ಮಧ್ಯಪ್ರದೇಶದ ಧಾಟಿಯಾದಲ್ಲಿ ಅಕ್ರಮ ಮದ್ಯ ಘಟಕದ ಮೇಲೆ ಪೊಲೀಸರು ದಾಳಿ ನಡೆಸಿದಾಗ, ಕುಟುಂಬಸ್ಥರು 3 ತಿಂಗಳ ಮಗು ಸೇರಿದಂತೆ ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಹೀಗಾಗಿ ಹಸಿವಿನಿಂದ ಅಳುತ್ತಿದ್ದ ಮಗುವನ್ನು ಪೊಲೀಸರು ನೋಡಿಕೊಳ್ಳುವಂತಾಗಿದೆ.
ಅಕ್ರಮ ಮದ್ಯ ಘಟಕದ ಮೇಲೆ ಪೊಲೀಸ್ ದಾಳಿ:
ಮಧ್ಯಪ್ರದೇಶದ ಧಾಟಿಯಾದಲ್ಲಿ ಅಕ್ರಮ ಮದ್ಯ ತಯಾರಿ ಘಟಕದ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯೂ ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು. ಪೊಲೀಸರ ದಾಳಿಗೆ ಹೆದರಿ ಕುಟುಂಬದ ಎಲ್ಲಾ ಸದಸ್ಯರು ಕೇವಲ 3 ತಿಂಗಳ ಮಗು ಸೇರಿದಂತೆ ಮಕ್ಕಳನ್ನು ಬಿಟ್ಟು ಮನೆಯ ಎಲ್ಲಾ ಹಿರಿಯ ಸದಸ್ಯರು ಓಡಿ ಹೋಗಿದ್ದರು. ಇದರಿಂದ ಅಲ್ಲಿ ಆ ಪುಟ್ಟ ಮಗು ಹಸಿವು ಹಾಗೂ ಚಳಿಯಿಂದ ಪರದಾಡಿ ಅಳುತ್ತಿತ್ತು. ಹೀಗಾಗಿ ಅಕ್ರಮ ಮದ್ಯ ತಯಾರಿ ಘಟಕದ ಮೇಲೆ ದಾಳಿ ಮಾಡುವುದಕ್ಕೆ ಬಂದ ಪೊಲೀಸರಿಗೆ ಅಲ್ಲಿ ಕೇವಲ ಅಪ್ರಾಪ್ತರು ಸಿಕ್ಕಿದ್ದಾರೆ. ಇತ್ತ ಆ ಮೂರು ತಿಂಗಳ ಪುಟ್ಟ ಮಗು ಮೈ ಮೇಲೆ ತುಂಡು ಬಟ್ಟೆಯೂ ಇಲ್ಲದೇ ಅಳುತ್ತಿತ್ತು. ಆ ಮಗುವಿನ ಜೊತೆ ಸುಮಾರು ನಾಲ್ಕರಿಂದ ಐದು ವರ್ಷ ವಯಸ್ಸಿನ ಇಬ್ಬರು ಮಕ್ಕಳು, 10 ವರ್ಷದ ಬಾಲಕಿ ಇದ್ದರು.
3 ತಿಂಗಳ ಹಸುಗೂಸನ್ನು ಬಿಟ್ಟು ಪರಾರಿಯಾದ ಪೋಷಕರು: ಪೊಲೀಸರಿಂದ ಮಗುವಿಗೆ ಆರೈಕೆ:
ಅಲ್ಲಿದ್ದ 10 ವರ್ಷದ ಬಾಲಕಿ ಅ ಪುಟ್ಟ ಮಗುವನ್ನು ನೋಡಿಕೊಳ್ಳಲು ಪ್ರಯತ್ನಿಸಿದಳು. ಆದರೆ ಹಸಿವು ಮತ್ತು ಶೀತದಿಂದಾಗಿ ಆ ಮಗು ಅಳುವುದನ್ನು ನಿಲ್ಲಿಸುವುದಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ ಮಗುವಿಗೆ ಹಸಿವಾಗಿದೆ ಎಂದು ಅರಿತ ಪೊಲೀಸರು ತಾವೇ ಮಗುವಿಗೆ ಹಾಲು ನೀಡಿ ಬೆಚ್ಚಗಿನ ಬಟ್ಟೆಯನ್ನು ಹೊದಿಸಿದರು. ಪೊಲೀಸ್ ಅಧಿಕಾರಿಯಾಗಿದ್ದ ಆಕಾಂಕ್ಷಾ ಜೈನ್ ಅವರು ಸ್ವತಃ ಮಗುವಿಗೆ ಹಾಲುಣಿಸಿ ಅದನ್ನು ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ ಅದು ನೆಮ್ಮದಿಯಾಗಿ ನಿದ್ರಿಸುವವರೆಗೂ ಮಗುವನ್ನು ತಮ್ಮ ತೊಡೆಯ ಮೇಲೆ ಮಲಗಿಸಿಕೊಂಡು ನೋಡಿಕೊಂಡರು. ಮಧ್ಯಪ್ರದೇಶ ಧಾಟಿಯಾದ ಫುಲ್ರಾ ಕಂಜರ್ ಡೇರಾ ಪ್ರದೇಶವು ಈ ಅಪರೂಪದ ಘಟನೆಗೆ ಸಾಕ್ಷಿಯಾಯ್ತು. ಮಗು ನಿದ್ರೆಗೆ ಜಾರಿದ ನಂತರ ಶಿಶುವನ್ನು 10 ವರ್ಷದ ಬಾಲಕಿಗೆ ನೀಡಿ, ಯಾವುದೇ ಸಮಸ್ಯೆಗಳಿದ್ದಲ್ಲಿ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಯ್ತು.
