ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಮೂಲಕ ಮಗು ನೀಡುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ ಹೈದರಾಬಾದ್ ಆಸ್ಪತ್ರೆ. ಮಗುವಿನ ಡಿಎನ್ಎ ಪರೀಕ್ಷೆ ನಡೆಸಿದ ದಂಪತಿಗೆ ಆಘಾತ
ಹೈದರಾಬಾದ್: ಇತ್ತೀಚೆಗೆ ಮಕ್ಕಳಿಲ್ಲದ ದಂಪತಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕೆಲವರು ಒಂದು ಮಗುವಿಗಾಗಿ ಲಕ್ಷಾಂತರ ರೂ ವೆಚ್ಚ ಮಾಡಲು ಸಿದ್ಧರಿರುತ್ತಾರೆ. ಕೆಲ ಆಸ್ಪತ್ರೆಗಳು ಹಾಗೂ ವೈದ್ಯರು ಇದ್ದನ್ನೇ ದೊಡ್ಡ ದಂಧೆಯಾಗಿ ಮಾಡಿಕೊಂಡಿದ್ದು, ಬಡ ಹೆಣ್ಣು ಮಕ್ಕಳಿಗೆ ಹಣದ ಆಮಿಷ ತೋರಿಸಿ ಇವರು ಕೋಟಿಗಟ್ಟಲೇ ದುಡಿಮೆ ಮಾಡುತ್ತಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ದಂಪತಿಗೆ ಆಘಾತ
ಅದೇ ರೀತಿ ಮಕ್ಕಳಿಲ್ಲದ ಒಂದು ದಂಪತಿ ಇದೇ ರೀತಿ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಮಾಡಿ ಕೊಡುವುದಾಗಿ ಹೇಳಿದ ಆಸ್ಪತ್ರೆಯೊಂದರ ಮೊರೆ ಹೋಗಿದ್ದು, ಅಲ್ಲಿ ಸುಮಾರು 35 ಲಕ್ಷ ರೂಪಾಯಿ ವೆಚ್ಚ ಮಾಡಿ ಆ ವೈದ್ಯರು ಅನುಮತಿಸಿದ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆದಿದ್ದಾರೆ. ಆದರೆ ಈ ದಂಪತಿಗೆ ಮಗುವಿನಲ್ಲಿ ತಮ್ಮ ಯಾವುದೇ ಅನುವಂಶೀಯವಾದ ಲಕ್ಷಣಗಳು ಇಲ್ಲದೇ ಇರುವುದರಿಂದ ಅನುಮಾನಗೊಂಡ ದಂಪತಿ ಬೇರೆ ಆಸ್ಪತ್ರೆಯಲ್ಲಿ ಮಗುವಿನ ಡಿಎನ್ಎ ಪರೀಕ್ಷೆ ನಡೆಸಿದಾಗ ಮಗು ತಮ್ಮದಲ್ಲ ಎಂಬುದು ತಿಳಿದು ಬಂದು ಆಘಾತಕ್ಕೊಳಗಾಗಿದ್ದು ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಹೈದರಾಬಾದ್‌ನಲ್ಲಿ ಅಕ್ರಮವಾಗಿ ಬಾಡಿಗೆ ತಾಯ್ತನ ಹಾಗೂ ವೀರ್ಯ ಕಳ್ಳಸಾಗಣೆ ಪ್ರಕರಣದಲ್ಲಿ ಕಾರ್ಯಾಚರಿಸುತ್ತಿದ್ದ ಕ್ಲಿನಿಕ್ಕೊಂದರ ಮೇಲೆ ದಾಳಿ ಮಾಡಿದ್ದು, ವೈದ್ಯರು ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಿದ್ದು, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ಪ್ರಕ್ರಿಯೆಯ ಕರಾಳ ಮುಖವನ್ನು ಬಯಲು ಮಾಡಿದೆ.
ಬಾಡಿಗೆ ತಾಯ್ತನ ಎಂದರೇನು?
