಮರ್ಥಿಸಿಕೊಂಡಿದೆ.


