2023ರಲ್ಲಿ ಕೆನಡಾದ ಟೊರಾಂಟೊ ವಿಮಾನ ನಿಲ್ದಾಣದಲ್ಲಿ ನಡೆದ 20 ಮಿಲಿಯನ್ ಡಾಲರ್ ಮೌಲ್ಯದ ಚಿನ್ನದ ದರೋಡೆ ಪ್ರಕರಣದ ಮುಖ್ಯ ಆರೋಪಿ, ಭಾರತೀಯ ಮೂಲದ ಸಿಮ್ರಾನ್ ಪ್ರೀತ್ ಪನೇಸರ್‌ನನ್ನು ಹಸ್ತಾಂತರಿಸುವಂತೆ ಕೆನಡಾ ಸರ್ಕಾರ ಭಾರತಕ್ಕೆ ಅಧಿಕೃತವಾಗಿ ಮನವಿ ಮಾಡಿದೆ.
ಟೊರಾಂಟೊ: 2023ರಲ್ಲಿ ಕೆನಡಾವನ್ನೇ ಬೆಚ್ಚಿ ಬೀಳಿಸಿದ ಬೃಹತ್ ದರೋಡೆ ಪ್ರಕರಣದ ಆರೋಪಿ ಭಾರತೀಯ ಸಿಮ್ರಾನ್ ಪ್ರೀತ್ ಪನೇಸರ್‌ನನ್ನು ಕೆನಡಾಗೆ ಹಸ್ತಾಂತರ ಮಾಡುವಂತೆ ಭಾರತ ಸರ್ಕಾರಕ್ಕೆ ಕೆನಡಾ ಮನವಿ ಮಾಡಿದೆ. ಭಾರತೀಯ ಮೂಲದ ಈ ಪ್ರೀತ್ ಪನ್ಸೇರ್ 2023ರಲ್ಲಿ ಕೆನಡಾದಲ್ಲಿ ನಡೆದ 20 ಮಿಲಿಯನ್ ಡಾಲರ್ ಮೌಲ್ಯದ ಚಿನ್ನ ದರೋಡೆ ಪ್ರಕರಣದ ಆರೋಪಿಯಾಗಿದ್ದಾನೆ. ಕೆನಡಾ ಇತಿಹಾಸದಲ್ಲೇ ಇದೊಂದು ಬೃಹತ್ ದರೋಡೆ ಪ್ರಕರಣ ಎಂದು ಹೇಳಲಾಗುತ್ತಿದೆ.
ಈ ಪ್ರಕರಣದ ಮುಖ್ಯ ಆರೋಪಿಯಾಗಿರುವ ಸಿಮ್ರಾನ್ ಪ್ರೀತ್ ಪನ್ಸೇರ್‌ನನ್ನು ದೇಶದಿಂದ ಗಡೀಪಾರು ಮಾಡುವಂತೆ ಈಗ ಕೆನಡಾ ಪೊಲೀಸರು ಭಾರತ ಸರ್ಕಾರಕ್ಕೆ ಅಧಿಕೃತ ಮನವಿ ಸಲ್ಲಿಸಿದ್ದಾರೆ. 2023ರ ಎಪ್ರಿಲ್‌ನಲ್ಲಿ ಟೊರಾಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಬೃಹತ್ ದರೋಡೆ ನಡೆದಿತ್ತು. ಈ ದರೋಡೆ ಪ್ರಕರಣದಲ್ಲಿ ಬ್ರಾಂಪ್ಟನ್ ನಿವಾಸಿಯಾಗಿದ್ದ ಹಾಗೂ ಏರ್ ಕೆನಡಾದ ಮಾಜಿ ಉದ್ಯೋಗಿಯಾಗಿದ 33 ವರ್ಷದ ಸಿಮ್ರಾನ್ ಪ್ರೀತ್ ಪನ್ಸೇರ್ ಮುಖ್ಯ ಆರೋಪಿಯಾಗಿದ್ದಾನೆ.
