ಸೋನಿಯಾ ಗಾಂಧಿ ನಿವಾಸಕ್ಕೆ ಉದ್ಯಮಿ ಮುಖೇಶ್ ಅಂಬಾನಿ ಭೇಟಿ: ಮಗನ ಮದ್ವೆಗೆ ಆಹ್ವಾನ?
ಉದ್ಯಮಿ ಮುಖೇಶ್ ಅಂಬಾನಿ ದೆಹಲಿಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇಡೀ ಕಾಂಗ್ರೆಸ್ ಟೀಮ್ ಸದಾ ಕಾಲ ದೇಶದ ಶ್ರೀಮಂತ ಉದ್ಯಮಿಗಳಾದ ಅಂಬಾನಿ, ಅದಾನಿ ಅವರನ್ನು ದೇಶ ಕೊಳ್ಳೆ ಹೊಡೆದರು ಎಂದು ಆಗಾಗ ಹರಿಹಾಯ್ತಾನೇ ಇರ್ತಾರೆ. ಅಲ್ಲದೇ ಉದ್ಯಮಿಗಳಿಗೆ ದೇಶವನ್ನು ಮಾರಿದರು ಎಂದು ಕೇಂದ್ರದಲ್ಲಿರುವ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸದಾ ತಿವಿಯುತ್ತಲೇ ಇರುತ್ತಾರೆ. ಆದರೆ ಈಗ ಉದ್ಯಮಿ ಮುಖೇಶ್ ಅಂಬಾನಿ ಮಾತ್ರ ಇದ್ಯಾವುದನ್ನು ತಲೆಗೆ ಹಾಕಿಕೊಳ್ಳದೇ ದೆಹಲಿಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ.
ತಮ್ಮ ಮನೆಯ ಕೊನೆಯ ಮದುವೆ ಹಾಗೂ ತಮ್ಮ ಕೊನೆ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಆಮಂತ್ರಣ ಪತ್ರವನ್ನು ನೀಡಿ ಸೋನಿಯಾ ಗಾಂಧಿಯವರನ್ನು ವಿವಾಹಕ್ಕೆ ಆಮಂತ್ರಿಸುವುದಾಗಿ ಮುಖೇಶ್ ಅಂಬಾನಿ, ಸೋನಿಯಾ ಗಾಂಧಿ ನಿವಾಸಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ದೆಹಲಿಯ 10ನೇ ಜನಪಥ್ ರಸ್ತೆಯಲ್ಲಿರುವ ಮನೆಗೆ ಉದ್ಯಮಿ ಮುಖೇಶ್ ಅಂಬಾನಿ ಭೇಟಿ ನೀಡಿದ್ದು, ತಮ್ಮ ಮಗನ ಮದ್ವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ ಎಂದು ವರದಿ ಆಗಿದೆ.
ರಾಹುಲ್ ನಿರಂತರ ಟೀಕೆಯ ಮಧ್ಯೆಯೇ ಅದಾನಿ ಕಂಪನಿಗೆ ಗುತ್ತಿಗೆ ನೀಡಿದ ತೆಲಂಗಾಣದ ಕಾಂಗ್ರೆಸ್ ಸರ್ಕಾರ
ಮುಖೇಶ್ ಅಂಬಾನಿ ಅವರು ಸೋನಿಯಾ ಗಾಂಧಿ ನಿವಾಸಕ್ಕೆ ತೆರಳಿ ವಾಪಸ್ ಹೋಗುತ್ತಿರುವ ವೀಡಿಯೋವನ್ನು ಸುದ್ದಿಸಂಸ್ಥೆ ಎಎನ್‌ಐ ಪೋಸ್ಟ್ ಮಾಡಿದೆ. ಇತ್ತ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮಗಳು ಸಾಕಷ್ಟು ಅದ್ದೂರಿ ಆಗಿ ನಡೆಯುತ್ತಿದೆ. ಇವರ ಮದುವೆಯ ಆಹ್ವಾನ ಪತ್ರಿಕೆಯ ವೀಡಿಯೋ ಇತ್ತೀಚೆಗೆ ಭಾರಿ ವೈರಲ್ ಆಗಿತ್ತು. ಮುಂಬೈನ ಜಿಯೋ ವರ್ಲ್ಡ್ ಕನ್‌ವೆನ್ಶನ್ ಸೆಂಟರ್‌ನಲ್ಲಿ ಜುಲೈ 12ರಂದು ಈ ಜೋಡಿ ಅದ್ದೂರಿ ವಿವಾಹವಾಗಲಿದ್ದಾರೆ.
