Asianet Suvarna News Asianet Suvarna News

ಹಿಂದೂ ದ್ವೇಷಿ, ಹೆಮ್ಮೆಯ ಕ್ರಿಶ್ಚಿಯನ್! ಜಾತಿ ವ್ಯವಸ್ಥೆ ನಿರ್ಮೂಲನೆಗೆ ಇವರು ಮಾಡಿದ್ದೇನು?

ಅಜ್ಜ, ಅಪ್ಪ ಇದೀಗ ಮೊಮ್ಮಗ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಹಿಂದೂ ಹೇಳಿಕೆಗಳು ಮೂಲಕವೇ ರಾಜ್ಯದ ಅಧಿಕಾರದ ಗದ್ದುಗೆ ಹಿಡಿದವರು. ಇದೀಗ ಸ್ಟಾಲಿನ್ ಮಗ ಉದಯನಿಧಿಯೂ ಅಪ್ಪನ ಹಾದಿಯನ್ನೇ ಹಿಡಿಯುತ್ತಿದ್ದಾರಾ? 

How Former Tamil Nadu CM Karunanidhi Family Contributed to Removing Caste System  Upliftment of Dalits
Author
First Published Sep 6, 2023, 1:41 PM IST

- ಶಶಿಶೇಖರ್.ಪಿ. ಏಷ್ಯಾನೆಟ್ ಸುವರ್ಣ ನ್ಯೂಸ್

ದ್ರಾವಿಡರು ಹಿಂದೂಗಳಲ್ಲ. ತಮಿಳರು ಹಿಂದೂಗಳಲ್ಲ ಅನ್ನುವ ಹೋರಾಟವನ್ನು ಮಾಡಿಕೊಂಡೇ ಕರುಣಾನಿಧಿ ತಮಿಳುನಾಡಿಗೆ ಐದು ಬಾರಿ ಮುಖ್ಯಮಂತ್ರಿಗಳಾದರು. ಅದಾದ ಮೇಲೆ ಈಗ ಅವರ ಮಗ ಎಂ.ಕೆ ಸ್ಟಾಲಿನ್ ಮುಖ್ಯಮಂತ್ರಿ. ಅವರ ಮಗ ಉದಯನಿಧಿ ಸ್ಟಾಲಿನ್, ತಮಿಳುನಾಡಿನ ಕ್ರೀಡಾ ಸಚಿವ. ತಮ್ಮ ತಾತನ ಹೆಸರನ್ನೇ ಮುಂದಿಟ್ಟುಕೊಂಡು, ಅಪ್ಪನ ಹೆಸರನ್ನ ಮುಂದಿಟ್ಟುಕೊಂಡು ಇವತ್ತು ಸಚಿವನಾಗಿ ಅಧಿಕಾರ ಅನುಭವಿಸುತ್ತಿರೋ ವ್ಯಕ್ತಿ. ಇದೇ ವ್ಯಕ್ತಿ ಸರಿಯಾಗಿ ಒಂದು ವರ್ಷದ ಹಿಂದೆ ಒಂದು ಸ್ಟೇಟ್​ಮೆಂಟ್ ಮಾಡಿದ್ರು. ಐ ಆ್ಯಮ್ ಅ ಪ್ರೌಡ್ ಕ್ರಿಶ್ಚಿಯನ್ (ನಾನು ಹೆಮ್ಮೆಯ ಕ್ರಿಶ್ಚಿಯನ್). ಕ್ರಿಶ್ಚಿಯನ್ ಹುಡುಗಿಯನ್ನೇ ಮದುವೆ ಮಾಡಿಕೊಂಡಿದ್ದೇನೆ ಅಂತ. ಇದೇ ರೀತಿ ತಮ್ಮನ್ನ ತಾವು ಪ್ರೌಡ್ ಹಿಂದೂ ಅಂತ ಕರೆದುಕೊಳ್ಳೋರು ಈ ದೇಶದಲ್ಲಿ ಕೊಟ್ಯಂತರ ಜನ ಇದ್ದಾರೆ. ಈ ದೇಶದ ಒಟ್ಟು ಕ್ರಿಶ್ಚಿಯನ್ನರಿಗಿಂತಲೂ ನಾನು ಹೆಮ್ಮೆಯ ಹಿಂದೂ ಅಂತ ಹೇಳಿಕೊಳ್ಳುವವರ ಸಂಖ್ಯೆ ಹೆಚ್ಚಿದೆ ಅನ್ನೋದು ಈ ಮನುಷ್ಯನ ಗಮನದಲ್ಲಿಲ್ಲ ಅನ್ಸುತ್ತೆ. ಹಿಂದೂ ಧರ್ಮ ನಾಶವಾಗಬೇಕು ಅಂದ್ರೆ ಏನರ್ಥ? ಈತ ಹಿಂದೂ ಧರ್ಮದಿಂದ ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರವಾದಂತೆ ದೇಶದ 100 ಕೋಟಿ ಜನ ಕ್ರಿಶ್ಚಿಯಾನಿಟಿಗೆ ಮತಾಂತರ ಆಗಬೇಕು ಅಂತ ಅರ್ಥವಾ? 