999 ಪರಿಶುದ್ಧತೆಯ ಸುಮಾರು 400 ಕೆಜಿ ಚಿನ್ನದ ತುಂಡುಗಳು ಹಾಗೂ 2.5 ದಶಲಕ್ಷ ಡಾಲರ್ ವಿದೇಶಿ ನಗದನ್ನು ಒಳಗೊಂಡಿದ್ದ ಭಾರಿ ಮೊತ್ತದ ಸರಕನ್ನು ಸ್ಥಳಾಂತರಿಸುವಲ್ಲಿ ಪನೇಸರ್ ನಿರ್ಣಾಯಕ ಪಾತ್ರ ವಹಿಸಿದ್ದಾನೆ ಎಂದು ಕೆನಡಾ ಪೊಲೀಸರು ಆರೋಪಿಸಿದ್ದಾರೆ. ಈ ದರೋಡೆಯ ನಂತರ ಪನೇಸರ್ ಭಾರತಕ್ಕೆ ಪರಾರಿಯಾಗಿದ್ದಾನೆ ಎಂದು ಕೆನಡಾ ಪೊಲೀಸರು ಶಂಕಿಸಿದ್ದು, ಕೆನಡಾದ್ಯಂತ ಬಂಧನ ವಾರೆಂಟ್ ಹಾಗೂ ಲುಕೌಟ್ ನೋಟೀಸ್‌ನ್ನು ಕೆನಡಾ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಸ್ವಿಡ್ಜರ್ಲ್ಯೆಂಡ್‌ನಿಂದ ಟೊರಾಂಟೊದ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಾರಿ ಮೌಲ್ಯದ ಚಿನ್ನದ ಸರಕನ್ನು ವಿಮಾನ ನಿಲ್ದಾಣದ ಸುರಕ್ಷಿತ ದಾಸ್ತಾನು ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಮರು ದಿನ ಈ ಸರಕು ಅಲ್ಲಿಂದ ನಾಪತ್ತೆಯಾಗಿತ್ತು. ಈ ಬೃಹತ್ ದರೋಡೆಗೆ ಪ್ರಾಜೆಕ್ಟ್ 24ಕೆ ಎಂದು ರಹಸ್ಯ ಹೆಸರಿಡಲಾಗಿತ್ತು. ಈ ದರೋಡೆಗ ದೊಡ್ಡ ಮಟ್ಟದಲ್ಲಿ ಸಮನ್ವಯದಿಂದ ನಡೆಸಲಾಗಿದ್ದು ಒಳಗಿನವರು ಹಾಗೂ ಹೊರಗಿನವರಿಬ್ಬರೂ ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಸುಮಾರು ಹತ್ತು ಮಂದಿಯ ವಿರುದ್ಧ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 12 ರಂದು ಟೊರೊಂಟೊ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರ್ಸಲನ್ ಚೌಧರಿ ಎಂದು ಗುರುತಿಸಲಾದ ಪ್ರಮುಖ ಶಂಕಿತನ ಬಂಧನವನ್ನು ಪೀಲ್ ಪೊಲೀಸರು ದೃಢಪಡಿಸಿದ್ದಾರೆ. ಹಾಗೆಯೇ ಪ್ರಮುಖ ಆರೋಪಿಯಾಗಿರುವ ಈ ಸಿಮ್ರಾನ್ ಪ್ರೀತ್ ಪನ್ಸೇರ್ ಪ್ರಸ್ತುತ ಚಂಡೀಗಢದ ಹೊರವಲಯದಲ್ಲಿರುವ ಮೊಹಾಲಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾನೆ ಎಂದು ವರದಿಯಾಗಿತ್ತು. ಇದಾದ ನಂತರ ಜಾರಿ ನಿರ್ದೇಶನಾಲಯವೂ ಆತ ವಾಸವಿದ್ದ ಸ್ಥಳದಲ್ಲಿ ಶೋಧ ನಡೆಸಿ ಆತನ ವಿರುದ್ಧ ಪ್ರಕರಣ ದಾಖಲಿಸಿತು.
ಇದನ್ನೂ ಓದಿ: ಬೆಳ್ತಂಗಡಿ ಬಾಲಕ ಸುಮಂತ್ ಸಾವು ಪ್ರಕರಣಕ್ಕೆ ರೋಚಕ ಟ್ವಿಸ್ಟ್ : ಶವ ಪತ್ತೆಯಾದ ಕೆರೆಯಲ್ಲಿ ಕತ್ತಿ ಟಾರ್ಚ್ ಪತ್ತೆ
ಆದರೆ ಪನ್ಸೇರ್‌ನನ್ನು ಹಸ್ತಾಂತರಿಸುವಂತೆ ಕೋರಿದ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಇಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪನ್ಸೇರ್‌ನ ಪತ್ನಿ ಪ್ರೀತಿ ಮಹತ್ವಾಕಾಂಕ್ಷೆಯುಳ್ಳ ಗಾಯಕಿಯಾಗಿದ್ದು, ಅವರನ್ನು ಒಳಗೊಂಡ ಚಲನಚಿತ್ರ ನಿರ್ಮಾಣಕ್ಕಾಗಿ ಸಂಗೀತ ಉದ್ಯಮದಂತಹ ಚಾನೆಲ್‌ಗಳ ಮೂಲಕ ಹಣವನ್ನು ರವಾನಿಸಲಾಗಿದೆ ಎಂದು ಇಡಿ ಅಧಿಕಾರಿ ಹೇಳಿದರು.
ಇದನ್ನೂ ಓದಿ: ಉದ್ಯೋಗ ಅರಸಿ ವಿದೇಶಕ್ಕೆ ತೆರಳಲು ಮುಂದಾಗಿದ್ದ ತಾಯಿ: ಶಾಲಾ ಕಟ್ಟಡದಿಂದ ಹಾರಿ ಸಾವಿಗೆ ಶರಣಾದ ವಿದ್ಯಾರ್ಥಿನಿ


