ಸ್ವಾತಂತ್ರ್ಯ ಸಂಭ್ರಮದಲ್ಲಿ ಮಣಿಪುರ, 20 ವರ್ಷದ ಬಳಿಕ ಬಾಲಿವುಡ್ ಚಿತ್ರ ಪ್ರದರ್ಶನ!
ಹಿಂಸಾಚಾರದಿಂದ ಹೊತ್ತಿ ಉರಿದ ಮಣಿಪುರದಲ್ಲಿ ಇದೀಗ ಶಾಂತಿ ಮರುಕಳಿಸುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಹಿಂಸಾಚಾರಕ್ಕೆ ನಲುಗಿದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಬರೋಬ್ಬರಿ 20 ವರ್ಷದ ಬಳಿಕ ಬಾಲಿವುಡ್ ಚಿತ್ರ ಪ್ರದರ್ಶನಗೊಂಡಿದೆ. ಮೋದಿ ಕೆಂಪುಕೋಟೆಯಲ್ಲಿ ಮಣಿಪುರದ ಜನತೆಗೆ ನೀಡಿದ ಭರವಸೆ ಸಾಕಾರಗೊಳ್ಳುತ್ತಿದೆ.
ಇಂಫಾಲ(ಆ.15) ಮಣಿಪುರದ ಹಿಂಸಾಚಾರ, ಅತ್ಯಾಚಾರ, ಗಲಭೆ ಘಟನೆಗಳಿಗೆ ಲೆಕ್ಕವೇ ಇಲ್ಲ. ಹೆಣ್ಣುಮಕ್ಕಳು ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಭೀಕರತೆ ಊಹೆಗೂ ನಿಲುಕದ್ದು. ಇತ್ತೀಚೆಗೆ ಮಣಿಪುರದಲ್ಲಿ ಶಾಂತಿ ನೆಲಸಲಿದೆ ಎಂದು ಪ್ರಧಾನಿ ಮೋದಿ ಸಂಸತ್ತಿನಲ್ಲಿ ಹೇಳಿದ್ದರು. ಇಷ್ಟೇ ಅಲ್ಲ ಇಂದು ಕೆಂಪು ಕೋಟೆ ಮೇಲಿನ ಭಾಷಣದಲ್ಲೂ ಮಣಿಪುರ ವಿಚಾರ ಪ್ರಸ್ತಾಪಿಸಿದ್ದರು. ಹಿಂಸಾಚಾರದಿಂದ ಹೊತ್ತಿ ಉರಿದ ಮಣಿಪುರದಲ್ಲಿ ಶಾಂತಿ ಪಸರಿಸುತ್ತಿದೆ. ಅತೀ ಹೆಚ್ಚು ಗುಂಡಿನ ದಾಳಿ, ಅತ್ಯಾಚಾರ, ಮನೆಗೆ ಬೆಂಕಿ, ಸಾವು ನೋವು ಸಂಭವಿಸಿದ ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ಕ್ರಾಂತಿಯಾಗಿದೆ. ಬರೋಬ್ಬರಿ 20 ವರ್ಷಗಳ ಬಳಿಕ ಸ್ವಾತಂತ್ರ್ಯ ದಿನಾಚರಣೆ ದಿನವೇ ಬಾಲಿವುಡ್ ಚಿತ್ರ ಪ್ರದರ್ಶನ ಮಾಡಲಾಗಿದೆ.
ರಂಗಾಯಿನಲ್ಲಿರು HSA ಕ್ಯಾಂಪಸ್‌ನಲ್ಲಿ ಬಾಲಿವುಡ್‌ನ ಉರಿ, ದಿ ಸರ್ಜಿಕಲ್ ಸ್ಟ್ರೈಕ್ ಹಾಗೂ ಶಾರುಖ್ ಖಾನ್ ಅಭಿನಯದ ಕುಚ್ ಕುಚ್ ಹೋತಾ ಹೈ ಚಿತ್ರ ಪ್ರದರ್ಶನ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಉಚಿತ ಚಿತ್ರ ಪ್ರದರ್ಶನ ವೀಕ್ಷಿಸಿದ್ದಾರೆ. ಜೊತೆಗೆ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಮಣಿಪುರದ ಚುರಾಚಂದ್‌ಪುರ ಜಿಲ್ಲೆ ಶತಮಾನಗಳಿಂದ ಗಲಭೆ, ಹಿಂಸಾಚಾರ, ದಾಳಿಯಿಂದ ನಲುಗಿದ ಪ್ರದೇಶ. ಇದೀಗ ಇದೇ ಪ್ರದೇಶ ಬದಲಾಗುತ್ತಿದೆ.
ಕೆಂಪುಕೋಟೆಯಿಂದ ಮಣಿಪುರ ಜನತೆಗೆ ಮೋದಿ ಭರವಸೆ, ಇಲ್ಲಿದೆ ಸ್ವಾತಂತ್ರ್ಯ ದಿನಾಚರಣೆ ಭಾಷಣದ ವಿಶ್ಲೇಷಣೆ!
