ವಾಷಿಂಗ್ಟನ್(ಡಿ.06)‌: ಭಾರತವೂ ಸೇರಿದಂತೆ ಜಗತ್ತಿನ ಎಲ್ಲಾ ದೇಶಗಳೂ ಕೊರೋನಾ ಬಾರದಂತೆ ತಡೆಯುವ ಲಸಿಕೆಯನ್ನು ಪ್ರಜೆಗಳಿಗೆ ನೀಡಲು ದೊಡ್ಡ ಪ್ರಮಾಣದಲ್ಲಿ ಸಿದ್ಧತೆÜ ಮಾಡಿಕೊಳ್ಳುತ್ತಿರುವಾಗ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ‘ಲಸಿಕೆ ಅಂದರೆ ಶೂನ್ಯ ಕೊರೋನಾ ಅಂತರ್ಥವಲ್ಲ. ಕೊರೋನಾ ಬಿಕ್ಕಟ್ಟು ಪರಿಹಾರಕ್ಕೆ ಲಸಿಕೆ ಮಂತ್ರದಂಡವಲ್ಲ’ ಎಂದು ಎಚ್ಚರಿಕೆ ನೀಡಿದೆ.

ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು 160 ಕೋಟಿ ಲಸಿಕೆ ಖರೀದಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗ ಹಾಗೂ ಬೇರೆ ಬೇರೆ ದೇಶಗಳಲ್ಲಿ ಲಸಿಕೆಗೆ ಸರ್ಕಾರಗಳು ತುರ್ತು ಅನುಮೋದನೆ ನೀಡಲು ಮುಂದಾಗಿರುವಾಗ ಈ ಹೇಳಿಕೆ ಹೊರಬಿದ್ದಿರುವುದು ಮಹತ್ವ ಪಡೆದಿದೆ.

‘ಲಸಿಕೆ ಬಂದರೆ ಕೋವಿಡ್‌-19 ಬಿಕ್ಕಟ್ಟು ಮುಗಿದುಹೋಗುತ್ತದೆ ಎಂಬುದು ತಪ್ಪು ಕಲ್ಪನೆ. ಲಸಿಕೆಗಳು ಕೊರೋನಾವನ್ನು ಶೂನ್ಯಕ್ಕೆ ಇಳಿಸುವುದಿಲ್ಲ. ಕೊರೋನಾ ವಿರುದ್ಧದ ಹೋರಾಟಕ್ಕೆ ಲಸಿಕೆಗಳು ದೊಡ್ಡ ಅಸ್ತ್ರವೊಂದನ್ನು ನಮ್ಮ ಕೈಗೆ ನೀಡುತ್ತವೆ ಅಷ್ಟೆ. ಆದರೆ, ಅವುಗಳಿಂದಲೇ ಎಲ್ಲ ಕೆಲಸವೂ ಆಗುವುದಿಲ್ಲ’ ಎಂದು ಡಬ್ಲ್ಯುಎಚ್‌ಒ ತುರ್ತು ವ್ಯವಹಾರಗಳ ನಿರ್ದೇಶಕ ಮೈಕಲ್‌ ರಾರ‍ಯನ್‌ ಶುಕ್ರವಾರ ಹೇಳಿದ್ದಾರೆ.

ಇನ್ನು, ಡಬ್ಲ್ಯುಎಚ್‌ಒ ಮಹಾ ಪ್ರಧಾನ ನಿರ್ದೇಶಕ ಟೆಡ್ರೋಸ್‌ ಅಧನೋಮ್‌ ಗೇಬ್ರಿಯೇಸಸ್‌ ‘ಲಸಿಕೆಗಳ ಸಂಶೋಧನೆಯಲ್ಲಾಗುತ್ತಿರುವ ಪ್ರಗತಿಯಿಂದ ಸುರಂಗದ ಕೊನೆಯಲ್ಲಿ ಬೆಳಕು ಗೋಚರಿಸಿದಂತಾಗಿದೆ. ಆದರೆ, ಲಸಿಕೆ ಬಂದರೆ ಕೊರೋನಾ ಮುಗಿದುಹೋಗುತ್ತದೆ ಎಂಬ ಭಾವನೆ ಬೇಡ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನಲ್ಲೀಗ 51 ಕೊರೋನಾ ಲಸಿಕೆಗಳು ಮನುಷ್ಯರ ಮೇಲಿನ ಪ್ರಯೋಗದ ಹಂತದಲ್ಲಿವೆ. 13 ಲಸಿಕೆಗಳು ಅಂತಿಮ ಹಂತದ ಪರೀಕ್ಷೆಯಲ್ಲಿವೆ.