ಸಾಮಾನ್ಯವಾಗಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಬಯಸುವ ದಂಪತಿ ತಮ್ಮದೇ ವಂಶದ ಕುಡಿಯನ್ನು ಪಡೆಯಲು ಬಯಸುವ ದಂಪತಿ ತಮ್ಮ ಅಂಡಾಣು ಹಾಗೂ ವೀರ್ಯಾಣುವನ್ನು ಮತ್ತೊಬ್ಬ ಮಹಿಳೆಯ(ಬಾಡಿಗೆ ತಾಯಿ) ಗರ್ಭದಲ್ಲಿ ಕೃತಕವಾಗಿ ಧಾರಣೆ ಮಾಡುವ ಮೂಲಕ ಗರ್ಭಧಾರಣೆ ನಡೆಸಿ ಮಗುವನ್ನು ಪಡೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಬಾಡಿಗೆ ತಾಯಿಗೆ ಮಕ್ಕಳಿಲ್ಲದ ದಂಪತಿ ವೈದ್ಯಕೀಯ ವೆಚ್ಚ ಹಾಗೂ ಲಕ್ಷಾಂತರ ರೂಪಾಯಿ ಆರ್ಥಿಕ ನೆರವನ್ನು ನೀಡುತ್ತಾರೆ.
ಡಿಎನ್‌ಎ ಪರೀಕ್ಷೆ ನಡೆಸಿದ ದಂಪತಿಗೆ ಶಾಕ್
ಆದರೆ ಹೈದರಾಬಾದ್‌ನಲ್ಲಿ ಈ ರೀತಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಮಾಡಿ ಕೊಡುವುದಾಗಿ ಮಕ್ಕಳಿಲ್ಲದ ರಾಜಸ್ಥಾನ ಮೂಲದ ದಂಪತಿಗೆ ಹೇಳಿದ ಆಸ್ಪತ್ರೆ ಅವರಿಗೆ ಬಾಡಿಗೆ ತಾಯ್ತನದ ಮೂಲಕ ಬೇರೆಯವರ ವೀರ್ಯ ಹಾಗೂ ಅಂಡಾಣುವಿನಿಂದ ಜನಿಸಿದ ಮಗುವನ್ನು ನೀಡಿದೆ. ಆದರೆ ಈ ಮಗುವನ್ನು ಪಡೆದ ದಂಪತಿಗೆ ಅನುಮಾನ ಬಂದು ದೆಹಲಿಯಲ್ಲಿ ತಾಯಿಯ ಡಿಎನ್‌ಎ ಪರೀಕ್ಷೆ ನಡೆಸಿದಾಗ ಅವರ ಅನುಮಾನ ಧೃಡವಾಗಿದೆ. ಎಷ್ಟೋ ಲಕ್ಷಗಳನ್ನು ವೆಚ್ಚ ಮಾಡಿ ಬಾಡಿಗೆ ತಾಯಿಯ ಮೂಲಕ ಪಡೆದ ಮಗು ತಮ್ಮದಲ್ಲ ಎಂದು ಅರಿವಾಗಿ ನೊಂದ ಜೋಡಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಹೈದರಾಬಾದ್‌ನ ಸೃಷ್ಟಿ ಫರ್ಟಿಲಿಟಿ ಸೆಂಟರ್ ಮೇಲೆ ದಾಳಿ
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೈದರಾಬಾದ್‌ನ ಸಿಕಂದರಾಬಾದ್‌ನ ರೆಜಿಮೆಂಟಲ್ ಬಜಾರ್‌ನಲ್ಲಿರುವ ಯೂನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್ ಮೇಲೆ ದಾಳಿ ಮಾಡಿದ್ದು, ಅದರ ವ್ಯವಸ್ಥಾಪಕಿ ಡಾ. ನಮ್ರತಾ. ಸೇರಿದಂತೆ ಒಟ್ಟು 10 ಜನರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಗಾಗಿ ಬಡ ಜನರನ್ನು ಬಾಡಿಗೆ ತಾಯ್ತನಕ್ಕೆ ಆಕರ್ಷಿಸಲಾಗುತ್ತಿತ್ತು ಮತ್ತು ಬಾಡಿಗೆ ತಾಯ್ತನದ ಮೂಲಕ ಮಗು ಮಾಡುವುದಕ್ಕೆ ಬೇಕಾಗುವ ವಸ್ತುಗಳನ್ನು ಅಕ್ರಮವಾಗಿ ಅಂತರರಾಜ್ಯದಲ್ಲಿ ಸಾಗಿಸುವ ವ್ಯವಸ್ಥಿತ ಜಾಲ ಇತ್ತು ಎಂದು ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಹೈದರಾಬಾದ್ ನಾರ್ತ್ ಝೋನ್‌ನ ಉಪ ಕಮೀಷನರ್ ರಶ್ಮಿ ಪೆರುಮಾಳ್ ಹೇಳಿದ್ದಾರೆ.
