ನವದೆಹಲಿ (ಮೇ 23) ಅಲೋಪಥಿ ಬಗ್ಗೆ ಬಾಬಾ ರಾಮ್ ದೇವ್ ವಿವಾದಾತ್ಮಕ  ಹೇಳಿಕೆ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು.  ಇದೀಗ ಯೋಗ ಗುರು ತಮ್ಮ ಹೇಳಿಕೆ ಹಿಂದಕ್ಕೆ ಪಡೆದಿದ್ದು ಕ್ಷಮೆಯಾಚಿಸಿದ್ದಾರೆ.

ಬಾಬಾ ರಾಮ್ ದೇವ್ ಗೆ ಪತ್ರ ಬರೆದಿದ್ದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿಕೆ ಹಿಂದಕ್ಕೆ ಪಡೆದುಕೊಳ್ಳಲು ತಿಳಿಸಿದ್ದರು.  ಇದಕ್ಕೆ ಉತ್ತರಿಸಿದ ರಾಮ್ ದೇವ್ ಹೇಳಿಕೆ ಹಿಂದಕ್ಕೆ ಪಡೆದುಕೊಂಡಿದ್ದು ಈ ವಿವಾದವನ್ನು ಇಲ್ಲಿಗೆ ಅಂತ್ಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ಅಲೋಪಥಿ ವೈದ್ಯ ಪದ್ಧತಿಯ ಬಗ್ಗೆ ತಿಳಿವಳಿಕೆ ಇಲ್ಲದೇ ಹೇಳಿಕೆ ನೀಡುತ್ತಿರುವ ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ  ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ)  ಒತ್ತಾಯಿಸಿತ್ತು.

'ಅಲೋಪಥಿ ಸರಿ ಇಲ್ಲ ಎಂದಿದ್ದ ರಾಮ್ ದೇವ್'

ಬಾಬಾ ರಾಮ್ ದೇವ್ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು, ಬಾಬಾ ರಾಮ್ ದೇವ್ ಅಲೋಪಥಿ ಬಗ್ಗೆ ತಿಳಿವಳಿಕೆ ಇಲ್ಲದೇ ನೀಡುತ್ತಿರುವ ಹೇಳಿಕೆಗಳು ಜನರ ದಿಕ್ಕು ತಪ್ಪಿಸುತ್ತಿವೆ ಎಂದು ಸಂಘ ಆರೋಪಿಸಿತ್ತು.

ಅಲೋಪಥಿ ಔಷಧಗಳನ್ನು ತೆಗೆದುಕೊಂಡ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ, ಡಿಸಿಜೈ ಅನುಮೋದನೆ ನೀಡಿರುವ ಔಷಧಗಳಾದ ಫ್ಯಾವಿಫ್ಲೂ ಹಾಗೂ ಇನ್ನಿತರ ಔಷಧಗಳು ಕೋವಿಡ್-19 ಚಿಕಿತ್ಸೆಯಲ್ಲಿ ವಿಫಲಗೊಂಡಿವೆ ಎಂಬ ಅರ್ಥದಲ್ಲಿ  ಯೋಗಗುರು ಮಾತನಾಡಿದ್ದರು.