ಸಿವಿಲ್ ಪ್ರಕರಣವೊಂದರಲ್ಲಿ, ಜೈಲು ಶಿಕ್ಷೆಗೊಳಗಾದವರ ವೆಚ್ಚವನ್ನು ದೂರುದಾರರೇ ಭರಿಸಬೇಕೆಂಬ ಕೋರ್ಟ್ ಆದೇಶವು ಚರ್ಚೆಗೆ ಕಾರಣವಾಗಿದೆ. ಏನಿದು ಕಾನೂನು? ದೂರುದಾರ ಹಣ ಕೊಡದಿದ್ರೆ ಏನಾಗುತ್ತೆ?

ಕಳೆದ ಎರಡು ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಕಾನೂನಿಗೆ ಸಂಬಂಧಿಸಿದಂತೆ ಭಾರಿ ಚರ್ಚೆ ನಡೆಯುತ್ತಿದೆ. ಅದು ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂರು ವರ್ಷ ಜೈಲು ಶಿಕ್ಷೆಗೆ ಕೋರ್ಟ್​ ಆದೇಶಿಸಿದೆ. ಆದರೆ ಜೈಲು ಶಿಕ್ಷೆಗೆ ಒಳಗಾಗಿರುವವರ ಜೈಲು ವೆಚ್ಚವನ್ನು, ಅವರ ಅಗತ್ಯವನ್ನು ನೋಡಿಕೊಳ್ಳುವ ಹಣವನ್ನು ಅರ್ಜಿದಾರರೇ ಅರ್ಥಾತ್​ ಅವರ ವಿರುದ್ಧ ದೂರು ದಾಖಲು ಮಾಡಿರುವವರೇ ಭರಿಸಬೇಕು ಎಂದು ಕೋರ್ಟ್​ ಆದೇಶ ಹೊರಡಿಸಿದೆ. ಈ ರೀತಿ ಆದೇಶ ಹೊರಡಿಸುವುದು ಹೊಸತೇನಲ್ಲ. ಏಕೆಂದರೆ ಇದು ಕಾನೂನಿನಲ್ಲಿಯೇ ಇರುವಂಥದ್ದು. ಆದರೆ, ಈ ಪ್ರಕರಣ ಮೀಡಿಯಾ ಅಟೆನ್ಷನ್​ ತೆಗೆದುಕೊಂಡಿದ್ದರಿಂದ ಹಾಗೂ ಈ ಬಗ್ಗೆ ಪತ್ರಿಕೆಗಳಲ್ಲಿ ಕೋರ್ಟ್​ ಈ ರೀತಿ ಆದೇಶ ಹೊರಡಿಸಿದೆ ಎಂದು ಬರೆದದ್ದರಿಂದ ಭಾರಿ ಚರ್ಚೆಗಳು ಶುರುವಾಗಿದೆ. ದೂರುದಾರರೇ ಜೈಲುಪಾಲಾದವರ ಜೈಲಿನ ವೆಚ್ಚವನ್ನು ಭರಿಸಬೇಕು ಎನ್ನುವುದು ಸರಿಯೆ? ಈ ರೀತಿ ಕಾನೂನು ಉಂಟೆ? ದೂರುದಾರ ಹಣ ಕೊಡದಿದ್ರೆ ಏನಾಗುತ್ತೆ? ಇದು ಯಾರ ರೀತಿಯ ಕಾನೂನು ಎನ್ನುವ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