ದೂರು ನೀಡಿದ್ದ ರಾಜಸ್ಥಾನದ ಮಕ್ಕಳಿಲ್ಲದ ದಂಪತಿ
ಮೂಲತಃ ರಾಜಸ್ಥಾನದವರಾಗಿದ್ದು, ಹೈದರಾಬಾದ್‌ನಲ್ಲಿ ನೆಲೆಸಿದ್ದ ಮಕ್ಕಳಿಲ್ಲದ ದಂಪತಿ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ವರ್ಷ ಅವರು ಬಾಡಿಗೆ ತಾಯ್ತನದ ಪ್ರಕ್ರಿಯೆಗಾಗಿ ಈ ಸೃಷ್ಟಿ ಫರ್ಟಿಲಿಟಿ ಸೆಂಟರರ್‌ಗೆ 35 ಲಕ್ಷ ರೂ. ಪಾವತಿಸಿದ್ದರು. ಆದಾಗ್ಯೂ, ಈ ವರ್ಷ ಮಗು ಜನಿಸಿದ ನಂತರ, ಬಾಡಿಗೆ ತಾಯಿಯ ಡಿಎನ್‌ಎ ಪರಿಶೀಲನೆಗೆ ದಂಪತಿ ವಿನಂತಿಸಿದಾಗ ಡಾ. ನಮ್ರತಾ ಪದೇ ಪದೇ ವಿಳಂಬ ಮಾಡಿದ್ದಾರೆ. ಹೀಗಾಗಿ ಅವರು ದೆಹಲಿಯಲ್ಲಿ ಈ ಪರೀಕ್ಷೆ ನಡೆಸಿದಾಗ ಅವರ ಅನುಮಾನ ನಿಜವಾಗಿದೆ.
ತಪ್ಪು ಬಯಲಾಗುತ್ತಿದ್ದಂತೆ ವೈದ್ಯೆ ಪರಾರಿ
ಈ ಬಗ್ಗೆ ಡಾ. ನಮೃತಾ ಅವರ ಬಳಿ ಹೇಳಿದಾಗ ತಮಗೆ ಗೊಂದಲ ಆಗಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ ಸಮಸ್ಯೆ ಪರಿಹರಿಸಲು ಸಮಯ ಕೇಳಿದ್ದಾರೆ. ಆದರೆ ಈ ವೈದ್ಯೆ ನಮೃತಾ ನಂತರ ನಾಪತ್ತೆಯಾಗಿದ್ದಾರೆ. ಹೀಗಾಗಿ ದಂಪತಿ ಗೋಪಾಲಪುರಂ ಪೊಲೀಸರನ್ನು ಸಂಪರ್ಕಿಸಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಯುನಿವರ್ಸಲ್ ಸೃಷ್ಟಿ ಫರ್ಟಿಲಿಟಿ ಸೆಂಟರ್ ಮೇಲೆ ತಡರಾತ್ರಿ ದಾಳಿ ನಡೆಸಿ, ಬೆಳಗಿನ ಜಾವದವರೆಗೆ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ. ದಾಳಿ ಸಮಯದಲ್ಲಿ, ಕೆಲ ನಿರ್ಣಾಯಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಜೊತೆಗೆ ಅಲ್ಲಿ ಸಿಕ್ಕ ವೀರ್ಯದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ.
