ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರು ನೀಡಿದ ಕಾಣಿಕೆ ಹಣವನ್ನು ದೋಚಿದ ಆರೋಪ ಕೇಳಿಬಂದಿದೆ. ಹಣ ಎಣಿಕೆ ಕೆಲಸದಲ್ಲಿದ್ದ ಸಿಬ್ಬಂದಿ ಅತಿ ಕಡಿಮೆ ಅವಧಿಯಲ್ಲಿ ಐಷಾರಾಮಿ ಕಾರು, ಮನೆ ಖರೀದಿಸಿದ್ದು, ಈ ಅಕ್ರಮದ ಬಗ್ಗೆ ಟ್ರಸ್ಟ್‌ಗೆ ಮೊದಲೇ ಅರಿವಿದ್ದರೂ ನಿರ್ಲಕ್ಷ್ಯ ವಹಿಸಿತ್ತು ಎಂಬ ಆರೋಪವೂ ಇದೆ.

ಅಯೋಧ್ಯೆ: ಇಲ್ಲಿನ ರಾಮಮಂದಿರಕ್ಕೆ ಭಕ್ತರು ನೀಡಿದ ಕಾಣಿಕೆ ಹಣ ದೋಚಿದ್ದ ಆರೋಪಿಗಳ ಬ್ರಹ್ಮಾಂಡ ಭ್ರಷ್ಟಾಚಾರ ದಿನೇ ದಿನೇ ಬೆಳಕಿಗೆ ಬರುತ್ತಿದೆ. ಅತ್ಯಂತ ಕಡಿಮೆ ವೇತನ ಹೊಂದಿದ್ದ ದೇಗುಲದ ಕೆಲ ಸಿಬ್ಬಂದಿ, ಹಣ ಎಣಿಕೆಗೆ ನಿಯೋಜಿತ ಗುತ್ತಿಗೆ ಸಿಬ್ಬಂದಿಗಳ ಅತ್ಯಲ್ಪ ಅವಧಿಯಲ್ಲೇ ಐಷಾರಾಮಿ ಬೈಕ್‌, ಕಾರು, ಫ್ಲ್ಯಾಟ್‌, ಫಾರ್ಮ್‌ಹೌಸ್‌ ಖರೀದಿಸಿದ್ದು ಕಂಡುಬಂದಿದೆ. ಜೊತೆಗೆ ಕೆಲ ಸಿಬ್ಬಂದಿಗಳ ಆದಾಯಕ್ಕೂ ಅವರು ಹೊಂದಿದ ಆಸ್ತಿಗೂ 100 ಪಟ್ಟು ವ್ಯತ್ಯಾಸ ಕಂಡುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಗುಲದಲ್ಲಿ ಹುಂಡಿ ಹಣ ಎಣಿಕೆಗೆ ನಿಯೋಜಿತರಾಗಿದ್ದ ಅನುಕಲ್ಪ್‌ ಮಿಶ್ರಾ ಹಾಗೂ ಆತನ ಭಾವ ಲವಕುಶ ಮಿಶ್ರಾ ಈ ಹಿಂದೆ ಬಡವರಾಗಿದ್ದರು. ರಾಮಮಂದಿರ ದೇಣಿಗೆ ಎಣಿಸುವ ಕೆಲಸಕ್ಕೆ ಸೇರಿಕೊಂಡ ಬಳಿಕ ಐಷಾರಾಮಿ ಜೀವನ ಪ್ರಾರಂಭಿಸಿದ್ದರು ಎಂದು ತಿಳಿದುಬಂದಿದೆ.ಈ ಬಗ್ಗೆ ತನಿಖಾಧಿಕಾರಿಗಳಿಗೆ ಅವರ ನೆರೆಹೊರೆಯವರು ಈ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅನುಕಲ್ಪ್‌ ಮೊದಲು ಮಂದಿರದ ಕೆಲಸಕ್ಕೆ ಸೇರಿದ್ದ. ನಂತರ ಬಂಧು ಲವಕುಶ ಮಿಶ್ರಾನನ್ನೂ ದೇಣಿಗೆ ಎಣಿಕೆ ಕೆಲಸಕ್ಕೆ ಸೇರಿಸಿಕೊಂಡ ಎಂದಿದ್ದಾರೆ.

