ಹೆಂಡ್ತಿ ಸತ್ತ ಮೇಲೆ ಮರು ಮದುವೆ ಆಗೋದು ಹೇಗೆ ಅಂತ ಸರ್ಚ್ ಮಾಡಿದವ ಅರೆಸ್ಟ್
ಹೆಂಡ್ತಿ ತೀರ್ಕೊಂಡ ಮೇಲೆ ಮರು ಮದುವೆ ಆಗೋದು ಹೇಗೆ ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇದೇನು ಜಸ್ಟ್ ಸರ್ಚ್ ಮಾಡಿದ್ದಕ್ಕೆ ಪೊಲೀಸರು ಬಂಧಿಸಿದ್ರಾ?
ಹೆಂಡ್ತಿ ತೀರ್ಕೊಂಡ ಮೇಲೆ ಮರು ಮದುವೆ ಆಗೋದು ಹೇಗೆ ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಇದೇನು ಜಸ್ಟ್ ಸರ್ಚ್ ಮಾಡಿದ್ದಕ್ಕೆ ಪೊಲೀಸರು ಬಂಧಿಸಿದ್ರಾ? ಹೀಗೆ ಸರ್ಚ್ ಮಾಡಿದ್ರೆ ಬಂಧನ ಮಾಡ್ತಾರಾ ಎಂಬ ಪ್ರಶ್ನೆಗಳು ಏಳೋದು ಸಹಜ ಆದರೆ ಅಸಲಿಯತ್ತು ಬೇರೆನೇ ಇದೆ. ಏನದು ಮುಂದೆ ಓದಿ...
ಅಮೆರಿಕಾದ ವರ್ಜಿನಿಯಾದಲ್ಲಿ ಈ ಘಟನೆ ನಡೆದಿದೆ. ವರ್ಜನಿಯಾ ನಿವಾಸಿಯಾದ ವ್ಯಕ್ತಿಯೊಬ್ಬ ಹೆಂಡ್ತಿ ಸತ್ತ ಮೇಲೆ ಎರಡನೇ ಮದುವೆ ಆಗೋದು ಹೇಗೆ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದು, ಆತನನ್ನು ಈಗ ಹೆಂಡ್ತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಬಂಧಿತನನ್ನು 33 ವರ್ಷದ ನರೇಶ್ ಭಟ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ತನ್ನ ನೇಪಾಳ ಮೂಲದ ಪತ್ನಿ 28 ವರ್ಷ ಮಮ್ತಾ ಕಫ್ಲೆ ಭಟ್ ಅವರನ್ನು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ.
ಪತ್ನಿಯ ಸಾವಿನ ನಂತರ ಎಷ್ಟು ಬೇಗ ಮರು ಮದುವೆ ಆಗಬಹುದು ಎಂದು ಆತ ಗೂಗಲ್‌ನಲ್ಲಿ ಹುಡುಕಾಟ ನಡೆಸಿದ್ದ ಜೊತೆಗೆ ಈತನ ಪತ್ನಿಯ ನಾಪತ್ತೆಯಾದ ನಂತರ ಈತ ಕೆಲ ಅನುಮಾನಾಸ್ಪದ ವಸ್ತುಗಳನ್ನು ಖರೀದಿ ಮಾಡಿದ್ದ ಎಂದು ಸಂತ್ರಸ್ತೆ ಪರ ಸರ್ಕಾರಿ ಪ್ರಾಸಿಕ್ಯೂಟರ್ ನ್ಯಾಯಾಲಯದ ಮುಂದೆ ಮಾಹಿತಿ ನೀಡಿದ್ದಾರೆ. ಆರೋಪಿ ನರೇಶ್ ಭಟ್ ಪತ್ನಿ ಮಮತಾ ಅವರು ಕಳೆದ ಜುಲೈ 29ರಂದು ಕೊನೆಯದಾಗಿ ಕಾಣಿಸಿಕೊಂಡಿದ್ದರು. ನಾಪತ್ತೆಯಾದ ನಂತರ ಅವರ ಮೃತದೇಹವೂ ಕೂಡ ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಜನರ ಮಾಹಿತಿ ಆಧರಿಸಿದ ಕೋರ್ಟ್ ದಾಖಲೆಗಳು ತಿಳಿಸುತ್ತಿದ್ದು, ನರೇಶ್ ಭಟ್ ವಿರುದ್ಧ ಪ್ರಿನ್ಸ್ ವಿಲಿಯಂ ಕೌಂಟಿ ಸರ್ಕ್ಯೂಟ್ ಕೋರ್ಟ್‌ನಲ್ಲಿ ಎರಡು ಅಪರಾಧ ಪ್ರಕರಣಗಳು ದಾಖಲಾಗಿವೆ.
