ಲೆಬನಾನ್ ಪೇಜರ್ ಸ್ಫೋಟ ಹಿಂದೆ ಭಾರತದ ಟೆಕ್ಕಿ , ತವರಿನಲ್ಲಿರುವ ಕುಟುಂಬದ ಮೇಲೆ ದಾಳಿ ಭೀತಿ!
ಹೆಜ್ಬೊಲ್ಲಾ ಉಗ್ರರ ಟಾರ್ಗೆಟ್ ಮಾಡಿ ಪೇಜರ್ ಸ್ಫೋಟಿಸಿದ ಪ್ರಕರಣದಲ್ಲಿ ಭಾರತದ ಟೆಕ್ಕಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಈತನ ಹೆಸರು ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕುಟುಂಬ ಇದೀಗ ದಾಳಿ ಭೀತಿ ಎದುರಿಸುತ್ತಿದೆ.
ನವದೆಹಲಿ(ಸೆ.21) ಲೆಬನಾನ್ ದೇಶದ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಟಾಪ್ ಕಮಾಂಡರ್ಸ್ ಪೇಜರ್ ಸ್ಫೋಟಿಸಿ ಮೃತಪಟ್ಟ ಹಾಗೂ ಗಾಯಗೊಂಡ ಘಟನೆ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಒಂದರ ಹಿಂದೆ ಮತ್ತೊಂದರಂತೆ ಉಗ್ರರು ಬಳಸುತ್ತಿದ್ದ ಹಳೇ ಮಾದರಿ ಸಂವಹನ ವ್ಯವಸ್ಥೆ ಪೇಜರ್ ಸ್ಫೋಟಗೊಂಡಿತ್ತು. ಈ ಘಟನೆಯಲ್ಲಿ 12 ಹೆಜ್ಬೊಲ್ಲಾ ಸದಸ್ಯರು ಮೃತಪಟ್ಟಿದ್ದರೆ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಈ ಪೇಜರ್ ಸ್ಫೋಟ ಪ್ರಕರಣದಲ್ಲಿ ಭಾರತ ಮೂಲದ ಟೆಕ್ಕಿ ಹೆಸರು ಕೇಳಿಬರುತ್ತಿದೆ. ಕೇರಳದಿಂದ ವಲಸೆ ಹೋಗಿರುವ ರಿನ್ಸನ್ ಜೋಸ್ ಹೆಸರು ಈ ಘಟನೆಯಲ್ಲಿ ಥಳುಕು ಹಾಕಿಕೊಂಡಿದೆ. ಸ್ಫೋಟದ ಹಿಂದೆ ಟೆಕ್ಕಿಯ ಕೈವಾಡದ ಕುರಿತು ತನಿಖೆ ಆರಂಭಗೊಂಡಿದೆ. ಆದರೆ ಟೆಕ್ಕಿ ಹೆಸರು ಬಹಿರಂಗವಾಗುತ್ತಿದ್ದಂತೆ ಇದೀಗ ಸರ್ ತನ್ ಸೇ ಜುದಾ ಭೀತಿಯನ್ನು ಜೋಸ್ ಮಾತ್ರವಲ್ಲ ಆತನ ಕುಟುಂಬ ಎದುರಿಸುತ್ತಿದೆ.
ಹೆಜ್ಬೊಲ್ಲಾ ಉಗ್ರ ಸಂಘಟನೆಗೆ ಸ್ಫೋಟಕ ತುಂಬಿದ ಅಥವಾ ತಾಂತ್ರಿಕಾಗಿ ಸ್ಫೋಟಿಸುವಂತ ಪೇಜರ್ ಪೂರೈಕೆ ಮಾಡಿದ ಆರೋಪ ರಿನ್ಸನ್ ಜೋಸ್ ಮೇಲೆ ಕೇಳಿಬಂದಿದೆ. ನಾರ್ವೆ ದೇಶದ ಪೌರತ್ವ ಹೊಂದಿದ 39 ವರ್ಷದ ರಿನ್ಸನ್ ಜೋಸ್ ಮಾಲೀಕತ್ವದ ನೋರ್ಟ್ ಗ್ಲೋಬಲ್ ಸಂಸ್ಥೆ ಈ ಪೇಜರ್ ಪೂರೈಕೆ ಮಾಡಿತ್ತು. ಪೇಜರ್ ಖರೀದಿಗೆ ನೋರ್ಟ್ ಗ್ಲೋಬಲ್ ಕಂಪನಿ ಹಣ ವರ್ಗಾವಣೆ ಮಾಡಿದ ಆರೋಪಗಳು ಕೇಳಿಬರುತ್ತಿದೆ.
