ರಾಹುಲ್ ಗಾಂಧಿ ಅವರು ಈಗ ಜಿರಳೆ ಪಕ್ಷದ ನಾಯಕರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ. ವಿದ್ಯಾರ್ಥಿ ಹಾಗೂ ನೀಟ್ ಹೋರಾಟದ ನೆಪದಲ್ಲಿ ಕಾಂಗ್ರೆಸ್ ದೇಶದಲ್ಲಿ ಬಾಂಗ್ಲಾ ಮಾದರಿಯ ಅರಾಜಕತೆ ಸೃಷ್ಟಿಸಲು ಹುನ್ನಾರ ನಡೆಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಕೊಪ್ಪಳ (ಅ.17): ರಾಹುಲ್ ಗಾಂಧಿ ಅವರು ಈಗ ಜಿರಳೆ ಪಕ್ಷದ ನಾಯಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಜತೆಗೂಡಿಸಿ ಜಿರಳೆ ಪಕ್ಷದ ನಾಯಕ ಆಗಲಿದ್ದಾರೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದರು.
ಇದು ಕಾಂಗ್ರೆಸ್ನ ಇನ್ನೊಂದು ಮುಖ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿ ಹೋರಾಟದ ಮುಖವಾಡ ಧರಿಸಿ ಬಂದ ಜಿರಳೆಗಳ ನಿಜಬಣ್ಣ ಈಗ ಬಯಲಾಗಿದೆ. ಇದು ವಿದ್ಯಾರ್ಥಿ ಸಂಘಟನೆ ಅಲ್ಲ, ವಿದ್ಯಾರ್ಥಿ, ನೀಟ್ ನೆಪದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಬಂದ ಕಾಂಗ್ರೆಸ್ನ ಇನ್ನೊಂದು ಮುಖ ಎಂಬುದು ಈಗ ಬಯಲಾಗಿದೆ.
ಕಾಂಗ್ರೆಸ್ಗಿಂತ ಜಿರಳೆ ಪಕ್ಷದ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಹೆಚ್ಚಿನ ಒಲವು ಇದ್ದಂತಿದೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರ ಮೂಲಕ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಅರಾಜಕತೆಯ ಹಾದಿ ಹಿಡಿಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ನೇಹಾ ಬೋರಾ ಬಾಂಗ್ಲಾ ಮಾದರಿ ಹೋರಾಟ!
ನೇಹಾ ಬೋರಾ ಅವರು ಬಾಂಗ್ಲಾದ ಅರಾಜಕತೆಯ ಹೋರಾಟದ ಕುರಿತು ಮಾತನಾಡುವಾಗ ರಾಹುಲ್ ಗಾಂಧಿ ಅವರೂ ಪಕ್ಕದಲ್ಲಿದ್ದರು. ಬಾಂಗ್ಲಾ ಮಾದರಿಯ ಹೋರಾಟ ಭಾರತದಲ್ಲಿಯೂ ನಡೆಯಬೇಕು ಎಂಬ ಸಂದೇಶ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ದೇಶದ ಜನರು ಕಾಂಗ್ರೆಸ್ ವಿರುದ್ಧ ತೀರ್ಮಾನ ಕೈಗೊಳ್ಳುತ್ತಿದ್ದು, ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದರು.