ಜೈಲು ಶಿಕ್ಷೆ ಅಪರೂಪ

ಸಿವಿಲ್​ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಆಗುವುದು ಅಪರೂಪ. ಏಕೆಂದರೆ ಇದು ಕ್ರಿಮಿನಲ್​ ಪ್ರಕರಣಗಳಿಗಿಂತಲೂ ಭಿನ್ನ. ಸಿವಿಲ್​ ಪ್ರಕರಣಗಳು, ವಿವಾದಗಳನ್ನು ಪರಿಹರಿಸುವುದು ಮತ್ತು ಸಂತ್ರಸ್ತರಿಗೆ ಪರಿಹಾರ ನೀಡುವುದರ ಮೇಲೆ ಕೇಂದ್ರೀತವಾಗಿರುತ್ತವೆ. ಇದರ ಉದ್ದೇಶ ಜೈಲು ಶಿಕ್ಷೆ ಅಲ್ಲವೇ ಅಲ್ಲ. ಆದರೆ ಜೈಲು ಶಿಕ್ಷೆ ಕೊನೆಯ ಹಂತವಾಗಿ ಬರುತ್ತದೆ. ಅದು ಹೆಚ್ಚಾಗಿ ನಡೆಯುವುದು, ಕೋರ್ಟ್​ ಆದೇಶದ ಉಲ್ಲಂಘನೆ ಮಾಡಿದ ಸಂದರ್ಭದಲ್ಲಿ. ಹಾಗೊಮ್ಮೆ ಜೈಲು ಶಿಕ್ಷೆಯಾದರೆ ದೂರುದಾರರು, ಅಪರಾಧಿಗಳ ಜೈಲು ವೆಚ್ಚವನ್ನು ಭರಿಸುವಂತೆ ಕೋರ್ಟ್​ ಆದೇಶಿಸುತ್ತದೆ. ಸುಲಭದಲ್ಲಿ ಹೇಳಬೇಕು ಎಂದರೆ, ಯಾರಾದರೂ ತಮಗೆ ರಕ್ಷಣೆ ಬೇಕು ಎಂದು ಪೊಲೀಸರಲ್ಲಿ ಕೇಳಿಕೊಂಡಾಗ ಅದರ ವೆಚ್ಚವನ್ನು ಹೇಗೆ, ರಕ್ಷಣೆ ಕೇಳಿದವರು ಭರಿಸಬೇಕೋ, ಅದೇ ರೀತಿ ಸಿವಿಲ್​ ಪ್ರಕರಣದಲ್ಲಿ ಕೂಡ ಅದನ್ನೇ ಕಾನೂನಿನಲ್ಲಿ ಅಳವಡಿಸಲಾಗಿದೆ. ಆದರೆ ಕ್ರಿಮಿನಲ್​ ಪ್ರಕರಣಗಳಲ್ಲಿ ಜೈಲುಶಿಕ್ಷೆಯಾದರೆ, ಅದರ ಸಂಪೂರ್ಣ ಜವಾಬ್ದಾರಿ ಸರ್ಕಾರದ ಮೇಲೆ ಇರುತ್ತದೆ. ಅದಕ್ಕಾಗಿಯೇ ಸಿವಿಲ್​ ಪ್ರಕರಣಗಳಲ್ಲಿ ಕೂಡ ಯಾರು ಅರ್ಜಿ ಸಲ್ಲಿಸಿರುತ್ತಾರೆಯೋ ಅವರೇ ಮೊದಲು ಕೋರ್ಟ್​ಗೆ ಫೀಸ್​ ಅನ್ನು ಕಟ್ಟಿಸಿಕೊಳ್ಳುವ ಉದ್ದೇಶವೂ ಇದೇ ಆಗಿದೆ.

ಕಾನೂನು ಹೇಳಿರೋದೇನು?

ಹೇಳಿ ಕೇಳಿ ನಮ್ಮದು ಬ್ರಿಟಿಷ್​ ಕಾನೂನು. ನಮ್ಮ ಸಿವಿಲ್ ದಂಡ ಸಂಹಿತೆ 1908(Civil Procedure Code- CPC) ರ ಸೆಕ್ಷನ್ 57 ಮತ್ತು ಆದೇಶ XXI ನಿಯಮ 39 ರಲ್ಲಿ ಶಿಕ್ಷೆ ಹಾಗೂ ದೂರುದಾರ ಅದರ ವೆಚ್ಚ ಭರಿಸುವ ಬಗ್ಗೆ ಉಲ್ಲೇಖವಾಗಿದೆ. ಇದರ ಪ್ರಕಾರ ಡಿಕ್ರಿ ಹೋಲ್ಡರ್​ ಅರ್ಥಾತ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿರುವಾತ ಸಿವಿಲ್ ಕೇಸ್​ನಲ್ಲಿ ಜೈಲಿನಲ್ಲಿ ಬಂಧಿಸಲ್ಪಟ್ಟವರಿಗೆ ಜೀವನಾಧಾರ ಭತ್ಯೆ ಎಂದು ಕರೆಯಲ್ಪಡುವ ಜೈಲು ವೆಚ್ಚವನ್ನು ಪಾವತಿಸಬೇಕಾಗುತ್ತದೆ. ಬಂಧನದ ಸಮಯದಲ್ಲಿ ಜೈಲಿನಲ್ಲಿ ಇರುವವರ ಮೂಲಭೂತ ಅಗತ್ಯತೆಗಳಿಗಾಗಿ ಈ ಭತ್ಯೆಯನ್ನು ಪಾವತಿಸಬೇಕು.