ಮಮತಾ ನಾಪತ್ತೆಯಾದ ನಂತರದ ದಿನಗಳಲ್ಲಿ ನರೇಶ್ ಭಟ್ ಕೆಲ ಅನುಮಾನಾಸ್ಪದ ವಸ್ತುಗಳನ್ನು ಖರೀದಿ ಮಾಡಿದ್ದಾರೆ ಮತ್ತು ಆನ್‌ಲೈನ್‌ನಲ್ಲಿಯೂ ಅವರು ನಡೆಸಿದ ಹುಡುಕಾಟಗಳು ಅನುಮಾನಾಸ್ಪದವಾಗಿದ್ದವು ಇವೇ ಏನೋ ತಪ್ಪಾಗಿದೆ ಎಂಬುದನ್ನು ಸೂಚಿಸುವ ಸಾಕ್ಷ್ಯಗಳಾಗಿದ್ದರಿಂದ ಮಾನಸಾಸ್ ಪಾರ್ಕ್ ನಿವಾಸಿಯಾದ ನರೇಶ್ ಭಟ್ ವಿರುದ್ಧ ಕೊಲೆ ಹಾಗೂ ದೇಹವನ್ನು ನಾಶ ಮಾಡಿದ ಆರೋಪವನ್ನು ವರ್ಜೀನಿಯಾ ಗ್ರ್ಯಾಂಡ್ ಜ್ಯೂರಿ ಹೊರಿಸಿದ್ದಾರೆ.
ಮಮತಾ ಅವರು ಆಗಸ್ಟ್ 5ರಂದು ತಮ್ಮ ಕೆಲಸಕ್ಕೆ ಗೈರಾದ ನಂತರ ನಾಪತ್ತೆಯಾಗಿರುವುದು ಬೆಳಕಿಗೆ ಬಂತು. ಇದು ಅವರ ಯೋಗಕ್ಷೇಮ ವಿಚಾರಿಸಲು ಸ್ಥಳೀಯಾಡಳಿತವನ್ನು ಪ್ರೇರೆಪಿಸಿತ್ತು. ಕೊಲೆ ಮಾಡಿದ್ದಲ್ಲದೇ ದೇಹವನ್ನು ನಾಶ ಮಾಡಿದ ಆರೋಪವನ್ನು ನರೇಶ್ ಭಟ್ ಮೇಲೆ ಹೊರಿಸಲಾಗಿದೆ.