ಒಂದು ಸರ್ಕಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರೋ ಈ ವ್ಯಕ್ತಿ ಹಿಂದೂ ಧರ್ಮ ಡೆಂಘಿ ಇದ್ದಂತೆ... ಮಲೇರಿಯಾ ಇದ್ದಂತೆ ನಾಶ ಮಾಡಬೇಕು ಅಂತ ಮಾತಾಡ್ತಿದ್ದಾರೆ... ತಮಿಳುನಾಡಿನಲ್ಲಿ 80 ಪರ್ಸೆಂಟ್ ಹಿಂದೂಗಳಿದ್ದಾರೆ... ಅವರ ಭಾವನೆಗಳಿಗೆ ಮಾಡಿದ ಘಾಸಿ ಅಲ್ಲವಾ ಇದು? ಜನರ ಮಧ್ಯೆ ಬೆಳೆದ ವ್ಯಕ್ತಿ ಜನರ ಭಾವನೆಗಳಿಗೆ ತಕ್ಕಂತೆ ರಾಜಕಾರಣ ಮಾಡ್ತಾನೆ. ಅಧಿಕಾರದ ಸುಪ್ಪತ್ತಿಗೆಯಲ್ಲೇ ಹುಟ್ಟಿದ ಇಂಥಾ ವ್ಯಕ್ತಿಗಳು ಸೆಕ್ಯೂರಿಟಿ ಗಾರ್ಡ್‌‌ಗಳ ಮಧ್ಯೆ ಬೆಳೆದಿರ್ತಾರೆ. ಹಾಗಾಗಿ ಅಧಿಕಾರ ಸಿಕ್ಕಾಗ ಹಿಂಗೆ ಹುಚ್ಚಾಪಟ್ಟೆ ಮಾತಾಡೋದು. ಒಬ್ಬ ಕರುಣಾನಿಧಿ ಇಲ್ಲದೇ ಹೋಗಿದ್ರೆ, ಈ ವ್ಯಕ್ತಿ ಇವತ್ತು ಏನಾಗಿರ್ತಿದ್ದ? ಇವರ ಅಪ್ಪ ಸ್ಟಾಲಿನ್ ಏನಾಗಿರ್ತಿದ್ರು, ಏನಾಗಿರ್ತಿದ್ರೋ ಏನೋ ಆದ್ರೆ ಇವತ್ತಿನ ಸ್ಥಾನದಲ್ಲಂತೂ ಇರ್ತಿರ್ಲಿಲ್ಲ... ಅದಂತೂ ಸತ್ಯ...