ಹಮಾರ್ ವಿದ್ಯಾರ್ಥಿ ಘಟಕ(HSA) ಸ್ವಾತಂತ್ರ್ಯ ದಿನಾಚರಣೆಗೆ ಚಿತ್ರ ಪ್ರದರ್ಶನ ಆಯೋಜಿಸಿತ್ತು.ಇದೇ ವೇಳೆ HSA ಘಟಕ ಮಹತ್ವದ ಪ್ರಕಟಣೆಯೊಂದನ್ನು ನೀಡಿತ್ತು. ಭಾರತೀಯ ಸೇನೆಯನ್ನು ಬೆಂಬಲಿಸಿ ಶಾಂತಿಯುತ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ. ಮಣಿಪುರದಲ್ಲಿ ಉಗ್ರರು, ಬಂಡುಕೋರರು ಹಾಗೂ ಕೆಲ ಉದ್ರಿಕ್ತ ಗುಂಪುಗಳಿಂದ ಸಾಮಾನ್ಯ ಜನರಿಗೆ ಹಾಗೂ ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ. ಇದೀಗ ಸ್ವಾತಂತ್ರ್ಯ ದಿನಾಚರಣೆಯಂದೇ 20 ವರ್ಷಗಳಿಂದ ನಿಷೇಧಗೊಂಡಿರುವ ಚಿತ್ರ ಪ್ರದರ್ಶನವನ್ನು ಪುನರ್ ಆರಂಭಿಸುತ್ತಿದ್ದೇವೆ. ಇದು ಉಗ್ರರಿಗೆ ನೀಡುತ್ತಿರುವ ಸಂದೇಶ ಎಂದು ಸಾರಿದೆ.
2006ರಲ್ಲಿ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ ಹಾಗೂ ಕಾಂಗ್ಲೀಪಾಕ್ ಕಮ್ಯೂನಿಸ್ಟ್ ಪಾರ್ಟಿ ಇದೇ ಚುರಾಚಂದ್‌ಪುರ್ ಜಿಲ್ಲೆಯ ಹಮಾರ್ ಸಮುದಾಯ 20ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದಿತ್ತು. ಕಾರಣ ಈ ಗ್ರಾಮದ ಜನರು ಭಾರತೀಯ ಸೇನೆಗೆ ಬೆಂಬಲ ನೀಡಿದ್ದಾರೆ. ಇದಕ್ಕಾಗಿ ಪಾಠ ಕಲಿಸಲು ಈ ಅತ್ಯಾಚಾರ ಹಾಗೂ ಹತ್ಯೆ ನಡೆದಿತ್ತು. ಇದೇ ವೇಳೆ ಈ ಜಿಲ್ಲೆಯಲ್ಲಿ ಯಾವುದೇ ಮನರಂಜನೆ ಇರಬಾರದು, ಯಾವುದೇ ಮಾಧ್ಯಮ ಇರಬಾರದು ಎಂದು ನಿಷೇಧ ಹೇರಲಾಗಿತ್ತು. ಜೊತೆಗೆ ಇಲ್ಲಿನ ಅಮಾಯಕ ಜನರನ್ನು ಸೇನೆ ವಿರುದ್ಧ ದಂಗ ಏಳುವಂತೆ ಮಾಡಲಾಯಿತು. ಸ್ವಾತಂತ್ರ್ಯ ಹೆಸರಿನಲ್ಲಿ ಭಯೋತ್ಪಾದಕರ ದಾಳಿ, ಷಡ್ಯಂತ್ರಗಳು ಎಗ್ಗಿಲದೆ ನಡೆಯಿತು. ಇದೀಗ ಇದೇ ಚುರಾಚಂದ್‌ಪುರ ಈ ಬಾರಿಯ ಹಿಂಸಾಚಾರದಲ್ಲೂ ಅತೀ ಹೆಚ್ಚಿನ ದಾಳಿಗೆ ಒಳಗಾಗಿದೆ.
ಮಣಿಪುರ ಹಿಂಸೆ ಬಗ್ಗೆ ಮೌನ ಮುರಿದ ಮೋದಿ, ಅವಿಶ್ವಾಸ ನಿರ್ಣಯ ಮಂಡಿಸಿ ಮುಗ್ಗರಿಸಿದ ವಿಪಕ್ಷ!
ಮಣಿಪುರದ ಚಿತ್ರಮಂದಿರಗಳಲ್ಲಿ ಕಮ್ಯೂನಿಸ್ಟ್ ಪಾರ್ಟಿಗಳ ಚಿತ್ರ, ಮಣಿಪುರ ಚಿತ್ರ, ಕೊರಿಯಾ ಚಿತ್ರ, ಇಂಗ್ಲೀಷ್ ಚಿತ್ರಗಳನ್ನು ಮಾತ್ರ ಪ್ರದರ್ಶನ ಮಾಡಲಾಗುತ್ತಿತ್ತು. ಇದೀಗ ಚುರಾಚಂದ್‌ಪುರದಲ್ಲಿನ ಹಿಂದಿ ಚಲನಚಿತ್ರ ಪ್ರದರ್ಶನದಿಂದ ಪರಿಸ್ಥಿತಿ ಬದಲಾಗುತ್ತಿದೆ. ಮಣಿಪುರ ಮುಖ್ಯವಾಹಿನಿ ಜೊತೆ ಸೇರಿಕೊಳ್ಳುತ್ತಿದೆ. ಭಯೋತ್ಪಾದಕರು, ಬಂಡುಕೋರರನ್ನು ಸದೆಬಡಿಯಲು ಸೇನೆ ನಿಯೋಜನೆಗೊಂಡಿದೆ. ಪರಿಸ್ಥಿತಿ ಬದಲಾಗುತ್ತಿದೆ. ಕೆಲವು ವರ್ಷಗಳಲ್ಲಿ ಮಣಿಪುರ ಸಂಪೂರ್ಣ ಬದಲಾಗಿದಲಿದೆ ಅನ್ನೋ ಸಂದೇಶ ಈ ಸ್ವಾತಂತ್ರ್ಯ ದಿನಾಚರಣೆಗೆ ಸಿಕ್ಕಿದೆ.