ಅಸ್ಸಾಂನ ಗುವಾಹಟಿಯಲ್ಲಿರುವ ಹೋಟೆಲ್ ಬಿಲಾಸ್‌ನಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು, ನಾಲ್ಕಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಏಕಾಏಕಿ ನುಗ್ಗಿದ ದಾಳಿಕೋರನಿಂದ ಹಲವರು ಗಾಯಗೊಂಡಿದ್ದು, ಪೊಲೀಸರು ತನಿಖೆ ಮತ್ತು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ನವದೆಹಲಿ: ಅಸ್ಸಾಂ ರಾಜಧಾನಿ ಗುವಾಹಟಿಯ ಹೋಟೆಲ್ ಬಿಲಾಸ್‌ನಲ್ಲಿ ಭೀಕರ ಗುಂಡಿನ ದಾಳಿ ಆಗಿದೆ. ದುಷ್ಕೃತ್ಯದಲ್ಲಿ ಐವರು ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಘಟನೆಯು ಆ ಪ್ರದೇಶದಲ್ಲಿ ಭೀತಿ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಿದೆ. ಸ್ಥಳೀಯರಿಂದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಅಲ್ಲಿಗೆ ಧಾವಿಸಿದೆ. ಇನ್ನು ಗುಂಡಿನ ದಾಳಿಗೆ ಕಾರಣ ಮತ್ತು ಅದರ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪೊಲೀಸರ ಪ್ರಕಾರ.. ಈ ಘಟನೆ ಉಲುಬಾರಿ ಪ್ರದೇಶದಲ್ಲಿ ನಡೆದಿದೆ. ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಶುರುವಾಗಿದೆ. ಗಾಯಗೊಂಡವರಲ್ಲಿ ಕೆಲವು ಹೋಟೆಲ್ ಉದ್ಯೋಗಿಗಳು ಸೇರಿದ್ದಾರೆ. ಗುವಾಹಟಿ ಪೊಲೀಸ್ ಆಯುಕ್ತ ಪಾರ್ಥ ಸಾರಥಿ ಮಹಾಂತ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿರೋದನ್ನು ಖಚಿತಪಡಿಸಿದ್ದಾರೆ.

ಗುವಾಹಟಿಯ ಹೃದಯ ಭಾಗದಲ್ಲಿ ಕೃತ್ಯ ನಡೆದಿದೆ. ನಾವು ನಾಲ್ಕು ಶವಗಳನ್ನು ವಶಕ್ಕೆ ಪಡೆದಿದ್ದೇವೆ. ಅವುಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಕೃತ್ಯ ನಡೆಸಿರೋರನ್ನು ಬಂಧಿಸುತ್ತೇವೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಏಕಾಏಕಿ ನುಗ್ಗಿದ ದಾಳಿಕೋರ ಒಂದೇ ಸಮನೇ ಗುಂಡು ಹಾರಿಸಿದ್ದಾನೆ. ಇತರರು ಮಧ್ಯಪ್ರವೇಶಿಸಿ ಬಂದೂಕುಧಾರಿಯನ್ನು ತಡೆಯಲು ಪ್ರಯತ್ನಿಸಿದಾಗ, ಅವರ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಯಾರು ಆ ದಾಳಿಕೋರ?

ಏಕಾಏಕಿ ಹೋಟೆಲ್‌ಗೆ ನುಗ್ಗಿ ದಾಳಿ ಮಾಡುತ್ತಿದ್ದಂತೆಯೇ ಅಲ್ಲಿದ್ದವರೆಲ್ಲ ಆಘಾತಕ್ಕೆ ಒಳಗಾಗಿದ್ದಾರೆ. ಪ್ರಾಣವನ್ನು ಉಳಿಸಿಕೊಳ್ಳಲು ಎದ್ನೋ, ಬಿದ್ನೋ ಎಂದು ಕಾಲ್ಕಿತ್ತಿದ್ದಾರೆ. ಇನ್ನು ಕೆಲವರು ದುಸ್ಸಾಹಸ ಮಾಡಿ ದುಷ್ಕೃತ್ಯವನ್ನು ತಪ್ಪಿಸಲು ಮುಂದಾಗಿದ್ದಾರೆ. ಆಗ ಯಾರು ತಡೆಯಲು ಯತ್ನಿಸಿದರೋ, ಅವರು ಮೇಲೆ ಗುಂಡಿನ ದಾಳಿ ನಡೆಸಿ ಮುಗಿಸಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದು, ಯಾರು ದಾಳಿಕೋರ? ದಾಳಿ ಹಿಂದಿನ ಉದ್ದೇಶ ಏನು? ಯಾಕೆ ಮನಸೋ ಇಚ್ಛೆ ದಾಳಿ ಮಾಡಿದ್ದಾನೆ ಅನ್ನೋದ್ರ ಬಗ್ಗೆ ತನಿಖೆ ಶುರು ಮಾಡಿದ್ದಾರೆ.

ಮುಂದುವರಿದ ರಕ್ಷಣಾ ಕಾರ್ಯ

ಇತ್ತ ಗಾಯಗೊಂಡವರ ರಕ್ಷಣಾಕಾರ್ಯ ಮುಂದುವರಿದಿದೆ. ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಬೇರೆ ಆಸ್ಪತ್ರೆಗೆ ಅವರನ್ನು ಕೊಂಡೊಯ್ಯಲಾಗುತ್ತಿದೆ. ಇನ್ನು ಗುಂಡಿನ ದಾಳಿ ಹಿನ್ನೆಲೆಯಲ್ಲಿ ಆ ಹೋಟೆಲ್‌ ಸೇರಿದಂತೆ ಅಲ್ಲಿನ ಸುತ್ತಮುತ್ತ ಸ್ಥಳಗಳಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿದೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.