ಬಾಡಿಗೆ ತಾಯಿಗೆ 3 ವರ್ಷ ಆರೋಗ್ಯ ವಿಮೆ ಕಡ್ಡಾಯ
* ಬಾಡಿಗೆ ತಾಯಿ ಸುರಕ್ಷತೆ ನಿಟ್ಟಿನಲ್ಲಿ ಮಹತ್ವದ ಕ್ರಮ
* ಬಾಡಿಗೆ ತಾಯಿಗೆ 3 ವರ್ಷ ಆರೋಗ್ಯ ವಿಮೆ ಕಡ್ಡಾಯ
* ಬಾಡಿಗೆ ತಾಯ್ತನ ಮಾರ್ಗ ಬಳಸುವ ದಂಪತಿಗೆ ಈ ಸೂಚನೆ
ನವದೆಹಲಿ(ಜೂ.24): ಸರ್ಕಾರವು ಇತ್ತೀಚೆಗೆ ಜಾರಿಗೊಳಿಸಿದ ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆಯ ಪ್ರಕಾರ, ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದುಕೊಳ್ಳಲು ಬಯಸುವ ದಂಪತಿಗಳು, ಬಾಡಿಗೆ ತಾಯಿಯ ಪರವಾಗಿ 36 ತಿಂಗಳ ಸಾಮಾನ್ಯ ಆರೋಗ್ಯ ವಿಮೆ ಖರೀದಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಗರ್ಭಾವಸ್ಥೆಯಿಂದ ಪ್ರಸವದ ನಂತರ ಉಂಟಾಗಬಹುದಾದ ಎಲ್ಲ ಆರೋಗ್ಯ ಸಮಸ್ಯೆಗಳ ವೆಚ್ಚವನ್ನು ಭರಿಸಲು ಸಾಕಾಗುವಷ್ಟುಮೊತ್ತದ ವಿಮೆಯನ್ನು ಮಾಡಬೇಕಾಗಿದ್ದು, ಬಾಡಿಗೆ ತಾಯಂದಿರ ಸುರಕ್ಷತೆಗಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ.
7 ವರ್ಷದ ಹಿಂದೆ ಮಗುವಿಗೆ ಜನ್ಮ ಕೊಟ್ಟಿದ್ದ ಗರ್ಲ್‌ಫ್ರೆಂಡ್, ಫೋಟೋ ನೋಡಿ ಬಾಯ್‌ಫ್ರೆಂಡ್‌ಗೆ ಶಾಕ್!
ಬಾಡಿಗೆ ತಾಯ್ತನ (ನಿಯಂತ್ರಣ) ಕಾಯ್ದೆ, 2021 ಈ ವರ್ಷ ಜನವರಿ 25ರಂದು ಜಾರಿಗೆ ಬಂದಿತ್ತು. ಸೋಮವಾರ ಇದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಹೊರಡಿಸಲಾಗಿದ್ದು, ಇದರ ಪ್ರಕಾರ ಮಹಿಳೆಯೊಬ್ಬಳು 3ಕ್ಕಿಂತ ಹೆಚ್ಚು ಬಾರಿ ಬಾಡಿಗೆ ತಾಯ್ತನದ ಪ್ರಕ್ರಿಯೆಗೆ ಒಳಗಾಗುವಂತಿಲ್ಲ. ಬಾಡಿಗೆ ತಾಯಿಯ ಆರೋಗ್ಯಕ್ಕೆ ಅಪಾಯವಿದ್ದ ವೇಳೆಯಲ್ಲಿ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಲಾಗಿದೆ.
‘ಪ್ರಕ್ರಿಯೆಗೆ ಒಳಗಾಗುವುದಕ್ಕಿಂತ ಪೂರ್ವದಲ್ಲಿ ಬಾಡಿಗೆ ತಾಯಿಯಿಂದ ಒಪ್ಪಿಗೆ ಪತ್ರವನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ, ಉದ್ದೇಶಿತ ದಂಪತಿ ಅಥವಾ ಮಹಿಳೆಯು ವೈದ್ಯಕೀಯ ವೆಚ್ಚಗಳು, ಆರೋಗ್ಯ ಸಮಸ್ಯೆಗಳು, ನಿಗದಿತ ಹಾನಿ, ಅನಾರೋಗ್ಯ ಅಥವಾ ಬಾಡಿಗೆ ತಾಯಿಯ ಮರಣಕ್ಕೆ ಪರಿಹಾರದ ಖಾತರಿಯಾಗಿ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಬೇಕಾಗಿದೆ’ ಎಂದು ಹೊಸ ನಿಯಮಗಳಲ್ಲಿ ತಿಳಿಸಲಾಗಿದೆ.
Fertility Clinic: ಯಾರದೋ ವೀರ್ಯ, ಯಾರದೋ ಅಂಡ, ಮಗು ಯಾರದು?
ಏನಿದು ಬಾಡಿಗೆ ತಾಯ್ತನ?
ಮಕ್ಕಳಾಗದ ದಂಪತಿಗೆ, ಮಕ್ಕಳನ್ನು ಬಯಸುವ ಪುರುಷ ಅಥವಾ ಮಹಿಳೆಗೆ ಬೇರೊಬ್ಬ ಮಹಿಳೆ ಗರ್ಭ ಧರಿಸಿ, ಮಗುವನ್ನು ಹೆತ್ತು ಕೊಡುವ ಪ್ರಕ್ರಿಯೆಯೇ ಬಾಡಿಗೆ ತಾಯ್ತನ. ಮಗು ಬೇಕೆಂದು ಇಚ್ಛಿಸುವ ದಂಪತಿಯ ಪರವಾಗಿ ಗರ್ಭವನ್ನು ಧರಿಸಿ, ಒಂಬತ್ತು ತಿಂಗಳವರೆಗೆ ಭ್ರೂಣದ ಬೆಳವಣಿಗೆಗೆ ಸಹಕರಿಸಿ, ಹೆರಿಗೆ ಮಾಡಿಸಿಕೊಂಡ ಬಳಿಕ ಮಗುವನ್ನು ಮಗುವಿನ ಪಾಲಕರಿಗೆ ಒಪ್ಪಿಸಲು ಬಾಡಿಗೆ ತಾಯಿ ಮತ್ತು ಅದರ ಪಾಲಕರ ಮಧ್ಯೆ ಮೊದಲೇ ಒಪ್ಪಂದ ಏರ್ಪಟ್ಟಿರುತ್ತದೆ. ದೈಹಿಕವಾಗಿ ಅಥವಾ ವೈದ್ಯಕೀಯವಾಗಿ ಮಕ್ಕಳನ್ನು ಪಡೆಯಲು ಸಾಧ್ಯವೇ ಇಲ್ಲದ ದಂಪತಿ ಮಗು ಹೊಂದುವ ತನ್ನ ಆಸೆಯನ್ನು ಬಾಡಿಗೆ ತಾಯ್ತನದ ಮೂಲಕ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಈ ಬಾಡಿಗೆ ತಾಯ್ತನದಲ್ಲಿ ಎರಡು ವಿಧವಿದೆ. ಒಂದು ಸಾಂಪ್ರದಾಯಿಕ (traditional) ಬಾಡಿಗೆ ತಾಯ್ತನವಾದರೆ, ಮತ್ತೊಂದು ಗರ್ಭಧಾರಣೆ (gestational) ಬಾಡಿಗೆ ತಾಯ್ತನ. ಸಾಂಪ್ರದಾಯಿಕ ವಿಧಾನದಲ್ಲಿ ಬಾಡಿಗೆ ತಾಯಿಯ ಅಂಡಾಣುವನ್ನೇ ಬಳಸಲಾಗುತ್ತದೆ. ಮಗುವನ್ನು ಬಯಸಿದ ತಂದೆ ಇಲ್ಲವೆ ದಾನಿಯಿಂದ ಪಡೆದ ವೀರರ್ಯಾಣುವಿನ ಮೂಲಕ ಗರ್ಭಧಾರಣೆಗೆ ಅನುವು ಮಾಡಿಕೊಡಲಾಗುತ್ತದೆ. ಈ ವಿಧಾನದಲ್ಲಿ ಹುಟ್ಟುವ ಮಗು, ಬಾಡಿಗೆ ತಾಯಿಯೊಂದಿಗೆ ವಂಶವಾಹಿ ಸಂಬಂಧ ಹೊಂದಿರುತ್ತದೆ
ಗರ್ಭಧಾರಣೆಯ ಇನ್ನೊಂದು ವಿಧಾನದಲ್ಲಿ ಮಗು ಬಯಸಿದ ತಂದೆ–ತಾಯಿಯ ಅಂಡಾಣು ಮತ್ತು ವೀರ್ಯವನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಭ್ರೂಣ ಬೆಳೆಯಲು ಮಾತ್ರ ಬಾಡಿಗೆ ತಾಯಿಯ ಗರ್ಭಾಶಯ ಬಳಕೆಯಾಗುತ್ತದೆ. ಹೀಗಾಗಿ ಈ ರೀತಿ ಜನಿಸಿದ ಮಗುವಿನ ಜತೆ ಬಾಡಿಗೆ ತಾಯಿಯು ಯಾವುದೇ ವಂಶವಾಹಿ ಸಂಬಂಧ ಹೊಂದಿರುವುದಿಲ್ಲ