ಮುನ್ನಾರ್ ಪಂಚಾಯತ್ ಚುನಾವಣೆಗೆ ಸೋನಿಯಾ ಗಾಂಧಿಗೆ ಟಿಕೆಟ್ ಕೊಟ್ಟ ಬಿಜೆಪಿ, ಸಂಕಷ್ಟದಲ್ಲಿ ಕಾಂಗ್ರೆಸ್, ಇಷ್ಟೇ ಅಲ್ಲ ದೇಶಾದ್ಯಂತ ಇದು ಭಾರಿ ಸುದ್ದಿಯಾಗಿದೆ. ಸೋನಿಯಾ ಗಾಂಧಿಗೆ ಬಿಜೆಪಿ ಟಿಕೆಟ್ ಕೊಡಲು ಹೇಗೆ ಸಾಧ್ಯ? ಎಡವಟ್ಟೇ ಅಥವಾ ಹೈಡ್ರಾಮವೇ?
ಮುನ್ನಾರ್ (ಡಿ.02) ಭಾರತದಲ್ಲಿ ಚುನಾವಣೆ ವೇಳೆ ಟಿಕೆಟ್ ಹಂಚಿಕೆ ಪ್ರತಿ ಭಾರಿ ಭಾರಿ ಕೋಲಾಹಲ, ಪೈಪೋಟಿ, ಸ್ಪರ್ಧೆ, ವಿವಾದಗಳಿಗೂ ಕಾರಣವಾಗುತ್ತದೆ. ಪ್ರಮುಖವಾಗಿ ಟಿಕೆಟ್ ಹಂಚಿಕೆ ವೇಳೆ ಅರ್ಹರಿಗೆ ನೀಡಲ್ಲ, ಹಿತಾಸಕ್ತಿ, ಹಣಕ್ಕಾಗಿ ಟಿಕೆಟ್ ಸೇರಿದಂತೆ ಹಲವು ಆರೋಪಗಳು ಸಹಜ. ಇದೀಗ ದೇಶದ ಗಮನಸೆಳೆದ ಘಟನೆಯೊಂದು ನಡೆದಿದೆ. ಬಿಜೆಪಿ ಪಕ್ಷ, ಮುನ್ನಾರ್ ಪಂಚಾಯತ್ ಚುನಾವಣೆಗೆ ಸೋನಿಯಾ ಗಾಂಧಿಗೆ ಟಿಕೆಟ್ ನೀಡಿದೆ. ಕೇರಳದಲ್ಲಿ ಪಂಚಾಯತ್ ಚುನಾವಣೆ ಸಮೀಪಿಸಿದೆ. ಇದರ ಬೆನ್ನಲ್ಲೇ ಅಭ್ಯರ್ಥಿಗಳ ಘೋಷಣೆ ಮಾಡಲಾಗಿದೆ. ಈ ವೇಳೆ ಮುನ್ನಾರ್‌ನ ಮೂಲಕ್ಕಡ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ. ಹಾಗಂತ ಬಿಜೆಪಿ ತಪ್ಪಾಗಿ ಸೋನಿಯಾ ಗಾಂಧಿಗೆ ಟಿಕೆಟ್ ಕೊಟ್ಟಿರುವುದಲ್ಲ. ಇಲ್ಲಿ ನಿಜಕ್ಕೂ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ.
ಯಾರಿದು ಸೋನಿಯಾ ಗಾಂಧಿ?