Sanatan Dharma: ಉದಯನಿಧಿ ಮಾತ್ರವಲ್ಲ, ಅವರಪ್ಪ ಬಂದ್ರೂ ಆಗಲ್ಲ: ಅವರಜ್ಜನ ಕೈಯಲ್ಲೂ ಆಗಿಲ್ಲವೆಂದ ಈಶ್ವರಪ್ಪ

ಹಿಂದೂ ಧರ್ಮದಲ್ಲಿ ಸಮಾನತೆ ಇಲ್ಲ ಅಂತ ಭಾಷಣ ಮಾಡ್ಕೊಂಡೇ ಕರುಣಾನಿಧಿ ತಮ್ಮ ಜೀವನಪೂರ್ತಿ ಅಧಿಕಾರ ಅನುಭವಿಸಿದ್ರು. ವೀಲ್ ಚೇರ್​ನಲ್ಲಿ ಕೂರುವಂತಾ ಸ್ಥಿತಿ ಬಂದರೂ ಅಧಿಕಾರ ಬಿಟ್ಟುಕೊಡಲಿಲ್ಲ. ಅದೇ ಅಜೆಂಡಾ ಮುಂದಿಟ್ಟುಕೊಂಡೇ ಅವರ ಮಗ ಎಂಕೆ ಸ್ಟಾಲಿನ್ ಇವತ್ತು ತಮಿಳುನಾಡಿನ ಸಿಎಂ. ಅಪ್ಪ ರಾಜ್ಯದ ಮುಖ್ಯಮಂತ್ರಿ... ಮಗ ಆ ಸರ್ಕಾರದಲ್ಲಿ ಮಂತ್ರಿ. ಕರುಣಾನಿಧಿ ಮಗಳು ಕನ್ನಿಮೊಳಿ ಸಂಸದೆ. ಕರುಣಾನಿಧಿ ತಂಗಿ ಮಗ ದಯಾನಿಧಿ ಮಾರನ್ ಕೇಂದ್ರದಲ್ಲಿ ಮಂತ್ರಿ ಆಗಿದ್ದವರು. ಕರುಣಾನಿಧಿ ಕುಟುಂಬದ ಕಲಾನಿಧಿ ಮಾರನ್ ಇವತ್ತು ಸಾವಿರಾರು ಕೋಟಿ ಮೌಲ್ಯದ ಉದ್ಯಮಗಳ ಒಡೆಯ. ತಮಿಳರು ಹಿಂದೂಗಳಲ್ಲ, ಹಿಂದೂ ಧರ್ಮದಲ್ಲಿ ಸಾಮಾಜಿಕ ನ್ಯಾಯ ಸಮಾನತೆ ಇಲ್ಲ,  ದ್ರಾವಿಡ ಚಳುವಳಿ.. ಪ್ರತ್ಯೇಕ ತಮಿಳು ದೇಶ... ಈ ಅಜೆಂಡಾಗಳನ್ನಿಟ್ಟುಕೊಂಡೇ ಇಷ್ಟು ಅಧಿಕಾರ, ದುಡ್ಡು ಎಲ್ಲವನ್ನೂ ಅನುಭವಿಸ್ತಿರೋ ಈ ಕುಟುಂಬ ಸಾಮಾಜಿಕ ನ್ಯಾಯ ಪಾಲಿಸ್ತಿದ್ಯಾ?  ಸಮಾನತೆ ಅಂದ್ರೆ ಇದೇನಾ? ಸಾಮಾಜಿಕ ನ್ಯಾಯ ಅಂದ್ರೆ ಇದೇನಾ? ಹೇಳೋದು ಶಾಸ್ತ್ರ... ಮಾಡೋದು ಬದನೆಕಾಯಿ ಅಂದ್ರೆ ಇದೇ ಅಲ್ಲವಾ?

