ಸ್ವಾತಂತ್ರ್ಯ ದಿನಾಚರಣೆಯಂದು ಆಪರೇಷನ್ ಸಿಂದೂರಕ್ಕೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ವಾಯುಪಡೆಯ ವಿಮಾನಗಳು ಸಿಂದೂರ ಧ್ವಜ ಹೊತ್ತು ಹಾರಲಿದ್ದು, ಕಾರ್ಯಾಚರಣೆಯ ಸಿಬ್ಬಂದಿಗಳು ಭಾಗವಹಿಸಲಿದ್ದಾರೆ. ಆಮಂತ್ರಣ ಪತ್ರಿಕೆಯೂ ಸಿಂದೂರದ ಥೀಮ್‌ನಲ್ಲಿದೆ.
ನವದೆಹಲಿ (ಆ.13): ಪಾಕ್ ವಿರುದ್ಧ ನಡೆದ ಆಪರೇಷನ್ ಸಿಂದೂರಕ್ಕೆ ಈ ಸಲ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿಶೇಷ ಗೌರವ ಸಲ್ಲಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ದೆಹಲಿಯ ಕೆಂಪುಕೋಟೆಯಲ್ಲಿ ನಡೆಯಲಿರುವ ದೇಶದ ಮುಖ್ಯ ಕಾರ್ಯಕ್ರಮದಲ್ಲಿ ವಾಯುಪಡೆ ವಿಮಾನಗಳು ಆಪರೇಷನ್ ಸಿಂದೂರ ಧ್ವಜವನ್ನು ಹೊತ್ತು ಹಾರಾಡಲಿವೆ. ಜೊತೆಗೆ ಸಿಂದೂರ ಕಾರ್ಯಾಚರಣೆ ಭಾಗವಾಗಿದ್ದ 15 ಸಿಬ್ಬಂದಿಗಳೂ ಭಾಗಿಯಾಗಲಿದ್ದಾರೆ.
ಭಾರತೀಯ ವಾಯುಪಡೆ ವಿಮಾನ/ಕಾಪ್ಟರ್‌ಗಳು ಪ್ರತಿವರ್ಷ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಪ್ರದರ್ಶಿಸುವ ಸಂಪ್ರ ದಾಯವನ್ನು ಹೊಂದಿದೆ. ಆದರೆ ಈ ವರ್ಷ ರಾಷ್ಟ್ರಧ್ವಜದ ಜತೆ ವಿಶೇಷ ವಿಮಾನಗಳು ಆಪರೇಷನ್ ಸಿಂದೂರ ಧ್ವಜ ಹೊತ್ತು ಸಾಗಲಿದೆ.
ಆಹ್ವಾನ ಪತ್ರಿಕೆಯಲ್ಲಿಯೂ ಸಿಂದೂರ: ಈ ಬಾರಿಯ ಸ್ವಾತಂತ್ರ್ಯ ದಿನ ಆಮಂತ್ರಣ ಪತ್ರಿಕೆ ಕೂಡ ಸಿಂದೂರದ ಥೀಮ್‌ನಲ್ಲಿಯೇ ಇರಲಿದೆ, ಪತ್ರಿಕೆಯ ಬಲಗಡೆ ಅದರ ಹೆಸರನ್ನು ಬರೆಯಲಾಗಿದೆ.
ಮುನೀರ್ ಸೂಟ್ ಧರಿಸಿದ ಲಾಡೆನ್: ಪೆಂಟಗನ್ ಮಾಜಿ ಅಧಿಕಾರಿ ಆಕ್ರೋಶ
ವಾಷಿಂಗ್ಟನ್ (ಆ.13): 'ಪಾಕಿಸ್ತಾನ ಪತನವಾಗುವ ಸ್ಥಿತಿ ಬಂದರೆ ಅದು ತನ್ನೊಂದಿಗೆ ಅರ್ಧ ಪ್ರಪಂಚವನ್ನು ಅಣುದಾಳಿ ಮಾಡಿ ನಾಶಪಡಿಸುತ್ತದೆ' ಎಂದು ಬೆದರಿಕೆ ಹಾಕಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಅವರನ್ನು ತೀವ್ರ ತರಾಟೆಗೆ ತೆಗೆದು ಕೊಂಡಿರುವ ಆಮೆರಿಕದ (ಪೆಂಟಗನ್) ಮಾಜಿ ಸೇನಾ ಧಿಕಾರಿ ಮೈಕೆಲ್ ರೂಬಿನ್, 'ಮುನೀರ್ ಅವರು ಸೂಟ್ ಧರಿಸಿದ ಒಸಾಮಾ ಬಿನ್ ಲಾಡೆನ್' ಎಂದು ಕಿಚಾಯಿಸಿದ್ದಾರೆ. ಮಾಧ್ಯಮ ಜತೆ ಮಾತನಾಡಿದ ರೂಬಿನ್, 'ಪಾಕ್ ಯುದ್ಧಪ್ರೇಮ ಪ್ರದರ್ಶಿಸಿ ಒಂದು ರಾಕ್ಷಸ ರಾಷ್ಟ್ರದಂತೆ ವರ್ತಿಸುತ್ತಿದೆ, ಮುನೀರ್‌ರ ಇತ್ತೀಚಿನ ಹೇಳಿಕೆಗಳು ಜಗತ್ತು ಇಸ್ಲಾಮಿಕ್ ಸ್ಟೇಟ್ ನಿಂದ ಕೇಳಿದ್ದನ್ನು ನೆನಪಿಸುತ್ತವೆ. ಅಮೆರಿಕದ ನೆಲದಲ್ಲಿ ಪಾಕ್ ಬೆದರಿಕೆಗಳು ಸ್ವೀಕಾರಾರ್ಹವಲ್ಲ' ಎಂದರು.