ಮುನ್ನಾರ್ ಮೂಲಕ್ಕಾಡ್ ಪಂಚಾಯತ್ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಸೋನಿಯಾ ಗಾಂಧಿ. ಹೌದು ಈ ಅಭ್ಯರ್ಥಿ ಹೆಸರು ಸೋನಿಯಾ ಗಾಂಧಿ. ಹೆಸರಿನಿಂದ ಹಿಂದೆ ದೊಡ್ಡ ಇತಿಹಾಸವೂ ಇದೆ. ಈ ಅಭ್ಯರ್ಥಿಯ ತಂದೆ ಹೆಸರು ದುರೆ ರಾಜ್. ಕಟ್ಟಾ ಕಾಂಗ್ರೆಸ್ ನಾಯಕ. ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದ ಕಾಲದಲ್ಲಿ ಕಾಂಗ್ರೆಸ್‌ನ ಕಟ್ಟಾಳುವಾಗಿ ಕೆಲಸ ಮಾಡಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಾಗಿ ಗುರುತಿಸಿಕೊಂಡಿರುವ ದುರೆ ರಾಜ್, ಕಾಂಗ್ರೆಸ್ ಹಾಗೂ ಸೋನಿಯಾ ಗಾಂಧಿ ಮೇಲಿನ ಅಭಿಮಾನಕ್ಕೆ ತಮಗೆ ಹುಟ್ಟಿದ ಮಗುವಿಗೆ ಸೋನಿಯಾ ಗಾಂಧಿ ಎಂದು ಹೆಸರಿಟ್ಟಿದ್ದರು. ಇದೇ ಸೋನಿಯಾ ಗಾಂಧಿ ಇದೀಗ ಮುನ್ನಾರ್ ಪಂಚಾಯತ್‌ನ ಬಿಜೆಪಿ ಅಭ್ಯರ್ಥಿ.

ತಂದೆ ಕಾಂಗ್ರೆಸ್, ಮಗಳು ಈಗ ಬಿಜೆಪಿ
ದುರೆ ರಾಜ್ ಕಾಂಗ್ರೆಸ್‌ನ ಹಿರಿಯ ನಾಯಕರು, ಆದರೆ ಮಗಳು ಸೋನಿಯಾ ಗಾಂಧಿ ಮದುವೆಯಾದ ಬಳಿಕ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ. ಸೋನಿಯಾ ಗಾಂಧಿ ಬಿಜೆಪಿ ಸ್ಥಳೀಯ ಮುಖಂಡ ಸುಭಾಷ್ ಮದುವೆಯಾದ ಬಳಿಕ ಪಾರ್ಟಿ ಬದಲಾಯಿತು. ಸೋನಿಯಾ ಗಾಂಧಿ ಬಿಜೆಪಿ ಪಕ್ಷ ಸೇರಿಕೊಂಡು ಕೆಲಸ ಆರಂಭಿಸಿದ್ದರು. ಈ ಬಾರಿ ಸೋನಿಯಾ ಗಾಂಧಿ ಪಂಚಾಯತ್ ಚುನಾವಣೆ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್‌ಗೆ ಶುರುವಾಯ್ತು ಸಂಕಷ್ಟ
ಮುನ್ನಾರ್ ಪಂಚಾಯತ್ ಕಾಂಗ್ರೆಸ್ ಹಾಗೂ ಕಮ್ಯೂನಿಸ್ಟ್ ಪ್ರಬಲ ಕ್ಷೇತ್ರವಾಗಿದೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ರಮೇಶ್‌ಗೆ ಸಂಕಷ್ಟ ಹೆಚ್ಚಾಗಿದೆ. ಸೋನಿಯಾ ಗಾಂಧಿ ಅನ್ನೋ ಹೆಸರೇ ಹಲವು ಮತಗಳನ್ನು ಸೆಳೆಯಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿ ಸೋನಿಯಾ ಗಾಂಧಿ ಬಿಜೆಪಿಯಿಂದ ಗೆಲ್ಲುವು ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕೇರಳ ಸ್ಥಳೀಯ ಚುನಾವಣೆ ಎರಡು ಹಂತದಲ್ಲಿ ನಡೆಯಲಿದೆ. ಡಿಸೆಂಬರ್ 9 ಹಾಗೂ 11ರಂದು ನಡೆಯಲಿದೆ. ಇನ್ನು ಫಲಿತಾಂಶ ಡಿಸೆಂಬರ್ 13ರಂದು ಘೋಷಣೆಯಾಗಲಿದೆ.