ಈ ಕ್ಲಿನಿಕ್ ವೀರ್ಯ ಹಾಗೂ ಅಂಡಾಣುಗಳನ್ನು ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ಇತರ ರಾಜ್ಯಗಳಿಗೆ ಅಕ್ರಮವಾಗಿ ಸಾಗಣೆಯಲ್ಲಿ ಭಾಗಿಯಾಗಿದೆ. ಅಲ್ಲದೇ ಈ ಸೃಷ್ಟಿ ಫರ್ಟಿಲಿಟಿ ಸೆಂಟರ್, ಇಂಡಿಯನ್ ಸ್ಪೆರ್ಮ್ ಟೆಕ್ ಎಂಬ ಪರವಾನಗಿ ಪಡೆಯದ ಸಂಸ್ಥೆಯೊಂದಿಗೆ ಸಹಯೋಗ ಹೊಂದಿರುವುದು ಕಂಡುಬಂದಿದೆ. ತನಿಖೆಯ ಆಳಕ್ಕಿಳಿದ ಪೊಲೀಸರಿಗೆ ಪ್ರಕರಣ ಬಗೆದಷ್ಟು ಹೊಸ ಹೊಸ ವಿಚಾರಗಳು ಹೊರಬಂದಿದ್ದು, ಕೂಡಲೇ ಇಂಡಿಯನ್ ಸ್ಪರ್ಮ್ ಟೆಕ್ ಮೇಲೂ ದಾಳಿ ಮಾಡಿ ಅದರ ಪ್ರಾದೇಶಿಕ ವ್ಯವಸ್ಥಾಪಕ ಪಂಕಜ್ ಸೋನಿ ಜೊತೆಗೆ ಸಂಪತ್, ಶ್ರೀನು, ಜಿತೇಂದರ್, ಶಿವ, ಮಣಿಕಂಠ ಮತ್ತು ಬೊರೊ ಎಂಬ ಆರು ಇತರ ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಈ ವ್ಯಕ್ತಿಗಳು ರಾಜ್ಯಗಳಾದ್ಯಂತ ಸಂತಾನೋತ್ಪತ್ತಿಗೆ ಅಗತ್ಯವಾದ ಅಂಡಾಣು ವೀರ್ಯಾಣುಗಳನ್ನುಪಡೆಯುವ ಮತ್ತು ಸಾಗಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಾಡಿಗೆ ತಾಯ್ತನದ ಸೇವೆಗಳಿಗಾಗಿ ಡಾ. ನಮ್ರತಾ ಸಂತ್ರಸ್ತ ದಂಪತಿಗಳಿಂದ 35 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಪಡೆದಿದ್ದರು ಎಂದು ಡಿಸಿಪಿ ರಶ್ಮಿ ಪೆರುಮಾಳ್ ಹೇಳಿದ್ದಾರೆ. ಹೆರಿಗೆಗಾಗಿ ಹೈದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ವಿಮಾನದ ಮೂಲಕ ಮಹಿಳೆಯನ್ನು ಕರೆತರಲಾಗಿತ್ತು ಎಂದು ತಿಳಿದು ಬಂದಿದೆ. ಈ ಮಹಿಳೆಗೆ ಜನಿಸಿದ ಮಗು ಬಾಡಿಗೆ ತಾಯ್ತನದ ಮೂಲಕ ನಿಮಗೆ ಜನಿಸಿದ್ದು ಎಂದು ಡಾ. ನಮ್ರತಾ ದಂಪತಿಗೆ ಮನವೊಲಿಸಿದ್ದರು ಎಂದು ತಿಳಿದು ಬಂದಿದೆ.