ಹಣ ಹೇಗೆ ನಿಗದಿಪಡಿಸಲಾಗುತ್ತದೆ?

ಕೇಸ್​ ಹಾಕಿದವರು ಎಷ್ಟು ಹಣ ನೀಡಬೇಕು ಎನ್ನುವುದನ್ನು ಕೋರ್ಟ್​ ನಿಗದಿಪಡಿಸುತ್ತದೆ. ಆರೋಪಿಗೆ ಜೈಲು ಶಿಕ್ಷೆ ವಿಧದಿಸಿದಾಗ, ಕೋರ್ಟ್​ ಮೊದಲು ಅವರ ಜೀವನೋಪಾಯಕ್ಕಾಗಿ ಎಷ್ಟು ಅವಶ್ಯಕತೆ ಇದೆ ಎಂಬುದನ್ನು ಲೆಕ್ಕ ಹಾಕಿ ಮಾಸಿಕ ಭತ್ಯೆಯನ್ನು ನಿರ್ಧರಿಸುತ್ತದೆ. ಇದು ದೂರು ಸಲ್ಲಿಸಿದವರ ಆದಾಯವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕೋರ್ಟ್​ ಹೇಳಿರುವ ಹಣವನ್ನು ಮೊದಲು ದೂರುದಾರರು ಕೋರ್ಟ್​ನಲ್ಲಿ ಠೇವಣಿ ಇಡಬೇಕಾಗುತ್ತದೆ. ಈ ಹಣವನ್ನು ಪ್ರತಿತಿಂಗಳು ಕೋರ್ಟ್​ ನಿಗದಿಪಡಿಸಿರುವ ಅಧಿಕಾರಿಗಳಿಗೆ ನೀಡಲಾಗುತ್ತದೆ. ಅವರು ಅಂಥ ಅಪರಾಧಿಯ ಖರ್ಚುವೆಚ್ಚವನ್ನು ನೋಡಿಕೊಳ್ಳುತ್ತಾರೆ.

ಒಂದು ವೇಳೆ ದೂರುದಾರ ಹಣ ಕೊಡದಿದ್ರೆ ಏನಾಗುತ್ತದೆ?

ಒಂದು ವೇಳೆ ದೂರು ಸಲ್ಲಿಸಿದವರು ಕೋರ್ಟ್​ಗೆ ಹಣ ನೀಡಲು ಅಂದರೆ ನ್ಯಾಯಾಲಯ ನಿಗದಿಪಡಿಸಿರುವ ಭತ್ಯೆಯನ್ನು ಪಾವತಿಸಲು ವಿಫಲವಾದರೆ ಅಪರಾಧಿಗೆ ನೀಡಿರುವ ಜೈಲುಶಿಕ್ಷೆ ರದ್ದಾಗುತ್ತದೆ. ಅಷ್ಟಕ್ಕೂ ದೂರುದಾರ ಇಷ್ಟಪಟ್ಟಲ್ಲಿ ಮತ್ತೊಮ್ಮೆ ಕೇಸ್​ ಹಾಕುವ ಮೂಲಕ, ತಾವು ನೀಡಿರುವ ಜೀವನಾಧಾರ ವೆಚ್ಚಗಳನ್ನು ಮರುಪಾವತಿ ಮಾಡಿಕೊಳ್ಳಲೂ ಕಾನೂನು ಅವಕಾಶ ನೀಡಿದೆ.