ರಾಜ್ಯಪಾಲರ ಅಂಕಿತವಿಲ್ಲದೇ 10 ವಿಧೇಯಕಗಳನ್ನು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಕಾನೂನಾಗಿ ಪರಿವರ್ತಿಸಿದೆ. ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಹಿಯಿಲ್ಲದೆ ವಿಧೇಯಕ ಕಾನೂನಾಗಿ ಪರಿವರ್ತನೆಯಾಗುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲಾಗಿದೆ.  

ಚೆನ್ನೈ (ಏ.13): ರಾಜ್ಯಪಾಲರ ಅಂಕಿತವಿಲ್ಲದೇ 10 ವಿಧೇಯಕಗಳನ್ನು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಕಾನೂನಾಗಿ ಪರಿವರ್ತಿಸಿದೆ. ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಸಹಿಯಿಲ್ಲದೆ ವಿಧೇಯಕ ಕಾನೂನಾಗಿ ಪರಿವರ್ತನೆಯಾಗುತ್ತಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲಾಗಿದೆ. ತಮಿಳುನಾಡು ರಾಜ್ಯಪಾಲ ಎನ್‌.ಆರ್‌.ರವಿ ಅವರು 10 ವಿಧೇಯಕಗಳನ್ನು ಇಟ್ಟುಕೊಂಡು ಕಾಲಹರಣ ಮಾಡುತ್ತಿದ್ದ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. 

ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ ಯಾವುದೇ ವಿಧೇಯಕಗಳ ಕುರಿತು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ರಾಜ್ಯಪಾಲರಿಗೆ ಕಾಲಮಿತಿ ನಿಗದಿ ಮಾಡಿತ್ತು. ಜತೆಗೆ, ‘ತಮಿಳುನಾಡು ಸರ್ಕಾರದ 10 ವಿಧೇಯಕಗಳನ್ನು ರಾಜ್ಯಪಾಲರಿಗೆ ಎರಡನೇ ಬಾರಿ ಅಂಗೀಕಾರಕ್ಕಾಗಿ ಕಳುಹಿಸಿಕೊಡಲಾಗಿದೆ. ಹಲವು ಸಮಯದಿಂದ ರಾಜ್ಯಪಾಲರು ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಅದಕ್ಕೆ ಅಂಗೀಕಾರ ಸಿಕ್ಕಂತಾಗಿದೆ ಎಂದೇ ಭಾವಿಸಬಹುದು’ ಎಂದು ಹೇಳಿತ್ತು.

ಈ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ ಇದೀಗ ಆ 10 ವಿಧೇಯಕಗಳ ಕುರಿತು ಸರ್ಕಾರವು ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ. ಇದರಿಂದ ಆ ವಿಧೇಯಕಗಳು ಕಾನೂನಾಗಿ ಬದಲಾವಣೆಯಾದಂತಾಗಿದೆ. ರಾಜ್ಯದ ವ್ಯಾಪ್ತಿಯ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ವಿಚಾರದಲ್ಲಿ ರಾಜ್ಯಪಾಲರ ಅಧಿಕಾರ ಕಡಿತಗೊಳಿಸುವುದು ಸೇರಿದಂತೆ 10 ವಿಧೇಯಕಗಳು ಈಗ ಕಾನೂನಾಗಿ ಬದಲಾಗಿವೆ.

ಮಸೂದೆಗಳನ್ನು ಅನಿರ್ದಿಷ್ಟಾವಧಿ ಬಾಕಿ ಇರಿಸಿಕೊಳ್ಳುವ ಗೌರ್ನರ್‌ಗೆ ಸುಪ್ರೀಂ ಕೋರ್ಟ್‌ ಟೈಮರ್‌!

ಸುಪ್ರೀಂ ಹೊಸ ಇತಿಹಾಸ: ವಿಧಾನಸಭೆ ಅಂಗೀಕರಿಸಿದ ಮಸೂದೆಗೆ ರಾಜ್ಯಪಾಲರು, ರಾಷ್ಟ್ರಪತಿ ಸಹಿ ಹಾಕುವಲ್ಲಿ ವಿಳಂಬದ ವಿಷಯ ದಶಕಗಳಿಗೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸಾಂವಿಧಾನಿಕ ಮಹತ್ವದ ಹುದ್ದೆಗಳ ಅಧಿಕಾರದ ಕುರಿತ ಗೊಂದಲಗಳಿಗೆ ಇತ್ತೀಚಿನ ತಮಿಳುನಾಡು ಸರ್ಕಾರ ಮತ್ತು ಅಲ್ಲಿನ ರಾಜ್ಯಪಾಲರ ಜಟಾಪಟಿ ವಿಷಯದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪು ತೆರೆ ಎಳೆದಿದೆ. ಮಸೂದೆಗೆ ಅಂಕಿತ ಹಾಕುವ ವಿಷಯದಲ್ಲಿ ಸ್ವತಃ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಡೆಡ್‌ಲೈನ್‌ ವಿಧಿಸುವ ನ್ಯಾಯಾಲಯದ ತೀರ್ಪು ದೇಶದ ನ್ಯಾಯಾಂಗ ಮತ್ತು ಶಾಸಕಾಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದೆ.