Delhi North Block Fire ದೆಹಲಿಯ ರಾಷ್ಟ್ರಪತಿ ಭವನದ ಸಮೀಪವಿರುವ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಕಟ್ಟಡದ ಛಾವಣಿಯಲ್ಲಿ ವೆಲ್ಡಿಂಗ್ ಕೆಲಸ ನಡೆಯುತ್ತಿದ್ದಾಗ ಎಸಿ ಬಾಯ್ಲರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದೆ.

ದೆಹಲಿ (ಅ.26): ದೆಹಲಿಯ ಅತ್ಯಂತ ಸೂಕ್ಷ್ಮ ಪ್ರದೇಶವಾದ ರಾಷ್ಟ್ರಪತಿ ಭವನದ ಸಮೀಪದ ನಾರ್ತ್ ಬ್ಲಾಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲಕಾಲ ಆತಂಕ ಮೂಡಿಸಿದ ಘಟನೆ ಬಗ್ಗೆ ವರದಿಯಾಗಿದೆ. ರಾಷ್ತ್ರಪತಿ ಭವನದ ಸಮೀಪ ಹೊಗೆ ಕಾಣಿಸಿಕೊಂಡಿರುವುದು ವಿಡಿಯೋಗಳಲ್ಲಿ ಸೆರೆಯಾಗಿದೆ. ಇತ್ತೀಚೆಗೆ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆ ಭಾರೀ ಕಟ್ಟೆಚ್ಚರ ನಡುವೆಯೂ ಅಗ್ನಿ ಅವಘಡ ಹೇಗೆ ಸಂಭವಿಸಿತು? ಉದ್ದೇಶಪೂರ್ವಕವೇ? ಬೆಂಕಿ ಅವಘಡ ಹೇಗಾಯ್ತು? ಅಷ್ಟಕ್ಕೂ ನಡೆದಿದ್ದೇನು?

ರಾಷ್ಟ್ರಪತಿ ಭವನದ ಸಮೀಪದಲ್ಲೇ ಅಗ್ನಿ ಅವಘಡ!

ದೆಹಲಿಯ ನಾರ್ತ್ ಬ್ಲಾಕ್ ರಾಷ್ಟ್ರಪತಿ ಭವನದ ಸಮೀಪವೇ ಇದೆ. ಇಲ್ಲಿನ ಕಟ್ಟಡವೊಂದರ ಛಾವಣಿಯಲ್ಲಿ ಅಳವಡಿಸಿಲಾಗಿದ್ದ ಎಸಿ ಬಾಯ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಈ ಕಟ್ಟಡದಲ್ಲಿ ವೆಲ್ಡಿಂಗ್‌ ಕೆಲಸ ನಡೆಯುತ್ತಿದೆ ಈ ವೇಳೆ ಬಾಯ್ಲರ್‌ನಲ್ಲಿ ಇದ್ದಕ್ಕಿದ್ದಂತೆ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡು ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಘಟನೆಯ ಮಾಹಿತಿ ತಿಳಿದಕೂಡಲೇ ಎಚ್ಚೆತ್ತ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ರಕ್ಷಣಾ ವಾಹನವನ್ನು ಕಳಹಿಸಿ ಬೆಂಕಿ ನಂದಿಸಲಾಗಿದೆ.

ರಾಜ್ಯಸಭಾ ಸಂಸದ ಮಿಲಿಂದ್ ದಿಯೋರಾ(Milind deora) ಅವರು ನಾರ್ತ್ ಬ್ಲಾಕ್‌ನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, 'Noticed thick smoke rising from behind North Block while on my way to Parliament. It appears there may be a fire. Hope everyone is safe and emergency services are responding swiftly' ಎಂದು ಬರೆದುಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ನ್ಯಾಯಾಲಯದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದೆಹಲಿ ಅಗ್ನಿಶಾಮಕ ದಳವು ಈ ಬೆಂಕಿ ಅವಘಡದ ಕುರಿತು ಹೆಚ್ಚಿನ ಮಾಹಿತಿ ನೀಡಿದೆ. ಬೆಳಗ್ಗೆ 5:22ಕ್ಕೆ ಅಗ್ನಿಶಾಮಕ ದಳಕ್ಕೆ ಈ ಬಗ್ಗೆ ಮಾಹಿತಿ ಲಭ್ಯವಾಯಿತು. ತಕ್ಷಣವೇ ಎಂಟು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ತ್ವರಿತವಾಗಿ ಬೆಂಕಿಯನ್ನು ನಂದಿಸಲು ಪ್ರಾರಂಭಿಸಿ, ಅದು ಮತ್ತಷ್ಟು ಹರಡದಂತೆ ತಡೆದರು. ಬೆಳಿಗ್ಗೆ 5:50ರ ವೇಳೆಗೆ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿತು.

ನಾರ್ತ್ ಬ್ಲಾಕ್ ಅಗ್ನಿ ಅವಘಡದ ಬಗ್ಗೆ ಅಗ್ನಿಶಾಮಕ ಹೇಳಿದ್ದೇನು?

ಅಗ್ನಿಶಾಮಕ ದಳದಿಂದ ಪಡೆದ ಮಾಹಿತಿಯ ಪ್ರಕಾರ, ಕಟ್ಟಡದ ಛಾವಣಿಯಲ್ಲಿದ್ದ ಎಸಿ ಬಾಯ್ಲರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವೆಲ್ಡಿಂಗ್ ಕೆಲಸ ನಡೆಯುತ್ತಿದ್ದಾಗ, ಬಾಯ್ಲರ್‌ನಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಇದೊಂದು ಸಣ್ಣ ಪ್ರಮಾಣದ ಅಗ್ನಿ ಅವಘಡವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ನಾರ್ತ್ ಬ್ಲಾಕ್ ಎಸಿ ಬಾಯ್ಲರ್ ಬಳಿ ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಸಂಭವಿಸಿದ ಪ್ರಮಾದವೊಂದರಿಂದ ಅಲ್ಲಿ ಇರಿಸಲಾಗಿದ್ದ ಪ್ಲಾಸ್ಟಿಕ್ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಪ್ಲಾಸ್ಟಿಕ್‌ನಿಂದಾಗಿ ದಟ್ಟವಾದ ಹೊಗೆ ಹರಡಿದೆ. ಇದರಿಂದ ಕೆಲಕಾಲ ಏನಾಯ್ತು ಎಂದು ಆತಂಕವಾಗಿದ್ದು ನಿಜ. ಆದರೆ ಕೂಡಲೇ ಅನೇಕ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಬೆಂಕಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲಾಯಿತು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.