ಬೆಂಗಳೂರಿನ ತಲಘಟ್ಟಪುರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾದ ನಾಲ್ಕು ವರ್ಷಗಳ ನಂತರ ಪತಿ ಶೈಲೇಶ್ ಅವರ ಕುಟುಂಬದವರು ನೀಡುತ್ತಿದ್ದ ಕಿರುಕುಳವೇ ಸಾವಿಗೆ ಕಾರಣ ಎಂದು ಮೃತ ನವ್ಯ ಅವರ ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು(ಅ.4): ಗಂಡ ಮತ್ತು ಮನೆಯವರಿಂದ ವರದಕ್ಷಿಣೆ ಕಿರುಕುಳ ಆರೋಪ ಹಿನ್ನೆಲೆ ಗೃಹಿಣಿಯೋರ್ವಳು ಆತ್ಮ೧ಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ತಲಘಟ್ಟಪುರದ ಅವಲಹಳ್ಳಿಯಲ್ಲಿ ನಡೆದಿದೆ.

ನವ್ಯ(28), ಆತ್ಮ೧ಹತ್ಯೆಗೆ ಶರಣಾದ ಮಹಿಳೆ, ಪತಿ ಶೈಲೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದೆ.

ನಾಲ್ಕು ವರ್ಷಗಳ ಹಿಂದೆ ಮದುವೆ:

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಶೈಲೇಶ್, ನಾಲ್ಕು ವರ್ಷಗಳ ಹಿಂದೆಯಷ್ಟೇ ಶೈಲೇಶ್ ಜೊತೆ ನವ್ಯ ಮದುವೆ ಅದ್ದೂರಿಯಾಗಿ ನಡೆದಿತ್ತು. ಮೊದಲು ಚೆನ್ನಾಗಿದ್ದ ದಾಂಪತ್ಯ ಬರುಬರುತ್ತಾ ವರದಕ್ಷಿಣೆ ವಿಚಾರವಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ. ಮನೆಯಲ್ಲಿ ಪತ್ನಿ ನವ್ಯಗೆ ಪತಿ, ಮತ್ತವರ ಮನೆಯವರು ದಿನನಿತ್ಯ ವರದಕ್ಷಿಣೆಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಲಾಗಿದೆ. ಕಿರುಕುಳದಿಂದ ಬೇಸತ್ತು ನವ್ಯ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಇಂದು ಬೆಳಿಗ್ಗೆ 9:20ರ ಸುಮಾರಿಗೆ ಶೈಲೇಶ್ ಅವರು ನವ್ಯ ಅವರ ಕುಟುಂಬಸ್ಥರಿಗೆ ಕರೆ ಮಾಡಿ, ನವ್ಯ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿಸಿ, ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ನೀಡಿದ್ದರು. ಆದರೆ, ಆಸ್ಪತ್ರೆಗೆ ತಲುಪಿದಾಗ ವೈದ್ಯರು ನವ್ಯ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಮಗಳ ಸಾವಿಗೆ ಪತಿ, ಕುಟುಂಬಸ್ಥರೇ ಕಾರಣ:

ನವ್ಯ ಅವರ ಸಂಬಂಧಿಕರು ಶೈಲೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಆರೋಪ ಮಾಡಿದ್ದಾರೆ. ಮಗಳು ಆತ್ಮ೧ಹತ್ಯೆ ಮಾಡಿಕೊಳ್ಳುವವಳಲ್ಲ. ವರದಕ್ಷಿಣೆ ಕಿರುಕುಳ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಳೆ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.