ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ IMF ತನ್ನ ಬೇಲ್‌ಔಟ್ ಕಾರ್ಯಕ್ರಮವನ್ನು ವಿಸ್ತರಿಸಿದೆ. ಆದರೆ ಹಣಕಾಸು ನೆರವು ನೀಡುವುದಕ್ಕೆ 11 ಹೊಸ ಷರತ್ತುಗಳು ಮತ್ತು 50 ರಚನಾತ್ಮಕ ಮಾನದಂಡಗಳನ್ನು ವಿಧಿಸಿದೆ.
ಇತ್ತೀಚೆಗೆ ಪಹಲ್ಗಾಮ್ ದಾಳಿಯ ನಂತರ ಭಾರತ ಕೈಗೊಂಡ ಆಪರೇಷನ್ ಸಿಂದೂರ್ ಕಾರ್ಯಾಚರಣೆಯೂ ಜಗತ್ತಿನ ಮುಂದೆ ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿದೆ. ವಿಧ್ವಂಸ ಕೃತ್ಯ ಎಸಗುತ್ತಿರುವ ಭಯೋತ್ಪಾದಕರ ಬೆನ್ನಿಗೆ ನಿಂತಿರುವುದಲ್ಲದೇ ಅವರಿಗೆ ಮೂಲ ಸೌಕರ್ಯ ಒದಗಿಸುತ್ತಿರುವ ಪಾಕಿಸ್ತಾನದ ಕೃತ್ಯ ಇಂದು ರಹಸ್ಯವಾಗೇನು ಉಳಿದಿಲ್ಲ, ಈ ಪಾಕಿಸ್ತಾನದ ಈ ದ್ವಿಮುಖ ವರ್ತನೆಯನ್ನು ಭಾರತ ಇಡೀ ಜಗತ್ತಿನ ಮುಂದೆ ತೆರೆದಿಟ್ಟಿದೆ. ಜೊತೆಗೆ ವಿಶ್ವ ಹಣಕಾಸು ನಿಧಿ(IMF)ಪಾಕಿಸ್ತಾನಕ್ಕೆ ನೀಡುತ್ತಿರುವ ಹಣವನ್ನು ಅದು ಭಯೋತ್ಪಾದನೆಗೆ ಹಾಗೂ ಭಯೋತ್ಪಾದಕರಿಗೆ ಮೂಲ ಸೌಕರ್ಯ ಒದಗಿಸುವುದಕ್ಕೆ ಬಳಸುತ್ತಿದೆ ಎಂಬುದನ್ನು ಭಾರತ ಮತ್ತೆ ಮತ್ತೆ ಹೇಳುತ್ತಲೇ ಬಂದಿದೆ. ಹೀಗಾಗಿ ಭಾರತವೂ ಕೂಡ ಐಎಂಎಫ್‌ಗೆ ನೀಡುವ ಹಣವೂ ಭಯೋತ್ಪಾದನೆಗೆ ಬಳಕೆಯಾಗಬಹುದು. ಹೀಗಾಗಿ ಐಎಂಫ್ ಪಾಕಿಸ್ತಾನಕ್ಕೆ ನೆರವು ನೀಡುವುದನ್ನು ನಿಲ್ಲಿಸಬೇಕು ಎಂದು ಭಾರತ ಐಎಂಎಫ್‌ಗೆ ಒತ್ತಡ ಹೇರಿದೆ. ಈ ಹಿನ್ನೆಲೆಯಲ್ಲಿ ಈಗ ಐಎಂಎಫ್ ಮುಂದೆ ಸಹಾಯಕ್ಕಾಗಿ ಮಂಡಿಯೂರಿ ಕುಳಿತಿರುವ ಪಾಕಿಸ್ತಾನಕ್ಕೆ ಹಣ ನೀಡುವುದಕ್ಕೆ ಹಲವು ಷರತ್ತುಗಳನ್ನು ಹೇರಿದೆ. ಐಎಂಎಫ್ ಪಾಕಿಸ್ತಾನಕ್ಕೆ ಹೇರಿರುವ ಹೊಸ ಷರತ್ತುಗಳು ಏನು ಎಂಬ ಬಗ್ಗೆ ಇಲ್ಲಿದೆ ಡಿಟೇಲ್ ಸ್ಟೋರಿ.
ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ತನ್ನ ಬೇಲ್‌ಔಟ್ ಕಾರ್ಯಕ್ರಮವನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಆದರೆ ಹಣಕಾಸು ನೆರವು ನೀಡುವುದಕ್ಕೆ ಐಎಂಎಫ್ ಪಾಕಿಸ್ತಾನಕ್ಕೆ 11 ಹೊಸ ಷರತ್ತುಗಳು ಹಾಗೂ 50 ರಚನಾತ್ಮಕ ಮಾನದಂಡಗಳು ಹಾಗೂ ಷರತ್ತುಗಳನ್ನು ವಿಧಿಸಿದೆ.( ಬೇಲ್‌ಔಟ್ ಕಾರ್ಯಕ್ರಮ ಎಂದರೆ ಒಂದು ಕಂಪನಿ, ಉದ್ಯಮ ಅಥವಾ ಆರ್ಥಿಕತೆಯು ಆರ್ಥಿಕ ತೊಂದರೆಗಳಿಂದಾಗಿ ಕುಸಿಯುವುದನ್ನು ತಡೆಯಲು ವಿನ್ಯಾಸಗೊಳಿಸಲಾದ ಆರ್ಥಿಕ ರಕ್ಷಣಾ ಪ್ರಯತ್ನವಾಗಿದೆ)
ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯ ಪ್ರಕಾರ, ಐಎಂಎಫ್ ಪಾಕಿಸ್ತಾನಕ್ಕೆ ವಿಧಿಸಿರುವ ಷರತ್ತುಗಳಲ್ಲಿ ಮೊದಲನೇಯದಾಗಿ ಪಾಕಿಸ್ತಾನವು 17.6 ಟ್ರಿಲಿಯನ್ ರೂಪಾಯಿಗಳ ಬಜೆಟ್‌ಗೆ ಸಂಸತ್ತಿನ ಅನುಮೋದನೆಯನ್ನು ಪಡೆಯುವುದು, ವಿದ್ಯುತ್ ಬಿಲ್‌ಗಳ ಮೇಲೆ ಹೆಚ್ಚಿನ ಸಾಲ ಸೇವಾ ಸರ್‌ಚಾರ್ಜ್‌ಗಳನ್ನು ಜಾರಿಗೆ ತರುವುದು ಮತ್ತು ಮೂರು ವರ್ಷಗಳಿಗಿಂತ ಹಳೆಯದಾದ ಬಳಸಿದ ಕಾರುಗಳ ಆಮದಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಕೂಡ ಸೇರಿದೆ.
ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿರುವುದರಿಂದ ಕಾರ್ಯಕ್ರಮದ ಯಶಸ್ಸಿನ ಮೇಲೆ ಉಂಟಾಗುವ ಸಂಭಾವ್ಯ ಪರಿಣಾಮದ ಬಗ್ಗೆಯೂ ಐಎಂಎಫ್ ಕಳವಳ ವ್ಯಕ್ತಪಡಿಸಿದೆ. ಶನಿವಾರ ಬಿಡುಗಡೆಯಾದ ಐಎಂಎಫ್‌ನ ಸಿಬ್ಬಂದಿ ಮಟ್ಟದ ವರದಿಯಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಗಳು ಮುಂದುವರಿದರೆ ಅಥವಾ ಮತ್ತಷ್ಟು ಹದಗೆಟ್ಟರೆ, ಕಾರ್ಯಕ್ರಮದ ಹಣಕಾಸು, ಬಾಹ್ಯ ಮತ್ತು ಸುಧಾರಣಾ ಗುರಿಗಳಿಗೆ ಅಪಾಯ ಹೆಚ್ಚಾಗಬಹುದು ಎಂದು ಎಚ್ಚರಿಸಿದೆ.
ಹೀಗಿರುವಾಗ ಪಾಕಿಸ್ತಾನಕ್ಕೆ IMF ವಿಧಿಸಿರುವ 11 ಹೊಸ ಷರತ್ತುಗಳು ಏನು ಎಂಬುದನ್ನು ನೋಡೋಣ.
1.) 17.6 ಟ್ರಿಲಿಯನ್ ರೂ.ಗಳ ಫೆಡರಲ್ ಬಜೆಟ್‌ಗೆ ಸಂಸತ್ತಿನ ಅನುಮೋದನೆ ಪಡೆಯುವುದು
ಜೂನ್ 2025 ರೊಳಗೆ ಐಎಂಎಫ್ ಕಾರ್ಯಕ್ರಮದ ಗುರಿಗಳಿಗೆ ಅನುಗುಣವಾಗಿ ಪಾಕಿಸ್ತಾನ 2025-26 ರ ಹಣಕಾಸು ವರ್ಷಕ್ಕೆ ಹೊಸ ಬಜೆಟ್ ಅನ್ನು ಅಂಗೀಕರಿಸುವುದು.
2. ) ಪ್ರಾಂತೀಯ ಮಟ್ಟದಲ್ಲಿ ಕೃಷಿ ಆದಾಯ ತೆರಿಗೆ ಸುಧಾರಣೆ: ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳು ಜೂನ್ ವೇಳೆಗೆ ಹೊಸ ಕಾನೂನುಗಳನ್ನು ಜಾರಿಗೆ ತರಬೇಕು, ತೆರಿಗೆದಾರರ ಗುರುತಿಸುವಿಕೆ ಮತ್ತು ನೋಂದಣಿ, ಒಂದು ಆಶಯದ ಸುಧಾರಣೆಗೆ ಯೋಜನೆ, ಸಂವಹನ ಅಭಿಯಾನಗಳು, ಕಾರ್ಯಾಚರಣೆಯ ಮೌಲ್ಯ ಮಾಪನ ಮಾಡಲು ವೇದಿಕೆ(Operational return-processing platform)ಇವು ಆ ಹೊಸ ಕಾನೂನುಗಳಾಗಿವೆ.
3.) ಆಡಳಿತ ಕ್ರಿಯಾ ಯೋಜನೆ: ಸರ್ಕಾರವು IMFನ ಆಡಳಿತ ನಿರ್ಣಯ ಮೌಲ್ಯಮಾಪನದ ( Governance Diagnostic Assessment)ಆಧಾರದ ಮೇಲೆ ಆಡಳಿತ ಸುಧಾರಣಾ ಕಾರ್ಯತಂತ್ರವನ್ನು ಪ್ರಕಟಿಸಬೇಕು.
4 .) 2027 ರ ನಂತರದ ಹಣಕಾಸು ವಲಯದ ಕಾರ್ಯತಂತ್ರ: 2027 ರ ನಂತರದ ಹಣಕಾಸು ವಲಯದ ಸಾಂಸ್ಥಿಕ ಮತ್ತು ನಿಯಂತ್ರಕ ಉದ್ದೇಶಗಳನ್ನು ವಿವರಿಸುವ ದೀರ್ಘಾವಧಿಯ ಯೋಜನೆಯನ್ನು ಸಿದ್ಧಪಡಿಸಬೇಕು ಮತ್ತು ಪ್ರಕಟಿಸಬೇಕು.
5 )ವಾರ್ಷಿಕ ವಿದ್ಯುತ್ ದರ ಮರು ಆಧಾರ ಅಧಿಸೂಚನೆ(rebasing notification)ಸುಂಕಗಳನ್ನು ವೆಚ್ಚ ವಸೂಲಾತಿ ಮಟ್ಟದಲ್ಲಿ ನಿರ್ವಹಿಸಲು ಜುಲೈ ವೇಳೆಗೆ ಹೊರಡಿಸಬೇಕು.
6 )ಅರ್ಧ ವಾರ್ಷಿಕ ಅನಿಲ ಸುಂಕ ಹೊಂದಾಣಿಕೆ ಅಧಿಸೂಚನೆ: ಅನಿಲ ಬೆಲೆ ನಿಗದಿಯಲ್ಲಿ ವೆಚ್ಚ ಚೇತರಿಕೆ ಖಚಿತಪಡಿಸಿಕೊಳ್ಳಲು ಫೆಬ್ರವರಿ 2026 ರೊಳಗೆ ಸುಂಕ ಅಧಿಸೂಚನೆ ಹೊರಡಿಸುವ ಅಗತ್ಯವಿದೆ.
