ಮಲ್ಲಿಕಾರ್ಜುನ ಖರ್ಗೆಯವರ ಜನ್ಮದಿನದಂದು ಶುಭ ಕೋರುವ ನೆಪದಲ್ಲಿ ಅವರ ನಿವಾಸದಲ್ಲಿ ಸೇರಿದ ಕಾಂಗ್ರೆಸ್ ನಾಯಕರು, ಭದ್ರತಾ ಪಡೆಗಳಿಗೂ ಸುಳಿವು ನೀಡದೆ ದಿಢೀರನೆ ಪ್ರಧಾನಿ ನಿವಾಸದತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ಗೌಪ್ಯ ನಡೆಯ ಮೂಲಕ, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸುಳಿವೇ ಕೊಡದೆ ಪ್ರಧಾನಿ ನಿವಾಸದತ್ತ ದೌಡು
ನವದೆಹಲಿ (ಜು.22): ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ 84ನೇ ಜನ್ಮದಿನ(Mallikarjun kharge Birthday)ವಾದ ಮಂಗಳವಾರ ಶುಭ ಕೋರಲೆಂದು ಅವರ ನಿವಾಸಕ್ಕೆ ತೆರಳಿದ್ದ ಕಾಂಗ್ರೆಸ್ ನಾಯಕರು, ಬಳಿಕ ದಿಢೀರನೆ ಅಲ್ಲಿಂದ ಪ್ರಧಾನಿಗಳ ನಿವಾಸದತ್ತ ತೆರಳಿದರು. ಅಲ್ಲಿ ಕುಳಿತು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಲು ಶುರು ಮಾಡಿದರು. ಈ ನಡೆಯ ಬಗ್ಗೆ ಭದ್ರತಾ ಪಡೆಗಳಿಗೂ ಸುಳಿವಿರಲಿಲ್ಲ ಎನ್ನಲಾಗಿದೆ.
ಸಾಮಾನ್ಯವಾಗಿ ಇಂಥ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮುನ್ನ ಪಕ್ಷ ಮಾಧ್ಯಮಗಳಿಗೆ ಮಾಹಿತಿ ನೀಡಿರುತ್ತಿತ್ತು. ಆದರೆ ಈ ಬಾರಿ ಮಧ್ಯಾಹ್ನ ಗೌಪ್ಯವಾಗಿ ವಿಜಯ್ ಚೌಕ್ ವರೆಗೆ ಮೆರವಣಿಗೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಈ ಯೋಜನೆ ಸೋರಿಕೆಯಾದ ಕಾರಣ ಅದನ್ನು ಕೈಬಿಡಲಾಯಿತು. ಮಧ್ಯಾಹ್ನ 3ರ ಹೊತ್ತಿಗೆ ಕೆಲ ಹಿರಿಯ ನಾಯಕರು ಖರ್ಗೆ ಅವರ ನಿವಾಸಕ್ಕೆ ಹೋದಾಗ, ಹುಟ್ಟುಹಬ್ಬದ ಪ್ರಯುಕ್ತ ಶುಭ ಕೋರಲು ಎಂದುಕೊಳ್ಳಲಾಗಿತ್ತು. ಆದರೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರಂತಹ ಪ್ರಮುಖ ನಾಯಕರು ಒಟ್ಟಾಗುತ್ತಿದ್ದಂತೆ ಪ್ರಧಾನಿ ನಿವಾಸದತ್ತ ಹೊರಟುಬಿಟ್ಟರು.
ಸಿಜೆಪಿ ಪ್ರತಿಭಟನೆಯಿಂದ ದೇಶದಲ್ಲಿ ಕೋಲಾಹಲವೆದ್ದಿದ್ದರೂ ಸರ್ಕಾರದ ವಿರುದ್ಧ ಪ್ರತಿಭಟಿಸದಿದ್ದರೆ, ಕಾಂಗ್ರೆಸ್ ವಿದ್ಯಾರ್ಥಿಗಳ ಪರವಿಲ್ಲ ಎಂಬ ಸಂದೇಶ ರವಾನೆಯಾಗುತ್ತದೆ. ಇದನ್ನು ತಪ್ಪಿಸಲು ಈ ಪ್ರತಿಭಟನೆ ಎನ್ನಲಾಗಿದೆ.


