ನವದೆಹಲಿ(ಡಿ.07): ಕೊರೋನಾ ಲಸಿಕೆ ಲಭಿಸುತ್ತಿದ್ದಂತೆ ಅದನ್ನು ದೇಶದ ಮೂಲೆಮೂಲೆಗೆ ಸಾಗಿಸಲು ಭಾರತೀಯ ವಾಯುಪಡೆ ತನ್ನ 100 ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಿದೆ. ಯಾವುದೇ ಕ್ಷಣದಲ್ಲಿ ಲಸಿಕೆ ಏರ್‌ಲಿಫ್ಟ್‌ ಮಾಡಲು ಕರೆ ಬರಬಹುದು ಎಂಬ ನಿರೀಕ್ಷೆಯಿಂದ ವಾಯುಪಡೆ ಸನ್ನದ್ಧವಾಗಿದೆ ಎಂದು ಮೂಲಗಳು ಹೇಳಿವೆ.

"

ಲಸಿಕೆ ಅಂದರೆ ಶೂನ್ಯ ಕೊರೋನಾ ಅಲ್ಲ: ಡಬ್ಲ್ಯುಎಚ್‌ಒ!

ಲಸಿಕೆ ಸಾಗಿಸಲು ಮೂರು ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ವಾಯುಪಡೆ ಸಿದ್ಧತೆ ಮಾಡಿಕೊಂಡಿದೆ. ಮೊದಲನೆಯದಾಗಿ, ಫಾರ್ಮಾ ಕಂಪನಿಗಳಿಂದ ದೇಶದ ವಿವಿಧೆಡೆ ಇರುವ 28,000 ಶೀತಲೀಕರಣ ಘಟಕಗಳಿಗೆ ದೊಡ್ಡ ಪ್ರಮಾಣದಲ್ಲಿ ಲಸಿಕೆ ಸಾಗಿಸಲು ಸಿ-17 ಗ್ಲೋಬ್‌ಮಾಸ್ಟರ್‌, ಸಿ-130ಜೆ ಹಕ್ರ್ಯುಲಸ್‌ ಹಾಗೂ ಐಎಲ್‌ 76 ಸರಕು ಸಾಗಣೆ ವಿಮಾನಗಳನ್ನು ಬಳಸಲಿದೆ. ಎರಡನೆಯದಾಗಿ, ಸಣ್ಣ ಕೇಂದ್ರಗಳಿಗೆ ಲಸಿಕೆ ಪೂರೈಸಲು ಎಎನ್‌-32 ಹಾಗೂ ಡಾರ್ನಿಯರ್‌ ವಿಮಾನಗಳನ್ನು ಸಿದ್ಧಪಡಿಸಿದೆ. ಮೂರನೆಯದಾಗಿ, ಕೊನೆಯ ಹಂತದ ವಿತರಣೆಗೆ ಎಎಲ್‌ಎಚ್‌, ಚೀತಾ ಹಾಗೂ ಚಿನೂಕ್‌ ಹೆಲಿಕಾಪ್ಟರ್‌ಗಳನ್ನು ಕಾಯ್ದಿರಿಸಿದೆ.

ಕೊರೋನಾ ಲಸಿಕೆಗೆ ಕಾಯುತ್ತಿರುವವರಿಗೆ ಬಿಗ್ ಶಾಕ್ ನೀಡಿದ WHO!

ಹಿಂದೆ ಕೇಂದ್ರ ಸರ್ಕಾರ 1000 ಹಾಗೂ 500 ರು. ನೋಟು ನಿಷೇಧಿಸಿದ ವೇಳೆ ಹೊಸ ನೋಟು ಸಾಗಿಸಲು ಯುದ್ಧವಿಮಾನಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿದ್ದವು. ಈಗ ಅದಕ್ಕಿಂತ ದೊಡ್ಡ ರೀತಿಯಲ್ಲಿ, ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲು ವಾಯುಪಡೆ ಸಜ್ಜಾಗಿದೆ. ಇನ್ನು, 2018ರಲ್ಲಿ ರುಬೆಲ್ಲಾ ಹಾಗೂ ದಡಾರ ಲಸಿಕೆಯನ್ನು ದೇಶದ ವಿವಿಧೆಡೆಗೆ ಸಾಗಿಸಿದ ಅನುಭವವನ್ನು ವಾಯುಪಡೆ ಹೊಂದಿದೆ.

ಲಸಿಕೆ ಲಭಿಸಿದ ತಕ್ಷಣ 30 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದು, ಅದಕ್ಕಾಗಿ ಟಾಸ್ಕ್‌ ಫೋರ್ಸ್‌ ಕೂಡ ರಚನೆ ಮಾಡಿದ್ದಾರೆ. ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ ಹಾಗೂ ಆರೋಗ್ಯ ಸಚಿವಾಲಯ ಈ ಕಾರ್ಯಪಡೆಯಲ್ಲಿವೆ.