ಇತ್ತ ರಾಹುಲ್ ಗಾಂಧಿ ಅವರು ಅಂಬಾನಿ, ಅದಾನಿ ವಿರುದ್ಧ ನಿರಂತರ ವಾಗ್ದಾಳಿ ಮಾಡಿಕೊಂಡು ಬಂದಿದ್ದಾರೆ. ಹೀಗಿದ್ದರೂ ಇತ್ತೀಚೆಗೆ ತೆಲಂಗಾಣದಲ್ಲೂ ಅಲ್ಲಿನ ಕಾಂಗ್ರೆಸ್ ಸರ್ಕಾರ, ಹಳೆ ಹೈದ್ರಾಬಾದ್ ವ್ಯಾಪ್ತಿಯ ಪ್ರದೇಶದಲ್ಲಿ ವಿದ್ಯುತ್ ವಿತರಣೆ ಮತ್ತು ವಿದ್ಯುತ್ ಬಿಲ್ ವಸೂಲಿ ಹೊಣೆಯನ್ನು ಗೌತಮ್ ಅದಾನಿ ಒಡೆತನದ ಅದಾನಿ ಸಮೂಹಕ್ಕೆ ನೀಡಿದೆ.
ಹಳೆ ಹೈದ್ರಾಬಾದ್ ಭಾಗದಲ್ಲಿ ವಿದ್ಯುತ್ ಬಿಲ್ ಸರಿಯಾಗಿ ಪಾವತಿಯಾಗುತ್ತಿಲ್ಲ, ವಸೂಲಿಗೆ ಹೋದ ಸಿಬ್ಬಂದಿ ಮೇಲೆ ಹಲ್ಲೆಯಂಥ ಘಟನೆ ನಡೆಯುತ್ತಿದೆ. ಹೀಗಾಗಿ ಬಿಲ್ ವಸೂಲಿ ಹೊಣೆಯನ್ನು ಅದಾನಿ ಕಂಪನಿಗೆ ನೀಡಲಾಗಿದೆ. ಈ ಕುರಿತು ಉಭಯ ಬಣಗಳ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದರನ್ವಯ ಬಾಕಿ ವಿದ್ಯುತ್ ಬಿಲ್‌ನಲ್ಲಿ ಶೇ.75ರಷ್ಟು ಸರ್ಕಾರಕ್ಕೆ ಸೇರಿದರೆ ಶೇ.25ರಷ್ಟು ಅದಾನಿ ಸಮೂಹಕ್ಕೆ ಹೋಗಲಿದೆ. ಇದು ಪ್ರಾಯೋಗಿಕ ಯೋಜನೆಯಾಗಿದ್ದು ಮುಂದೆ ಇಡೀ ನಗರದ ಹೊಣೆಯನ್ನು ಅದಾನಿ ಸಮೂಹಕ್ಕೆ ನೀಡಲಾಗುವುದು ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಕಟಿಸಿದ್ದಾರೆ.
ಬಯಲಾಯ್ತು ಕಾಂಗ್ರೆಸ್ ಬಂಡವಾಳ, ಅದಾನಿ ಜೊತೆ ತೆಲಂಗಾಣ 12,400 ಕೋಟಿ ರೂ ಒಪ್ಪಂದ!