ಸೆ.30ರೊಳಗೆ ಸೀಟು ಹಂಚಿಕೆಗೆ ಇಂಡಿಯಾ ಕೂಟ ನಿರ್ಧಾರ. ಮುಂಬೈನಲ್ಲಿ ಸಭೆ ಶುರು. ಇಂದು ಅಂತಿಮ ನಿರ್ಣಯ. 28 ಪಕ್ಷಗಳ 63 ನಾಯಕರು ಸಭೆಯಲ್ಲಿ ಭಾಗಿ ಇಂದಿನ ಸಭೆಯಲ್ಲಿ ಮೈತ್ರಿಕೂಟಕ್ಕಾಗಿ ಹೊಸ ಲೋಗೋ ಬಿಡುಗಡೆ ಸಾಧ್ಯತೆ.
ಮುಂಬೈ (ಸೆ.1): 2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮುವ ಗುರಿ ಹೊಂದಿರುವ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲಯನ್ಸ್) ಮೈತ್ರಿಕೂಟದ ಮಹತ್ವದ 3ನೇ ಸಭೆ ಗುರುವಾರ ಮುಂಬೈನಲ್ಲಿ ಆರಂಭವಾಗಿದೆ. ಈ ವೇಳೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆದಿದ್ದು, ರಾಜ್ಯವಾರು ಸೀಟು ಹಂಚಿಕೆ ಬಗ್ಗೆ ಸೆ.30ರೊಳಗೆ ಅಂತಿಮ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇದೇ ವೇಳೆ, ಕೂಟದ ಅಜೆಂಡಾ ಏನು? ಸಂಚಾಲಕ ಯಾರು ಹಾಗೂ ಹೊಸ ಲೋಗೋ ಏನಿರಬೇಕು ಎಂಬ ಬಗ್ಗೆ ಶುಕ್ರವಾರ ನಡೆಯಲಿರುವ ಇನ್ನೊಂದು ಸುತ್ತಿನ ಸಭೆಯಲ್ಲಿ ನಿರ್ಣಯಿಸಲಾಗುತ್ತದೆ. ಬಳಿಕ ಸೀಟು ಹಂಚಿಕೆ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಶುಕ್ರವಾರ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಅಧಿಕೃತ ಹೇಳಿಕೆ ಹೊರ ಬೀಳಲಿದೆ ಎಂದು ಮೂಲಗಳು ಹೇಳಿವೆ.
I-N-D-I-A ಕೂಟದ ಪ್ರಧಾನಿ ಅಭ್ಯರ್ಥಿ ಯಾರು?ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಮತಾ ಬ್ಯಾನರ್ಜಿ!
ಕೂಟದಲ್ಲಿ ಸೀಟು ಹಂಚಿಕೆಯೇ ಸವಾಲಾಗಿದೆ. ಏಕೆಂದರೆ ಕೂಟದ ಮಿತ್ರಪಕ್ಷಗಳು ಕೆಲವು ರಾಜ್ಯಗಳಲ್ಲಿ ವೈರಿ ಪಕ್ಷಗಳಾಗಿವೆ. ಹೀಗಾಗಿ ಮೊದಲು ಸೀಟು ಹಂಚಿಕೆ ಒಪ್ಪಂದ ಮುಗಿಸೋಣ ಎಂಬ ನಿರ್ಣಯಕ್ಕೆ ಸಭೆ ಬಂದಿದೆ ಎಂದು ಗೊತ್ತಾಗಿದೆ.
ಪಟನಾ ಮತ್ತು ಬೆಂಗಳೂರಿನಲ್ಲಿ ಮೊದಲೆರಡು ಸಭೆ ನಡೆಸಿದ್ದ ಮೈತ್ರಿಕೂಟ, ಇದೀಗ ತಾನು ಆಡಳಿತದಲ್ಲಿರದ ಮಹಾರಾಷ್ಟ್ರ ರಾಜಧಾನಿ ಮುಂಬೈನ ಗ್ರಾಂಡ್ ಹಯಾತ್ ಪಂಚತಾರಾ ಹೋಟೆಲ್‌ನಲ್ಲಿ ಈ ಸಭೆ ನಡೆಸಿದೆ. 28 ಪಕ್ಷಗಳ 63 ನಾಯಕರು ಭಾಗಿಯಾಗಿದ್ದರು ಎಂದು ಕೂಟ ಹೇಳಿಕೊಂಡಿದೆ.
ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಎನ್‌ಸಿಪಿ ನಾಯಕರಾದ ಸುಪ್ರಿಯಾ ಸುಳೆ ಮತ್ತು ಜಯಂತ್ ಪಾಟೀಲ್, ಶಿವಸೇನೆ (ಯುಬಿಟಿ) ನಾಯಕರಾದ ಆದಿತ್ಯ ಠಾಕ್ರೆ, ಸಂಜಯ್ ರಾವುತ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಆರ್‌ಜೆಡಿಯ ಮನೋಜ್ ಝಾ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರ್‌ಜೆಡಿ ಅಧ್ಯಕ್ಷ ಲಾಲು ಯಾದವ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಕರ್ನಾಟಕ, ಹಿಮಾಚಲ ಗೆಲ್ಲಿಸಿದ ಮಲ್ಲಿಕಾರ್ಜುನ ಖರ್ಗೆಗೆ I-N-D-I-A ಕೂಟದ ಮುಖ್ಯಸ್ಥ ಸ್ಥಾನ!
ವಿವಾದದ ಬೆನ್ನಲ್ಲೇ ‘ತಪ್ಪು’ ಸರಿ ಮಾಡಿದ ಕಾಂಗ್ರೆಸ್: ಇಂಡಿಯಾ ಕೂಟದ ಮುಂಬೈ ಸಭೆ ನಿಮಿತ್ತ ಬುಧವಾರ ಬೆಳಗ್ಗೆ ಪೋಸ್ಟರ್ ಬಿಡುಗಡೆ ಮಾಡಿದ್ದ ಕಾಂಗ್ರೆಸ್, ಆಪ್ ನಾಯಕ ಅರವಿಂದ ಕೇಜ್ರಿವಾಲ್ ಅವರ ಫೋಟೋ ಕೈಬಿಟ್ಟಿದ್ದು, ಹಾಗೂ ಇಂಡಿಯಾ ಕೂಟಕ್ಕೆ ರಾಹುಲ್ ಗಾಂಧಿ ಅವರೇ ನಾಯಕ ಎಂಬಂತೆ ಬಿಂಬಿಸಿದ್ದು ವಿವಾದಕ್ಕೀಡಾಗಿತ್ತು. ಆದರೆ ಸಂಜೆ ಈ ‘ತಪ್ಪು’ ಸರಿ ಮಾಡಿರುವ ಕಾಂಗ್ರೆಸ್ ರಾಹುಲ್ ಫೋಟೋ ಕೈಬಿಟ್ಟು ಕೇಜ್ರಿವಾಲ್ ಫೋಟೋ ಸೇರಿಸಿದೆ. ಜತೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇಂಡಿಯಾ ಕೂಟದ ಎಲ್ಲ ಮುಖ್ಯಮಂತ್ರಿಗಳ ಫೋಟೋಗಳನ್ನೂ ಸೇರಿಸಿದೆ.
ಕೇಜ್ರಿವಾಲ್ ಫೋಟೋ ಕೈಬಿಟ್ಟಬಳಿಕ, ‘ಇಂಡಿಯಾ ಮೈತ್ರಿಕೂಟದೊಳಗೆ ಮತ್ತೆ ಭಿನ್ನಮತದ ಹೊಗೆ ಮತ್ತೆ ಕಾಣಿಸಿಕೊಂಡಿದೆ. ದಿಲ್ಲಿಯಲ್ಲಿ ವೈರಿಗಳಾಗಿರುವ ಆಪ್ ಮತ್ತು ಕಾಂಗ್ರೆಸ್ ನಡುವೆ ಏನೋ ನಡೆಯುತ್ತಿದೆ ಎಂಬ ಗುಮಾನಿ ಹುಟ್ಟುಹಾಕಿತ್ತು.
ಪೋಸ್ಟರ್‌ನಲ್ಲಿ ರಾಹುಲ್ ಮುಂಚೂಣಿ ನಾಯಕರಾಗಿ ಕಾಣಿಸಿಕೊಂಡಿದ್ದು ಅವರ ಜೊತೆಗೆ ನಿತೀಶ್ ಕುಮಾರ್, ಶರದ್ ಪವಾರ್, ಅಖಿಲೇಶ್ ಯಾದವ್, ಒಮರ್ ಅಬ್ದುಲ್ಲಾ, ಹೇಮಂತ್ ಸೊರೇನ್, ಮಮತಾ ಬ್ಯಾನರ್ಜಿ, ಸೀತಾರಾಂ ಯೆಚೂರಿ ಮೊದಲಾದವರ ಫೋಟೋ ಹಾಕಲಾಗಿತ್ತು. ಈ ಬಗ್ಗೆ ಬಿಜೆಪಿ ಕುಹಕವಾಡಿತ್ತು.