ಜಾತಿ ವ್ಯವಸ್ಥೆಯನ್ನ ಜೀವಂತವಾಗಿಟ್ಟ ರಾಜಕಾರಣಿಗಳು:
ಈ ರಾಜಕಾರಣಿಗಳಿಗೆ ಜಾತಿ, ಧರ್ಮದ ಬಗ್ಗೆ ಮಾತಾಡಿದ್ರೆ ಅದೊಂತರಾ ರಾಜಕೀಯ ಪಸಲು. ಜಾತಿ ವ್ಯವಸ್ಥೆಯನ್ನ ಈ ಮಟ್ಟಿಗೆ ಜೀವಂತವಾಗಿಟ್ಟಿದ್ದೇ ಈ ರಾಜಕಾರಣಿಗಳು. ಅದು ಜೀವಂತವಾಗಿದ್ದರಷ್ಟೇ ಈ ರಾಜಕಾರಣಿಗಳಿಗೆ ಲಾಭ. ಯಾಕಂದ್ರೆ ನಿನ್ನ ಧರ್ಮ ಸರಿಯಿಲ್ಲ, ನೀನು ಈ ಜಾತಿ, ನೀನು ಆ ಜಾತಿ ಅಂತ ಒಂದು ಜಾತಿಯ ಮೇಲೆ ಮತ್ತೊಂದು ಜಾತಿಯವರನ್ನ ಎತ್ತಿಕಟ್ಟಿ ಅದರ ಲಾಭವನ್ನ ರಾಜಕೀಯವಾಗಿ ಅನುಭವಿಸಬೇಕಲ್ಲ. ಅದೇ ರಾಜಕಾರಣ ಮಾಡಿಕೊಂಡು ಅಪ್ಪ.. ತಾತನ ಹೆಸರಲ್ಲಿ ಅಧಿಕಾರ ಅನುಭವಿಸ್ತಿರೋ ಈ ಉದಯನಿಧಿ ಸ್ಟಾಲಿನ್​​ಗೆ ಜಾತಿ ವ್ಯವಸ್ಥೆ, ಸಾಮಾಜಿಕ ನ್ಯಾಯ, ಮೇಲು-ಕೀಳು ಅನ್ನೋದ್ರ ಬಗ್ಗೆ ಮಾತಾಡೋ ನೈತಿಕತೆ ಇದ್ಯಾ?

ದ್ರಾವಿಡ ಚಳುವಳಿ ಹೆಸರಲ್ಲಿ ಅಧಿಕಾರ ಅನುಭವಿಸಿದವರು ತಮಿಳುನಾಡಿನಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆಗೆ, ದಲಿತರ ಉದ್ಧಾರಕ್ಕೆ ಏನ್ ಮಾಡಿದ್ರು? ಇನ್ನೂ ಎಷ್ಟು ವರ್ಷ ಇದೇ ಭಾಷಣಗಳನ್ನ ಮಾಡಿಕೊಂಡು ಅದನ್ನೇ ನಿಮ್ಮ ಬಂಡವಾಳ ಮಾಡಿಕೊಳ್ತೀರಿ? ಇದೇ ಮಾತುಗಳನ್ನ ಇನ್ನೊಂದು ಧರ್ಮದ ಬಗ್ಗೆ ಅಲ್ಲಿನ ಅಸಮಾನತೆ, ಅಲ್ಲಿನ ವ್ಯವಸ್ಥೆ ವಿರೋಧಿಸಿ ಮಾತಾಡಲಿ ನೋಡೋಣ. ಹಾಗೆ ಮಾತಾಡೋಕೆ ಇವರಿಗೆ ಬೆನ್ನು ಮೂಳೆ ಗಟ್ಟಿ ಇಲ್ಲ. ಯಾಕಂದ್ರೆ ಅವರಿಗೆ ಅದರಿಂದ ಆಗೋ ಅಪಾಯದ ಬಗ್ಗೆ ಭಯ ಇದೆ. ಹಾಗೆ ಮಾತಾಡಿದ್ರೆ ಇವರ ಮನೆಗಳ ಮೇಲೆ ಕಲ್ಲುಗಳು ಬಂದು ಬೀಳಬಹುದು, ಬೆಂಕಿ ಬೀಳಬಹುದು ಅನ್ನೋ ಭಯ ಇದೆ. ಅದಕ್ಕೆ ಬೇರೆ ಧರ್ಮಗಳ ತಂಟೆಗೆ ಹೋಗಲ್ಲ. ಬ್ರಾಹ್ಮಣ ಜಾತಿಯಿಂದ ಕ್ರಿಶ್ಚಿಯನ್ ಆಗಿ ಮತಾಂತರಗೊಂಡ ವ್ಯಕ್ತಿ, ದಲಿತನಿಂದ ಮತಾಂತರವಾಗಿ ಕ್ರಿಶ್ಚಿಯನ್ ಹುಡುಗಿಯನ್ನ ಮದುವೆಯಾಗುವ ಸಮಾನತೆ ಕ್ರಿಶ್ಚಿಯನ್ ಧರ್ಮದಲ್ಲಿ ಇದ್ಯಾ? ಅಲ್ಲೂ ಜಾತಿಯನ್ನೇ ನೋಡ್ತಾರೆ. ಚರ್ಚ್​ಗಳಲ್ಲಿ ಮೌಡ್ಯದ ಆಚರಣೆಗಳಿಲ್ಲವಾ? ಇಸ್ಲಾಂನಲ್ಲಿ 90ಕ್ಕೂ ಹೆಚ್ಚು ಜಾತಿಗಳಿವೆ. ಅಲ್ಲೂ ಮೇಲ್ವರ್ಗ.. ಕೆಳವರ್ಗ ಅಂತಿದೆ... ಅದರ ಬಗ್ಗೆ ಮಾತಾಡೋ ತಾಕತ್ತು ಈ ರಾಜಕಾರಣಿಗಳಿಗಿಲ್ಲ. 

