ಡೆಹ್ರಾಡೂನ್(ಮೇ.26): ಅಲೋಪಥಿ ಔಷಧಿ ಬಗ್ಗೆ ಯೋಗಗುರು ಬಾಬಾ ರಾಮ್‌ದೇವ್ ನೀಡಿದ್ದ ಹೇಳಿಕೆ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ತಮ್ಮ ಮಾತು ತಮಗೇ ತಿರುಗುಬಾಣವಾಗುತ್ತಿದೆ ಎಂದು ಅರಿತ ಬಾಬಾ ರಾಮ್‌ದೇವ್ ಈ ಬಗ್ಗೆ ಕ್ಷಮೆ ಯಾಚಿಸಿದ್ದರು. ಆದರೀಗ ಭಾರತೀಯ ವೈದ್ಯಕೀಯ ಸಂಘದ ಉತ್ತರಾಖಂಡ್ ವಿಭಾಗ ಬರೋಬ್ಬರಿ 1,000 ಕೋಟಿ ರೂ. ಮಾನನಷ್ಟ ನೋಟಿಸ್ ನೀಡಿದೆ. ಜೊತೆಗೆ ಇದರಿಂದ ಬಚಾವಾಗಲು ಷರತ್ತೊಂದನ್ನು ಹಾಕಿದೆ.

ಕ್ಷಮೆ ಯಾಚಿಸಿದ್ದ 24 ಗಂಟೆಯೊಳಗೇ ಮತ್ತೆ 25 ಪ್ರಶ್ನೆ ಎಸೆದ ಬಾಬಾ ರಾಮ್‌ದೇವ್!

ಹೌದು ಬಾಬಾ ರಾಮ್‌ದೇವ್‌ಗೆ ನೋಟಿಸ್‌ ಕಳುಹಿಸಿರುವ ಐಎಂಎ ರಾಮ್‌ದೇವ್‌ ಅವರು ತಾವು ಕೊಟ್ಟ ಹೇಳಿಕೆಗೆ ಕ್ಷಮೆ ಯಾಚಿಸಿ ವೀಡಿಯೋ ಪೋಸ್ಟ್ ಮಾಡಬೇಕು ಜೊತೆಗೆ 15 ದಿನಗಳೊಳಗೆ ಲಿಖಿತ ರೂಪದಲ್ಲೂ ಕ್ಷಮೆಯಾಚಿಸಬೇಕು.  ಇಲ್ಲವಾದಲ್ಲಿ 1,000 ಕೋಟಿ ರೂ. ಪಾವತಿಸಲು ಸಜ್ಜಾಗಿ ಎಂದು ಐಎಂಎ ನೋಟಿಸ್‍ನಲ್ಲಿ ಬರೆಯಲಾಗಿದೆ. ಅಈ ಮಾಹಿತಿಯನ್ನು ಐಎಂಎ ಉತ್ತರಾಖಂಡ್ ವಿಭಾಗದ ಅಧ್ಯಕ್ಷ ಡಾ.ಅಜಯ್ ಖನ್ನಾ ಖಚಿತಪಡಿಸಿದ್ದಾರೆ.

ಕ್ಷಮೆ ಕೇಳಿ ಹೇಳಿಕೆ ಹಿಂಪಡೆದ ಯೋಗಗುರು ಬಾಬಾ ರಾಮ್‌ದೇವ್

ಸೋಮವಾರವಷ್ಟೇ ಐಎಂಎ ಉತ್ತರಾಖಂಡ್ ವಿಭಾಗ ಬಾಬಾ ರಾಮ್‍ದೇವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಮುಖ್ಯಮಂತ್ರಿ ತೀರಥ್ ಸಿಂಗ್ ಹಾಗೂ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿತ್ತು. ಬಾಬಾ ರಾಮ್‍ದೇವ್ ನೀಡಿದ್ದ ಅಲೋಪಥಿ ಸ್ಟುಪಿಡ್‌ ಸೈನ್ಸ್ ಎಂದಿದ್ದ ಹೇಳಿಕೆಗೆ ಐಎಂಎ ವೈದ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

'ಅಲೋಪಥಿ ಸರಿ ಇಲ್ಲ ಎಂದ ರಾಮ್‌ದೇವ್ ಮೇಲೆ ಕೇಸ್ ಹಾಕಿ'

ಇನ್ನು ಬಾಬಾ ರಾಮ್‌ದೇವ್ ಅವರು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಅವರ ಪತ್ರದ ಬೆನ್ನಲ್ಲೇ ತಮ್ಮ ಹೇಳಿಕೆ ಹಿಂಪಡೆದಿದ್ದರು. ಆದರೆ ಇಷ್ಟೆಲ್ಲಾ ನಡೆದ ಬಳಿಕವೂ ಸೋಮವಾರ ಐಎಂಎಗೆ 25 ಪ್ರಶ್ನೆಗಳನ್ನು ಕೇಳಿದ್ದ ಅವರು, ಅಧಿಕ ರಕ್ತದೊತ್ತಡ(ಬಿಪಿ) ಹಾಗೂ ಟೈಪ್-1, ಟೈಪ್-2 ಮಧುಮೇಹ ಸೇರಿದಂತೆ ಮುಂತಾದ ಖಾಯಿಲೆಗಳಿಗೆ ಅಲೋಪತಿ ಶಾಶ್ವತ ಪರಿಹಾರ ನೀಡುತ್ತದೆಯೇ ಎಂದು ಅವರು ಪ್ರಶ್ನಿಸಿದ್ದರು. ಅಲ್ಲದೆ ಥೈರಾಯ್ಡ್, ಸಂಧಿವಾತ, ಕೊಲೈಟಿಸ್ ಹಾಗೂ ಅಸ್ತಮಾಗೆ ಫಾರ್ಮಾ ಉದ್ಯಮದಲ್ಲಿ ಶಾಶ್ವತ ಚಿಕಿತ್ಸೆ ಇದೆಯೇ ಎಂದು ಮತ್ತೆ ಪ್ರಶ್ನಿಸಿದ್ದರೆಂಬುವುದು ಉಲ್ಲೇಖನೀಯ.