ನಾಪತ್ತೆಯಾದ ಸ್ವಲ್ಪ ಸಮಯದಲ್ಲೇ ಮಮತಾ ಸಾವಾಗಿದೆ. ಇನ್ನುಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಚಾರಣೆ ವೇಳೆ ದಂಪತಿ ಪರಸ್ಪರ ದೂರಾಗಲು ಬಯಸಿದ್ದರು ಎಂದು ನರೇಶ್ ಹೇಳಿದ್ದಾನೆ. ಅಲ್ಲದೇ ಈತ ಏಪ್ರಿಲ್‌ನಲ್ಲಿ ಹೆಂಡ್ತಿ ಸತ್ತ ಮೇಲೆ ಎಎರಡನೇ ಮದ್ವೆ ಆಗಲು ಎಷ್ಟು ಸಮಯ ಹಿಡಿಯುತ್ತದೆ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದ. ಅಲ್ಲದೇ ಆತ ಸ್ಥಳೀಯ ವಾಲ್ಮಾರ್ಟ್‌ನಿಂದ ಮೂರು ಚಾಕುಗಳನ್ನು ಖರೀದಿಸಿ ತಂದ ಸಾಕ್ಷ್ಯವೂ ಸಿಕ್ಕಿತ್ತು. ಅಲ್ಲದೇ ಮತ್ತೊಂದು ವಾಲ್‌ಮಾರ್ಟ್ ಶಾಪ್‌ನಲ್ಲಿ ಶುಚಿಗೊಳಿಸುವ ವಸ್ತುಗಳನ್ನು ಆತ ಖರೀದಿಸಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿತ್ತು.
ಕೊಲೆಯ ನಂತರ ಭಟ್ ರಕ್ತಸಿಕ್ತವಾದ ಮ್ಯಾಟನ್ನು ಹಾಗೂ ಬ್ಯಾಗನ್ನು ಕಸದ ರಾಶೀಗೆ ಎಸೆದಿದ್ದರು. ಆದರೆ ನರೇಶ್ ಭಟ್ ಪರ ವಕೀಲರು ಮಮತಾ ಇನ್ನೂ ಬದುಕಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಡಿಎನ್‌ಎ ಪರೀಕ್ಷೆಯಲ್ಲಿ ಅವರ ಮನೆಯಲ್ಲಿ ಪತ್ತೆಯದ ರಕ್ತ ಮಮತಾ ಅವರದ್ದೇ ಎಂದು ಖಚಿತವಾಗಿದ್ದು, ಆಕೆಯನ್ನು ಕೊಂದು ದೇಹ ನಾಶ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಈ ಸಾಕ್ಷ್ಯಗಳೇ ಆತನ ವಿರುದ್ಧದ ಪ್ರಕರಣ ಮತ್ತಷ್ಟು ಗಟ್ಟಿಯಾಗುವಂತೆ ಮಾಡಿದೆ ಇದೆಲ್ಲದರ ನಡುವೆ ಮಮತಾ ದೇಹ ಇನ್ನೂ ತನಿಖಾ ತಂಡಕ್ಕೆ ಸಿಕ್ಕಿಲ್ಲ ಎಂದು ವರದಿ ಆಗಿದೆ. ಅಲ್ಲದೇ ನರೇಶ್ ಭಟ್ ಪತ್ನಿ ನಾಪತ್ತೆಯಾದ ಕೂಡಲೇ ಪೊಲೀಸರಿಗೆ ತಿಳಿಸಿಲ್ಲ, ಆದರೆ ಈತನ ಮೇಲೆಯೇ ಪೊಲೀಸರಿಗೆ ಅನುಮಾನ ಬಂದಿದ್ದರಿಂದ ಆಗಸ್ಟ್ 22ರಂದು ಆತನ ಮನೆಯಲ್ಲಿ ಶೋಧ ನಡೆಸಿದ ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಅಂದಿನಿಂದ ನರೇಶ್ ಭಟ್ ಕಸ್ಟಡಿಯಲ್ಲೇ ಇದ್ದು, ಸೆಪ್ಟೆಂಬರ್‌ನಲ್ಲಿ ಆತನ ಜಾಮೀನು ಅರ್ಜಿ ವಜಾಗೊಂಡಿದೆ.
ಇದನ್ನೂ ಓದಿ: ನಿಮಗೆ ಕಿವಿ ಸರಿಯಾಗಿ ಕೇಳ್ಬೇಕಾ: ಹಾಗಿದ್ರೆ ಈ ತಪ್ಪುಗಳನ್ನ ಇಂದೇ ನಿಲ್ಲಿಸಿ
ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಪಾರ್ಸೆಲ್‌ನಲ್ಲಿ ಬಂತು 7 ತಿಂಗಳ ಭ್ರೂಣ!