ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಕೂಡ ಅಂಬಾನಿ ದಂಪತಿ ಮಗನ ಮದುವೆಗೆ ಕರೆದಿದ್ದಾರೆ. ಅದರಂತೆ ನಾಳೆ ನಡೆಯಲಿರುವ ಅದ್ದೂರಿ ವಿವಾಹ ಸಮಾರಂಭಕ್ಕೆ ಬೆಂಗಾಲಿ ದೀದೀ ಮುಂಬೈ ವಿಮಾನವೇರಿದ್ದಾರೆ. 

ಕೋಲ್ಕತ್ತಾ: ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕೊನೆಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ನಾಳೆ ಮುಂಬೈನ ಜಿಯೋ ವರ್ಲ್ಡ್‌ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ತಮ್ಮ ಮನೆಯ ಕೊನೆಯ ಮದುವೆಗೆ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿ ದೇಶದೆಲ್ಲೆಡೆ ಗಣ್ಯರು, ರಾಜಕೀಯ ನಾಯಕರು ಸಿನಿಮಾ ತಾರೆಯರೆನ್ನದೇ ಎಲ್ಲರನ್ನೂ ಕರೆದಿದ್ದಾರೆ. ಹಾಗೆಯೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಕೂಡ ಅಂಬಾನಿ ದಂಪತಿ ಕರೆದಿದ್ದಾರೆ. ಅದರಂತೆ ನಾಳೆ ನಡೆಯಲಿರುವ ಅದ್ದೂರಿ ವಿವಾಹ ಸಮಾರಂಭಕ್ಕೆ ಬೆಂಗಾಲಿ ದೀದೀ ಮುಂಬೈ ವಿಮಾನವೇರಿದ್ದಾರೆ. 

ಇನ್ನು ಮುಂಬೈಗೆ ತೆರಳುವ ಮುನ್ನ ಕೋಲ್ಕತ್ತಾದ ಸುಭಾಷ್ ಚಂದ್ರಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ನಾನು ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ಮದ್ವೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೆ. ಆದರೆ ನೀತಾಜೀಯಿಂದ ಮುಖೇಶ್ ಅಂಬಾನಿವರೆಗೆ ಅವರ ಕುಟುಂಬದ ಪ್ರತಿಯೊಬ್ಬರು ತಮ್ಮ ಕುಟುಂಬದ ಮದ್ವೆಗೆ ಹಾಜರಾಗುವಂತೆ ಮತ್ತೆ ಮತ್ತೆ ಮನವಿ ಮಾಡಿದರು. ಹೀಗಾಗಿ ನಾನು ಮದ್ವೆಗೆ ಹೋಗುತ್ತಿದ್ದೇನೆ. ಇದೇ ವೇಳೆ ನಾನು ಮುಂಬೈನಲ್ಲಿ ಎನ್‌ಸಿಪಿ ನಾಯಕ ಶರದ್ ಪವಾರ್ ಹಾಗೂ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿದ್ದಾರೆ. 

ಸೋನಿಯಾ ಗಾಂಧಿ ನಿವಾಸಕ್ಕೆ ಉದ್ಯಮಿ ಮುಖೇಶ್ ಅಂಬಾನಿ ಭೇಟಿ: ಮಗನ ಮದ್ವೆಗೆ ಆಹ್ವಾನ?

ಲೋಕಸಭೆಯಲ್ಲಿ ವಿರೋಧ ಪಕ್ಷವಾಗಿರುವ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಮಮತಾ ಬ್ಯಾನರ್ಜಿಯವರು ಕೇಂದ್ರದ ಬಿಜೆಪಿ ಸರ್ಕಾರವನ್ನೂ ಬೈಯ್ಯುವ ಭರದಲ್ಲಿ ದೇಶದ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ ಅವರನ್ನು ಅಗಾಗ ಟೀಕಿಸುತ್ತಲೇ ಇರುತ್ತಾರೆ. ಆದರೆ ಉದ್ಯಮಿ ಅಂಬಾನಿ ಮಾತ್ರ ರಾಜಕಾರಣಿಗಳೊಂದಿಗೆ ಯಾವ ಹಗೆಯನ್ನು ಇಟ್ಟುಕೊಳ್ಳದೇ ಪಕ್ಷಭೇದ ಮಾಡದೇ ಎಲ್ಲಾ ರಾಜಕೀಯ ಪಕ್ಷಗಳ ನಾಯಕನನ್ನು ಮಗನ ಮದುವೆಗೆ ಆಹ್ವಾನಿಸಿದ್ದಾರೆ. ಇತ್ತೀಚೆಗಷ್ಟೇ ಸ್ವತಃ ಮುಖೇಶ್ ಅಂಬಾನಿಯವರೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ದೆಹಲಿಯ ನಿವಾಸಕ್ಕೆ ಭೇಟಿ ನೀಡಿ ಮಗನ ಮದುವೆಗೆ ಹಿರಿಯ ನಾಯಕಿಯನ್ನು ಆಹ್ವಾನಿಸಿದ್ದು, ಸುದ್ದಿಯಾಗಿತ್ತು. ಏಕೆಂದರೆ ಸೋನಿಯಾ ಪುತ್ರ ಲೋಕಸಭೆಯಲ್ಲಿ ವಿಪಕ್ಷ ನಾಯಕನಾಗಿರುವ ರಾಹುಲ್ ಗಾಂಧಿ ಕೂಡ ಅಂಬಾನಿ ಅದಾನಿ ಅವರನ್ನು ಆಗಾಗ ಟೀಕಿಸಿ ಸುದ್ದಿಯಾದವರು. 

ಅಂಬಾನಿ ಫ್ಯಾಮಿಲಿ ಮದುವೆ ಡಾನ್ಸ್​ ಮಾಡಿದ್ರೆ ಇದು 'ಜಿಯೋ ರಿಚಾರ್ಜ್'​ ಖುಷಿ ಅಂತಿದ್ದಾರಲ್ಲ ತರ್ಲೆ ಕಮೆಂಟಿಗರು?

ಇತ್ತ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮಗಳು ಸಾಕಷ್ಟು ಅದ್ದೂರಿ ಆಗಿ ನಡೆಯುತ್ತಿದೆ. ಇವರ ಮದುವೆಯ ಆಹ್ವಾನ ಪತ್ರಿಕೆಯ ವೀಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು. ಮುಂಬೈನ ಜಿಯೋ ವರ್ಲ್ಡ್ ಕನ್‌ವೆನ್ಶನ್ ಸೆಂಟರ್‌ನಲ್ಲಿ ಜುಲೈ 12ರಂದು ಈ ಜೋಡಿ ಅದ್ದೂರಿ ವಿವಾಹವಾಗಲಿದ್ದಾರೆ. 

Scroll to load tweet…