7) ಕ್ಯಾಪ್ಟಿವ್ ಪವರ್ ಲೆವಿ ಸುಗ್ರೀವಾಜ್ಞೆ (Captive power levy ordinance)ಕಾನೂನು: ಸಂಸತ್ತು ಮೇ ಅಂತ್ಯದ ವೇಳೆಗೆ ಈ ಸುಗ್ರೀವಾಜ್ಞೆಯನ್ನು ಶಾಶ್ವತಗೊಳಿಸಬೇಕು. ಇದು ಕೈಗಾರಿಕಾ ಇಂಧನ ಬಳಕೆಯನ್ನು ರಾಷ್ಟ್ರೀಯ ಗ್ರಿಡ್‌ಗೆ ವರ್ಗಾಯಿಸುವ ಗುರಿಯನ್ನು ಹೊಂದಿದೆ.
8) ಸಾಲ ಸೇವೆ ಸರ್‌ಚಾರ್ಜ್ ಮೇಲಿನ ಮಿತಿಯನ್ನು ತೆಗೆದುಹಾಕಿ: ಜೂನ್ ವೇಳೆಗೆ ಈ ಸರ್‌ಚಾರ್ಜ್ ಮೇಲಿನ ಪ್ರತಿ ಯೂನಿಟ್‌ಗೆ ರೂ 3.21 ಮಿತಿಯನ್ನು ತೆಗೆದು ಹಾಕಲು ಶಾಸನವನ್ನು ಅಂಗೀಕರಿಸಬೇಕು.
9) ವಿಶೇಷ ತಂತ್ರಜ್ಞಾನ ವಲಯ (special technology zones)ಪ್ರೋತ್ಸಾಹಕಗಳಿಗಾಗಿ ಹಂತ-ಹಂತದ ಯೋಜನೆ: 2035 ರ ವೇಳೆಗೆ STZ ಗಳು ಮತ್ತು ಇತರ ಕೈಗಾರಿಕಾ ಉದ್ಯಾನವನಗಳು/ವಲಯಗಳಿಗೆ ಎಲ್ಲಾ ಹಣಕಾಸಿನ ಪ್ರೋತ್ಸಾಹಕಗಳನ್ನು ತೆಗೆದುಹಾಕಲು ಪಾಕಿಸ್ತಾನವು 2025 ರ ಅಂತ್ಯದ ವೇಳೆಗೆ ಯೋಜನೆಯನ್ನು ಸಿದ್ಧಪಡಿಸಬೇಕು.
10) ಬಳಸಿದ ಕಾರು ಆಮದಿ ಹೇರಿದ ನಿರ್ಬಂಧ ತೆರವು(Used car import liberalisation)
ಬಳಸಿದ ಕಾರುಗಳ ವಾಣಿಜ್ಯ ಆಮದಿನ ಮೇಲಿನ ಪರಿಮಾಣಾತ್ಮಕ ನಿರ್ಬಂಧಗಳನ್ನು (ಆರಂಭದಲ್ಲಿ ಐದು ವರ್ಷಗಳವರೆಗೆ) ತೆಗೆದುಹಾಕಲು ಜುಲೈ ಅಂತ್ಯದ ವೇಳೆಗೆ ಸಂಸತ್ತಿನಲ್ಲಿ ಶಾಸನ ರೂಪಿಸಿ.
11.) ಅಭಿವೃದ್ಧಿ ವೆಚ್ಚ ಬದ್ಧತೆ(Development spending commmitment): 17.6 ಟ್ರಿಲಿಯನ್ ರೂ. ಬಜೆಟ್‌ನಲ್ಲಿ, 1.07 ಟ್ರಿಲಿಯನ್ ರೂ.ಗಳನ್ನು ಅಭಿವೃದ್ಧಿ ವೆಚ್ಚಕ್ಕಾಗಿ ಹಂಚಿಕೆ ಮಾಡುವ ಬದ್ಧತೆ.