ಫಾರ್ಮ್‌ಹೌಸ್, 65 ಲಕ್ಷದ ಮನೆ ನಿರ್ಮಾಣ

‘ಅನುಕಲ್ಪ್‌ ಮಿಶ್ರಾ ಕುಟುಂಬ ಈ ಹಿಂದೆ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಆದರೆ ಈಗ ಅವರಿಗೆ ಯಾವುದರ ಅಗತ್ಯವೂ ಇಲ್ಲ. ಅಷ್ಟೊಂದು ದಿಢೀರ್‌ ಸ್ಥಿತಿವಂತರಾಗಿದ್ದಾರೆ. ಅನುಕಲ್ಪ್ ಇತ್ತೀಚೆಗೆ ಗ್ರಾಮದ ಹೊರವಲಯದಲ್ಲಿ ಫಾರ್ಮ್‌ಹೌಸ್ ಒಂದನ್ನು ನಿರ್ಮಿಸಿದ್ದಾನೆ. ಕಳೆದ ವರ್ಷ ಅಯೋಧ್ಯೆಯಲ್ಲಿ 65 ಲಕ್ಷ ರು.ಗಳ ಮನೆಯನ್ನೂ ಖರೀದಿಸಿದ್ದಾನೆ. ಅವನ ಬಳಿ ಈಗಾಗಲೇ ಒಂದು ವಾಹನವಿದ್ದರೂ, ಮತ್ತೊಂದು ಸ್ಕಾರ್ಪಿಯೋ ಎಸ್‌ಯುವಿ ಬುಕ್ ಮಾಡಲು ಮುಂದಾಗಿದ್ದ’ ಎಂದು ಗೊತ್ತಾಗಿದೆ.

‘ಇನ್ನು ಅವನ ಭಾವ ಲವಕುಶ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದವನು ಇತ್ತೀಚೆಗೆ 1 ಲಕ್ಷ ರು.ಗಳಿಗೂ ಹೆಚ್ಚು ಬೆಲೆಯ ಬೈಕ್‌ ಖರೀದಿಸಿದ್ದಾನೆ’ ಎಂದು ತಿಳಿಸಿದ್ದಾರೆ.

ಮೊದಲೇ ಅಕ್ರಮದ ಅರಿವಿದ್ದೂ ಟ್ರಸ್ಟ್‌ ನಿರ್ಲಕ್ಷ್ಯ?

ಅಯೋಧ್ಯೆ: ರಾಮಮಂದಿರದ ದೇಣಿಗೆ ಅಕ್ರಮದ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ಗೆ ಮೊದಲೇ ಮಾಹಿತಿಯಿತ್ತು. ಆದರೂ ದೂರು ದಾಖಲಿಸದೆ ನಿರ್ಲಕ್ಷ್ಯ ತೋರಿತು ಎಂಬ ಆರೋಪ ಕೇಳಿಬಂದಿದೆ.

ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಮೌಖಿಕ ಸೂಚನೆ ಮೇರೆಗೆ ಟ್ರಸ್ಟ್‌ನ ಪದಾಧಿಕಾರಿಗಳು ಅಕ್ರಮದ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಅದರ ಹಿನ್ನೆಲೆಯಲ್ಲಿ ಪೊಲೀಸರು ಜೂ.5ರಂದು ಆರೋಪಿ ಅವಿನಾಶ್‌ ಶುಕ್ಲಾನ ಮನೆ ಮೇಲೆ ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡರು. ಆದರೆ ಟ್ರಸ್ಟ್‌ ಪೊಲೀಸರಿಗೆ ಯಾವುದೇ ಅಧಿಕೃತ ದೂರು ನೀಡಿರಲಿಲ್ಲ. ಅಂದು ನಡೆದ ಶೋಧ ಅನಧಿಕೃತವಾಗಿ ನಡೆದಿತ್ತೇ ಹೊರತು, ಎಫ್‌ಐಆರ್‌ ದಾಖಲಾಗಿರಲಿಲ್ಲ ಎಂದು ತಿಳಿದುಬಂದಿದೆ. ಇದು ಆರಂಭದಲ್ಲಿ ಟ್ರಸ್ಟ್‌ ಮೌನ ವಹಿಸಿದ್ದೇಕೆ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.