ಇದನ್ನೂ ಓದಿ: ಧರೆಗಿಳಿದ ದೇವಲೋಕ: ಮೈನಸ್ 20 ಡಿಗ್ರಿಯಿಂದಾಗಿ ಹೆಪ್ಪುಗಟ್ಟಿದ ನಯಾಗಾರ ಫಾಲ್ಸ್‌ನ ಮನಮೋಹಕ ದೃಶ್ಯ
ಫುಲ್ರಾ ಕಂಜರ್ ಡೇರಾ ಪ್ರದೇಶದಲ್ಲಿ ಅಕ್ರಮ ಮದ್ಯ ತಯಾರಿಕೆಯ ಬಗ್ಗೆ ಮಾಹಿತಿ ಬಂದ ನಂತರ ಪೊಲೀಸರು ಮತ್ತು ಅಬಕಾರಿ ತಂಡಗಳು ಜಂಟಿಯಾಗಿ ನಡೆಸಿದಾಗ ಈ ಘಟನೆ ನಡೆದಿದೆ. ಪೊಲೀಸರ ದಾಳಿಗೆ ಹೆದರಿ ಮನೆಯಲ್ಲಿದ್ದ ದೊಡ್ಡವರೆಲ್ಲರೂ ಓಡಿ ಹೋಗಿದ್ದಾರೆ. ಈ ಮನೆಯಿಂದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯ ಮತ್ತು ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ ಆಕಾಂಕ್ಷಾ ಜೈನ್ ತಿಳಿಸಿದ್ದಾರೆ. ಪೊಲೀಸರನ್ನು ನೋಡಿ ಮನೆಯಲ್ಲಿದ್ದ ವಯಸ್ಕ ಕುಟುಂಬ ಸದಸ್ಯರು ಪರಾರಿಯಾಗಿದ್ದಾರೆ ಎಂದು ಅವರು ಹೇಳಿದರು. 10 ವರ್ಷದ ಬಾಲಕಿ ಶಿಶುವನ್ನು ನೋಡಿಕೊಳ್ಳಲು ಪ್ರಯತ್ನಿಸಿದಳು ಆದರೆ ಹಸಿವು ಮತ್ತು ಶೀತದಿಂದಾಗಿ ಮಗು ಅಳುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಶಿಶುವಿನ ತಾಯಿಯ ಬಗ್ಗೆ ಬಾಲಕಿಯನ್ನು ಕೇಳಿದಾಗ, ಆಕೆ ಎಲ್ಲೋ ಹೋಗಿದ್ದಾಳೆ ಎಂದು ಮಾತ್ರ ಹೇಳಿತು ಎಂದು ಜೈನ್ ಹೇಳಿದ್ದಾರೆ.
ಇದನ್ನೂ ಓದಿ: ಕಂಬಳಿ ಮಾರ್ತಿದ್ದ ಬೀದಿ ವ್ಯಾಪಾರಿಯ ಎಡವಟ್ಟಿಗೆ ಮಗು ಬಲಿ
ಇತ್ತ ಅಬಕಾರಿ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಅಕ್ರಮ ಮದ್ಯದ ದೊಡ್ಡ ಸಂಗ್ರಹವನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ. ಸುಮಾರು 5,400 ಲೀಟರ್ ದೇಶೀಯ ಮದ್ಯ, ಸುಮಾರು 19,000 ಕೆಜಿ ಬೆಲ್ಲ, 72 ಡ್ರಮ್‌ಗಳು ಮತ್ತು ಎರಡು ಮದ್ಯ ತಯಾರಿಸುವ ಯಂತ್ರಗಳನ್ನು ಪೊಲೀಸರು ನಾಶಪಡಿಸಿದ್ದಾರೆ.. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ, 30.81 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಧ್ಯಪ್ರದೇಶ ಅಬಕಾರಿ ಕಾಯ್ದೆಯಡಿ ಅಕ್ರಮವಾಗಿ ಮದ್ಯ ತಯಾರಿಸುತ್ತಿದ್ದ ಕುಟುಂಬದ ವಿರುದ್ದ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ದೊಡ್ಡ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು.
ಆದರೆ ಈಗ ಈ ದಾಳಿ ವೇಳೆ ಮಗುವನ್ನು ನೋಡಿಕೊಂಡ ಪೊಲೀಸ್ ಅಧಿಕಾರಿಯ ಮಾನವೀಯ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.