ಮುಖ್ಯಮಂತ್ರಿ ಮಗನಿಗೆ ಬುದ್ಧಿ ಹೇಳಿದ ಬಿಗ್‌ಬಾಸ್‌ ವಿನ್ನರ್‌ ಪ್ರಥಮ್: ಎಲ್ಲ ಧರ್ಮ ಗೌರವಿಸುವಂತೆ ತಾಕೀತು

ಎಲ್ಲ ಧರ್ಮದಲ್ಲೂ ಇದೆ ಮೇಲು-ಕೀಳು ವ್ಯವಸ್ಥೆ
ಉದಯನಿಧಿ ಹೇಳಿಕೆ ಖಂಡಿಸುವವರೆಲ್ಲ ಜಾತಿ ವ್ಯವಸ್ಥೆಯ ಪರವಿದ್ದಾರೆ ಅಂತಲ್ಲ. ಹಿಂದೂ ಧರ್ಮದಲ್ಲಿ ಲೋಪದೋಷಗಳಿಲ್ಲವಾ? ಖಂಡಿತಾ ಇದೆ. ಎಲ್ಲ ಧರ್ಮಗಳಲ್ಲೂ ಖಂಡಿತಾ ಅನಿಷ್ಠ, ಮೌಡ್ಯದ ಆಚರಣೆಗಳಿವೆ. ಮೇಲು-ಕೀಳು ವ್ಯವಸ್ಥೆ ಇದೆ. ಈ ಅನಿಷ್ಠಗಳು ನಿರ್ಮೂಲನೆಯಾಗಲೇಬೇಕು. ಎಲ್ಲ ಧರ್ಮಗಳ ಅನಿಷ್ಠದ ವಿರುದ್ಧ, ಅಸಮಾನತೆ ವಿರುದ್ಧ ಮಾತಾಡಿದ್ರೆ ಅದಕ್ಕೊಂದು ಅರ್ಥ ಇದೆ. ರಾಜಕೀಯ ಅಜೆಂಡಾಗೋಸ್ಕರ ಹಿಂದೂ ಧರ್ಮದ ವಿರುದ್ಧವಷ್ಟೇ ಬಾಯಿ ಚಪಲಕ್ಕೆ ಮಾತಾಡಿದರೆ ಅದಕ್ಕೆ ಬೆಲೆ ಕೊಡಬೇಕಾ? ಹಿಂದೂ ಧರ್ಮದಲ್ಲಿನ ತಪ್ಪುಗಳನ್ನ ಜಗತ್ತಿಗೆ ಎತ್ತಿ ತೋರಿಸಿ ಅನಿಷ್ಟ ಆಚರಣೆ, ಮೇಲು ಕೀಳು ವ್ಯವಸ್ಥೆಯನ್ನ ಬದಲಿಸಲು ಪ್ರಯತ್ನ ಪಟ್ಟ ಹಲವರಿದ್ದಾರೆ. ಆದ್ರೆ ಅವರಾರೂ ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ಕೆಲಸ ಮಾಡಲಿಲ್ಲ. ಬುದ್ಧ... ಈ ಜಾತಿ ವ್ಯವಸ್ಥೆಯನ್ನು ಅಲುಗಾಡಿಸಿದ ಮೊದಲ ವ್ಯಕ್ತಿ. ಮಹಾವೀರ, ಬಸವಣ್ಣ, ನಾರಾಯಣ ಗುರು, ಅಂಬೇಡ್ಕರ್ ಎಲ್ಲರೂ ಮೇಲು-ಕೀಳು ವ್ಯವಸ್ಥೆಯ ವಿರುದ್ಧ ಹೋರಾಡಿದವರೇ. ಇವರೆಲ್ಲರೂ ಕಾಲದಿಂದ ಕಾಲಕ್ಕೆ ಈ ವ್ಯವಸ್ಥೆಯನ್ನ ಟೀಕೆ ಮಾಡಿ ಬದಲಿಸೋ ಪ್ರಯತ್ನ ಮಾಡಿದಾಗ ಅದನ್ನ ಸಮಾಜ ಸ್ವೀಕರಿಸಿದೆ, ಒಪ್ಪಿಕೊಂಡಿದೆ, ಬದಲಾವಣೆಗಳನ್ನ ಮಾಡಿಕೊಂಡಿದೆ. ಎಲ್ಲ ಬದಲಾವಣೆಗಳನ್ನೂ ಅಪ್ಪಿಕೊಂಡು ಮುಂದೆ ಹೋಗುತ್ತಿರುವ ಧರ್ಮ ಅಂದ್ರೆ ಅದು ಹಿಂದೂ ಮಾತ್ರ. ಬುದ್ಧ ರಾಜನ ಮಗನಾದ್ರೂ ಸಾಮ್ರಾಜ್ಯವನ್ನ ಧಿಕ್ಕರಿಸಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರಿಗೆ ಅವತ್ತಿಗೆ ದೊಡ್ಡ ಹುದ್ದೆ, ಸಾಮಾಜಿಕ ಸ್ಥಾನಮಾನ ಎಲ್ಲವೂ ಇತ್ತು. ಅದನ್ನೆಲ್ಲಾ ತ್ಯಾಗ ಮಾಡಿ ಜಾತಿ ವ್ಯವಸ್ಥೆ ನಿರ್ಮೂಲನೆಗೆ ಹೋರಾಡಿದ್ರು. ಅಂಬೇಡ್ಕರ್ ಕಾಂಗ್ರೆಸ್​ ನಲ್ಲೇ ಇದ್ದಿದ್ರೆ ದೇಶಕ್ಕೆ ರಾಷ್ಟ್ರಪತಿ ಆಗಬಹುದಿತ್ತು. ಅದೆಲ್ಲವನ್ನೂ ಬಿಟ್ಟು ಅವರು ದಲಿತರ ಉದ್ಧಾರಕ್ಕಾಗಿ ತಮ್ಮ ಕೊನೆಯ ದಿನದವರೆಗೂ ಹೋರಾಡಿದ್ರು. ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ ಎಲ್ಲರೂ ತಮ್ಮ ವೈಯಕ್ತಿಕ ಬದುಕನ್ನ ತ್ಯಾಗ ಮಾಡಿದವರೇ. ಈ ರಾಜಕಾರಣಿಗಳು ಮಾತ್ರ ತಮ್ಮ ಸಾಮ್ರಾಜ್ಯ ಕಟ್ಟಿಕೊಳ್ಳೋದಕ್ಕೆ, ತಮ್ಮ ಅಧಿಕಾರ ಉಳಿಸಿಕೊಳ್ಳೋದಕ್ಕೆ ಇಂಥಾ ಮಾತುಗಳನ್ನಾಡ್ತಾರೆ ಅಷ್ಟೇ. ಇಂಥವರನ್ನ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ.

ಸನಾತನ ಧರ್ಮದ ಬಗ್ಗೆ ಹೇಳಿಕೆ: ಬೆದರಿಕೆಗಳಿಗೆಲ್ಲ ನಾ ಹೆದರಲ್ಲ: ಉದಯನಿಧಿ

Follow Us:
Download App:
  • android
  • ios