ಪೇಜರ್ ಬಳಿಕ ಇಸ್ರೇಲ್‌ನಿಂದ ಲೆಬನಾನಲ್ಲಿ ಕುರಿಗಳ ಸ್ಫೋಟ..!
ಕೇರಳದ ವಯನಾಡಿನ ನಿವಾಸಿಯಾಗಿರುವ ರಿನ್ಸನ್ ಜೋಸ್ 10 ವರ್ಷದ ಹಿಂದೆ ವಿದೇಶಕ್ಕೆ ತೆರಳಿದ್ದಾನೆ. ಪಾಂಡಿಚೇರಿ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರುವ ಎಂಜಿನೀಯರ್ ರಿನ್ಸನ್ ಜೋಸ್ ವಿದೇಶಕ್ಕೆ ತೆರಳಿದ್ದ. ಲಂಡನ್‌ನಲ್ಲಿ ಉನ್ನತ ವ್ಯಾಸಾಂಗ ಪೂರೈಸಿದ ಜೋಸ್ ಬಳಿಕ ಲಂಡನ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಬಳಿಕ ನಾರ್ವೇ ದೇಶದಲ್ಲಿ ನೋರ್ಟ್ ಗ್ಲೋಬಲ್ ಕಂಪನಿ ಸ್ಥಾಪಿಸಿದ್ದ. ರಿನ್ಸನ್ ಜೋಸ್ ಹಾಗೂ ಆತನ ಪತ್ನಿ ನಾರ್ವೆ ರಾಜಧಾನಿ ಓಸ್ಲೋದಲ್ಲಿ ವಾಸವಾಗಿದ್ದಾರೆ. ಈ ಕಂಪನಿಯ ಸಂಪೂರ್ಣವಾಗಿ ರಿನ್ಸನ್ ಜೋಸ್ ಹೆಸರಿನಲ್ಲಿದೆ. 2023ರ ನವೆಂಬರ್ ತಿಂಗಳಲ್ಲಿ ವಯನಾಡಿಗೆ ಆಗಮಿಸಿದ ಜೋಸ್, ಕುಟುಂಬದ ಜೊತೆ ಕಾಲಕಳೆದಿದ್ದರು. ಜನವರಿಯಲ್ಲಿ ಮತ್ತೆ ನಾರ್ವೆಹೆ ಹಿಂದಿರುಗಿದ್ದ.
ಘಟನೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಒಂದೆಡೆ ಲೆಬೆನಾನ್ ಸರ್ಕಾರ ಹಲವರ ಹುಡುಕಾಟ ಆರಂಭಿಸಿದೆ. ಇತ್ತ ಲೆಬೆನಾನ್ ಉಗ್ರರ ಸ್ಫೋಟದಲ್ಲಿ ಜೋಸ್ ಹೆಸರು ಕೇಳಿಬರುತ್ತಿದ್ದಂತೆ ಕೇರಳದಲ್ಲಿರುವ ವಯನಾಡಿನಲ್ಲಿರುವ ಜೋಸ್ ಕುಟುಂಬದ ಆತಂಕ ಹೆಚ್ಚಾಗಿದೆ. ಒಂದೆಡೆ ಜೋಸ್ ಹಾಗೂ ಆತನ ಪತ್ನಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಇತ್ತ ಕುಟುಂಬದ ಮೇಲೆ ದಾಳಿ ಆತಂಕ ಎದುರಾಗಿದೆ.
ಇದು ಹೊಸ ಯುದ್ಧದ ಆರಂಭವಂತೆ.. ಅಂತ್ಯ ಹೇಗಿರಲಿದೆ? ಆ ರಕ್ತ ಚರಿತ್ರೆಯ ಪೂರ್ತಿ ಕತೆ!